ಸುದ್ದಿ ವಿಶ್ಲೇಷಣೆ | ಕೆಂಪಿನಿಂದ ಹಸಿರನ್ನು ಹಾದು ಕೇಸರಿಯತ್ತ ಹೊರಳಿತು ಬಂಗಾಳ

Date:

2024ರಲ್ಲಿ ಸರಳ ಬಹುಮತವನ್ನೂ ಗಳಿಸದೆ ಅಪಮಾನಿತರಾಗಿದ್ದ ಮೋದಿ-ಶಾ 2029ರ ಲೋಕಸಭಾ ಚುನಾವಣೆಯ ಗೆಲುವಿಗೆ ಇದೀಗ ಗಟ್ಟಿ ಸೋಪಾನ ಹಾಕಿಕೊಂಡಿದ್ದಾರೆ. ದೇಶದ ಪ್ರತಿಪಕ್ಷ ಒಕ್ಕೂಟದ ಬೆನ್ನು ಮೂಳೆಗಳಂತಿದ್ದ ತೃಣಮೂಲ ಕಾಂಗ್ರೆಸ್ ಮತ್ತು ದ್ರಾವಿಡ ಮುನ್ನೇತ್ರ ಕಳಗಂ ಕೋಟೆಗಳು ಉರುಳಿ ಬಿದ್ದಿವೆ. ಒಂದನ್ನು ತಾನೇ ಉರುಳಿಸಿದೆ. ಡಿಎಂಕೆಯನ್ನು ಕಿತ್ತು ಹಾಕಿರುವ ಅನನುಭವಿ ವಿಜಯ್ ಅವರನ್ನು ನಿಭಾಯಿಸುವುದು ಮೋಶಾ ಬಿಜೆಪಿಗೆ ಅಷ್ಟೇನೂ ಕಷ್ಟವಾಗದು. ಗುರಿ ಮುಖ್ಯವೇ ವಿನಾ, ಅದನ್ನು ತಲುಪುವ ದಾರಿ ಮುಖ್ಯ ಅಲ್ಲವೇ ಅಲ್ಲ ಎಂದು ಎಲ್ಲಕ್ಕೂ ತಯಾರಾಗಿ ಬಂಗಾಳ ಗೆಲ್ಲಲು ಯುದ್ಧ ಸಾರಿತ್ತು ದೆಹಲಿ.

- Advertisement -

ಬಿಜೆಪಿಯ ಕೋಮುವಾದಿ ಧ್ರುವೀಕರಣ ಕಡೆಗೂ ಬಂಗಾಳವನ್ನು ಗೆದ್ದಿದೆ. ಹತ್ತು ವರ್ಷಗಳ ಹಿಂದೆ ಯಾರಾದರೂ ಈ ಮಾತನ್ನು ಹೇಳಿದ್ದರೆ ನಂಬುವವರು ಬಹಳ ಮಂದಿ ಇರಲಿಲ್ಲ. ಹಾಲಿ ವಿಧಾನಸಭೆ ಚುನಾವಣೆಗಳಲ್ಲಿ ಕೆಂಪು-ಹಸಿರನ್ನು ಮಣಿಸಿದೆ ಕೇಸರಿ ರಾಜಕಾರಣ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ದೇಶದ ಪ್ರತಿಪಕ್ಷ ಒಕ್ಕೂಟದ ಬೆನ್ನು ಮೂಳೆಗಳಂತಿದ್ದ ತೃಣಮೂಲ ಕಾಂಗ್ರೆಸ್ ಮತ್ತು ದ್ರಾವಿಡ ಮುನ್ನೇತ್ರ ಕಳಗಂ ಕೋಟೆಗಳು ಉರುಳಿ ಬಿದ್ದಿವೆ. ಒಂದನ್ನು ತಾನೇ ಉರುಳಿಸಿದೆ. ಡಿಎಂಕೆಯನ್ನು ಕಿತ್ತು ಹಾಕಿರುವ ಅನನುಭವಿ ವಿಜಯ್ ಅವರನ್ನು ನಿಭಾಯಿಸುವುದು ಮೋಶಾ ಬಿಜೆಪಿಗೆ ಅಷ್ಟೇನೂ ಕಷ್ಟವಾಗದು. ಬಿಜೆಪಿಯ ಧೃತರಾಷ್ಟ್ರಾಲಿಂಗನದಿಂದ ಪುಟ್ಟ ರಾಜ್ಯ ಕೇರಳ ಉಳಿದು ಪಾರಾಗಿದೆ. ಆದರೆ ಅಲ್ಲಿಯೂ ತನ್ನ ಹೆಜ್ಜೆ ಗುರುತುಗಳನ್ನು ಹೆಚ್ಚಿಸಿಕೊಂಡಿದೆ ಕೇಸರಿ ಪಕ್ಷ.

ಗುರಿ ಮುಖ್ಯವೇ ವಿನಾ, ಅದನ್ನು ತಲುಪುವ ದಾರಿ ಮುಖ್ಯ ಅಲ್ಲವೇ ಅಲ್ಲ ಎಂದು ಎಲ್ಲಕ್ಕೂ ತಯಾರಾಗಿ ಬಂಗಾಳ ಗೆಲ್ಲಲು ಯುದ್ಧ ಸಾರಿತ್ತು ದೆಹಲಿ.

ಕೋಮುವಾದಿ ಧ್ರುವೀಕರಣವನ್ನು ಮಾತ್ರವೇ ನಂಬಿ ಕುಳಿತುಕೊಳ್ಳಲಿಲ್ಲ ಮೋದಿ-ಅಮಿತ್ ಶಾ ಜೋಡಿ. ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳನ್ನು ಬಗಲಿಗೆ ಇಟ್ಟುಕೊಂಡರು. ಎಸ್.ಐ.ಆರ್ ಎಂಬ ಹೊಸ ಹತಾರನ್ನು ಮಸೆದು ಹರಿತಗೊಳಿಸಿದರು. ಬಂಗಾಳವನ್ನು ಗೆಲ್ಲಲು ಯಾವ ದಾರಿಯೂ ದುಷ್ಟ ದಾರಿಯಲ್ಲ, ಯಾವ ತಂತ್ರವೂ ಕುತಂತ್ರ ಅಲ್ಲ, ಯಾವ ದಮನವೂ ದಬ್ಬಾಳಿಕೆಯಲ್ಲ ಎಂಬ ದೃಢ ಸಂಕಲ್ಪದೊಂದಿಗೆ ರಣಕಣಕ್ಕೆ ಇಳಿದರು. ರಚಿಸಿದ್ದ ಚಕ್ರವ್ಯೂಹವನ್ನು ಶತಾಯಗತಾಯ, ಆರು ಮೂರಾದರೂ, ಮೂರು ಆರಾದರೂ ಸರಿ ಎಂದು ತಾರ್ಕಿಕ ಅಂತ್ಯ ಕಾಣಿಸಿದ್ದಾರೆ.

ಕೋಮು ಧ್ರುವೀಕರಣ, ಚುನಾವಣಾ ಆಯೋಗದ ದುರ್ಬಳಕೆ, ಕೋಟಿ ಬಂಗಾಳಿಗಳ ಮತಾಧಿಕಾರ ಹತ್ಯೆಯ ಎಸ್.ಐ.ಆರ್., ಮುಸ್ಲಿಮ್ ದ್ವೇಷ, ಬಾಂಗ್ಲಾದೇಶಿಗಳು ಎಂಬುದಾಗಿ ಮುಸಲ್ಮಾನರಿಗೆ ಹಣೆಪಟ್ಟಿ ಹಚ್ಚಿ ಅವರನ್ನು ಅನ್ಯರನ್ನಾಗಿಸಿ ನಿಲ್ಲಿಸಿ, ಹಿಂದೂಗಳಲ್ಲಿ ಹುಟ್ಟಿಸಿದ ಅಭದ್ರತೆ ಎಲ್ಲವೂ ಕೆಲಸ ಮಾಡಿವೆ.

2029ರ ಲೋಕಸಭೆ ಚುನಾವಣೆಗಳಿಗೆ ಮುನ್ನ ಇಂಡಿಯಾ ಒಕ್ಕೂಟದ ಬೆನ್ನು ಮೂಳೆಯನ್ನು ಮುರಿಯಬೇಕಿತ್ತು. ಭಾರತೀಯ ಜನಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮಪ್ರಸಾದ ಮುಖರ್ಜಿ ಹುಟ್ಟಿದ ನೆಲವನ್ನು ಗೆಲ್ಲಬೇಕಿತ್ತು. ಸೈದ್ಧಾಂತಿಕವಾಗಿ ಬಿಸಿಲುಗುದುರೆಯಾಗಿ ಉಳಿದಿದ್ದ ಬಂಗಾಳದ ನೆಲದ ಮೇಲೆ ಕೇಸರಿಯ ವಿಜಯಧ್ವಜ ಏರಿಸಬೇಕಿತ್ತು.

2024ರಲ್ಲಿ ಸರಳ ಬಹುಮತವನ್ನೂ ಗಳಿಸದೆ ಅಪಮಾನಿತರಾಗಿದ್ದ ಮೋದಿ-ಶಾ 2029ರ ಲೋಕಸಭಾ ಚುನಾವಣೆಯ ಗೆಲುವಿಗೆ ಇದೀಗ ಗಟ್ಟಿ ಸೋಪಾನ ಹಾಕಿಕೊಂಡಿದ್ದಾರೆ.

bjp workers celebrate

ಏಷ್ಯಾ ಉಪಖಂಡದಲ್ಲಿ ಮೊದಲ ಆಧುನಿಕ ವಿಶ್ವವಿದ್ಯಾಲಯ ಬಂಗಾಳದಲ್ಲಿತ್ತು. ವಿಶ್ವದ ಎರಡನೆಯ ಪೌರ್ವಾತ್ಯ ಅಧ್ಯಯನಗಳ ಸಂಸ್ಥೆ ಮತ್ತು ದೇಶದ ಮೊಟ್ಟ ಮೊದಲ ಇಂಗ್ಲಿಷ್ ಬೋಧಿಸುವ ಕಾಲೇಜು ಇದ್ದದ್ದು ಇಲ್ಲಿಯೇ. ಆಧುನಿಕ  ರಾಜಕೀಯ ಪ್ರಜ್ಞೆಯನ್ನು ಪಸರಿಸಿದ್ದು ಇಲ್ಲಿಂದಲೇ. ಸಮಾಜಸುಧಾರಣಾ ಆಂದೋಲನಗಳ ಸಸಿತೋಟ, ಸಾಹಿತ್ಯ, ಸಿನೆಮಾ, ರಂಗಭೂಮಿ ಹಾಗೂ ಕಲೆಯ ಪುನರುಜ್ಜೀವನಕ್ಕೆ ನಾಂದಿ ಹಾಡಿದ ಸೀಮೆಯಿದು. ಪ್ರಚಂಡ ಪ್ರತಿಭೆಗಳು, ಮಹಾನ್ ಕ್ರಾಂತಿಕಾರಿಗಳನ್ನು ನೀಡಿದ ನಾಡು. ಬಂಗಾಳ ಇಂದು ಆಲೋಚಿಸುವುದನ್ನು ಭಾರತ ನಾಳೆ ಮನನ ಮಾಡುತ್ತದೆ ಎಂದಿದ್ದರು ಗೋಪಾಲಕೃಷ್ಣ ಗೋಖಲೆ. 

ದಂಗುಬಡಿಸುವ ಸಾಧನೆ ಮತ್ತು ಪ್ರಸಿದ್ಧಿಯ ಎತ್ತರವನ್ನು ಬಂಗಾಳಿಗಳು ಅನತಿಕಾಲದಲ್ಲಿಯೇ ಏರಿದ್ದರು. ಆದರೆ ಏರಿದಷ್ಟೇ ವೇಗವಾಗಿ ಕುಸಿದುಬಿಟ್ಟಿದೆ ಕೂಡ. ಜನಪ್ರಿಯ ಕಲೆಯಾದ ಸಿನೆಮಾದ ಉದಾಹಣೆಯನ್ನೇ ತೆಗೆದುಕೊಳ್ಳೋಣ. ಸತ್ಯಜಿತ್ ರೇ, ಋತ್ವಿಕ್ ಘಟಕ್ ಮುಗಿಲೆತ್ತರಕ್ಕೆ ನಿಲ್ಲಿಸಿದ್ದ ಬಂಗಾಳಿ ಸಿನೆಮಾ ಈಗ ಕೇವಲ ಶುದ್ಧ ಸೂತ್ರಬದ್ಧ ಕಮರ್ಷಿಯಲ್ ಕೊಳ್ಳಕ್ಕೆ ಜಾರಿದೆ. ಸತ್ಯಜಿತ್ ರೇ ಜೊತೆ ಹದಿನಾಲ್ಕು ಸಿನೆಮಾಗಳಲ್ಲಿ ಕೆಲಸ ಮಾಡಿದ ನಿಜ ನಟ ಸೌಮಿತ್ರ ಚಟ್ಟೋಪಾಧ್ಯಾಯ ಕೇವಲ ಹಣಕ್ಕೆ ನಟಿಸುವ ಅನಿವಾರ್ಯಕ್ಕಿಳಿದರು. ಒಳ್ಳೆಯ ಸ್ಕ್ರಿಪ್ಟ್ ಗಳಿಲ್ಲ, ಉತ್ತಮ ನಿರ್ದೇಶಕರೂ ಕಾಣುತ್ತಿಲ್ಲ ಎಂಬುದು ಅವರ ಕೊರಗಾಗಿತ್ತು.

ಕಾಂಗ್ರೆಸ್ಸನ್ನು ಕೆಳಗಿಳಿಸಿ ಮೂರೂವರೆ ದಶಕಗಳ ಕಾಲ ಪಶ್ಚಿಮ ಬಂಗಾಳವನ್ನು ಆಳಿತ್ತು ಎಡರಂಗ ಸರ್ಕಾರ. ತಾನು ಹುಟ್ಟಿಸಿದ್ದ ಭಾರೀ ನಿರೀಕ್ಷೆಗಳನ್ನು ನಿಭಾಯಿಸುವಲ್ಲಿ ವಿಫಲ ಆಯಿತು. ಭೂಮಿ ಮರುಹಂಚಿಕೆಯ ವ್ಯಾಪಕ ಕ್ರಮದ ಮೂಲಕ ಬಂಗಾಳದ ಹಳ್ಳಿಗಾಡಿನಲ್ಲಿ ಜನತಂತ್ರವನ್ನು ಬಿತ್ತಿ ಬೇರು ಊರಿಸಿದ್ದು ಹೌದು. ಆದರೆ ಅದರಿಂದಾಚೆಗೆ ಅಷ್ಟೇ ಕಣ್ಣುಕುಕ್ಕುವ ಸಾಧನೆ ಏನೆಂದು ಕಾಣಲು ತಿಣುಕಬೇಕು. ಮೂರೂವರೆ ದಶಕಗಳ ಬಂಗಾಳದ ಉನ್ನತಿ ಅವನತಿಗಳು ಎಡರಂಗ ಸರ್ಕಾರದ ಉನ್ನತಿ- ಅವನತಿಯೊಂದಿಗೆ ತಳುಕು ಹಾಕಿಕೊಂಡಿವೆ

ಜಿದ್ದಾಜಿದ್ದಿಯ ರಕ್ತಸಿಕ್ತ ರಾಜಕಾರಣ, ಜನಜೀವನದ ಭವಿಷ್ಯ ಕಟ್ಟುವ ಕಾಣ್ಕೆಯೇ ಇಲ್ಲದ ತಲೆಯಾಳುಗಳು, ವ್ಯಾಪಕ ನಿರುದ್ಯೋಗ, ಸಿಟ್ಟು, ಹತಾಶೆಗಳು ಆಳತೊಡಗಿದವು ಬಂಗಾಳವನ್ನು. ಹತಾಶೆಯ ನಡುವೆ ತೇಲಿ ಬಂದದ್ದು ಕೋಮವಾದಿ ಹಿಂದುತ್ವದ ರಾಜಕಾರಣ.

ಕಮ್ಯೂನಿಸ್ಟ್ ವಿಚಾರಪ್ರಣಾಲಿ ವರ್ಗವನ್ನು ಮಾನ್ಯ ಮಾಡುತ್ತದೆಯೇ ವಿನಾ ಜಾತಿಯನ್ನಲ್ಲ. ಜಾತಿ ವ್ಯವಸ್ಥೆಯು ಸುಧಾರಿಸಿ ವರ್ಗಸಹಿತ ಸಮಾಜಕ್ಕೆ ದಾರಿ ಮಾಡಿದೆ ಎಂದು ಹೇಳುವವರು ಮತ್ತು ಜಾತಿಯು ಹಿಂದೂ ಸಾಮಾಜಿಕ ವ್ಯವಸ್ಥೆಯ ಅವಿಭಾಜ್ಯ ಅಂಗ ಎಂದು ವಾದಿಸುವವರ ಎರಡೂ ಬಣಗಳು ಬಂಗಾಳದಲ್ಲಿವೆ. ಅಸ್ಪೃಶ್ಯತೆಯ ಆಚರಣೆ ಒಡೆದು ಕಾಣುವಷ್ಟು ರೂಕ್ಷ ಅಲ್ಲ. ಆದರೆ ಸಾಮಾಜಿಕ-ಆರ್ಥಿಕ- ರಾಜಕೀಯ ಅಧಿಕಾರ ಇಂದಿಗೂ ಹೆಪ್ಪುಗಟ್ಟಿರುವುದು ಮೇಲ್ಜಾತಿಗಳು ಮತ್ತು ಮಧ್ಯಮ ಮೇಲ್ಜಾತಿಗಳ ಕೈಯಲ್ಲೇ. ಕಮ್ಯೂನಿಸ್ಟ್ ಸಿದ್ಧಾಂತವನ್ನು ಅಳವಡಿಸಿಕೊಂಡರೂ ಹಿಂದೂವಾದಿ ಆಚರಣೆಗಳಲ್ಲಿ ಈ ಜಾತಿಗಳ ವಿಶ್ವಾಸದ ಬೇರು ಇನ್ನೂ ಭದ್ರವಾಗಿದೆ. ಹೀಗಾಗಿ ಜಾತಿದ್ವೇಷದ ಹಿಂಸಾಚಾರ ಇಲ್ಲ ಎಂದಾಕ್ಷಣ ಜಾತೀಯತೆ ಇಲ್ಲವೇ ಇಲ್ಲ ಎಂದು ಭಾವಿಸುವಂತಿಲ್ಲ. ದೇಶದ ಎರಡನೆಯ ಅತಿ ಹೆಚ್ಚು ದಲಿತಬಾಹುಳ್ಯದ ಸೀಮೆ ಪಶ್ಚಿಮ ಬಂಗಾಳ. ಆದರೂ ಇಲ್ಲಿ ದಲಿತ ಅಸ್ಮಿತೆಯ ಪ್ರಶ್ನೆ ಎದ್ದು ನಿಂತಿಲ್ಲ. ಎಡರಂಗ ಸರ್ಕಾರಗಳು ಜಾರಿಗೆ ತಂದ ಭೂಮಿಯ ಮರು ಹಂಚಿಕೆ ಮತ್ತು ಪಂಚಾಯತಿ ವ್ಯವಸ್ಥೆಯಲ್ಲಿ ದಲಿತರ ಸೀಮಿತ ಸಶಕ್ತೀಕರಣ ಮತ್ತು ದಲಿತ ಅಸ್ಮಿತೆ ಅಸ್ತಿತ್ವಗಳೊಂದಿಗೆ ನೇರ ಘರ್ಷಣೆಗೆ ಇಳಿಯದೆ ಮೇಲ್ಜಾತಿಗಳು ಮಾಡಿಕೊಂಡಿರುವ ಸಣ್ಣಪುಟ್ಟ ಹೊಂದಾಣಿಕೆಗಳ ಕಾರಣ ಸಾರ್ವಜನಿಕ ಸಂವಾದದಲ್ಲಿ ಜಾತಿಯ ಪ್ರಶ್ನೆ ದೊಡ್ಡದಾಗಿ ಬೆಳೆದು ನಿಂತಿಲ್ಲ ಎನ್ನುತ್ತಾರೆ ಸಮಾಜವಿಜ್ಞಾನಿಗಳು. ಸೀಮಿತ ಪ್ರಮಾಣದ ಸಾಮಾಜಿಕ ಚಲನೆಯನ್ನು ವಾಮಪಂಥೀ ಆಡಳಿತ ನಾಮಶೂದ್ರರು, ಬಾಗ್ಡಿಗಳು ಹಾಗೂ ಚಮ್ಮಾರರಿಗೆ ಎಪ್ಪತ್ತರ ದಶಕಗಳಲ್ಲೇ ಒದಗಿಸಿಕೊಟ್ಟಿತ್ತು. ಇಂತಹ ಕ್ರಮ ಈ ಜಾತಿಗಳ ಸಂಸ್ಕೃತೀಕರಣಕ್ಕೂ (Sanskritisation) ದಾರಿ ಮಾಡಿತು. ಬಂಗಾಳವಿಭಜನೆಯ ನಂತರ ಹಿಂದೂಮಹಾಸಭಾದ ಬೆಂಬಲ ನೆಲೆಯಾಗಿ ಪರಿಣಮಿಸಿದ ನಾಮಶೂದ್ರರು ಆನಂತರ ಎಡಪಕ್ಷಗಳ ಪಾಲಿಗೆ ಭದ್ರನೆಲೆ ಆದರು. ವಿಶೇಷವಾಗಿ ನದಿಯಾ ಜಿಲ್ಲೆಯಲ್ಲಿ ಅವರ ಸಂಖ್ಯಾಬಲ ನಾಮಶೂದ್ರರಿಗೆ ರಾಜಕಾರಣದಲ್ಲಿ ಚೌಕಾಶಿಯ ಅವಕಾಶ ಕಲ್ಪಿಸಿಕೊಟ್ಟಿತ್ತು. ಎಡಪಕ್ಷಗಳು ಮತ್ತು ಎಡಪಂಥೀಯ ವಿರೋಧಿ ಪಕ್ಷಗಳು ಎರಡೂ ಈ ಜನರಿಗೆ ರಾಜಕೀಯ ಪ್ರಾತಿನಿಧ್ಯ ನೀಡಲೇಬೇಕಾಯಿತು.

ಹೀಗೆ ಮೇಲ್ಜಾತಿಗಳ ಅನುಸಂಧಾನಕ್ಕೆ ತಲೆದೂಗಿರುವ ಕೆಳಜಾತಿಗಳು ಮತ್ತು ‘ಬಂಗಾಳಿ ಭದ್ರಲೋಕ’ ಎಂದೇ ಹೆಸರಾದ ಉಚ್ಚಜಾತಿಗಳ ಬುದ್ಧಿಜೀವಿಗಳ ಸಜ್ಜನಲೋಕ ಎರಡರ ರಾಜಕೀಯ ನಂಬುಗೆಯ ಕ್ಷೇತ್ರಗಳು ಕೆಂಪಿನಿಂದ ಕೇಸರಿಯತ್ತ  ಪಲ್ಲಟಗೊಳ್ಳತೊಡಗಿದ್ದು ಕೇಂದ್ರದಲ್ಲಿ ಮೋದಿ ಉದಯಿಸಿ ಬಂಗಾಳದ ಮೇಲೆ ಕಣ್ಣು ಹಾಕಿದ ನಂತರ.

ಉತ್ತರಪ್ರದೇಶದಲ್ಲಿ ‘ಮೌಲ್ವಿ ಮುಲಾಯಂ’ ಅಭಿದಾನವನ್ನು ಹೆಮ್ಮೆಯಿಂದ ಹಣೆಯ ಮೇಲೆ ಧರಿಸಿದ್ದರು ಮುಲಾಯಂಸಿಂಗ್ ಯಾದವ್. ಅಲ್ಲಿ ಅವರ ಸರ್ಕಾರ ಮುಸಲ್ಮಾನರ ಹಿತೈಷಿ ಎಂದು ಹೇಳಿಕೊಂಡು ಅವರ ಅತಿಯಾದ ಓಲೈಕೆಯಲ್ಲಿ ತೊಡಗಿದೆಯೆಂಬ ಆಪಾದನೆ ಹೊತ್ತಿತ್ತು. ಒಡೆದು ಕಾಣುವ ಈ ಓಲೈಕೆಯಿಂದ ಕೆರಳಿದ ಹಿಂದೂಗಳು ಬಲಪಂಥೀಯ ಪಕ್ಷಗಳ ತೆಕ್ಕೆಗೆ ಜಾರಿ ಹಿಂದು-ಮುಸ್ಲಿಮ್ ಧೃವೀಕರಣದ ಅಪಾಯ ನಂಬಲಾಗದ ವೇಗದಲ್ಲಿ ನಿಜರೂಪ ತಳೆಯತೊಡಗಿತ್ತು. ಬಂಗಾಳದಲ್ಲಿ ಮಮತಾ ಇದೇ ಹಾದಿಯಲ್ಲಿ ಸಾಗಿದರೆನ್ನಲಾಯಿತು. ದಲಿತರಂತೆ ಮುಸಲ್ಮಾನರು ಕೂಡ  ಹೆಚ್ಚು ಕಡಿಮೆ ಶೇ.25ರಷ್ಟಿದ್ದಾರೆ ಬಂಗಾಳದಲ್ಲಿ.

ನೆರೆಯ ಬಾಂಗ್ಲಾದೇಶದ ಕಟ್ಟರ್ ವಾದೀ ಸಂಘಟನೆ ಜಮಾಅತೆ ಇಸ್ಲಾಮಿಯನ್ನು ಅಚ್ಚೆ ಮಾಡುತ್ತಿದ್ದಾರೆ. ಈ ಸಂಘಟನೆಯೊಂದಿಗೆ ನಿಕಟ ಸಂಬಂಧ ಇರಿಸಿಕೊಂಡಿದ್ದ ನಿಷೇಧಿತ ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾದ ಪದಾಧಿಕಾರಿ ಆಗಿದ್ದ ವ್ಯಕ್ತಿಯನ್ನು ತಮ್ಮ ಪಕ್ಷದಿಂದ ರಾಜ್ಯಸಭೆಗೆ ಆರಿಸಿ ಕಳಿಸಿದ್ದಾರೆ. ಹೀಗಾಗಿ ಮುಸ್ಲಿಮ್ ಮತ್ತು ಹಿಂದೂ ಸಮುದಾಯಗಳ ಮತಾಂಧ ಶಕ್ತಿಗಳು ಬಂಗಾಳದಲ್ಲಿ ಸಕ್ರಿಯ ಆಗಿಬಿಟ್ಟಿವೆ ಎಂದು ಸಿ.ಪಿ.ಐ.ಎಂ ಗಂಭೀರ ಆರೋಪ ಹೊರಿಸಿತ್ತು.

ಬ್ರಿಟಿಷರ ಕಾಲದಲ್ಲಿ ಬಂಗಾಳ ವಿಭಜನೆಯ ನಂತರ ಬಾಬ್ರಿ ಮಸೀದಿ ಧ್ವಂಸದ ಪ್ರಕ್ಷುಬ್ದ ದಿನಗಳಲ್ಲಿಯೂ ಕೋಮುವಾದಿ ಹಿಂಸೆ ಬಂಗಾಳವನ್ನು ತಾಕಿರಲಿಲ್ಲ. 2011ರಲ್ಲಿ ಅಧಿಕಾರ ಸೂತ್ರ ಮಮತಾ ಕೈವಶ ಆಗುತ್ತಿದ್ದಂತೆ ಕೋಮುಘರ್ಷಣೆಗಳು ಮೊದಲಾದವು.

ತೃಣಮೂಲ ಕಾಂಗ್ರೆಸ್ಸು ಆರಂಭದಲ್ಲಿ ರಾಜಕೀಯ ಲಾಭಕ್ಕಾಗಿ ಬಿಜೆಪಿಯನ್ನು ಆಲಿಂಗಿಸಿತ್ತು. ಅಂತಹುದೇ ಚುನಾವಣಾ ರಾಜಕೀಯ ಲಾಭಗಳಿಗಾಗಿ ಮುಸಲ್ಮಾನರನ್ನು ತಲೆ ಮೇಲೆ ಇರಿಸಿಕೊಂಡು ಕೋಮುವಾದಿ ರಾಜಕಾರಣಕ್ಕೆ ದಾರಿ ಮಾಡಿದರು ಎಂಬ ಎಡಪಕ್ಷಗಳ ಆರೋಪದಲ್ಲಿ ಹುರುಳಿದೆ.

ಬಿಜೆಪಿಯ ಸಖ್ಯ ಬೆಳೆಸಿದ್ದಾಗ ‘ಬಾಂಗ್ಲಾದೇಶೀ ಅಕ್ರಮ ಮುಸ್ಲಿಮ್ ವಲಸೆ’ಯ ವಿಷಯವನ್ನು ಚರ್ಚಿಸಲು ಅವಕಾಶ ಮಾಡಿಕೊಡಲಿಲ್ಲವೆಂದು ಅಂದಿನ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ವಿರುದ್ಧ ಹೊದ್ದಿದ್ದ ಶಾಲು ಎಸೆದು, ಕಾಗದ ಹರಿದು ತೂರಿ ರಂಪ ಮಾಡಿದ್ದವರು ಮಮತಾ. ಅಂತಹ ಮಮತಾ ತದ್ವಿರುದ್ಧ ದಿಕ್ಕಿನಲ್ಲಿ ಬಲು ದೂರ ಸಾಗಿದರು.

ಕೋಮುವಾದಿ ರಾಜಕಾರಣದ ಬಂಪರ್ ಫಸಲಿನ ಕಟಾವಿನ ಸೀಮೆಗಳನ್ನು ಗುರುತಿಸುವಲ್ಲಿ ಮೋದಿ-ಅಮಿತ್ ಶಾ ಅತ್ಯಂತ ಚುರುಕುತನ ತೋರಿರುವ ಜೋಡಿ. ಬಂಗಾಳವೆಂಬ ‘ಫಲವತ್ತಾದ’ ಸೀಮೆಗೆ ಲಗ್ಗೆ ಹಾಕತೊಡಗಿತು. ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಪಶ್ಚಿಮೀ ಉತ್ತರಪ್ರದೇಶದ ಕೋಮುವಾದಿ ಧೃವೀಕರಣವನ್ನು ಗುರುತಿಸಿತು. ಜನಸಂಘವನ್ನು ಸ್ಥಾಪಿಸಿದ ಬಂಗಾಳಿ ತಲೆಯಾಳು ಶ್ಯಾಮಾಪ್ರಸಾದ್ ಮುಖರ್ಜಿ ಬಿಜೆಪಿಯ ಪಾಲಿಗೆ ಪೂಜನೀಯರು. ಬಂಗಾಳದಲ್ಲಿ ಬಹುಕಾಲ ಅವರ ಪ್ರಭಾವವು  ಜನದಟ್ಟಣೆಯ ರಸ್ತೆಯೊಂದರ ಹೆಸರಿಗಷ್ಟೇ ಸೀಮಿತವಾಗಿತ್ತು. ಈ ಪರಿಸ್ಥಿತಿ ಹಂತ ಹಂತವಾಗಿ ಇಡಿಯಾಗಿ ಬದಲಾಗಿದೆ. ಎಡಪಂಥೀಯ ಕೆಂಪುಕೋಟೆಯನ್ನು ಮಾಡಿದ್ದ ಮಮತಾ ಬಂಗಾಳ ಕೆಂಪಿನಿಂದ ದೂರ ಸರಿದಿತ್ತು ಹಸಿರು ಗರಿಕೆಯನ್ನು ಆಲಂಗಿಸಿತ್ತು. ಇದೀಗ ಕೇಸರಿಯಲ್ಲಿ ಮಿಂದೆದ್ದಿದೆ.

ಇದನ್ನೂ ಓದಿ ಪುದುಚೆರಿ | ಏಕೈಕ ಮಹಿಳಾ ಶಾಸಕಿ, ಮಾಜಿ ಸಚಿವೆ ಚಂದಿರಾ ಪ್ರಿಯಂಗಾಗೆ ಸೋಲು

2011ರಲ್ಲಿ ವಾಮರಂಗ ಸರ್ಕಾರದ ಘೋರ ಪರಾಭವದ ನಂತರ 2014ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಮೊದಲ ಬಾರಿಗೆ ಎಲ್ಲ 42 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಗೆದ್ದದ್ದು ಎರಡೇ ಸ್ಥಾನ. ಆದರೆ ಗಳಿಸಿದ ಮತಗಳ ಪ್ರಮಾಣ ಹೆಚ್ಚು ಕಡಿಮೆ ಶೇ.17. ಅಲ್ಲಿಂದಾಚೆಗೆ ಕೆಲವೇ ಚುನಾವಣೆಗಳಲ್ಲಿ ಬಂಗಾಳವನ್ನು ವಶಪಡಿಸಿಕೊಂಡಿದೆ.

ಆರಂಭದಲ್ಲಿ ದೀದಿಯ ಪ್ರತೀಕಾರ ರಾಜಕಾರಣಕ್ಕೆ ಬೆದರಿದ ಕೆಂಪು ಪಡೆ ಟಿಎಂಸಿಗೆ ಶರಣಾಯಿತು, ಇಲ್ಲವೇ ಬಿಜೆಪಿಯನ್ನು ಸೇರಿಕೊಂಡಿತು. ದೀದಿಯ ರಾಜಕಾರಣ ಕುರಿತು ಭ್ರಮನಿರಸನ ಹೊಂದಿದವರೂ ಈ ವರ್ಗಗಳನ್ನು ಸೇರಿಕೊಂಡಿತು. 

2026ರ ಈ ಪಂಚರಾಜ್ಯ ಚುನಾವಣೆ ಫಲಿತಾಂಶಗಳು ದೇಶವನ್ನು ಬಹುದೊಡ್ಡ ಅಪಾಯಕಾರಿ ಹೊರಳು ಹಾದಿಗೆ ತಂದು ನಿಲ್ಲಿಸಿವೆ. ಜನತಂತ್ರ ನಿಜಕ್ಕೂ ಕಡಿದಾದ ಕಣಿವೆಯ ಇಳಿಜಾರಿನಲ್ಲಿ ತೂಗಾಡಿದೆ. 

umapthi
ಡಿ ಉಮಾಪತಿ
+ posts

ʼಈ ದಿನ.ಕಾಮ್‌ʼನ ಗೌರವ ಸಂಪಾದಕರು. ʼದೆಹಲಿ ನೋಟʼ, ʼಪದ ಕುಸಿಯೇ ನೆಲವಿಲ್ಲʼ ಇವರ ಮಹತ್ವದ ಕೃತಿಗಳು. ಕರ್ನಾಟಕ ಸರ್ಕಾರ ಸ್ಥಾಪಿಸಿರುವ ʼವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪ್ರಶಸ್ತಿʼ ಪುರಸ್ಕೃತರು.

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ʼಈ ದಿನ.ಕಾಮ್‌ʼನ ಗೌರವ ಸಂಪಾದಕರು. ʼದೆಹಲಿ ನೋಟʼ, ʼಪದ ಕುಸಿಯೇ ನೆಲವಿಲ್ಲʼ ಇವರ ಮಹತ್ವದ ಕೃತಿಗಳು. ಕರ್ನಾಟಕ ಸರ್ಕಾರ ಸ್ಥಾಪಿಸಿರುವ ʼವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪ್ರಶಸ್ತಿʼ ಪುರಸ್ಕೃತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಕೊಂದವರು ಯಾರು?’ – ಧರ್ಮಸ್ಥಳದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಅ.2ರಂದು ಬೃಹತ್ ವಿಚಾರ ಸಂಕಿರಣ

ಧರ್ಮಸ್ಥಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಹಲವಾರು ದಶಕಗಳಿಂದ ನಡೆದಿದೆ...

ಉತ್ತರ ಪ್ರದೇಶದಲ್ಲಿ ಜಲಪ್ರಳಯ: ಪ್ರವಾಹಕ್ಕೆ 56 ಮಂದಿ ಬಲಿ, ಸಾವಿರಕ್ಕೂ ಹೆಚ್ಚು ಮನೆಗಳು ಧ್ವಂಸ

ಉತ್ತರ ಪ್ರದೇಶದಲ್ಲಿ ಕಳೆದ 60 ಗಂಟೆಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಪ್ರವಾಹ...

ಸಿಂದಗಿ | ರಾಮಾನಂದ ತೀರ್ಥರ ಜನ್ಮದಿನದೊಳಗೆ ವೀರಸೌಧ ಅಭಿವೃದ್ಧಿಗೆ ಕ್ರಮ

ಹೈದರಾಬಾದ್ ವಿಮೋಚನಾ ಚಳವಳಿಯ ಪಿತಾಮಹ ಸ್ವಾಮಿ ರಾಮಾನಂದ ತೀರ್ಥರ ಜನ್ಮದಿನವಾದ ಅಕ್ಟೋಬರ್...