ಪಂಚಮಸಾಲಿ ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ಬಾಲಕರಿಂದ ಮಸಾಜ್ ಮಾಡಿಸಿಕೊಂಡ ಪ್ರಕರಣದಲ್ಲಿ ದಾವಣಗೆರೆ ಜಿಲ್ಲೆ, ಹರಿಹರ ಗ್ರಾಮಾಂತರ ಠಾಣೆಯಲ್ಲಿ ವೀರಶೈವ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳಿಗೆ ವಿಚಾರಣೆ ಹಾಗೂ ವೈದ್ಯಕೀಯ ತಪಾಸಣೆಯನ್ನು ನಡೆಸಲಾಗಿದೆ. ಹರಿಹರ ಸಮೀಪದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಮಾಜಿ ಪೀಠಾಧಿಪತಿ ವಚನಾನಂದ ಶ್ರೀ ವಿರುದ್ಧ ಬಾಲಕನ ಮೇಲಿನ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿದೆ.

ಮಸಾಜ್ ಗೆ ಅಪ್ರಾಪ್ತ ಮಕ್ಕಳ ಬಳಕೆ ಹಿನ್ನೆಲೆಯಲ್ಲಿ ದಾಖಲಾದ ಪೋಕ್ಸೋ ಪ್ರಕರಣದಲ್ಲಿ ವಿಚಾರಣೆಗೆ ಕರೆಯಿಸಿದ ಪೊಲೀಸರು ಬೆಳಿಗ್ಗೆ 9 ರಿಂದ ಮಧ್ಯಾಹ್ನ ಎರಡರವರೆಗೆ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲಾಗಿದ್ದು, ಮಧ್ಯಾಹ್ನ 2 ರಿಂದ 3ರವರೆಗೆ ಹರಿಹರ ಸಾರ್ವಜನಿಕ ಆಸ್ಪತ್ರೆಯ ವೈದ್ಯ ರಾಘವೇಂದ್ರ ದುರುಗೋಜಿ ನೇತೃತ್ವದಲ್ಲಿಯೇ ವೈದ್ಯಕೀಯ ತಪಾಸಣೆಯನ್ನು ಮಾಡಲಾಗಿದೆ ಎಂದು ತಿಳಿದು ಬಂದಿದೆ

ಪೊಲೀಸರ ನೋಟಿಸ್ ಹಿನ್ನೆಲೆಯಲ್ಲಿ ಬೆಳಗ್ಗೆ ಒಂಬತ್ತಕ್ಕೆ ಹರಿಹರ ಗ್ರಾಮಂತರ ಪೊಲೀಸ್ ಠಾಣೆಗೆ ವಚನಾನಂದಶ್ರೀ ಹಾಜರಾಗಿ ಪ್ರಕರಣದ ವಿಚಾರಣೆಯನ್ನು ಎದುರಿಸಿದ್ದಾರೆ. ಗ್ರಾಮಾಂತರ ಠಾಣೆಯ ಡಿವೈಎಸ್ಪಿ ಬಸವರಾಜ್, ಸಿಪಿಐ ಸುರೇಶ್ ಹಗರಿ, ಪಿಎಸ್ಐ ಮಂಜುಳ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿದೆ. ವೈದ್ಯಕೀಯ ವರದಿ 15 ದಿನಗಳ ನಂತರವಷ್ಟೇ ದೊರೆಯಲಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಪರವಿರೋಧದ ಸುದ್ದಿಯಲ್ಲಿರುವ ಪಂಚಮಸಾಲಿ ಪೀಠದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಪಂಚಮಸಾಲಿ ಗುರು ಪೀಠದ ಟ್ರಸ್ಟ್ ಸದಸ್ಯರು ವಚನಾನಂದಶ್ರೀ ಗಳನ್ನು ಪೀಠದಿಂದ ಉಚ್ಚಾಟಿಸಿದ್ದರು. ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅಪ್ರಾಪ್ತ ಮಕ್ಕಳಿಂದ ಮಸಾಜ್ ಮಾಡಿಸಿಕೊಂಡ ಹಿನ್ನೆಲೆಯಲ್ಲಿ ಪೋಷಕರು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಠಾಣೆಯಲ್ಲಿ ಪ್ರಕರಣದ ದಾಖಲಿಸಿದ್ದರು.
ಈ ಸುದ್ದಿ ಓದಿದ್ದೀರಾ? http://ದಾವಣಗೆರೆ | ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಸಿಬಿಐ ತನಿಖೆಗೆ ವಹಿಸಿ: ಎಸ್‌ಎಫ್‌ಐ ಆಗ್ರಹ
ಲಕ್ಷ್ಮೇಶ್ವರ ಠಾಣೆಯಲ್ಲಿ ದಾಖಲಾಗಿದ್ದ ‘0’ ಎಫ್‌ಐಆರ್ ಅನ್ನು ಅಲ್ಲಿನ ಪೊಲೀಸರು ಪ್ರಕರಣ ನಡೆದ ಸ್ಥಳವಾದ ಹರಿಹರ ಗ್ರಾಮಾಂತರ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿದ್ದು, ಪ್ರಕರಣದ ತನಿಖೆಯನ್ನು ಕೈಗೊಂಡಿರುವ ಪೊಲೀಸರು ವಚನಾನಂದಶ್ರೀ ವಿಚಾರಣೆ ನಡೆಸಿದ್ದಾರೆ. ಸದ್ಯ ವಚನಾನಂದ ಶ್ರೀಗಳು ಕೋರ್ಟಿನ ನಿರೀಕ್ಷಣಾ ಜಾಮೀನಿನ ಮೇಲೆ ವಿಚಾರಣೆ ಎದುರಿಸುತ್ತಿದ್ದಾರೆ.
ಪ್ರಕರಣ ದಾಖಲಾದ ನಂತರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಪಂಚಮಸಾಲಿ ಗುರುಪೀಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಚನಾನಂದಶ್ರೀ ಸೇರಿದಂತೆ ಕೆಲವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದರು.





