ಕೇಜ್ರೀವಾಲ್ ಬೇಡವೆಂದರೂ, ಮದ್ಯ ನೀತಿ ಹಗರಣದಲ್ಲಿ ಅವರ ಪರವಾಗಿ ವಾದಿಸಲು ಹಿರಿಯ ವಕೀಲರನ್ನು ನೇಮಿಸಲು ಮುಂದಾಗಿದೆ ದೆಹಲಿ ಹೈಕೋರ್ಟು. ಈ ಹಗರಣದಿಂದ ಕೇಜ್ರೀವಾಲ್ ಮತ್ತು ಇತರೆ 23 ಮಂದಿ ಆಪಾದಿತರನ್ನು ಅಧೀನ ನ್ಯಾಯಾಲಯ ಇತ್ತೀಚೆಗೆ ಖುಲಾಸೆಗೊಳಿಸಿತ್ತು.
ಈ ತೀರ್ಪನ್ನು ಪ್ರಶ್ನಿಸಿ ಸಿಬಿಐ ದೆಹಲಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದೆ. ಈ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮ ಅವರ ನ್ಯಾಯಪೀಠ ನಡೆಸುತ್ತಿದೆ.
ಹಿತಾಸಕ್ತಿಗಳ ತಾಕಲಾಟದ ಕಾರಣ ನ್ಯಾಯಮೂರ್ತಿ ಶರ್ಮ ಅವರು ಈ ವಿಚಾರಣೆಯಿಂದ ಹಿಂದೆ ಸರಿಬೇಕೆಂದು ಕೋರಿ ಕೇಜ್ರೀವಾಲ್ ಮನವಿ ಸಲ್ಲಿಸಿದ್ದರು. ಈ ಕುರಿತು ಸ್ವರ್ಣಕಾಂತ ಶರ್ಮ ಅವರ ನ್ಯಾಯಪೀಠದ ಮುಂದೆ ತಾವೇ ಖುದ್ದು ವಾದ ಮಂಡಿಸಿದ್ದರು.
ತಾವು ಸೈದ್ಧಾಂತಿಕವಾಗಿ ಆರೆಸ್ಸೆಸ್ ವಿರೋಧಿಯಾಗಿದ್ದು, ಆರೆಸ್ಸೆಸ್ ಸಮಾರಂಭಗಳಲ್ಲಿ ಭಾಗವಹಿಸುತ್ತ ಬಂದಿರುವ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮ ಅವರಿಂದ ತಮಗೆ ನ್ಯಾಯ ದೊರೆಯುವುದಿಲ್ಲ ಎಂಬುದು ಕೇಜ್ರೀವಾಲ್ ಆಕ್ಷೇಪವಾಗಿತ್ತು. ಸಿಬಿಐ ಮೇಲ್ಮನವಿ ಮೊಕದ್ದಮೆಯಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಿಬಿಐ ಪರ ವಾದ ಮಂಡಿಸುತ್ತಿದ್ದಾರೆ. ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮ ಅವರ ಇಬ್ಬರೂ ಮಕ್ಕಳು ವಕೀಲರು. ನ್ಯಾಯಾಲಯಗಳ ಮುಂದೆ ಕೇಂದ್ರ ಸರ್ಕಾರದ ಪರವಾಗಿ ವಾದ ಮಾಡುವ ವಕೀಲರ ಪಟ್ಟಿಯಲ್ಲಿ ಹಲವು ವರ್ಷಗಳಿಂದ ಇದ್ದಾರೆ.
ಇದನ್ನು ಓದಿದ್ದೀರಾ? ಸುದ್ದಿ ವಿಶ್ಲೇಷಣೆ | ಕೆಂಪಿನಿಂದ ಹಸಿರನ್ನು ಹಾದು ಕೇಸರಿಯತ್ತ ಹೊರಳಿತು ಬಂಗಾಳ
ಈ ಪಟ್ಟಿಯಲ್ಲಿರುವ ವಕೀಲರಿಗೆ ಕೆಲಸ ಹಂಚುವವರು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ. ತಮ್ಮ ಮಕ್ಕಳಿಗೆ ಕೇಸುಗಳನ್ನು ಹಂಚಿಕೊಡುವ ಮತ್ತು ಆ ಮೂಲಕ ಅವರಿಗೆ ವರ್ಷಕ್ಕೆ ಕೋಟ್ಯಂತರ ರುಪಾಯಿ ಶುಲ್ಕ ರೂಪದ ಆದಾಯಕ್ಕೆ ಕಾರಣವಾಗಿರುವ ಅವರ ‘ಮೇಲಧಿಕಾರಿ’ ತುಷಾರ್ ಮೆಹ್ತಾ ಅವರನ್ನು ಅಸಂತುಷ್ಟರನ್ನಾಗಿಸುವುದು ಸುಲಭಸಾಧ್ಯವಲ್ಲ. ಹೀಗಾಗಿ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮ ಹಿತಾಸಕ್ತಿಗಳ ತಾಕಲಾಟ ಎದುರಿಸುತ್ತಿದ್ದಾರೆ. ಈ ತಾಕಲಾಟದಲ್ಲಿ ತಮಗೆ ನ್ಯಾಯ ಒದಗಿಸುತ್ತಾರೆ ಎಂಬ ಭರವಸೆ ತನಗಿಲ್ಲ ಎಂಬ ವಾದವನ್ನು ಕೇಜ್ರೀವಾಲ್ ಮಂಡಿಸಿದ್ದರು.
ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮ ಈ ವಾದವನ್ನು ತಿರಸ್ಕರಿಸಿದ್ದರು. ಕೇಜ್ರೀವಾಲ್ ವಿರುದ್ದದ ಮೇಲ್ಮನವಿ ವಿಚಾರಣೆಯಿಂದ ಹಿಂದೆ ಸರಿಯಲು ನಿರಾಕರಿಸಿದ ತೀರ್ಪು ನೀಡಿದ್ದರು. ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗಲು ಅವಕಾಶ ಇರುವಾಗ ನ್ಯಾಯಮೂರ್ತಿಗಳ ಮಕ್ಕಳು ವಕೀಲರಾದರೆ ತಪ್ಪೇನು ಎಂಬ ತರ್ಕ ನೀಡಿದ್ದರು.
ಶರ್ಮ ಅವರು ಹಿಂದೆ ಸರಿಯಲು ನಿರಾಕರಿಸಿದ ತೀರ್ಪನ್ನು ಪ್ರತಿಭಟಿಸಿದ್ದ ಕೇಜ್ರೀವಾಲ್ ವಿಚಾರಣೆಯಿಂದ ದೂರ ಉಳಿಯಲು ತೀರ್ಮಾನಿಸಿದ್ದರು. ತಮ್ಮ ಪರವಾಗಿ ಯಾವುದೇ ವಕೀಲರನ್ನು ನೇಮಿಸಿಲ್ಲ. ಅವರ ಸಂಗಾತಿಗಳಾದ ಮನೀಷ್ ಸಿಸೋಡಿಯಾ ಮತ್ತು ದುರ್ಗೇಶ್ ಪಾಠಕ್ ಕೂಡ ಕೇಜ್ರೀವಾಲ್ ತೀರ್ಮಾನಕ್ಕೆ ಅಂಟಿಕೊಂಡಿದ್ದಾರೆ. ತಮ್ಮ ಪರ ಯಾವುದೇ ವಕೀಲರನ್ನು ನೇಮಿಸಿಲ್ಲ.
ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮ ತಾವೇ ಮುಂದಾಗಿ ಕೇಜ್ರೀವಾಲ್ ಪರವಾಗಿ ಹಿರಿಯ ವಕೀಲರನ್ನು ‘ಅಮಿಕಸ್ ಕ್ಯೂರಿ’ಯಾಗಿ (ನ್ಯಾಯಾಲಯದ ಮಿತ್ರ) ನೇಮಿಸುವುದಾಗಿ ಮಂಗಳವಾರ ಪ್ರಕಟಿಸಿದರು.




