“ಪಹಣಿಯಲ್ಲಿ ಮಾತ್ರ ಅರಣ್ಯ ಎಂದು ದಾಖಲಾಗಿದ್ದು, ಕಂದಾಯ ದಾಖಲೆಗಳಲ್ಲಿ ಅರಣ್ಯ ಎಂದು ನಮೂದಾಗದಿರುವ ದಾವಣಗೆರೆ ತಾಲೂಕಿನ ಹುಚ್ಚವನಹಳ್ಳಿ ಗ್ರಾಮದ 644 ಎಕರೆ ಭೂಮಿಯನ್ನು ತಕ್ಷಣವೇ ಕಂದಾಯ ಇಲಾಖೆಗೆ ಹಿಂಪಡೆಯಲು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ರೈತರು ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ರೈತರು, ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ, ದಾವಣಗೆರೆ ನಗರದ ಜಯದೇವ ವೃತ್ತದಿಂದ ತಾಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್, “ಹುಚ್ಚವನಹಳ್ಳಿ ಸರ್ವೆ ನಂಬರ್ 68ರಲ್ಲಿರುವ 644 ಎಕರೆ ಜಮೀನು ಕೇವಲ ಪಹಣಿಯಲ್ಲಿ ಮಾತ್ರ ಅರಣ್ಯ ಎಂದು ನಮೂದಾಗಿದೆ. ಉಳಿದಂತೆ ಯಾವುದೇ ಸರ್ಕಾರಿ ದಾಖಲೆಗಳಲ್ಲಿ ಇದು ಅರಣ್ಯ ಭೂಮಿ ಎಂದು ಸಾಬೀತಾಗಿಲ್ಲ. ಸುಪ್ರೀಂ ಕೋರ್ಟ್ ಆದೇಶದನ್ವಯ ಈಗಲಾದರೂ ಜಿಲ್ಲಾಡಳಿತವು ಅರಣ್ಯ ಮತ್ತು ಕಂದಾಯ ಭೂಮಿಯ ವರ್ಗೀಕರಣ (ಬೈಫರ್ಕೇಶನ್) ಮಾಡಿ, ಈ ಜಮೀನನ್ನು ‘ಹುಲ್ಲು ಬನ್ನಿ ಖರಾಬು’ ಅಥವಾ ‘ಸೇಂದಿವನ’ ಎಂದು ಕಂದಾಯ ಇಲಾಖೆಯ ವ್ಯಾಪ್ತಿಗೆ ತರಬೇಕು” ಎಂದು ಆಗ್ರಹಿಸಿದರು.
“ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಅನ್ವಯ ಜಿಲ್ಲೆಯ ಡೀಮ್ಡ್ ಫಾರೆಸ್ಟ್ (ಘೋಷಿತ ಅರಣ್ಯ), ಅರಣ್ಯ ಮತ್ತು ಕಂದಾಯ ಭೂಮಿಗಳನ್ನು ಮತ್ತೊಮ್ಮೆ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಬೇಕು” ಎಂದು ಒತ್ತಾಯಿಸಿದರು.
“ರಾಜ್ಯದ ಹಲವೆಡೆ ಹಾಗೂ ಜಿಲ್ಲೆಯ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಂದ ಕಿರುಕುಳ ಎದುರಿಸುತ್ತಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರವು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಅರಣ್ಯ ಭೂಮಿಯ ವೈಜ್ಞಾನಿಕ ಪರಿಶೀಲನೆ ಆರಂಭಿಸಲು ಸೂಚನೆ ನೀಡಿದೆ. ಅದರಂತೆ ಜಿಲ್ಲಾಡಳಿತದ ನೇತೃತ್ವದಲ್ಲಿ ಭೂಮಿಯ ಮರು ಪರಿಶೀಲನಾ ಕಾರ್ಯ ನಡೆಯುತ್ತಿದೆ. ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಯ ನಡುವೆ ಗಡಿ ಗುರುತಿಸುವಿಕೆಯಲ್ಲಿ ಗೊಂದಲ ಉಂಟಾಗಿದ್ದು, ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ” ಎಂದು ಅಸಮಾಧಾನ ಹೊರಹಾಕಿದರು.
“ಪ್ರಮುಖವಾಗಿ ದಾವಣಗೆರೆ ತಾಲ್ಲೂಕಿನ ಹುಚ್ಚವ್ವನಹಳ್ಳಿ, ಜಗಳೂರು ತಾಲ್ಲೂಕಿನ ಚಿಕ್ಕಮ್ಮನಹಳ್ಳಿ, ಗೌಡಗೊಂಡನಹಳ್ಳಿ ಮತ್ತು ಇತರ ಗ್ರಾಮಗಳು, ಚನ್ನಗಿರಿ ತಾಲ್ಲೂಕಿನ ಅಸ್ತಾಪನಹಳ್ಳಿ, ಕಂಚಿಕೊಪ್ಪದಹಳ್ಳಿ, ಹಾಲೇಶಪುರ ಸೇರಿದಂತೆ ಹಲವು ಗ್ರಾಮಗಳು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿದೆ ಎಂದು ಗುರುತಿಸಲಾಗಿರುವ ಅನೇಕ ಕೃಷಿ ಭೂಮಿಗಳು ವಾಸ್ತವದಲ್ಲಿ ಕಂದಾಯ ಇಲಾಖೆಗೆ ಸೇರಿವೆ. ಈ ಕೆಳಗಿನ ಗ್ರಾಮಗಳಲ್ಲಿ ಸಮಸ್ಯೆ ತೀವ್ರಗೊಂಡಿದೆ. ಹಾಗಾಗಿ ಡೀಮ್ಡ್ ಫಾರೆಸ್ಟ್ ಪಟ್ಟಿಯಲ್ಲಿರುವ ಇಂತಹ ಜಮೀನುಗಳನ್ನು ಆದಷ್ಟು ಬೇಗ ಕಂದಾಯ ಇಲಾಖೆಗೆ ವಾಪಸ್ ನೀಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.
“ರೈತರ ಈ ಬೇಡಿಕೆಗಳಿಗೆ ಜಿಲ್ಲಾಡಳಿತ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪೋಕ್ಸೋ ಪ್ರಕರಣ, ವಚನಾನಂದಶ್ರೀ ವಿಚಾರಣೆ: ವೈದ್ಯಕೀಯ ತಪಾಸಣೆ
ಪ್ರತಿಭಟನೆಯಲ್ಲಿ ಚನ್ನಗಿರಿ ತಾಲೂಕು ಅಧ್ಯಕ್ಷ ಯೆಲೋದಹಳ್ಳಿ ರವಿ, ಹುಚ್ಚವನಹಳ್ಳಿ ಪ್ರಕಾಶ್,
ಚಿಕ್ಕಮಲ್ಲನಹೊಳೆ ಚಿರಂಜೀವಿ, ಹರೀಶ್, ಜಗಳೂರು ತಿಪ್ಪೇಸ್ವಾಮಿ, ದಯಾನಂದ, ಚಿನ್ನಪ್ಪರ ದಯಾನಂದ, ಜಯನಾಬಿ, ಸಾಧಿಕ್ ಸೇರಿದಂತೆ ಇತರ ಮುಖಂಡರು ಹಾಗೂ ರೈತರು ಭಾಗವಹಿಸಿದ್ದರು.





