ಜೂನ್ 28ರಂದು ಬಸವಕಲ್ಯಾಣದಲ್ಲಿ ಆಯೋಜಿಸಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶವನ್ನು ಯಾವುದೇ ಕಾರಣಕ್ಕೂ ಮುಂದೂಡದೆ ನಿಗದಿತ ದಿನಾಂಕದಂದೇ ಅದ್ದೂರಿಯಾಗಿ ನಡೆಸಲಾಗುವುದು ಎಂದು ಕಾರ್ಯಕ್ರಮದ ಅಧ್ಯಕ್ಷ ಗುಂಡುರೆಡ್ಡಿ ಕಮಲಾಪುರೆ ತಿಳಿಸಿದ್ದಾರೆ.
ಬಸವಕಲ್ಯಾಣ ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಮಾವೇಶಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಗಲಾಟೆಯಾಗುವ ಸಾಧ್ಯತೆ ಇದೆ ಎಂಬ ಪೊಲೀಸ್ ಇಲಾಖೆಯ ವರದಿಯ ಹಿನ್ನೆಲೆಯಲ್ಲಿ ತಾಲೂಕು ಆಡಳಿತವು ಅನುಮತಿ ನೀಡಿಲ್ಲ. ಆದರೆ, ಸೋಮವಾರ ಜಿಲ್ಲಾಡಳಿತಕ್ಕೆ ಅನುಮತಿ ಕೋರಿ ಮನವಿ ಮಾಡಲಾಗುವುದು” ಎಂದರು.
ಜಿಲ್ಲಾಡಳಿತದ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದ್ದು, ಜಿಲ್ಲಾಧಿಕಾರಿಗಳು ಕಾನೂನಾತ್ಮಕವಾಗಿ ಅನುಮತಿ ನೀಡಲಿದ್ದಾರೆ ಎಂಬ ಭರವಸೆ ಇದೆ. ಈ ಕುರಿತು ಸಚಿವ ಈಶ್ವರ್ ಖಂಡ್ರೆ ಅವರೊಂದಿಗೂ ಚರ್ಚೆ ನಡೆಸಲಾಗುವುದು. ಸಾರ್ವಜನಿಕರು ಯಾವುದೇ ರೀತಿಯ ಗೊಂದಲ ಅಥವಾ ವದಂತಿಗಳಿಗೆ ಕಿವಿಗೊಡದೇ ಶಾಂತಿ ಕಾಪಾಡಬೇಕು ಎಂದರು.
“ಕಾರ್ಯಕ್ರಮದ ಹೆಸರಿನಿಂದ ಬಸವಾದಿ ಶಿವಶರಣರ ಹೆಸರನ್ನು ಕೈಬಿಡಬೇಕು ಎಂದು ಕೆಲ ಸಂಘಟನೆಗಳು ಆಗ್ರಹಿಸುತ್ತಿವೆ. ಆದರೆ ಈ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸುವವರಲ್ಲಿ ಬಹುತೇಕರು ಬಸವಕಲ್ಯಾಣದವರಲ್ಲ. ಬಸವಣ್ಣನವರನ್ನು ಯಾರೂ ಗುತ್ತಿಗೆ ಪಡೆದಿಲ್ಲ. ಈ ಕಾರ್ಯಕ್ರಮಕ್ಕೆ ಬಸವಕಲ್ಯಾಣದ ಜನರ ವಿರೋಧವಿಲ್ಲ. ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ಬಸವೇಶ್ವರ ದೇವಸ್ಥಾನದವರೇ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ನಡೆಸಲು ಅನುಮತಿ ನೀಡಿದ್ದಾರೆ” ಎಂದು ಹೇಳಿದರು.
ಬಸವಣ್ಣನವರು ಸಮಾನತೆಯ ಸಂದೇಶ ಸಾರಿದ ಮಹಾತ್ಮರಾಗಿದ್ದು, ಎಲ್ಲ ವರ್ಗದ ಜನರನ್ನು ತಮ್ಮ ತತ್ವಗಳಡಿ ಒಗ್ಗೂಡಿಸಿದ್ದರು. ಲಿಂಗವೇ ದೇವರ ಸ್ವರೂಪವಾಗಿದೆ. ಕಾವಿ, ರುದ್ರಾಕ್ಷಿಯೇ ಸನಾತನ ಧರ್ಮದ್ದಾಗಿದೆ. ಹಾಗೇ ಎಲ್ಲಾ ಜಾತಿ, ಧರ್ಮಗಳ ಜನರನ್ನು ಒಗ್ಗೂಡಿಸುವ ಉದ್ದೇಶದಿಂದ ಈ ಸಮಾವೇಶ ಆಯೋಜಿಸಲಾಗಿದೆ. ಇಂತಹ ಕಾರ್ಯಕ್ರಮಗಳನ್ನು ವಿರೋಧಿಸುವ ಮೂಲಕ ಕೆಲವರು ತಮ್ಮದೇ ಹೆಸರನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಉತ್ತಮ ಪ್ರತಿಕ್ರಿಯೆ ಮತ್ತು ಬೆಂಬಲ ವ್ಯಕ್ತವಾಗುತ್ತಿದೆ. ಕನೇರಿ ಶ್ರೀಗಳು ಬುದ್ಧ, ಬಸವ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಗಳನ್ನು ಅನುಸರಿಸುವವರಾಗಿದ್ದಾರೆ. ಹಿಂದೂ ಸಮಾವೇಶವನ್ನು ಹಿಂದೂಸ್ತಾನದಲ್ಲಿ ನಡೆಸಬಾರದು ಎಂದರೆ ಮತ್ತೇಲ್ಲಿ ನಡೆಸಬೇಕು ಎಂದು ಪ್ರಶ್ನಿಸಿದರು.
ಧಾರ್ಮಿಕ ಕಾರ್ಯಕ್ರಮಗಳಿಗೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಒದಗಿಸಲು ವಿಫಲವಾದರೆ ಪೊಲೀಸ್ ಇಲಾಖೆಯ ಅಗತ್ಯವೇನು ಎಂದು ಪ್ರಶ್ನಿಸಿದ ಅವರು ಜೂನ್ 28ರಂದು ಬಸವಕಲ್ಯಾಣದಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶ ನಿಶ್ಚಿತವಾಗಿ ನಡೆಯಲಿದ್ದು, ಕನೇರಿ ಶ್ರೀಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ : ಗಡಿ ಜಿಲ್ಲೆಯಲ್ಲಿ ಕನ್ನಡ ಬಳಕೆ ಕಡ್ಡಾಯ ಜಾರಿಗೆ ಒತ್ತು : ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ
ಪ್ರಮುಖರಾದ ದೀಪಕ್ ಗಾಯಕವಾಡ್, ಗಿರೀಶ್ ತಾಂಬೋಳೆ, ಸಂದೀಪ್ ಪಾಟಿಲ್ ಸೇರಿದಂತೆ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.




