ತಾಲೂಕಿನ ಜೂಳಪಾಳ್ಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೋಡಿಕದಿರೆಪಲ್ಲಿ, ನಡಂಪಲ್ಲಿ ಬಂಡಕಿಂದಪಲ್ಲಿ, ವೆಂಕಟಾಪುರ, ಶ್ರೀಧರೋಳ್ಳಪಲ್ಲಿ ಗ್ರಾಮಗಳಲ್ಲಿ ಸಪ್ಪಲಮ್ಮ ಜಾತ್ರೆ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಬುಧವಾರ ಸಂಜೆ ಸುಮಾರು ನೂರಾರು ಸಂಖ್ಯೆ ಮಹಿಳೆಯರು ಮುಂಜಾನೆಯಿಂದಲೇ ಮನೆ ಶುಭ್ರಗೊಳಿಸಿ, ಉಪವಾಸವಿದ್ದು ಹಿಂದಿನ ದಿನ ಅಕ್ಕಿ ನೆನೆಸಿ ತಂಬಿಟ್ಟು ಮಾಡಿ ಬೆಲ್ಲದ ಪಾಕದಲ್ಲಿ ಹಸಿಟ್ಟು ಸೇರಿಸಿ ಅದರಲ್ಲಿ ದೀಪಗಳನ್ನು ಮಾಡಿ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಿ ತಲೆಯ ಮೇಲೆ ಹೊತ್ತು ವಿವಿಧ ದೇವತೆಗಳಿಗೆ ಬೆಳಗುವ ಮೂಲಕ ದೀಪೋತ್ಸವ ಆಚರಿಸಿದರು.
ಮುಂಗಾರು ಮಳೆ ಆರಂಭಕ್ಕೂ ಮುನ್ನ ಮಳೆ ಬೆಳೆ ಸಮೃದ್ಧಿಯಾಗಲಿ ಎಂದು ಗ್ರಾಮ ದೇವತೆಗಳಿಗೆ ಪೂಜೆ ಸಲ್ಲಿಸುವ ಆಚರಣೆ ಅನಾದಿಕಾಲದಿಂದ ನಡೆದುಕೊಂಡು ಬಂದಿದೆ.
ಜಾತ್ರೋತ್ಸವದ ಪ್ರಯುಕ್ತ ಗ್ರಾಮದಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ, ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಹೆಣ್ಣುಮಕ್ಕಳು ತಂಬಿಟ್ಟು ಆರತಿಗಳೊಂದಿಗೆ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಯುವಕರು ತಮಟೆ ತಾಳಕ್ಕೆ ಕುಣಿದು ಕುಪ್ಪಳಿಸಿದರು. ಬುಧವಾರ ಗ್ರಾಮವಿಡಿ ಬಾಡೂಟದ ಘಮಲು, ನೆಂಟರು, ಸ್ನೇಹಿತರಿಗೆಲ್ಲ ಅಹ್ವಾನ ನೀಡಿದ್ದರಿಂದ ಇಡೀ ಗ್ರಾಮದ ತುಂಬ ದ್ವಿಚಕ್ರ ಹಾಗೂ ದ್ವಿಚಕ್ರ ವಾಹನಗಳು ಹೆಜ್ಜೆ ಇಡಲು ಸಾಧ್ಯವಾಗದಂತೆ ತುಂಬಿ ಹೋಗಿದ್ದವು.
ಈ ಸಂದರ್ಭದಲ್ಲಿ ಶಿಡ್ಲಘಟ್ಟ ತಾಲ್ಲೂಕು ಮಾಜಿ ಶಾಸಕ ರಾಜಣ್ಣ ಮಾತನಾಡಿ ಉತ್ತಮ ಮಳೆಯಾಗಲಿ. ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪ್ರತಿ ಹಳ್ಳಿಗಳಲ್ಲಿ ಊರ ದೇವತೆಗಳ ಜಾತ್ರೆ ಮಾಡಲಾಗುತ್ತದೆ. ಊರ ಜಾತ್ರೆಗಳಿಗೆ ಎಲ್ಲ ಸಮುದಾಯಗಳನ್ನು ಒಗ್ಗೂಡಿಸುವ ಶಕ್ತಿಯಿದೆ. ಆದ್ದರಿಂದ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.
ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಸಿ.ಕೆ.ಮೌಲಾ ಶರೀಫ್ ಮಾತನಾಡಿ ಮುಂಗಾರು ಮಳೆ ಆರಂಭಕ್ಕೂ ಮುನ್ನ ಮಳೆ ಬೆಳೆ ಸಮೃದ್ಧಿಯಾಗಲಿ ಎಂದು ಗ್ರಾಮ ದೇವತೆಗಳಿಗೆ ಪೂಜೆ ಸಲ್ಲಿಸುವ ಆಚರಣೆ ಅನಾದಿಕಾಲದಿಂದ ನಡೆದುಕೊಂಡು ಬಂದಿದೆ. ಸಪ್ಲಮ್ಮ, ಮಾರೆಮ್ಮ, ಮುತ್ಯಾಲಮ್ಮ, ಕೊಲ್ಲಾಪುರ ಮಹಾಲಕ್ಷ್ಮೀ, ಸತ್ಯಮ್ಮ, ಗಂಗಮ್ಮ, ಗೊಡ್ಡಮ್ಮ ಶಕ್ತಿ ದೇವತೆಗಳು ನಮ್ಮ ಸಂಸ್ಕೃತಿಯ ಪ್ರತೀಕ ಜಾತ್ರೆ ನಮ್ಮ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದ್ದು, ಗ್ರಾಮೀಣ ಪ್ರದೇಶದ ಜನರಲ್ಲಿ ಭಕ್ತಿ, ಏಕತೆ ಮತ್ತು ಸಂಸ್ಕೃತಿ ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಇಂತಹ ಜಾತ್ರೆಗಳು ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ ಪವಿತ್ರ ವೇದಿಕೆಗಳಾಗಿವೆ’ ಎಂದರು.
ಇದನ್ನು ಓದಿದ್ದೀರಾ..? ಕೋಲಾರ | ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮೋದಿ ರಾಜೀನಾಮೆಗೆ ಯುವ ಕಾಂಗ್ರೆಸ್ ನಿಗಮ್ ಭಂಡಾರಿ ಒತ್ತಾಯ
ಈ ಸಂದರ್ಭದಲ್ಲಿ ಎನ್.ಡಿ.ಎ. ಮುಖಂಡರಾದ ಹರಿನಾಥರೆಡ್ಡಿ, ಜೆ.ಪಿ. ಚಂದ್ರಶೇಖರರೆಡ್ಡಿ, ಪಿ.ಸಿ. ನಾರಾಯಣಸ್ವಾಮಿ, ಅ.ನಾ. ಮೂರ್ತಿ, ಲಕ್ಷ್ಮೀನಾರಾಯಣ, ಪಿ. ಎಲ್. ಡಿ. ಬ್ಯಾಂಕ್ ನಿರ್ದೇಶಕ ಹರಿನಾಥ, ಬಾಬುರೆಡ್ಡಿ, ಜಗನ್ನಾಥ, ಚೇನ್ನಕೇಶವರೆಡ್ಡಿ, ಶ್ರೀನಿವಾಸ್, ಕೆ.ಸಿ. ವೆಂಕಟರವಣಪ್ಪ, ನಾಗಾರ್ಜುನ, ರವಿಚಂದ್ರ, ವೆಂಕಟಶಿವಪ್ಪ ಸೇರಿದಂತೆ ಹಲವಾರು ಸಾರ್ವಜನಿಕರು ಭಾಗವಹಿಸಿದ್ದರು.




