ಬೀದರ ನಗರದಲ್ಲಿ ಕಟ್ಟಡ ಕೂಲಿ ಕಾರ್ಮಿಕರು ಸಭೆ-ಸಮಾರಂಭಗಳನ್ನು ಏರ್ಪಡಿಸಲು ಸರ್ಕಾರದಿಂದ ಸ್ಥಳ ಗುರುತಿಸಿ, ಹೈಟೆಕ್ ಮಾದರಿಯಲ್ಲಿ ಕಾರ್ಮಿಕ ಭವನ ನಿರ್ಮಿಸಬೇಕೆಂದು ಚಂದ್ರ ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಶೈಕ್ಷಣಿಕ ಟ್ರಸ್ಟ್ ಅಧ್ಯಕ್ಷ ಪ್ರವೀಣ ಚಂದಾ ಅವರು ಮನವಿ ಮಾಡಿದ್ದಾರೆ.
ಬೀದರ್ ನಗರಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತುತ್ಸವ ಪ್ರಯುಕ್ತ ಆಗಮಿಸಿದ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರನ್ನು ಭೇಟಿಯಾಗಿ ವಿವಿಧೆ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು.
ʼಸರ್ಕಾರ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿ ಹೊಂದಿದವರಿಗೆ, ಮದುವೆ ಸಹಾಯ ಧನ 60 ಸಾವಿರ ನೀಡುತ್ತಿದ್ದು, ಅದನ್ನು 1 ಲಕ್ಷಕ್ಕೆ ಹೆಚ್ಚಿಸಬೇಕು. ಕಾರ್ಮಿಕ ಇಲಾಖೆಯಿಂದ ಹೊಸ ಗುರುತಿನ ಚೀಟಿ ಮತ್ತು ಮರು ನವೀಕರಣ 1 ವರ್ಷದ ಅವಧಿಗೆ ಮಾತ್ರ ಇದೆ. ಅದನ್ನು ಕೈಬಿಟ್ಟು ಶುಲ್ಕ ರಹಿತ ಹಳೆಯ ಮಾದರಿಯಂತೆ ಹೊಸ ಮತ್ತು ನವೀಕರಣ ಗುರುತಿನ ಚೀಟಿಗೆ 3 ವರ್ಷಗಳ ಅವಧಿಗೆ ವಿಸ್ತರಿಸಲು ಅಗತ್ಯ ಕ್ರಮಕೈಗೊಳ್ಳಬೇಕುʼ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಬೀದರ್ | ಬಿಸಿಲಿನ ತಾಪ : ವನ್ಯಜೀವಿಗಳಿಗೆ ನೀರುಣಿಸಲು ಕೈಜೋಡಿಸಿ
ʼಮದುವೆ ಸಹಾಯಧನ, ಮರಣ ಅನುಗ್ರಹ ರಾಶಿ ಸಹಾಯಧನ, ಪಿಂಚಣಿ ಯೋಜನೆಗಳನ್ನು ವಿಳಂಬ ಮಾಡದೆ ತತ್ವರಿತವಾಗಿ ಸಕಾಲದಲ್ಲಿ ಫಲಾನುಭವಿಗಳಿಗೆ ಮಂಜೂರು ಮಾಡಿ ಸಹಾಯಧನ ಅರ್ಜಿದಾರರ ಖಾತೆಗೆ ಜಮೆ ಮಾಡಬೇಕು. ರಾಜ್ಯದಲ್ಲಿರುವ ಮೂಲ ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ಆಕಸ್ಮಿಕವಾಗಿ ರದ್ದಾಗಿದ್ದು, ಅಂತಹ ನಿಜವಾದ ಕಾರ್ಮಿಕರನ್ನು ಗುರುತಿಸಿ ಪುನಃ ಅವರ ಕಾರ್ಡ್ ವಿತರಿಸಬೇಕು. ಬೀದರ್ ಜಿಲ್ಲಾ ಕಾರ್ಮಿಕ ಇಲಾಖೆ ಕಚೇರಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸ್ವಂತ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕುʼ ಎಂದು ಒತ್ತಾಯಿಸಿದರು.





