ಅಂಬೇಡ್ಕರ್ ವಾದಿಗಳು ಅಸಮಾನತೆ ಹಾಗೂ ಅನ್ಯಾಯದಿಂದ ಕೂಡಿರುವ ವ್ಯವಸ್ಥೆ ವಿರೋಧಿಸಬೇಕು. ಆದರೆ ಯಥಾಸ್ಥಿತಿ ವ್ಯವಸ್ಥೆಯೇ ದೊಡ್ಡ ಅನ್ಯಾಯ ಮಾಡುತ್ತಿದೆ. ದುಡಿಯದೇ, ಶ್ರಮ ಹಾಗೂ ಬೆವರಿನಿಂದ ಹೆಚ್ಚು ಪಡೆಯದೇ ಅಸಮಾನತೆಯಿಂದ ಕೆಲವರು ಹೆಚ್ಚು ಸಂಪತ್ತು ಗಳಿಸಿದ್ದಾರೆ. ಇನ್ನುಮುಂದೆ ಹೆಚ್ಚು ಪಡೆದವರು ಶೋಷಿತರಿಗೆ ಹೆಚ್ಚು ಹೆಚ್ಚು ನೀಡುವ ಮೂಲಕ ಶೋಷಿತರನ್ನು ಮೇಲೆತ್ತಿ ಸಮಾನತೆ ಸಾಧಿಸಬೇಕು. ಅಂಬೇಡ್ಕರ್ ಸಮಾನತಾವಾದಿಗಳಿಗೆ ಮಾತ್ರ ಸೇರಿದವರು. ಆಡಳಿತಾರೂಢ ಪಕ್ಷಗಳಿಗೆ ಅಂಬೇಡ್ಕರ್ ಚಿತ್ರ ಹಾಕಿಕೊಳ್ಳುವ ನೈತಿಕತೆ ಕೂಡ ಇಲ್ಲ” ಎಂದು ದಾವಣಗೆರೆಯ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಹಿಂಸಾ ಚೇತನ್ ಕಿಡಿಕಾರಿದರು
ದಾವಣಗೆರೆಯ ಜಯದೇವ ವೃತ್ತದ ಸಮೀಪದ ಬ್ರಾಹ್ಮಣ ಹಾಸ್ಟೆಲ್ ಬೀದಿಯಲ್ಲಿ ಮಹಾನಾಯಕ ಡಾ. ಬಿಆರ್ ಅಂಬೇಡ್ಕರ್ ಸೇನೆ ವತಿಯಿಂದ ಶುಕ್ರವಾರ ಮೇ8 ರಂದು ಹಮ್ಮಿಕೊಂಡಿದ್ದ ಬಾಬಾ ಸಾಹೇಬ್ ಅಂಬೇಡ್ಕರರರ 135ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು “ಭವಿಷ್ಯದ ಭಾರತವನ್ನು ಅಂಬೇಡ್ಕರ್ ವಿಚಾರಗಳೇ ರೂಪಿಸುತ್ತವೆ. ಬಲಪಂಥೀಯರು ಅಂಬೇಡ್ಕರ್ ಹಾಗೂ ಸಾವರ್ಕರ್ ಜೊತೆಗೆ ನಿಲ್ಲಿಸುತ್ತಾರೆ. ಯಥಾಸ್ಥಿತಿ ವಾದಿಗಳು ಗಾಂಧಿ ಹಾಗೂ ಅಂಬೇಡ್ಕರ್ ಜೊತೆಗೆ ನಿಲ್ಲಿಸುತ್ತಾರೆ. ಎಡಪಂಥೀಯರು ಮಾರ್ಕ್ಸ್ ಜೊತೆ ಸಮೀಕರಿಸುತ್ತಾರೆ. ಆದರೆ ಅಂಬೇಡ್ಕರ್ ಹಾಗೂ ಪೆರಿಯಾರ್ ಮಾತ್ರವೇ ಸಾಮ್ಯತೆ ಇರುವ ವ್ಯಕ್ತಿತ್ವಗಳು. ಅವರನ್ನು ಯಾರೊಂದಿಗೂ ಹೋಲಿಕೆ, ಸಮೀಕರಿಸಲು ಸಾಧ್ಯವಿಲ್ಲ” ಎಂದು ಪ್ರತಿಪಾದಿಸಿದರು.

“ಜನ ಬೆರಳೆಣಿಕೆಷ್ಟೇ ಇರಲಿ ಗಟ್ಟಿಯಾಗಿ ನಿಂತಾಗ ಮಾತ್ರ ಬದಲಾವಣೆ ಸಾಧ್ಯ. ಕೊಚ್ಚಿ ಹೋಗುವ ಮಣ್ಣಾಗದೇ, ಬಂಡೆಗಳಾಗಬೇಕು. ಸಿದ್ದಾಂತದ ಮೇಲೆ ಗಟ್ಟಿಯಾದ ಸಮಾಜ ಕಟ್ಟೋಣ” ಎಂದು ಕರೆ ನೀಡಿದರು.
“ಅಂಬೇಡ್ಕರ್ ಅವರಿಗೆ ಸಂವಿಧಾನದ ರಚನೆಯ ಸಂದರ್ಭದಲ್ಲೂ ಸೈದ್ದಾಂತಿಕ ವಿರೋಧಿಗಳಿದ್ದರು. ಸಂವಿಧಾನದಲ್ಲಿ ಅವರು ಬರೆಯದೇ ಇದ್ದ ಕೆಲವು ಸೇರಿವೆ. ಆದರೆ ಅಂಬೇಡ್ಕರ್ ಆಲೋಚನೆ ದೊಡ್ಡದು. ಪ್ರಶಸ್ತಿ ಮೀರಿದ ವ್ಯಕ್ತಿತ್ವ ಅವರದಾಗಿತ್ತು. ನೂರು ದೇಶಗಳಿಗೆ ಸಂವಿಧಾನ ರೂಪಿಸುವ ಶಕ್ತಿ ಅಂಬೇಡ್ಕರರಿಗೆ ಇತ್ತು” ಎಂದು ಅಭಿಪ್ರಾಯಪಟ್ಟರು.
“ಇಂದು ಎಲ್ಲರಿಗೂ ಅಂಬೇಡ್ಕರ್ ಬೇಕಾಗಿದೆ. ಎಲ್ಲ ಪಕ್ಷಗಳಿಗೂ ಬೇಕು. ಆದರೆ ಅವರು ಹಚ್ಚಿದ ಕ್ರಾಂತಿಯ ಕಿಡಿ ಆರಿಸುವ ಹುನ್ನಾರ ನಡೆಯುತ್ತಿದೆ. ಇದರ ವಿರುದ್ಧ ಅಂಬೇಡ್ಕರ್ ವಾದ ಏನೆಂದು ಗಟ್ಟಿಯಾಗಿ ನಿರೂಪಿಸಬೇಕು. ಸಮಾನತೆ ಬುಲೆಟ್ ರೈಲು ಬಿಟ್ಟಾಗ ಬರುವುದಿಲ್ಲ. ಸಮ ಸಮಾಜ ಕಟ್ಟಬೇಕು. ಆಗ ಅಂಬೇಡ್ಕರ್ ವಾದಕ್ಕೆ ಬೆಲೆ ಬರುತ್ತದೆ. ಅಂಬೇಡ್ಕರ್ ಅವರನ್ನು ಓದಬೇಕು, ಅವರ ಕನಸು ನನಸು ಮಾಡಬೇಕು. ಪೋಟೋ ಪೂಜೆ, ಆರಾಧನೆ ಮಾಡುವುದರಿಂದಲ್ಲ” ಎಂದು ಪ್ರತಿಪಾದಿಸಿದರು.
“ಸಮಾಜದ ಅಸಮಾನತೆ ಬಯಸುವ ಶಕ್ತಿಗಳು ಅಂಬೇಡ್ಕರ್ ವ್ಯಕ್ತಿತ್ವ ಹಾಳು ಮಾಡುತ್ತಿವೆ. ಶೋಷಿತರಿಗೆ ತಲೆಮಾರುಗಳಿಂದ ಆಗಿರುವ ಅನ್ಯಾಯ ಮುಂದೆ ಆಗಬಾರದು. ಸಮಾನತೆಯನ್ನು ಪ್ರತಿಪಾದಿಸಬೇಕು.
ಇತಿಹಾಸವನ್ನು ಸರಿಯಾಗಿ ಅರ್ಥ ಮಾಡಿಕೊಂಡು, ತಪ್ಪು ಸರಿಪಡಿಸಿ ಭವಿಷ್ಯ ರೂಪಿಸಿಕೊಳ್ಳಬೇಕು. ಶೋಷಿತರಿಗೆ, ವಂಚಿತರಿಗೆ ಹೆಚ್ಚು ಅವಕಾಶ ಸಿಗಬೇಕು” ಎಂದು ತಿಳಿಸಿದರು.

“ಮನುವಾದ, ಗಾಂಧಿ ವಾದದಿಂದ ಬಿಡುಗಡೆ ಸಾಧ್ಯವಿಲ್ಲ.
ರಾಜಕೀಯ ಅಧಿಕಾರ ಮಾತ್ರವೇ ಬಿಡುಗಡೆಯ ಮಾರ್ಗ ಎಂಬುದನ್ನು ಅಂಬೇಡ್ಕರ್ ತೋರಿಸಿಕೊಟ್ಟರು. ರಾಜಕೀಯ ಚಳವಳಿ ರೂಪಿಸಿದರೆ ಮಾತ್ರವೇ ಸಂವಿಧಾನ ಅನುಷ್ಠಾನಕ್ಕೆ ತರಲು ಸಾಧ್ಯ. ಸಂವಿಧಾನದ ಪೀಠಿಕೆ ಅಳವಡಿಸಿಕೊಂಡವರು ಮಾತ್ರವೇ ಅಧಿಕಾರ ಹಿಡಿಯಬೇಕು. ಸತ್ಯಪಂಥದ ಮೂಲಕ ರಾಜಕೀಯ ಚಳವಳಿ ಕಟ್ಟಿದರೆ ಪರಿಹಾರ ಸಿಗಲಿದೆ” ಎಂದು ಅಭಿಪ್ರಾಯಪಟ್ಟರು.
ಮಹಾನಾಯಕ ಬಿ.ಆರ್.ಅಂಬೇಡ್ಕರ್ ಸೇನೆ ರಾಜ್ಯ ಘಟಕದ ಅಧ್ಯಕ್ಷ ಡಿ.ವಿ. ನಾರಾಯಣ ಸ್ವಾಮಿ, ‘ಈ ಹಿಂದೆ ಚುನಾವಣೆಯಲ್ಲಿ ಮತ ಹಾಕುವ ಹಕ್ಕು ಶಿಕ್ಷಣ ಆಸ್ತಿ ಸಂಪತ್ತು ಹೊಂದಿದವರಿಗೆ ಮಾತ್ರ ಇತ್ತು. ಮತದಾನದ ಹಕ್ಕು ನೀಡಿ ಸಮಾನತೆ ತಂದು ಕೊಟ್ಟವರು, ಸಂವಿಧಾನದ ಮೂಲಕ ಶೋಷಿತ ಸಮುದಾಯಗಳಿಗೆ ಬೆಳಕಾದವರು ಡಾ. ಬಿಆರ್ ಅಂಬೇಡ್ಕರ್. ಎಲ್ಲ ವಿಚಾರಗಳಿಗೂ ಸಂವಿಧಾನ ಚೌಕಟ್ಟು ರೂಪಿಸಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಕ್ಕಳಿಗೆ ಉಚಿತ ಆಧಾರ್ ಬಯೋಮೆಟ್ರಿಕ್ ಅಪ್‌ಡೇಟ್
ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಡಿ.ಮೈಲಾರಪ್ಪ, ಆವರಗೆರೆ ಚನ್ನಮ್ಮ, ವಿಜಯ್, ವಿಜಯ್ ಕುಮಾರ್, ಟಿ.ಮಂಜುನಾಥ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.





