ಆಗುಂಬೆ ಘಾಟಿಯ ಎರಡನೇ ತಿರುವಿನಲ್ಲಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸುಮಾರು 150 ಅಡಿ ಆಳದ ಕಂದಕಕ್ಕೆ ಉರುಳಿದ ಘಟನೆ ನಡೆದಿದೆ.ಅಪಘಾತದಲ್ಲಿ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಸುಮಾರು ಮೂರು ಗಂಟೆಗಳ ಕಾಲ ಲಾರಿಯೊಳಗೆ ಸಿಲುಕಿಕೊಂಡಿದ್ದ ಅವರನ್ನು ಸ್ಥಳೀಯರ ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿದೆ.
ಶಿವಮೊಗ್ಗದಿಂದ ಉಡುಪಿಗೆ ಬಾಳೆಕಾಯಿ ಸಾಗಿಸುತ್ತಿದ್ದ ಲಾರಿಯಲ್ಲಿ ಚಾಲಕ ಗುಡ್ಡಪ್ಪ ಮಡಿವಾಳ ಹಾಗೂ ಕ್ಲೀನರ್ ರವಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ರಾತ್ರಿ ಸುಮಾರು 12 ಗಂಟೆ ವೇಳೆಗೆ ಆಗುಂಬೆ ಘಾಟಿಯ ಎರಡನೇ ತಿರುವಿನಲ್ಲಿ ಲಾರಿ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ.ಅಪಘಾತದ ವೇಳೆ ಕ್ಲೀನರ್ ರವಿ ಲಾರಿಯಿಂದ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಳಿಕ ಅವರು ಅಪಘಾತದ ಕುರಿತು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಲಾರಿಯ ಕ್ಯಾಬಿನ್ ನಜ್ಜುಗುಜ್ಜಾಗಿದ್ದರಿಂದ ಚಾಲಕ ಗುಡ್ಡಪ್ಪ ಮಡಿವಾಳ ಅವರು ಒಳಗೆ ಸಿಲುಕಿಕೊಂಡಿದ್ದರು.




