ಡಂಗಾವಾಸ್‌ ದಲಿತ ಹತ್ಯಾಕಾಂಡ | ಟ್ರ್ಯಾಕ್ಟರ್‌ ಹರಿಸಿ ದಲಿತರ ಹತ್ಯೆಯಿಂದ ಆರೋಪಿಗಳ ಖುಲಾಸೆವರೆಗೆ…

Date:

ದಲಿತರ ಮೇಲಿನ ದೌರ್ಜನ್ಯದ ಕರಾಳ ಅಧ್ಯಾಯವಾಗಿ ದಾಖಲಾಗಿರುವ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ 2015ರಲ್ಲಿ ನಡೆದಿದ್ದ ಭೀಕರ ಡಂಗಾವಾಸ್‌ ಹತ್ಯಾಕಾಂಡ ಪ್ರಕರಣದಲ್ಲಿ, ಎಸ್‌ಸಿ/ಎಸ್‌ಟಿ ಕಾಯ್ದೆಯ ವಿಶೇಷ ನ್ಯಾಯಾಲಯವು ಬರೋಬ್ಬರಿ 11 ವರ್ಷಗಳ ಬಳಿಕ ಎಲ್ಲಾ 40 ಆರೋಪಿಗಳನ್ನು ನಿರ್ದೋಷಿಗಳೆಂದು ತೀರ್ಪು ನೀಡಿದೆ. ದಲಿತರ ಭೂಮಿ ಒತ್ತುವರಿ ವಿವಾದದಿಂದ ಶುರುವಾಗಿ, ಮೂವರು ದಲಿತರನ್ನು ಟ್ರ್ಯಾಕ್ಟರ್‌ ಹರಿಸಿ ಹತ್ಯೆ ಮಾಡಲಾಗಿದ್ದ ಈ ಭೀಕರ ಪ್ರಕರಣ, ಸಿಬಿಐ ತನಿಖೆಯ ಲೋಪ, ಸಾಕ್ಷ್ಯಗಳ ಕೊರತೆಯಿಂದಾಗಿ ಈಗ ಇನ್ನೊಂದು ಮಗ್ಗುಲಿಗೆ ಹೊರಳಿದೆ.

- Advertisement -

ನೆನ್ನೆ (ಆ. 5) ಹೊರಬಿದ್ದ ತೀರ್ಪಿನಲ್ಲಿ, ಡಂಗಾವಾಸ್ ಹತ್ಯಾಕಾಂಡ ಪ್ರಕರಣದ ಎಲ್ಲಾ 40 ಆರೋಪಿಗಳನ್ನು ಖುಲಾಸೆಗೊಳಿಸಿ ನಾಗಪುರದ ಎಸ್‌ಸಿ ಎಸ್‌ಟಿ ನ್ಯಾಯಾಲಯ ಆದೇಶಿಸಿದೆ. ಸುಮಾರು 11 ವರ್ಷಗಳ ಕಾಲ ನಡೆದ ಸುದೀರ್ಘ ವಿಚಾರಣೆಯ ಬಳಿಕ, ಆರೋಪಿಗಳ ವಿರುದ್ಧದ ಆರೋಪಗಳನ್ನು ಅನುಮಾನಾತೀತವಾಗಿ ಸಾಬೀತುಪಡಿಸಲು ಅಭಿಯೋಜನಾ ಪಕ್ಷ ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳಲ್ಲಿನ ವ್ಯತ್ಯಾಸ, ವೈಜ್ಞಾನಿಕ ಮತ್ತು ದಾಖಲೆ ಸಾಕ್ಷ್ಯಗಳ ಕೊರತೆ ಹಾಗೂ ಪ್ರತಿಯೊಬ್ಬ ಆರೋಪಿಯ ನಿರ್ದಿಷ್ಟ ಪಾತ್ರವನ್ನು ದೃಢಪಡಿಸಲು ಸಾಧ್ಯವಾಗದಿರುವುದನ್ನು ಉಲ್ಲೇಖಿಸಿ ನ್ಯಾಯಾಲಯ ಎಲ್ಲಾ ಆರೋಪಿಗಳನ್ನು ಬಿಡುಗಡೆ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮೈಕೆಲ್ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಿಂದ...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ಈ ತೀರ್ಪು ಹೊರಬಿದ್ದ ತಕ್ಷಣ ದಲಿತ ಸಂಘಟನೆಗಳು ಮತ್ತು ಮಾನವ ಹಕ್ಕು ಹೋರಾಟಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತ ಕುಟುಂಬಗಳು ಮೇಲ್ಮನವಿ ಸಲ್ಲಿಸುವ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಡಂಗಾವಾಸ್ ಹತ್ಯಾಕಾಂಡದ ಬೇರು ಅದರ ಹಿಂದೆ ದಶಕಗಳಷ್ಟು ಹಳೆಯ ಭೂ ಹಕ್ಕಿನ ಹೋರಾಟದಲ್ಲಿ ನೆಟ್ಟಿದೆ. ಸ್ವಾತಂತ್ರ್ಯಾನಂತರ ಭೂರಹಿತ ದಲಿತರಿಗೆ ಭೂಮಿ ಸಿಗಬೇಕು, ಅದನ್ನು ಪ್ರಬಲ ಜಾತಿಯವರು ಕಬಳಿಸಬಾರದು ಎಂಬ ಉದ್ದೇಶದಿಂದ ರಾಜಸ್ಥಾನ ಸರ್ಕಾರ 1955ರಲ್ಲಿ ಟೆನೆನ್ಸಿ ಕಾಯ್ದೆಯನ್ನು ಜಾರಿಗೆ ತಂದಿತ್ತು. ದಲಿತರಿಗೆ ಹಂಚಿಕೆ ಮಾಡಿದ ಭೂಮಿಯನ್ನು ಇತರ ಸಮುದಾಯಗಳಿಗೆ ವರ್ಗಾಯಿಸದಂತೆ ಕಾನೂನು ರಕ್ಷಣೆಯನ್ನೂ ಕಲ್ಪಿಸಲಾಗಿತ್ತು. ಆದರೆ ದಲಿತರ ಹೆಸರಿನಲ್ಲಿದ್ದ ಸಾವಿರಾರು ಎಕರೆ ಭೂಮಿ ಮೇಲ್ಜಾತಿಯವರ ವಶಕ್ಕೆ ಹೋಗಿತ್ತು. ಅಕ್ರಮ ಒತ್ತುವರಿಗೆ ಸಂಬಂಧಿಸಿದ ಸುಮಾರು 70 ಸಾವಿರ ಪ್ರಕರಣಗಳು ನ್ಯಾಯಾಲಯಗಳಲ್ಲೇ ಇಂದಿಗೂ ಬಾಕಿ ಉಳಿದಿವೆ. ನ್ಯಾಯಾಲಯಗಳು ದಲಿತರ ಪರ ತೀರ್ಪು ನೀಡಿದ ಸಂದರ್ಭಗಳಲ್ಲೂ, ಆಡಳಿತದ ಇಚ್ಛಾಶಕ್ತಿಯ ಕೊರತೆಯಿಂದ ಅವರಿಗೆ ತಮ್ಮ ಭೂಮಿ ಮರಳಿ ಸಿಗಲೇ ಇಲ್ಲ. ಇದೇ ವೈಫಲ್ಯ ಡಂಗಾವಾಸ್‌ನಲ್ಲಿ ನಡೆದ ರಕ್ತಸಿಕ್ತ ಸಂಘರ್ಷಕ್ಕೂ ಹಿನ್ನೆಲೆಯಾಯಿತು.

image 2026 08 06T164833.983

ಹತ್ಯಾಕಾಂಡದ ಕೇಂದ್ರಬಿಂದುವಾಗಿದ್ದದ್ದು ಡಂಗಾವಾಸ್ ಗ್ರಾಮದ 23 ಬೀಗಾ (ಸುಮಾರು 15 ಎಕರೆ) ಜಮೀನು. ಈ ಜಮೀನು ದಲಿತ ಮೇಘವಾಲ್ ಕುಟುಂಬದ ಹೆಸರಿನಲ್ಲಿದ್ದರೂ, ಅದರ ಮಾಲೀಕತ್ವದ ಬಗ್ಗೆ ಹಲವು ದಶಕಗಳಿಂದ ವಿವಾದ ಮುಂದುವರಿದಿತ್ತು. ಗ್ರಾಮದ ಜಾಟ್ ಸಮುದಾಯದ ಓಂರಾಮ್ ಹಾಗೂ ಕನ್ನಾರಾಮ್ ಸಹೋದರರು, 1954ರಲ್ಲಿ ಜಮೀನಿನ ಮೂಲ ಮಾಲೀಕರಾದ ಬಸ್ತಾರಾಮ್ ಮೇಘವಾಲ್ ತಮ್ಮ ತಂದೆ ಚಿಮ್ನಾರಾಮ್ ಜಾಟ್ ಅವರಿಗೆ ₹1,500ಕ್ಕೆ ಜಮೀನನ್ನು ಅಡಮಾನ ಇಟ್ಟಿದ್ದರು ಎಂದು ವಾದಿಸಿದರು. ಸಾಲ ಮರುಪಾವತಿಯಾಗದ ಕಾರಣ ಜಮೀನಿನ ಹಕ್ಕು ತಮ್ಮ ಕುಟುಂಬಕ್ಕೇ ಸೇರಿದೆ ಎಂಬುದು ಅವರ ಪ್ರತಿವಾದವಾಗಿತ್ತು. ಆದರೆ ಮೇಘವಾಲ್ ಕುಟುಂಬ ಈ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿ, ಇದು ತಮ್ಮ ಪಾರಂಪರಿಕ ಭೂಮಿಯನ್ನು ಕಬಳಿಸುವ ಪ್ರಯತ್ನ ಎಂದು ಆರೋಪಿಸಿತು. ಸುಮಾರು 18 ವರ್ಷಗಳ ಹಿಂದೆಯೇ ಬಸ್ತಾರಾಮ್ ಕುಟುಂಬ ಮೆಡ್ತಾ ನ್ಯಾಯಾಲಯದ ಮೊರೆ ಹೋಗಿ, ಜಾಟ್ ಸಹೋದರರು ಅಕ್ರಮವಾಗಿ ಜಮೀನಿನ ಮೇಲೆ ಹಕ್ಕು ಸಾಧಿಸಲು ಯತ್ನಿಸುತ್ತಿದ್ದಾರೆ ಎಂದು ದಾವೆ ಹೂಡಿತ್ತು. ಪ್ರಕರಣ ನ್ಯಾಯಾಲಯದಲ್ಲಿದ್ದರೂ, ಗ್ರಾಮದಲ್ಲಿ ಉದ್ವಿಗ್ನತೆ ಮಾತ್ರ ಕಡಿಮೆಯಾಗಿರಲಿಲ್ಲ

2006ರಲ್ಲಿ ಬಸ್ತಾರಾಮ್ ಅವರ ಪುತ್ರ ರತ್ನಾರಾಮ್ ಮೇಘವಾಲ್ ಹೆಸರಿಗೆ ಜಮೀನಿನ ಮಾಲೀಕತ್ವ ವರ್ಗಾವಣೆಯಾದ ನಂತರ ಸಂಘರ್ಷ ಇನ್ನಷ್ಟು ತೀವ್ರವಾಯಿತು. ಜಾಟ್ ಸಮುದಾಯದವರಿಂದ ನಿರಂತರ ಬೆದರಿಕೆಗಳು ಬರುತ್ತಿವೆ ಎಂದು ರತ್ನಾರಾಮ್ ಹಲವು ಬಾರಿ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಸ್ಥಳೀಯ ಆಡಳಿತ ಮತ್ತು ಪೊಲೀಸರ ಮೇಲೆ ಜಾಟ್ ಸಮುದಾಯದ ಪ್ರಭಾವವಿದ್ದ ಕಾರಣ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಿಲ್ಲ ಎಂಬುದು ಮೇಘವಾಲ್ ಕುಟುಂಬದ ಆರೋಪ. ಇದೇ ನಿಷ್ಕ್ರಿಯತೆ ಮುಂದೆ ಭೂ ವಿವಾದವನ್ನು ಕಾನೂನು ವ್ಯಾಪ್ತಿಯಿಂದ ಹೊರಗೆ ತಳ್ಳಿದ್ದು, ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಲು ಕಾರಣವಾಯಿತು ಎಂದು ಸಾಮಾಜಿಕ ಹೋರಾಟಗಾರರು ಮತ್ತು ದಲಿತ ಸಂಘಟನೆಗಳು ವಾದಿಸುತ್ತವೆ.

2015ರ ಆರಂಭದಲ್ಲಿ ಮೇಘವಾಲ್ ಕುಟುಂಬ ನ್ಯಾಯಾಲಯದ ಹೋರಾಟದ ನಡುವೆ ತಮ್ಮದೇ ಜಮೀನಿನಲ್ಲಿ ಮನೆ ನಿರ್ಮಾಣ ಆರಂಭಿಸಿತು. ದಲಿತರ ಪ್ರಕಾರ, ಮೇ 14ರಂದು ಜಾಟ್ ಸಮುದಾಯ ಸಭೆ ನಡೆಸಿ, ನೂರಾರು ಮಂದಿಯನ್ನು ಟ್ರ್ಯಾಕ್ಟರ್ ಮತ್ತು ಮೋಟಾರ್‌ಸೈಕಲ್‌ಗಳಲ್ಲಿ ಸ್ಥಳಕ್ಕೆ ಕರೆಸಿಕೊಂಡಿತ್ತು. ಕೆಲವೇ ಗಂಟೆಗಳಲ್ಲಿ ಭೂ ವಿವಾದ ಹಿಂಸಾತ್ಮಕ ಘರ್ಷಣೆಯಾಗಿ ಮಾರ್ಪಟ್ಟಿತು. ಡಂಗಾವಾಸ್‌ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಪೊಲೀಸರು ಮತ್ತು ದಲಿತ ಸಮುದಾಯ ಸಂಪೂರ್ಣ ಭಿನ್ನವಾದ ಕಥನಗಳನ್ನು ಮುಂದಿಟ್ಟಿದ್ದವು. ಪೊಲೀಸರ ಪ್ರಕಾರ, ಸುಮಾರು 200 ಮಂದಿಯ ಗುಂಪು ಜಮೀನಿನ ಬಳಿ ಸೇರಿದ್ದ ವೇಳೆ ದಲಿತ ಸಮುದಾಯದವರು ಮೊದಲು ಗುಂಡು ಹಾರಿಸಿದ್ದರು. ಈ ಗುಂಡಿನ ದಾಳಿಯಲ್ಲಿ ರಾಮ್‌ಪಾಲ್ ಗೋಸ್ವಾಮಿ ಮೃತಪಟ್ಟಿದ್ದರು. ನಂತರ ಪರಿಸ್ಥಿತಿ ನಿಯಂತ್ರಣ ತಪ್ಪಿ, ಆಕ್ರೋಶಗೊಂಡ ಗುಂಪು ಟ್ರ್ಯಾಕ್ಟರ್ ಹರಿಸಿ ರತ್ನಾರಾಮ್ ಮೇಘವಾಲ್, ಅವರ ಸಹೋದರ ಪೊಕಾರ್ ರಾಮ್ ಮತ್ತು ಸಂಬಂಧಿ ಪಚ್ಚಾ ರಾಮ್ ಅವರನ್ನು ಕೊಂದಿತ್ತು. ಘಟನೆಯಲ್ಲಿ ಐವರು ದಲಿತರು ಸಾವನ್ನಪ್ಪಿದರು. ಹೀಗಾಗಿ ಪೊಲೀಸರು ಆರಂಭದಿಂದಲೇ ಇದನ್ನು ಎರಡು ಸಮುದಾಯಗಳ ನಡುವಿನ ಘರ್ಷಣೆ ಎಂದರು.

image 2026 08 06T164920.439

ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಲಿತರು ಪೊಲೀಸರ ಕಥೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದರು. “ತಮ್ಮ ಬಳಿ ಬಂದೂಕುಗಳಿರಲಿಲ್ಲ, ಲಾಠಿಗಳೂ ಇರಲಿಲ್ಲ. ಪ್ರಬಲ ಸಮುದಾಯದ ನೂರಾರು ಮಂದಿಯ ಎದುರು ಹೋರಾಡುವ ಸ್ಥಿತಿಯಲ್ಲೂ ನಾವು ಇರಲಿಲ್ಲ” ಎಂದರು. ರತ್ನಾರಾಮ್ ಪುತ್ರ ಮುನ್ನಾರಾಮ್ ಮೇಘವಾಲ್, “ಜಾಟ್ ಸಮುದಾಯದವರು ನನ್ನ ಮೇಲೆ ಗುಂಡು ಹಾರಿಸಿದರು. ಅದೇ ವೇಳೆ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದರು. ನಾನು ನೆಲಕ್ಕೆ ಬಿದ್ದೆ. ನನಗಾಗಿ ಹಾರಿಸಿದ ಗುಂಡು ತಪ್ಪಿ ರಾಮ್‌ಪಾಲ್ ಗೋಸ್ವಾಮಿಗೆ ತಗುಲಿರಬಹುದು” ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಗೋಸ್ವಾಮಿ ಸಾವಿಗೂ ದಲಿತರೇ ಕಾರಣ ಎಂದು ಬಿಂಬಿಸಲು ಹೊರಟಿದ್ದ ಪೊಲೀಸರ ವಾದ ತಲೆಕೆಳಗಾಗಿತ್ತು.

ಇದನ್ನೂ ಓದಿ: ಗಂಡನ ಮನೆ ತೊರೆಯಲು ಕ್ರೌರ್ಯ ಸಾಬೀತಾಗಬೇಕಿಲ್ಲ: ಗುಜರಾತ್ ಹೈಕೋರ್ಟ್

ಘಟನೆಯ ವೇಳೆ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಎಸಗುವುದಾಗಿ ಬೆದರಿಕೆ ಹಾಕಲಾಗಿತ್ತು. “ನಿಮ್ಮ ಖಾಸಗಿ ಅಂಗಗಳಿಗೆ ಕೋಲು ತೂರಿಸುತ್ತೇವೆ” ಎಂದು ಬೆದರಿಕೆ ಹಾಕಿದ ಆರೋಪವೂ ಕೇಳಿಬಂದಿತ್ತು. ಮೂರು ದಲಿತರ ಹತ್ಯೆ ಪ್ರಕರಣದ ಜೊತೆಗೆ, ಗೋಸ್ವಾಮಿ ಸಾವಿನ ಸಂಬಂಧ ಮೇಘವಾಲ್ ಕುಟುಂಬದ ವಿರುದ್ಧವೂ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಇದನ್ನು ದಲಿತ ಸಂಘಟನೆಗಳು ‘ಹತ್ಯಾಕಾಂಡದ ತೀವ್ರತೆಯನ್ನು ಕಡಿಮೆ ಮಾಡಲು ದಾಖಲಿಸಿದ ಪ್ರತಿದೂರು’ ಎಂದು ಆರೋಪಿಸಿದವು. “ಇದು ನಿಜವಾಗಿಯೂ ಎರಡು ಗುಂಪುಗಳ ಘರ್ಷಣೆಯಾಗಿದ್ದರೆ ಜಾಟ್ ಸಮುದಾಯದ ಒಬ್ಬರೂ ಗಾಯಗೊಂಡಿಲ್ಲ ಏಕೆ? ನಮ್ಮ ಬಳಿ ಶಸ್ತ್ರಾಸ್ತ್ರಗಳಿದ್ದರೆ ಪೊಲೀಸರು ಅವುಗಳನ್ನು ವಶಪಡಿಸಿಕೊಳ್ಳಲಿಲ್ಲ ಏಕೆ?” ಎಂದು ದಲಿತರು ಸಾರ್ವಜನಿಕವಾಗಿ ಪ್ರಶ್ನಿಸಲಾರಂಭಿಸಿದರು.

ಈ ಹತ್ಯಾಕಾಂಡ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಭೂಮಿ ವಿವಾದದ ಹೆಸರಿನಲ್ಲಿ ದಲಿತರನ್ನು ಟ್ರ್ಯಾಕ್ಟರ್ ಹರಿಸಿ ಕೊಂದ ಘಟನೆ ರಾಜಸ್ಥಾನದಷ್ಟೇ ಅಲ್ಲ, ದೇಶದಾದ್ಯಂತ ದಲಿತ ಸಂಘಟನೆಗಳು, ಮಾನವ ಹಕ್ಕು ಹೋರಾಟಗಾರರು ಹಾಗೂ ಸಾಮಾಜಿಕ ಸಂಘಟನೆಗಳ ತೀವ್ರ ಪ್ರತಿಭಟನೆಗೆ ಕಾರಣವಾಯಿತು. ಪೊಲೀಸರು ಪ್ರಕರಣವನ್ನು “ಎರಡು ಸಮುದಾಯಗಳ ನಡುವಿನ ಘರ್ಷಣೆ” ಎಂದು ಬಣ್ಣಿಸುತ್ತಿದ್ದರೆ, ದಲಿತ ಸಂಘಟನೆಗಳು ಇದನ್ನು ಪೂರ್ವಯೋಜಿತ ಜಾತಿ ಹಿಂಸಾಚಾರ ಎಂದು ಪ್ರತಿಪಾದಿಸಿದವು. ಸ್ಥಳೀಯ ಪೊಲೀಸರ ತನಿಖೆಯ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದ ಹೋರಾಟಗಾರರು, ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಒಪ್ಪಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಸರ್ಕಾರ ಕೊನೆಗೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತು.

ಪ್ರಕರಣದ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲೂ ಜಾತಿ ದ್ವೇಷದ ಭಾಷಣಗಳು ಹರಿದಾಡಿದವು. ಜಾಟ್ ಸಮುದಾಯದ ಕೆಲವರು ದಲಿತರ ವಿರುದ್ಧ ಅವಹೇಳನಕಾರಿ ಹಾಗೂ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು. ಮೀಸಲಾತಿ ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಿಂದ ದಲಿತರು “ತಲೆ ಎತ್ತಿದ್ದಾರೆ” ಎಂಬ ರೀತಿಯ ಸಂದೇಶಗಳು ವೈರಲ್ ಆಗಿದ್ದವು. ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ದಲಿತರ ವಿರುದ್ಧ ಅವಹೇಳನಕಾರಿ ಹೇಳಿಕೆಗಳು ಪ್ರಕಟವಾಗಿದ್ದವು. ಈ ಸಂಬಂಧ ಕೆಲವು ವ್ಯಕ್ತಿಗಳ ವಿರುದ್ಧ ಪೊಲೀಸ್ ದೂರುಗಳೂ ದಾಖಲಾಗಿದ್ದವು. ಘಟನೆಯು ಕೇವಲ ಭೂ ವಿವಾದಕ್ಕೆ ಸೀಮಿತವಾಗಿರದೆ, ಜಾತಿ ಸಂಘರ್ಷದ ಸ್ವರೂಪ ಪಡೆದುಕೊಂಡಿದೆ ಎಂಬ ವಾದಕ್ಕೆ ಈ ಬೆಳವಣಿಗೆಗಳು ಮತ್ತಷ್ಟು ಬಲ ನೀಡಿದವು.

ಇದೇ ವೇಳೆ, ಡಂಗಾವಾಸ್ ಘಟನೆ ಒಂದು ಪ್ರತ್ಯೇಕ ಪ್ರಕರಣವಲ್ಲ, ರಾಜಸ್ಥಾನದಲ್ಲಿ ದಲಿತರ ಭೂ ಹಕ್ಕುಗಳ ಹೋರಾಟದ ದೊಡ್ಡ ಚಿತ್ರಣದ ಭಾಗ ಎಂದು ಸಾಮಾಜಿಕ ಕಾರ್ಯಕರ್ತರು ವಾದಿಸಿದರು. ಆರ್‌ಟಿಐ ಮಾಹಿತಿಯ ಆಧಾರದ ಮೇಲೆ ನಡೆದ ಒಂದು ಅಧ್ಯಯನದ ಪ್ರಕಾರ, ಜಾಟ್ ಸಮುದಾಯದ ವಿರುದ್ಧ ದಾಖಲಾಗಿದ್ದ ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣಗಳಲ್ಲಿ ಸುಮಾರು 80 ಶೇಕಡಾ ಪ್ರಕರಣಗಳು ಭೂ ವಿವಾದಗಳಿಗೆ ಸಂಬಂಧಿಸಿದ್ದವು. ಡಂಗಾವಾಸ್ ಹತ್ಯಾಕಾಂಡಕ್ಕೂ ಮುನ್ನ ನಾಗೌರ್ ಜಿಲ್ಲೆಯಲ್ಲೇ ಭೂ ವಿವಾದದ ಕಾರಣ ದಲಿತರ ಮನೆಗೆ ಬೆಂಕಿ ಹಚ್ಚಿದ ಘಟನೆ, ದಲಿತ ಬಾಲಕಿಯ ಮೇಲೆ ಹಲ್ಲೆ ಹಾಗೂ ದಲಿತ ವರನನ್ನು ಕುದುರೆಯಿಂದ ಇಳಿಸಿದಂತಹ ಹಲವು ಘಟನೆಗಳು ದಾಖಲಾಗಿದ್ದವು. ಹೀಗಾಗಿ ಡಂಗಾವಾಸ್ ಪ್ರಕರಣವನ್ನು ಒಂದು ಅಪರಾಧ ಪ್ರಕರಣವಾಗಿ ನೋಡುವುದಕ್ಕಿಂತ, ಭೂ ಹಕ್ಕು ಮತ್ತು ಜಾತಿ ಪ್ರಾಬಲ್ಯದ ಸಂಘರ್ಷದ ಪ್ರತೀಕವಾಗಿ ಅನೇಕರು ವಿಶ್ಲೇಷಿಸಿದರು.

image 2026 08 06T165010.423

ಇದನ್ನೂ ಓದಿ: ಜಾರ್ಖಂಡ್, ದೆಹಲಿ ಎಲ್ಲೇ ಆದರೂ, ಕಾಂಗ್ರೆಸ್ ವಿದ್ಯಾರ್ಥಿಗಳ ಪರ: ಮಲ್ಲಿಕಾರ್ಜುನ ಖರ್ಗೆ

ತನಿಖೆ ಪೂರ್ಣಗೊಳಿಸಿದ ಸಿಬಿಐ, ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದರೂ, ವಿಚಾರಣೆಯ ವೇಳೆ ಸಾಕ್ಷ್ಯಗಳನ್ನು ನ್ಯಾಯಾಲಯದಲ್ಲಿ ಸಮರ್ಥವಾಗಿ ಸ್ಥಾಪಿಸುವಲ್ಲಿ ಹಲವು ಸಮಸ್ಯೆಗಳು ಎದುರಾದವು. ಎಸ್‌ಸಿ/ಎಸ್‌ಟಿ ಕಾಯ್ದೆಯ ವಿಶೇಷ ನ್ಯಾಯಾಲಯದಲ್ಲಿ ನಡೆದ ಸುದೀರ್ಘ ವಿಚಾರಣೆಯ ವೇಳೆ, ಪ್ರಕರಣದ ಪ್ರಮುಖ ಸಾಕ್ಷಿಗಳ ಹೇಳಿಕೆಗಳಲ್ಲಿ ವ್ಯತ್ಯಾಸಗಳಿವೆ ಎಂದು ಆರೋಪಿಗಳ ಪರ ವಕೀಲರು ವಾದಿಸಿದರು. ಘಟನೆ ನಡೆದ ಸಮಯ, ದಾಳಿಯಲ್ಲಿ ಭಾಗಿಯಾಗಿದ್ದವರ ಗುರುತು, ಶಸ್ತ್ರಾಸ್ತ್ರಗಳ ಬಳಕೆ ಹಾಗೂ ಸಾವಿಗೆ ಕಾರಣವಾದ ನಿಖರ ಸಂದರ್ಭಗಳನ್ನು ಸಾಬೀತುಪಡಿಸುವಲ್ಲಿ ಅಭಿಯೋಜನಾ ಪಕ್ಷ ವಿಫಲವಾಗಿದೆ ಎಂದು ಪ್ರತಿಪಾದಿಸಿದರು. ವಿಶೇಷವಾಗಿ, ಸಾವಿರಾರು ಜನರ ಗುಂಪು ಸೇರಿದ್ದ ಆರೋಪ ಇದ್ದರೂ, ಪ್ರತಿಯೊಬ್ಬ ಆರೋಪಿಯ ನಿರ್ದಿಷ್ಟ ಪಾತ್ರವನ್ನು ಸಾಬೀತುಪಡಿಸಲು ತನಿಖಾ ಸಂಸ್ಥೆಗೆ ಸಾಧ್ಯವಾಗಿಲ್ಲ ಎಂಬುದನ್ನು ನ್ಯಾಯಾಲಯ ಪರಿಗಣಿಸಿತು.

ಮತ್ತೊಂದೆಡೆ, ದಲಿತ ಸಂಘಟನೆಗಳು ಮತ್ತು ಸಂತ್ರಸ್ತ ಕುಟುಂಬಗಳು ಆರಂಭದಿಂದಲೂ ಈ ಪ್ರಕರಣದಲ್ಲಿ ತನಿಖಾ ಲೋಪಗಳಾಗಿವೆ ಎಂದು ಆರೋಪಿಸುತ್ತ ಬಂದಿವೆ. ಪ್ರಮುಖ ಸಾಕ್ಷಿಗಳನ್ನು ರಕ್ಷಿಸುವಲ್ಲಿ ವಿಫಲತೆ, ತನಿಖೆಯ ಆರಂಭಿಕ ಹಂತದಲ್ಲೇ ನಡೆದ ನಿರ್ಲಕ್ಷ್ಯ ಮತ್ತು ಪ್ರಭಾವಿ ಆರೋಪಿಗಳ ವಿರುದ್ಧ ಸಾಕಷ್ಟು ಸಾಕ್ಷ್ಯ ಸಂಗ್ರಹಿಸದಿರುವುದು ಪ್ರಕರಣ ದುರ್ಬಲಗೊಳ್ಳಲು ಕಾರಣವಾಯಿತು ಎಂಬುದು ಅವರ ವಾದ. ಅವರ ಪ್ರಕಾರ, ಒಂದು ದಶಕಕ್ಕೂ ಹೆಚ್ಚು ಕಾಲ ನಡೆದ ನ್ಯಾಯಾಂಗ ಪ್ರಕ್ರಿಯೆಯ ಬಳಿಕ ಬಂದ ಖುಲಾಸೆ ತೀರ್ಪು ಕೇವಲ ಆರೋಪಿಗಳ ಬಿಡುಗಡೆ ಮಾತ್ರವಲ್ಲ, ಸಂತ್ರಸ್ತರ ನ್ಯಾಯದ ನಿರೀಕ್ಷೆಗೂ ದೊಡ್ಡ ಹೊಡೆತವಾಗಿದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ ನಿರೂಪಣೆ

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ,...

ಮುಂಬೈ ಗರ್ಬಾ ಉತ್ಸವಕ್ಕೆ ಮುಸ್ಲಿಮರ ಪ್ರವೇಶಕ್ಕೆ ನಿರ್ಬಂಧ: ತಿಲಕ, ಆಧಾರ್ ಕಾರ್ಡ್ ಹಾಗೂ ಕುಟುಂಬ ಸಮೇತ ಆಗಮನ ಕಡ್ಡಾಯ!

ಮುಂಬೈನ ಬೋರಿವಲಿಯಲ್ಲಿ ಆಯೋಜಿಸಲಾಗುತ್ತಿರುವ ಮುಂಬರುವ ನವರಾತ್ರಿ ಗರ್ಬಾ ಮತ್ತು ದಾಂಡಿಯಾ ಉತ್ಸವದಲ್ಲಿ...

ಯುಪಿ ಚುನಾವಣೆ | ಪ್ರತಿ ಕ್ಷೇತ್ರದಲ್ಲೂ ಬಿಜೆಪಿ ಮತಗಳನ್ನು 27,000 ಕಡಿತಗೊಳಿಸುತ್ತೇವೆ: ಅಖಿಲೇಶ್ ಪ್ರತಿಜ್ಞೆ

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಎಲ್ಲ ಪಕ್ಷಗಳು ಸಿದ್ದತೆಯಲ್ಲಿ ತೊಡಗಿವೆ....

ಅಮೃತಸರದಲ್ಲಿ ಕಳೆದುಹೋಗಿ ಗಯಾದಲ್ಲಿ ಪತ್ತೆ; ಎಐ ತಂತ್ರಜ್ಞಾನದ ನೆರವಿನಿಂದ ಕುಟುಂಬವನ್ನು ಸೇರಿದ ವ್ಯಕ್ತಿ

ಪಂಜಾಬ್‌ನಿಂದ ದಾರಿ ತಪ್ಪಿ 1,200 ಕಿಲೋಮೀಟರ್‌ಗೂ ಹೆಚ್ಚು ದೂರದ ಬಿಹಾರ ತಲುಪಿದ್ದ...