ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಇ20 ಪೆಟ್ರೋಲ್ ನೀತಿಯಿಂದ ವಾಹನಗಳ ಎಂಜಿನ್ ಹಾಗೂ ಬಿಡಿಭಾಗಗಳಿಗೆ ಹಾನಿಯಾಗುತ್ತಿದ್ದು, ಇದರಿಂದ ಸಾಮಾನ್ಯ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆದ್ದರಿಂದ ಪೆಟ್ರೋಲ್‌ನಲ್ಲಿನ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಕಡಿಮೆ ಮಾಡಬೇಕು ಅಥವಾ ಹಳೆಯ ವಾಹನಗಳಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ನವೀನ್ ಸಾಲಿಯಾನ್ ಆಗ್ರಹಿಸಿದ್ದಾರೆ.
ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥೆನಾಲ್ ಮಿಶ್ರಣ ಮಾಡುವ ನೀತಿಯನ್ನು ಜಾರಿಗೆ ತಂದಿದೆ. ಆದರೆ, ಕರ್ನಾಟಕ ರಾಜ್ಯ ಸರ್ಕಾರದ ನಿರ್ದೇಶನದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಂಗ್ರಹಿಸಲಾದ 63 ಪೆಟ್ರೋಲ್ ಮಾದರಿಗಳನ್ನು ಪರೀಕ್ಷಿಸಿದಾಗ, ಕೆಲವು ಮಾದರಿಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣವಾಗಿರುವುದು ಪತ್ತೆಯಾಗಿದೆ. ಕೆಲವು ಮಾದರಿಗಳಲ್ಲಿ ಶೇ.25ರಿಂದ ಶೇ.30ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಇರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ತಿಳಿಸಿದರು.
ಎಥೆನಾಲ್ ಮಿಶ್ರಣದ ಮೂಲಕ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ ಸುಮಾರು 50 ರೂ.ಗಳಷ್ಟು ಕಡಿಮೆ ಮಾಡಬಹುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಹಿಂದೆ ಹೇಳಿಕೆ ನೀಡಿದ್ದರು. ಆದರೆ, ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 110 ರೂ. ದಾಟಿದೆ. ಬೆಲೆ ಇಳಿಕೆಯ ಭರವಸೆ ಈಡೇರಿಲ್ಲ. ಮತ್ತೊಂದೆಡೆ, ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ವಾಹನಗಳ ಎಂಜಿನ್ ಹಾಗೂ ಬಿಡಿಭಾಗಗಳಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ನನ್ನ ಸ್ವಂತ ಕಾರು ಕೂಡ ಇ20 ಪೆಟ್ರೋಲ್ ಬಳಕೆಯಿಂದ ಎರಡು-ಮೂರು ಬಾರಿ ದುರಸ್ತಿಗೆ ಒಳಗಾಗಿದೆ ಎಂದು ಅವರು ಆರೋಪಿಸಿದರು.
ಹಳೆಯ ವಾಹನಗಳ ಎಂಜಿನ್‌ಗಳು ಇ20 ಪೆಟ್ರೋಲ್ ಬಳಕೆಗೆ ಸಂಪೂರ್ಣವಾಗಿ ಹೊಂದಿಕೆಯಾಗದ ಕಾರಣ, ವಾಹನಗಳಲ್ಲಿ ತಾಂತ್ರಿಕ ತೊಂದರೆಗಳು ಉಂಟಾಗುತ್ತಿವೆ. ಇದರಿಂದ ವಿಶೇಷವಾಗಿ ಹಳೆಯ ಹಾಗೂ ಸೆಕೆಂಡ್‌ಹ್ಯಾಂಡ್ ವಾಹನಗಳನ್ನು ಅವಲಂಬಿಸಿರುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತಿದೆ. ಎಂಜಿನ್ ದುರಸ್ತಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಈಗಾಗಲೇ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನಸಾಮಾನ್ಯರ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಹಾಕುವುದು ಸರಿಯಲ್ಲ ಎಂದು ಹೇಳಿದರು.
ಕಬ್ಬು ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಎಥೆನಾಲ್ ಮಿಶ್ರಣ ನೀತಿಯನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಆದರೆ, ರೈತರ ಹಿತಾಸಕ್ತಿಯ ಜೊತೆಗೆ ವಾಹನ ಸವಾರರ ಸಮಸ್ಯೆಗಳಿಗೂ ಸರ್ಕಾರ ಸಮಾನ ಆದ್ಯತೆ ನೀಡಬೇಕು. ರೈತರ ಹೆಸರಿನಲ್ಲಿ ನೀತಿಯನ್ನು ಸಮರ್ಥಿಸಿಕೊಳ್ಳುವುದಷ್ಟೇ ಅಲ್ಲದೆ, ವಾಹನ ಮಾಲೀಕರ ಹಿತಾಸಕ್ತಿಯನ್ನೂ ರಕ್ಷಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಕೂಡಲೇ ಪೆಟ್ರೋಲ್‌ನಲ್ಲಿನ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಕಡಿಮೆ ಮಾಡಬೇಕು. ಇಲ್ಲವಾದಲ್ಲಿ ಐದುರಿಂದ ಹತ್ತು ವರ್ಷಗಳ ಹಿಂದಿನ ವಾಹನಗಳಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಇ20 ಪೆಟ್ರೋಲ್‌ಗೆ ಹೊಂದಿಕೆಯಾಗುವಂತೆ ಎಂಜಿನ್ ವ್ಯವಸ್ಥೆಯನ್ನು ಸುಧಾರಿಸುವ ಅಥವಾ ಹಳೆಯ ವಾಹನಗಳ ಮಾಲೀಕರಿಗೆ ಅಗತ್ಯ ಪರಿಹಾರ ಒದಗಿಸುವ ಮೂಲಕ ಜನಸಾಮಾನ್ಯರ ಹಿತ ಕಾಪಾಡಬೇಕು ಎಂದು ನವೀನ್ ಸಾಲಿಯಾನ್ ಆಗ್ರಹಿಸಿದರು.
ಈದಿನ.ಕಾಮ್ ಜೊತೆ ಮಾತನಾಡಿದ ಸ್ಥಳೀಯರಾದ ಶಾಕೀರ್ ಅವರು, “ನಾನು ಉಡುಪಿಯಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದೇನೆ. ಕಳೆದ ಐದಾರು ವರ್ಷಗಳಿಂದ ಪ್ರತಿದಿನ ಬ್ರಹ್ಮಾವರದಿಂದ ಉಡುಪಿಗೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದೇನೆ.
ಆರಂಭದಲ್ಲಿ ವಾರಕ್ಕೆ ಸುಮಾರು 400 ರೂ. ಪೆಟ್ರೋಲ್ ಹಾಕಿಸಿದರೆ ಸಾಕಾಗುತ್ತಿತ್ತು. ಆದರೆ ಈಗ ವಾರಕ್ಕೆ 600ರಿಂದ 700 ರೂ.ವರೆಗೆ ಪೆಟ್ರೋಲ್ ಖರ್ಚಾಗುತ್ತಿದೆ. ನನ್ನ ವಾಹನ 2012ರ ಮಾಡೆಲ್ ಆಗಿದ್ದು, ಈ ಹಿಂದೆ ಸಾಮಾನ್ಯ ಪೆಟ್ರೋಲ್ ಬಳಸುವಾಗ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ E20 ಪೆಟ್ರೋಲ್ ಬಳಕೆ ಆರಂಭವಾದ ಬಳಿಕ ವಾಹನ ಸ್ಟಾರ್ಟಿಂಗ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಪಿಕಪ್ ಕಡಿಮೆಯಾಗಿದ್ದು, ಮೈಲೇಜ್ ಕೂಡ ಗಣನೀಯವಾಗಿ ಕುಸಿದಿದೆ. ಹೀಗಾಗಿ ಪ್ರತಿದಿನ ಸುಮಾರು 100 ರೂ. ಪೆಟ್ರೋಲ್ ಹಾಕಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
E20 ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಮಾಡಿರುವುದರಿಂದ ಪೆಟ್ರೋಲ್ ಬೆಲೆ ಕಡಿಮೆಯಾಗಬೇಕಿತ್ತು. ಆದರೆ ಬೆಲೆ ಕಡಿಮೆಯಾಗುವ ಬದಲು ಲೀಟರ್‌ಗೆ ಸುಮಾರು 10 ರೂ. ಹೆಚ್ಚಳವಾಗಿದೆ. ಪ್ರತಿದಿನ ಉದ್ಯೋಗಕ್ಕಾಗಿ ದೂರದ ಊರುಗಳಿಂದ ಸಂಚರಿಸುವ ನಮ್ಮಂತಹ ಸಾಮಾನ್ಯ ಜನರಿಗೆ ಇದು ದೊಡ್ಡ ಹೊರೆಯಾಗಿದೆ.
ದೇಶವನ್ನು ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಕೊಂಡೊಯ್ಯುವ ಮಾತುಗಳನ್ನಾಡಲಾಗುತ್ತಿದೆ. ಆದರೆ ಅಭಿವೃದ್ಧಿಯ ಜೊತೆಗೆ ಜನಸಾಮಾನ್ಯರ ಜೀವನಾವಶ್ಯಕ ವಸ್ತುಗಳ ಬೆಲೆಯೂ ಕಡಿಮೆಯಾಗಬೇಕಿತ್ತು. ಇತ್ತೀಚೆಗೆ ಹಾಲಿನ ದರವನ್ನೂ ಹೆಚ್ಚಿಸಲಾಗಿದೆ. ದಿನನಿತ್ಯದ ಪೆಟ್ರೋಲ್ ಖರ್ಚು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ತೀವ್ರ ಆರ್ಥಿಕ ಒತ್ತಡ ಎದುರಿಸುವಂತಾಗಿದೆ” ಎಂದು ತಮ್ಮ ಅಳಲು ತೋಡಿಕೊಂಡರು.







