ಇಂಗ್ಲಿಷ್ ಮೂಲ: ಪ್ಯಾಲೆಸ್ತೀನ್ ನ ಕವಿ – ಮೊಸಾಬ್ ಅಬು ತೋಹಾ
ಕನ್ನಡಕ್ಕೆ: ಸಿ.ಎಚ್.ಭಾಗ್ಯ
ನಾನು ಬ್ಯಾಗ್ ಪ್ಯಾಕ್ ಹಾಕಿಕೊಂಡಿದ್ದೆ.
ಅದರಲ್ಲಿ ಮಕ್ಕಳ ಚಳಿಗಾಲದ ಉಡುಪುಗಳಿದ್ದವು.
ಒಂದು ತೋಳಿನಲ್ಲಿ ಮೂರು ವರ್ಷದ ಮಗು.
ಅವನು ಬೋಸ್ಟನ್ ನಲ್ಲಿ ಹುಟ್ಟಿದವ.
ಇನ್ನೊಂದು ಕೈಯಿಂದ ನಮ್ಮ ಪಾಸ್ ಪೋರ್ಟ್ ಗಳನ್ನು ಎತ್ತಿ ಹಿಡಿದಿದ್ದೆ.
ನನ್ನ ಹೆಂಡತಿ,ಇನ್ನಿಬ್ಬರು ಮಕ್ಕಳು
ಅಲ್ಲೇ ಅಡ್ಡಾಡುತ್ತಿದ್ದರು.
*
ಯಫ್ಫಾಗೆ ಬಾಯಾರಿಕೆ
ಯಜ಼ಾನ್ ಬಿಳಿ ಬಾವುಟ ಹಿಡಿದಿದ್ದ
ಅವನ ಅಜ್ಹಿಯೊಡನೆ ಮರಳಿ ಬರುವ ಆಶಯವಿದೆ ಅವನಿಗೆ.
ಒಬ್ಬ ಸೈನಿಕ ನನ್ನನ್ನು ಕೂಗಿ ಕರೆದ
ನಾನು ಹೊತ್ತಿರುವುದೇನೆಂದು ವಿವರಿಸುತ್ತಾ…
**
ಮೊದಲ ಬಾರಿಗೆ ನಾನು ಅನಾಮಿಕನಾಗಿದ್ದೆ.
ಬಹುಕಾಲದಿಂದ ದೇಶವೇ ಇಲ್ಲದವನು.
ಈಗ ಸಮಯ ಎಷ್ಟೆಂದೂ ಗೊತ್ತಿಲ್ಲ ನನಗೆ.
ನನಗೆ ಬಂದೂಕುಗಳನ್ನು ಗುರಿಯಿಟ್ಟರು
ರಾಚುವ ಗಾಳಿ.
ನನ್ನ ಹಿಂದೆ ಒಂದು ಟ್ಯಾಂಕು
ಇಷ್ಟೇ ಸನಿಹದಲ್ಲಿ ಸೈನಿಕರ ಶೆಲ್ಲಿಂಗ್.
‘ ನಿನ್ನ ಮಗನನ್ನು ಇಳಿಸು
ಕೆಳಗಿಳಿಸು ಎಲ್ಲ ವಸ್ತುಗಳನ್ನು!’
” ನಾನು ವಸ್ತುವಲ್ಲ
ನನ್ನನ್ನೇ ನಾನು ಕೆಳಗಿಳಿಸುವಹಾಗಿಲ್ಲ”
ಮಂಡಿಯೂರು!
ಒಬ್ಬ ಹೊಸ ಸೈನಿಕ ನನ್ನನ್ನು
ಪೂರ್ತಿ ಹೆಸರಿಂದ ಕರೆದ
ಅವನು
ನನ್ನ ಅಜ್ಜನ ಹೆಸರನ್ನೂ ಅರಚಿದ.
ನನಗೆ ನನ್ನ ಅಜ್ಜನೆಂದರೆ ಪ್ರಾಣ
ಸೈನಿಕನೆಂದರಾಗದು
ನನಗೆ ಗೊತ್ತೇ ಇಲ್ಲದ ಅವನ ಹೆಸರನ್ನೂ ಕಂಡರಾಗದು
— ನಿನ್ನ ಗುರುತು ಚೀಟಿಯ ಸಂಖ್ಯೆ ಜೋರಾಗಿ ಹೇಳು!
ನಿನ್ನ ಬಟ್ಟೆಗಳನ್ನು ಕಳಚು,
ನಿನ್ನ ಬಾಕ್ಸರ್ ನಿಕ್ಕರನ್ನೂ–
ನನ್ನ ಕಿವಿಗಳಲ್ಲಿ
ಅಮ್ಮ ಹೇಳುತ್ತಿದ್ದ ಕತೆಗಳಿವೆ
ಖಾಯಿಲೆ ಬಿದ್ದಾಗ ಅವಳು ಪಠಿಸುತ್ತಿದ್ದ ಪವಿತ್ರ ಖುರಾನ್ ಸಾಲುಗಳಿವೆ
ಶಾಲೆಯಲ್ಲಿದ್ದಾಗ ಎಚ್ಚರಿಸುತ್ತಿದ್ದ
ಅಲಾರಾಂ ಗಡಿಯಾರದ ಶಬ್ದವಿದೆ
**
ಮಂಡಿಯೂರು!
-ನಿನ್ನ ಬಳಿ ಎಷ್ಟು ಪಾಸ್ ಪೋರ್ಟ್‌ಗಳಿವೆ?
ಮಂಡಿಯೂರಿಯೇ ಇರು!-
‘ ನನ್ನ ಮಗನ ಅಮೆರಿಕದ ಪಾಸ್‌ಪೋರ್ಟ್
ನನ್ನ ಪ್ಯಾಲೆಸ್ತೀನ್ ಪಾಸ್ ಪೋರ್ಟ್
ನನ್ನ ಇನ್ನಿಬ್ಬರು ಮಕ್ಕಳ ಪಾಸ್ ಪೋರ್ಟ್‌ಗಳು
ನಾವು ರಫ಼ಾ ಗಡಿ ದಾಟುತ್ತಿದ್ದೆವು – ಎಂದೆ.
ಬೋಳಿಮಗನೆ ಮುಚ್ಚಿಕೊಂಡಿರು
ಮಂಡಿಯೂರು!
UNRAW
ಮಂಡಿಯೂರು!
ಹೌದು ನಾನೊಬ್ಬ ಟೀಚರ್ ಎಂದೆ.
ಮಂಡಿಯೂರು!
-ಆದರೆ ನಾನು ಮಂಡಿಯೂರಿದಾಗ
ಬ್ಲಾಕ್ ಬೋರ್ಡ್ ಎಟುಕುವುದಿಲ್ಲ-
ನನಗೆ ಕೈಕೋಳ ಹಾಕಿದರು
ಕಣ್ಣಿಗೆ ಪಟ್ಟಿ ಕಟ್ಟಿದರು
ನನ್ನ ಹೆಕ್ಕತ್ತಿನ ಮೇಲೆ ಗುದ್ದಿದರು.
ಮಂಡಿಯೂರು!
ಭಯೋತ್ಪಾದಕ!
ಮಂಡಿಯೂರು!
ಒಂದೇ ಒಂದು ಪುರಾವೆ ಕೊಡಿ ಎಂದು ಕೇಳಿದೆ.
ನನ್ನ ಮುಖಕ್ಕೆ ರಾಚಿದರು
ನಮ್ಮ ಪುರಾವೆಯನ್ನು ತೊಗೋ!
ಮಂಡಿಯೂರು!
ಮಳೆ ಸುರಿಯಲಾರಂಭಿಸಿತು
ನನ್ನ ಹಲ್ಲುಗಳು ಕಟಕಟಿಸಿದವು.
ಮಂಡಿಯೂರು!
ನನ್ನ ಬದಿಯಲ್ಲಿದ್ದವ ಅಳುತ್ತಿದ್ದ- ತನ್ನ ಬಸಿರಿ ಹೆಂಡತಿ, ಪುಟ್ಟ ಮಗಳೊಡನೆ ಇರಬೇಕೆಂದು-
ಮಂಡಿಯೂರಿ!
ನಾವು ಮಂಡಿಯೂರಿದ್ದೆವು.
ಮಂಡಿಯೂರಿ!
ಅವರು ನಮ್ಮನ್ನು ಟ್ರಕ್ಕಿನೊಳಗೆ ಎಸೆದರು.
ಅದು ಚಲಿಸುತ್ತಲೇ ಇತ್ತು
ಆಮೇಲೊಂದುಕಡೆ ನಿಂತಿತು.
ಅವರು ನಮ್ಮನ್ನು ಹೊರಗೆಳೆದರು.
ಮಂಡಿಯೂರಿ!
ನಿಮಿಷಗಳ ತರುವಾಯ ಯಾರೋ ಹೊಟ್ಟೆಗೆ ಝಾಡಿಸಿ ಒದ್ದರು.
ನೋವಿನಿಂದ ವಿಲಗುಟ್ಟಿದೆ.
ಮಂಡಿಯೂರು!
ಆಮೇಲೆ ಯಾರೋ ನನ್ನ ಮುಖಕ್ಕೆ ಒದ್ದರು
ನನ್ನ ತಲೆ ಕೆಳಗೆ ವಾಲಿತು.
ನನ್ನ ಮೂಗಿನಿಂದ ರಕ್ತ ಒಸರಿತು.
ಮಂಡಿಯೂರು!.
ನನಗೆ ಸೈನಿಕರ ಹರಟೆ ಕೇಳಿಸುತ್ತಿತ್ತು.
ಮಂಡಿಯೂರಿ!
ಅವರು ಗಾಜ಼ಾದಿಂದ ನಮ್ಮನ್ನು ಬಹುದೂರ ಕರೆದೊಯ್ದರು,
ನೆಗೆವ್ ಮರುಭೂಮಿಗೆ,
ಎಂದು ಯಾರೋ ಅಲ್ಲಿ ಹೇಳಿದರು:
ಮಂಡಿಯೂರಿ!
ನನ್ನ ಜೊತೆಯಲ್ಲಿದ್ದ ಬಹಪಾಲು ಗಂಡಸರು
ಗಾಜ಼ಾದ ಹೊರಗೆ ಮೊದಲ ಬಾರಿಗೆ ನಿದ್ದೆಗೆ ಜಾರಿದ್ದರು.
ಮಂಡಿಯೂರಿ!
ಶೌಚಾಲಯದಲ್ಲಿ ಶೌಚ ಕಾಗದವಿರಲಿಲ್ಲ
ನೀರಂತೂ ಮೊದಲೇ ಇಲ್ಲ.
ನಿನ್ನದು ಹೆಚ್ಚೂ ಕಡಿಮೆ ಮುಗಿದಿದೆ!
ಮಂಡಿಯೂರು!
ಹನಿ ನೀರು
ತುಂಡು ಬ್ರೆಡ್.
ಮಂಡಿಯೂರು!
ತನಿಖೆ…
ಎರಡು ತಾಸಿನ ನಂತರ ಸಿಪಾಯಿಯೊಬ್ಬ ಇಂಗ್ಲಿಷಿನಲ್ಲಿ ಹೇಳಿದ,- ತಪ್ಪು ತಿಳಿವಳಿಕೆಗಾಗಿ ಕ್ಷಮೆ ಇರಲಿ. ನೀನೀಗ ಮರಳಿ ಗಾಜ಼ಾಗೆ ಹೋಗಬಹುದು-
ಮಂಡಿಯೂರಿ




