ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ಮಣ್ಣಿನ ನೈಸರ್ಗಿಕ ಗುಣಮಟ್ಟ ಹಾಳಾಗುತ್ತಿದ್ದು, ರೈತರು ನಿಯಮಿತವಾಗಿ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕು. ಹಸಿರು ಗೊಬ್ಬರ ಹಾಗೂ ಕಾಂಪೋಸ್ಟ್‌ನಂತಹ ಸಾವಯವ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳನ್ನು ರಕ್ಷಿಸಿ, ಭೂಮಿಯ ದೀರ್ಘಕಾಲದ ಉತ್ಪಾದಕತೆಯನ್ನು ಮರಳಿ ಪಡೆಯಬಹುದಾಗಿದೆ ಎಂದು ಬೀದರ ಐಸಿಎಆರ್–ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ರಾಜಶೇಖರ್ ಬಸನಾಯಕ್ ಹೇಳಿದರು.
ಬೀದರ ಜಿಲ್ಲೆಯ ಚಿಕಪೇಟ್-ಮರಖಲ್ ಗ್ರಾಮದಲ್ಲಿ ಈಚೆಗೆ ಆಯೋಜಿಸಲಾದ “ಖೇತಿ ಬಚಾವೋ ಆಂದೋಲನ ಅಭಿಯಾನ” ಕಾರ್ಯಕ್ರಮದಲ್ಲಿ ರೈತ ಸಮುದಾಯಕ್ಕೆ ವೈಜ್ಞಾನಿಕ, ಸುಸ್ಥಿರ ಹಾಗೂ ಕಡಿಮೆ ವೆಚ್ಚದ ಕೃಷಿ ಪದ್ಧತಿಗಳ ಕುರಿತು ಜಾಗೃತಿ ಮೂಡಿಸಿ ಅವರು ಮಾತನಾಡಿದರು.
ಮಣ್ಣಿನ ಸವೆತ ಹಾಗೂ ಫಲವತ್ತತೆ ಕುಸಿತದ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಅಸಮತೋಲಿತ ರಾಸಾಯನಿಕ ಗೊಬ್ಬರಗಳ ಬಳಕೆ ಇದಕ್ಕೆ ಪ್ರಮುಖ ಕಾರಣವಾಗಿದೆ. ರೈತರು ಮಣ್ಣಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸಾವಯವ ಕೃಷಿ ವಿಧಾನಗಳನ್ನು ಹೆಚ್ಚಾಗಿ ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ವಿಜ್ಞಾನಿ ಡಾ.ಶಿವಕುಮಾರ್ ಅವರು ಸಸ್ಯ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿ, “ಪರಿಸರ ಸ್ನೇಹಿ ಬೆಳೆ ಸಂರಕ್ಷಣಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕೀಟ ಹಾಗೂ ರೋಗಗಳ ನಿಯಂತ್ರಣಕ್ಕಾಗಿ ಜೈವಿಕ ಮತ್ತು ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಅಗತ್ಯವಿದೆ. ಸ್ಥಳೀಯವಾಗಿ ಲಭ್ಯವಿರುವ ಸಸ್ಯ ಸಾಮಗ್ರಿಗಳಿಂದ ಕಷಾಯ ಹಾಗೂ ಜೈವಿಕ ಕೀಟನಾಶಕಗಳನ್ನು ತಯಾರಿಸುವ ವಿಧಾನವನ್ನು ವಿವರಿಸಿದ ಅವರು, ದುಬಾರಿ ಹಾಗೂ ವಿಷಕಾರಿ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಿ, ಜೀವವೈವಿಧ್ಯ ಸಂರಕ್ಷಣೆಗೆ ಪೂರಕವಾಗುವ ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.

ಹೆಚ್ಚಿನ ಮಾಹಿತಿಗಾಗಿ ಬೀದರ ಐಸಿಎಆರ್–ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ರಾಜಶೇಖರ್ ಬಸನಾಯಕ್ ಅವರನ್ನು ಮೊಬೈಲ್ ಸಂಖ್ಯೆ 9480696318 ಹಾಗೂ 9711330755 ಮೂಲಕ ಸಂಪರ್ಕಿಸಬಹುದು ಎಂದು ತಿಳಿಸಲಾಯಿತು.
ಇದನ್ನೂ ಓದಿ : ಬೀದರ್ | ಜೂ.28ರಂದು ಬಸವಾದಿ ಶಿವಶರಣರ ಹಿಂದೂ ಸಮಾವೇಶ ನಡೆಯುವುದು ಖಚಿತ: ಗುಂಡುರೆಡ್ಡಿ
ಈ ಸಂದರ್ಭದಲ್ಲಿ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಶಿವಕುಮಾರ್, ರೈತ ಸಂಘದ ಪ್ರಮುಖರಾದ ಶಂಕರಣ್ಣ ಪಾರಾ ಹಾಗೂ ವೈಜಿನಾಥ್ ಬುಯ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಅನೇಕ ಪ್ರಗತಿಪರ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




