ತಾಲೂಕು ಮಟ್ಟದ ಜಾನಪದ ನೃತ್ಯ ಮತ್ತು ನಾಟಕ ಸ್ಪರ್ಧೆಗಳಲ್ಲಿ ಯರಗೋಳ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಾಲಾ ಶಿಕ್ಷಣ ಇಲಾಖೆ ಹಾಗೂ ಯಾದಗಿರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ 2026–27ನೇ ಸಾಲಿನ ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆ (ಎನ್‌ಪಿಇಪಿ) ಅಡಿಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಸಹಪಠ್ಯ ಸ್ಪರ್ಧೆಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಿ ಈ ಸಾಧನೆ ಮಾಡಿದ್ದಾರೆ.
ಭೀಮಾಶಂಕರ ಎಂ. ಯರಗೋಳ ಅವರ ನಿರ್ದೇಶನದಲ್ಲಿ ಮೂಡಿಬಂದ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಎಂಬ ನಾಟಕವು ಸಂವಿಧಾನದ ಮಹತ್ವವನ್ನು ಸಾರಿದರೆ, ಗ್ರಾಮೀಣ ಬದುಕಿನ ಸೊಗಡನ್ನು ಪ್ರತಿಬಿಂಬಿಸುವ ‘ಜಲ್ಲೇ ಕಬ್ಬು’ ಎಂಬ ಜಾನಪದ ನೃತ್ಯ ಪ್ರೇಕ್ಷಕರ ಗಮನ ಸೆಳೆಯಿತು. ಎರಡೂ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ
ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಕಿಯರಾದ ಅನಿತಾ ಕುಮಾರಿ, ಶಶಿಕಲಾ, ಶಾಲೆಯ ಮುಖ್ಯಗುರು ಬಾಬು ಚವ್ಹಾಣ, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹರ್ಷ ವ್ಯಕ್ತಪಡಿಸಿ, ಜಿಲ್ಲಾ ಮಟ್ಟದಲ್ಲಿಯೂ ವಿದ್ಯಾರ್ಥಿಗಳು ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದ್ದಾರೆ.





