ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಸರ್ಕಾರ ರಚನೆ ಕಸರತ್ತು ತೀವ್ರಗೊಂಡಿದ್ದು, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಜೋಸೆಫ್ ವಿಜಯ್ ಅವರಿಗೆ ಸರ್ಕಾರ ರಚಿಸಲು ಆಹ್ವಾನ ನೀಡದಿರುವ ಕುರಿತು ನಟರಾದ ಕಮಲ್ ಹಾಸನ್ ಮತ್ತು ನಟ ವಿಶಾಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಜಯ್‌ಗೆ ಆಹ್ವಾನ ನೀಡದಿರುವುದು ಜನಾದೇಶವನ್ನು ಅಗೌರವಿಸಿದಂತೆ ಎಂದು ಕಮಲ್ ಹಾಸನ್ ಹೇಳಿದ್ದರೆ, ಸದನದಲ್ಲಿ ಬಹುಮತ ಸಾಬೀತಿಗೆ ಅವಕಾಶ ನೀಡದಿರುವ ರಾಜ್ಯಪಾಲರ ನಡೆಯನ್ನು ನಟ ವಿಶಾಲ್ ಕಟುವಾಗಿ ಪ್ರಶ್ನಿಸಿದ್ದಾರೆ.
ಜನಾದೇಶವನ್ನು ಗೌರವಿಸಿ: ಕಮಲ್ ಹಾಸನ್ ಆಗ್ರಹ
ತಮಿಳುನಾಡು ಸರ್ಕಾರ ರಚನೆಗೆ ವಿಜಯ್ ಅವರನ್ನು ಆಹ್ವಾನಿಸದಿರುವುದು ಜನಾದೇಶಕ್ಕೆ ತೋರುವ ಅಗೌರವವಾಗುತ್ತದೆ ಎಂದು ರಾಜ್ಯಸಭಾ ಸಂಸದರೂ ಆಗಿರುವ ಕಮಲ್ ಹಾಸನ್ ಗುರುವಾರ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.
“ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಒಂದು ಪಕ್ಷಕ್ಕೆ ಸ್ವತಂತ್ರವಾಗಿ ಸರ್ಕಾರ ರಚಿಸುವ ಅಧಿಕಾರವನ್ನು ಜನರು ನೀಡಿಲ್ಲ. ತಮಿಳುನಾಡು ಇತಿಹಾಸದಲ್ಲಿ ಇದೊಂದು ಅಭೂತಪೂರ್ವ ಬೆಳವಣಿಗೆಯಾಗಿದೆ” ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಗಲ್ಲಾಪೆಟ್ಟಿಗೆಯಿಂದ ಮತಪೆಟ್ಟಿಗೆ; ಜೋಸೆಫ್ ವಿಜಯ್ ಎಂಬ ಹೀರೋವಿನ ಸೂಪರ್ ಡ್ಯೂಪರ್ ಹಿಟ್ ರಾಜಕೀಯ ಪ್ರವೇಶ!
ನಿರ್ಗಮಿತ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ನಿರ್ಧಾರವನ್ನು ಶ್ಲಾಘಿಸಿದ ಕಮಲ್, “ನನ್ನ ಸಹೋದರ ಎಂ.ಕೆ. ಸ್ಟಾಲಿನ್ ಅವರು ‘ನಾವು ಜನರ ತೀರ್ಪನ್ನು ಗೌರವಿಸುತ್ತೇವೆ; ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತೇವೆ’ ಎಂದು ಘೋಷಿಸಿದ್ದಾರೆ. ಅವರ ಈ ರಾಜಕೀಯ ಪ್ರಬುದ್ಧತೆಯನ್ನು ನಾನು ಗೌರವಿಸುತ್ತೇನೆ” ಎಂದಿದ್ದಾರೆ.
ಅಲ್ಲದೆ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಪಕ್ಷಕ್ಕೆ ಸರ್ಕಾರ ರಚಿಸಲು ಹಕ್ಕು ಮಂಡಿಸಲು ಅವಕಾಶ ನೀಡುವ ಮೂಲಕ ಸಾಂವಿಧಾನಿಕ ಪ್ರಾಧಿಕಾರಗಳು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಾಜ್ಯಪಾಲರ ನಡೆ ಪ್ರಶ್ನಿಸಿದ ನಟ ವಿಶಾಲ್
ದಕ್ಷಿಣ ಭಾರತದ ನಡಿಗರ್ ಸಂಘದ ಅಧ್ಯಕ್ಷರೂ ಆಗಿರುವ ನಟ ವಿಶಾಲ್, ತಮ್ಮ ‘ಎಕ್ಸ್’ ಖಾತೆಯಲ್ಲಿ ವಿಜಯ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ವಿಜಯ್‌ಗೆ ಸರ್ಕಾರ ರಚಿಸಲು ಅವಕಾಶ ನೀಡಲು ರಾಜ್ಯಪಾಲರೇಕೆ “ಹಿಂದೇಟು ಹಾಕುತ್ತಿದ್ದಾರೆ” ಎಂದು ಪ್ರಶ್ನಿಸಿದ್ದಾರೆ.
ರಾಜ್ಯಪಾಲರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವಿಶಾಲ್, 2017-18ರಲ್ಲಿ ಗೋವಾ, ಮಣಿಪುರ, ಮೇಘಾಲಯ ಮತ್ತು ಕರ್ನಾಟಕ ಚುನಾವಣೆಗಳ ಸಂದರ್ಭದಲ್ಲಿ ಅನುಸರಿಸಿದ ಕ್ರಮಗಳನ್ನು ಉಲ್ಲೇಖಿಸಿದ್ದಾರೆ. ಆ ರಾಜ್ಯಗಳಲ್ಲಿ ಸರ್ಕಾರ ರಚನೆಗೆ ಮೊದಲು ಅವಕಾಶ ನೀಡಿ, ನಂತರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಸೂಚಿಸಲಾಗಿತ್ತು ಎಂಬುದನ್ನು ಅವರು ಪ್ರಸ್ತಾಪಿಸಿ, ವಿಜಯ್ ಅವರಿಗೂ ಅದೇ ಮಾದರಿಯಲ್ಲಿ ಅವಕಾಶ ನೀಡಬೇಕಿತ್ತು ಎಂದು ತಿಳಿಸಿದ್ದಾರೆ.




