ಕಾಂಗ್ರೆಸ್‌ಗೆ ಹೊಸ ಇಮೇಜ್‌ ಕಟ್ಟುತ್ತಿದ್ದಾರೆಯೇ ಕೃಷ್ಣ ಬೈರೇಗೌಡ?

Date:

ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರ ಕಾರ್ಯವೈಖರಿ ಈಗ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆಡಳಿತದಲ್ಲಿ ದತ್ತಾಂಶಕ್ಕೆ ಒತ್ತು, ಅಧಿಕಾರಿಗಳ ಜವಾಬ್ದಾರಿ, ನಗರ ಸಮಸ್ಯೆಗಳ ಬಗ್ಗೆ ನೇರ ಹಸ್ತಕ್ಷೇಪ ಮತ್ತು ರಾಜಕೀಯಕ್ಕಿಂತ ಉತ್ತಮ ಆಡಳಿತಕ್ಕೆ ಆದ್ಯತೆ ನೀಡುತ್ತಿರುವ ಅವರ ಕಾರ್ಯವೈಖರಿಯನ್ನು ಆಧಾರವಾಗಿಟ್ಟುಕೊಂಡು Business Standard ಪ್ರಕಟಿಸಿರುವ ವಿಶ್ಲೇಷಣೆ, ಅವರನ್ನು ಕಾಂಗ್ರೆಸ್‌ನ ಆಡಳಿತ ಮಾದರಿಯ ಹೊಸ ಮುಖವಾಗಿ ಬಿಂಬಿಸಿದೆ.

- Advertisement -

53 ವರ್ಷದ ಕೃಷ್ಣ ಬೈರೇಗೌಡ, ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದ ಬಳಿಕ ಬೆಂಗಳೂರು ಅಭಿವೃದ್ಧಿ ಸಚಿವರಾಗಿ ನೇಮಕಗೊಂಡಿದ್ದಾರೆ. ನಗರದಲ್ಲಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಮಸ್ಯೆಗಳನ್ನು ಅವರು ಕೈಗೆತ್ತಿಕೊಳ್ಳುತ್ತಿರುವ ರೀತಿಯೇ ಹೆಚ್ಚು ಗಮನ ಸೆಳೆಯುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

ಕೆಲವೇ ವಾರಗಳ ಹಿಂದೆ ನಡೆದ ಸಭೆಯೊಂದು ಅವರ ಆಡಳಿತ ಶೈಲಿಗೆ ಉದಾಹರಣೆಯಾಗಿ ಲೇಖನದಲ್ಲಿ ಉಲ್ಲೇಖವಾಗಿದೆ. ಬೀದಿ ನಾಯಿಗಳ ಸಂತಾನಹರಣ (Sterilisation) ಯೋಜನೆ ಕುರಿತು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ 19 ಮಂದಿ ಅಧಿಕಾರಿಗಳು ಹಾಜರಿದ್ದರು. ಆದರೆ, ಕೋಟ್ಯಂತರ ರೂಪಾಯಿ ವೆಚ್ಚ ಮಾಡಿರುವ ಈ ಯೋಜನೆಯಡಿ ಎಷ್ಟು ನಾಯಿಗಳ ಸಂತಾನಹರಣ ಮಾಡಲಾಗಿದೆ? ಅದರ ಪರಿಣಾಮವಾಗಿ ಬೀದಿ ನಾಯಿಗಳ ಸಂಖ್ಯೆ ಅಥವಾ ಬದಲಿ ಪ್ರಮಾಣ (replacement rate) ಎಷ್ಟು ಇಳಿಕೆಯಾಗಿದೆ? ಎಂಬ ಪ್ರಶ್ನೆಗಳಿಗೆ ಯಾರ ಬಳಿಯೂ ನಿಖರ ದತ್ತಾಂಶ ಇರಲಿಲ್ಲ. ಇದರಿಂದ ಅಸಮಾಧಾನಗೊಂಡ ಕೃಷ್ಣ ಬೈರೇಗೌಡ, ʼಕಿವಿ ಮೇಲೆ ಹೂವಿಟ್ಟುಕೊಂಡವನಂತೆ ಕಾಣುತ್ತೀನಾ?ʼ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದರು. ಈ ಘಟನೆಯೇ ಕೃಷ್ಣ ಬೈರೇಗೌಡರ ಆಡಳಿತ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಕಡತಗಳಲ್ಲಿರುವ ಮಾಹಿತಿಗಿಂತ ನೆಲಮಟ್ಟದಲ್ಲಿ ಏನು ಫಲಿತಾಂಶ ಬಂದಿದೆ ಎಂಬುದರ ಬಗ್ಗೆ ಅವರು ಹೆಚ್ಚಿನ ಒತ್ತು ನೀಡುತ್ತಾರೆ ಎಂದು ವಿಶ್ಲೇಷಿಸಲಾಗಿದೆ.

ಬೀದಿ ನಾಯಿಗಳ ವಿಚಾರ ಮಾತ್ರವಲ್ಲ, ಬೆಂಗಳೂರಿನ ಪಾದಚಾರಿ ಮಾರ್ಗಗಳ ಅತಿಕ್ರಮಣ ತೆರವು ಕಾರ್ಯವನ್ನೂ ಕೃಷ್ಣ ಬೈರೇಗೌಡ ಆದ್ಯತೆಯ ವಿಷಯವನ್ನಾಗಿ ತೆಗೆದುಕೊಂಡಿದ್ದಾರೆ. ಹಲವು ವರ್ಷಗಳಿಂದ ನಗರದ ಪ್ರಮುಖ ರಸ್ತೆಗಳು ಮತ್ತು ಹೆದ್ದಾರಿಗಳ ಪಕ್ಕದ ಪಾದಚಾರಿ ಮಾರ್ಗಗಳನ್ನು ರಸ್ತೆಬದಿಯ ವ್ಯಾಪಾರಿಗಳು ಅತಿಕ್ರಮಿಸಿಕೊಂಡಿದ್ದರಿಂದ, ಪಾದಚಾರಿಗಳು ರಸ್ತೆಯಲ್ಲೇ ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಅನೇಕರು ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ಆರಂಭಿಸಿದ ಸಚಿವರು, ರಸ್ತೆಬದಿಯ ವ್ಯಾಪಾರಿಗಳಿಗೆ, “ನಗರದ ಒಳಭಾಗದಲ್ಲಿ ವ್ಯಾಪಾರ ಮಾಡಲು ಸಾಕಷ್ಟು ಜಾಗವಿದೆ. ಆದರೆ ಪಾದಚಾರಿಗಳು ತಮ್ಮ ಜೀವದ ಬೆಲೆ ತೆತ್ತು ನಡೆಯುವ ಪರಿಸ್ಥಿತಿಯನ್ನು ನಾನು ಒಪ್ಪುವುದಿಲ್ಲ” ಎಂದು ನೇರವಾಗಿ ಹೇಳಿದ್ದರು ಎಂದು ಲೇಖನ ಉಲ್ಲೇಖಿಸಿದೆ.

ಈ ಕಾರ್ಯಾಚರಣೆಯ ಪರಿಣಾಮವಾಗಿ ಈಗಾಗಲೇ ಸುಮಾರು 500 ಕಿಲೋಮೀಟರ್ ಉದ್ದದ ಪಾದಚಾರಿ ಮಾರ್ಗಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸಲಾಗಿದೆ. ಕಳಪೆ ರಸ್ತೆ ದುರಸ್ತಿ ಕಾಮಗಾರಿ ನಡೆಸಿದ ಪ್ರಕರಣದಲ್ಲಿ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲಾಗಿದ್ದು, ಗುತ್ತಿಗೆದಾರನಿಗೆ ದಂಡ ವಿಧಿಸಲಾಗಿದೆ. ಇದೇ ರೀತಿಯ ನಿರ್ಲಕ್ಷ್ಯ ಕಂಡುಬಂದರೆ ಮುಂದೆಯೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಂತಹ ನಗರದಲ್ಲಿ ರಸ್ತೆ, ಚರಂಡಿ, ಪಾದಚಾರಿ ಮಾರ್ಗ ಅಥವಾ ಸಂಚಾರ ಸಮಸ್ಯೆಗಳಿಗೆ ಕೇವಲ ಯೋಜನೆಗಳು ಸಾಕಾಗುವುದಿಲ್ಲ. ಅಧಿಕಾರಿಗಳಿಂದ ಹೊಣೆಗಾರಿಕೆ ಕೇಳುವ ರಾಜಕೀಯ ನಾಯಕತ್ವವೂ ಅಗತ್ಯ. ಆ ರೀತಿಯ ಆಡಳಿತ ಮಾದರಿಯನ್ನು ಕೃಷ್ಣ ಬೈರೇಗೌಡ ರೂಪಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಅವರ ಇತ್ತೀಚಿನ ಕ್ರಮಗಳು ಸೂಚಿಸುತ್ತವೆ.

ನಗರದ ಆಡಳಿತದಲ್ಲಿ ಬಹುಕಾಲದಿಂದ ಕಾಡುತ್ತಿರುವ ವಿವಿಧ ನಾಗರಿಕ ಸಂಸ್ಥೆಗಳ ನಡುವಿನ ಸಮನ್ವಯದ ಕೊರತೆಯನ್ನೂ ಕೃಷ್ಣ ಬೈರೇಗೌಡ ಸರಿಪಡಿಸಲು ಮುಂದಾಗಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಸಂಚಾರ ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳು ಪ್ರತ್ಯೇಕವಾಗಿ ಕೆಲಸ ಮಾಡುವುದರಿಂದ ನಗರದ ಯೋಜನೆಗಳು ವಿಳಂಬವಾಗುವುದು, ಒಂದೇ ರಸ್ತೆಯನ್ನು ಮತ್ತೆ ಮತ್ತೆ ಅಗೆಯುವುದು, ಇಲಾಖೆಗಳ ನಡುವೆ ಹೊಣೆಗಾರಿಕೆಯ ಕೊರತೆ ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಅವರು ಗ್ರೇಟರ್ ಬೆಂಗಳೂರು ಅಥಾರಿಟಿ (Greater Bengaluru Authority) ಕಾರ್ಯಕಾರಿ ಸಮಿತಿಯನ್ನು ಚುರುಕುಗೊಳಿಸಿದ್ದಾರೆ. ಜಿಐಎಸ್ (GIS) ಆಧಾರಿತ ಏಕೀಕೃತ ಡಿಜಿಟಲ್ ವೇದಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ವೇದಿಕೆಯ ಮೂಲಕ ನಗರದ ಪ್ರಮುಖ ನಾಗರಿಕ ಸಂಸ್ಥೆಗಳನ್ನೆಲ್ಲ ಒಂದೇ ವ್ಯವಸ್ಥೆಗೆ ತಂದು ಯೋಜನೆ ರೂಪಿಸುವುದು ಮತ್ತು ಅನುಷ್ಠಾನಗೊಳಿಸುವ ಉದ್ದೇಶ ಹೊಂದಲಾಗಿದೆ.

ಈ ಕ್ರಮಗಳು ಉದ್ಯಮ ವಲಯದಲ್ಲಿಯೂ ಮೆಚ್ಚುಗೆ ಪಡೆದಿವೆ. ಸರ್ಕಾರದ ನೀತಿಗಳನ್ನು ಆಗಾಗ ಟೀಕಿಸುವ ಉದ್ಯಮಿ ಕಿರಣ್ ಮಜುಂದಾರ್-ಶಾ ಮತ್ತು ಹೂಡಿಕೆದಾರ ಟಿ.ವಿ. ಮೋಹನ್ ದಾಸ್ ಪೈ ಅವರಂತಹ ಪ್ರಮುಖರು ಕೂಡ ಕೃಷ್ಣ ಬೈರೇಗೌಡರ ಪ್ರಯತ್ನಗಳನ್ನು ಸಾರ್ವಜನಿಕವಾಗಿ ಶ್ಲಾಘಿಸಿದ್ದಾರೆ. ಒಂದು ಕಾಲದಲ್ಲಿ ಹಸಿರಿನಿಂದ ಕಂಗೊಳಿಸುತ್ತಿದ್ದ ಬೆಂಗಳೂರು, ಇಂದು ಯೋಜನೆಯಿಲ್ಲದ ನಗರೀಕರಣದಿಂದ ತನ್ನ ಸ್ವರೂಪ ಕಳೆದುಕೊಳ್ಳುವ ಹಂತಕ್ಕೆ ಬಂದಿದೆ. ಅಂತಹ ನಗರಕ್ಕೆ ಕೃಷ್ಣ ಬೈರೇಗೌಡ ನಿಜವಾದ “ಚಾಂಪಿಯನ್” ಆಗುವ ಸಾಧ್ಯತೆಯಿದೆ ಎಂದು Business Standard ಬರೆಯುತ್ತದೆ.

25 ವರ್ಷಕ್ಕೂ ಹೆಚ್ಚು ಕಾಲ ರಾಜಕೀಯದಲ್ಲಿರುವ ಕೃಷ್ಣ ಬೈರೇಗೌಡ, 2008ರಿಂದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಸಾಮಾಜಿಕ ಹಾಗೂ ರಾಜಕೀಯವಾಗಿ ಪ್ರಭಾವಿ ಸಮುದಾಯವಾಗಿರುವ ಒಕ್ಕಲಿಗ ಸಮುದಾಯಕ್ಕೆ ಸೇರಿದ ಅವರು, ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದು, ನಿರ್ವಹಣಾ ಪದವಿಯನ್ನೂ ಹೊಂದಿದ್ದಾರೆ. ರಾಜಕೀಯ ಪ್ರವೇಶಿಸುವ ಮೊದಲು ಕೆಲಕಾಲ ಕೋಲಾರದಲ್ಲಿ ಬಾಳೆ ತೋಟವನ್ನೂ ನಡೆಸಿದ್ದರು. 2003ರಲ್ಲಿ ತಂದೆಯ ನಿಧನದ ಬಳಿಕ ಅವರು ರಾಜಕೀಯಕ್ಕೆ ಬಂದರು. ನಂತರ ಬ್ಯಾಟರಾಯನಪುರ ಕ್ಷೇತ್ರಕ್ಕೆ ಸ್ಥಳಾಂತರಗೊಂಡು ಅಲ್ಲಿನ ಜನರೊಂದಿಗೆ ಬೆರೆತು ಕೆಲಸ ಆರಂಭಿಸಿದರು. ನಗರ ಹಾಗೂ ಗ್ರಾಮೀಣ ಎರಡೂ ಸ್ವರೂಪ ಹೊಂದಿರುವ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವದಿಂದ ಕೃಷಿ ಮತ್ತು ರೈತರ ಸಮಸ್ಯೆಗಳ ಬಗ್ಗೆ ಅವರಿಗೆ ಉತ್ತಮ ಅರಿವು ಮೂಡಿತು. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾಗ, ತಮ್ಮ ಕ್ಷೇತ್ರ ಮಾತ್ರವಲ್ಲದೆ ಕೋಲಾರದ ರೈತರಿಗೆ ಕೂಡ ಬೆಳೆ ಸಾಗಿಸಲು ನೆರವಾದರು. ಇದೇ ಅವಧಿಯಲ್ಲಿ ಕೇಂದ್ರ ಸರ್ಕಾರದ ಕೋವಿಡ್ ನಿರ್ವಹಣೆಯನ್ನು ಅವರು ಬಹಿರಂಗವಾಗಿ ಟೀಕಿಸಿದ್ದರು. ಇಂದು ಪ್ರಧಾನಿ ನರೇಂದ್ರ ಮೋದಿ ಸಿರಿಧಾನ್ಯಗಳ ಪ್ರಚಾರವನ್ನು ರಾಷ್ಟ್ರೀಯ ಅಭಿಯಾನವನ್ನಾಗಿ ಮಾಡಿರುವುದಕ್ಕೂ ಹಲವು ವರ್ಷಗಳ ಮುಂಚೆಯೇ ಕೃಷ್ಣ ಬೈರೇಗೌಡ ರಾಗಿ ಮತ್ತು ಇತರ ಸಿರಿಧಾನ್ಯಗಳ ಬಳಕೆಯನ್ನು ಉತ್ತೇಜಿಸುತ್ತಿದ್ದರು ಎಂದು Business Standard ನೆನಪಿಸುತ್ತದೆ. ಆದರೆ ಈ ವಿಚಾರವನ್ನು ಅವರು ಎಂದಿಗೂ ರಾಜಕೀಯವಾಗಿ ಬಿಂಬಿಸಿಲ್ಲ ಅಥವಾ ಸ್ವತಃ ಅದರ ಶ್ರೇಯಸ್ಸು ಪಡೆಯಲು ಪ್ರಯತ್ನಿಸಿಲ್ಲ ಎಂಬುದನ್ನೂ ಲೇಖನ ವಿಶೇಷವಾಗಿ ಉಲ್ಲೇಖಿಸುತ್ತದೆ.

ಕೃಷಿ ಸಚಿವರಾಗಿದ್ದ ವೇಳೆ ಕೃಷ್ಣ ಬೈರೇಗೌಡರಿಗೆ ಮತ್ತೊಂದು ಮಹತ್ವದ ಜವಾಬ್ದಾರಿಯನ್ನೂ ಸಿದ್ದರಾಮಯ್ಯ ವಹಿಸಿದ್ದರು. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದೊಂದಿಗೆ ನಡೆದ ಮಾತುಕತೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಅವರನ್ನು ನವದೆಹಲಿಗೆ ಕಳುಹಿಸಲಾಗಿತ್ತು. ಉತ್ಪಾದನಾ ವಲಯದಿಂದ ಹಿಡಿದು ಮಾಹಿತಿ ತಂತ್ರಜ್ಞಾನ ಸೇವೆಗಳವರೆಗೆ ವೈವಿಧ್ಯಮಯ ಕೈಗಾರಿಕೆಗಳನ್ನು ಹೊಂದಿರುವ ಕರ್ನಾಟಕಕ್ಕೆ ಜಿಎಸ್‌ಟಿ ಜಾರಿಯಲ್ಲಿ ಹಲವು ವಿಶೇಷ ಸಮಸ್ಯೆಗಳಿದ್ದವು. ಆ ಎಲ್ಲ ವಿಚಾರಗಳನ್ನು ಸಮತೋಲನದಿಂದ ಮಂಡಿಸಿ, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ರಾಜ್ಯದ ಹಿತಾಸಕ್ತಿಗಾಗಿ ಕೃಷ್ಣ ಬೈರೇಗೌಡ ಕೆಲಸ ಮಾಡಿದ್ದರು. ಆಗಿನ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿ ಹಸ್ಮುಖ್ ಅಧಿಯಾ ಅವರು ಕೂಡ ಜಿಎಸ್‌ಟಿ ಮಾತುಕತೆಯಲ್ಲಿ ಕೃಷ್ಣ ಬೈರೇಗೌಡ ತೋರಿದ ಸಹಕಾರದ ಮನೋಭಾವವನ್ನು ಸಾರ್ವಜನಿಕವಾಗಿ ಮೆಚ್ಚಿಕೊಂಡಿದ್ದರು ಎಂದು ಲೇಖನ ನೆನಪಿಸಿದೆ. “ಅದು ರಾಜಕೀಯದ ವಿಷಯವಾಗಿರಲಿಲ್ಲ; ಜನರ ಹಿತಾಸಕ್ತಿಯ ವಿಷಯವಾಗಿತ್ತು” ಎಂದು ಲೇಖನದಲ್ಲಿ ಅಧಿಕಾರಿಯೊಬ್ಬರ ಹೇಳಿಕೆಯನ್ನೂ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಬೈಸಿಕಲ್‌ ಮೆಕ್ಯಾನಿಕ್‌ ಮಗಳ ಐತಿಹಾಸಿಕ ಸಾಧನೆ; ಕಾಮನ್‌ವೆಲ್ತ್‌ನಲ್ಲಿ ಚಿನ್ನ ಗೆದ್ದ ಅಸ್ಮಿತಾ ದೇಯ್

ಇದರ ಜೊತೆಗೆ ಬೀದಿ ವ್ಯಾಪಾರಿಗಳ ಎತ್ತಂಗಡಿ ವಿಚಾರದಲ್ಲಿ ಕೆಲವು ವಲಯಗಳಿಂದ ಅದರಲ್ಲೂ ಕಾಂಗ್ರೆಸ್ಸನ್ನು ಬೆಂಬಲಿಸಿದ ಬಡವರು ಮತ್ತು ಬಡವರ ಪರವಾದ ಸಂಘಟನೆಗಳಿಂದ ಕೃಷ್ಣ ಬೈರೇಗೌಡರು ಟೀಕೆಗೊಳಗಾಗಿದ್ದರು ಎಂಬುದನ್ನೂ ಗಮನಿಸಬೇಕು. ಆ ವಿಚಾರದಲ್ಲಿ ಸಚಿವರು ಇನ್ನೂ ಹೆಚ್ಚು ಮಾನವೀಯವಾಗಿ ಮತ್ತು ಬೀದಿ ವ್ಯಾಪಾರಿಗಳ ಹಕ್ಕಿನ ಪ್ರಶ್ನೆಯ ಪರವಾಗಿ ನಿಲ್ಲಬೇಕಿತ್ತು ಎಂಬುದು ಅವರ ಮುಖ್ಯ ಟೀಕೆಯಾಗಿತ್ತು. ಆದರೂ ಕೃಷ್ಣ ಬೈರೇಗೌಡ ಕಾಂಗ್ರೆಸ್ ಪಕ್ಷದೊಳಗೆ ಒಂದು ಬದಲಾವಣೆಯ ಪ್ರತೀಕವಾಗಿ ಹೊರಹೊಮ್ಮುತ್ತಿದ್ದಾರೆ ಎಂದು ಲೇಖನ ವಿಶ್ಲೇಷಿಸುತ್ತದೆ. ಜಾತಿ ಸಮೀಕರಣ ಅಥವಾ ಆಕ್ರಮಣಕಾರಿ ರಾಜಕೀಯಕ್ಕಿಂತ ಆಡಳಿತ, ಫಲಿತಾಂಶ ಮತ್ತು ಕಾರ್ಯಕ್ಷಮತೆಯನ್ನು ಮುಂದಿಟ್ಟುಕೊಂಡ ರಾಜಕೀಯಕ್ಕೆ ಅವರು ಪ್ರತಿನಿಧಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ತನ್ನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳಬೇಕಾದರೆ ಇಂತಹ “ಗವರ್ನೆನ್ಸ್ ಮಾದರಿ”ಯನ್ನೇ ಪ್ರಮುಖ ರಾಜಕೀಯ ಕಥನವಾಗಿ ಬಳಸಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿದೆ.

ಕೃಷ್ಣ ಬೈರೇಗೌಡರ ಆಡಳಿತ, ದತ್ತಾಂಶ ಆಧಾರಿತ ನಿರ್ಧಾರಗಳು, ಜವಾಬ್ದಾರಿತನ ಮತ್ತು ಫಲಿತಾಂಶಕೇಂದ್ರಿತ ರಾಜಕೀಯದ ಮೂಲಕ ಕಾಂಗ್ರೆಸ್‌ಗೆ ಹೊಸ ವಿಶ್ವಾಸಾರ್ಹತೆ ತಂದುಕೊಡಬಲ್ಲ ನಾಯಕರಾಗಿ ಅವರನ್ನು Business Standard ಚಿತ್ರಿಸುತ್ತದೆ. ಪಕ್ಷದೊಳಗಿನ ರಾಜಕೀಯ ಮಿತಿಗಳು ಮತ್ತು ಸವಾಲುಗಳನ್ನು ಪ್ರಸ್ತಾಪಿಸಿದರೂ, ಒಟ್ಟಾರೆ ಲೇಖನದ ಧೋರಣೆ ಪ್ರಶಂಸಾತ್ಮಕವಾಗಿದೆ. ಲೇಖನದ ಕೊನೆಯಲ್ಲಿ, “ಬೆಂಗಳೂರು ವಿಫಲವಾದರೆ ಕರ್ನಾಟಕ ವಿಫಲವಾಗುತ್ತದೆ” ಎಂಬ ಕೃಷ್ಣ ಬೈರೇಗೌಡರ ಹೇಳಿಕೆಯನ್ನು ಉಲ್ಲೇಖಿಸಿರುವ Business Standard, ಇಂದು ಇಡೀ ಬೆಂಗಳೂರು ಅವರ ಮುಂದಿನ ಹೆಜ್ಜೆಗಳನ್ನು ಕುತೂಹಲದಿಂದ ಗಮನಿಸುತ್ತಿದೆ ಎಂದು ಬರೆಯುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತಕ್ಕೆ ಅಮೆರಿಕದ ಶೇ.100ರಷ್ಟು ಸುಂಕದ ಬೆದರಿಕೆ

ರಷ್ಯಾ ವಿರುದ್ಧದ ನಿರ್ಬಂಧಗಳ ಮಸೂದೆಗೆ ತಿದ್ದುಪಡಿ ತಂದು, ಭಾರತ ಸೇರಿದಂತೆ ಹಲವು...

ಸಂಜೆ ಮಳೆಗೆ ಬೆಂಗಳೂರು ತತ್ತರ: ಟ್ರಾಫಿಕ್‌ನಲ್ಲಿ ಸಿಲುಕಿದ ಜನರು, 11 ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ

ಬೆಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ದಿಢೀರನೆ ಶುರುವಾದ ಭಾರೀ ಮಳೆಯಿಂದಾಗಿ ಸಿಲಿಕಾನ್ ಸಿಟಿಯ ಜನಜೀವನ...

ಪತಂಜಲಿ ಪ್ರಕರಣ: ಕಣ್ಣುಮುಚ್ಚಿಕೊಂಡು ಆದೇಶ ಹೊರಡಿಸಿದ ‘ಐಟಿಎಟಿ’ಗೆ ದೆಹಲಿ ಹೈಕೋರ್ಟ್ ತರಾಟೆ, 7 ಆದೇಶಗಳು ರದ್ದು

ಪತಂಜಲಿ ಆಯುರ್ವೇದ ಲಿಮಿಟೆಡ್‌ಗೆ ಸಂಬಂಧಿಸಿದಂತೆ 'ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣ' (ITAT)...

ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್‌ ವಿಮಾನಗಳ ವಿಳಂಬ: ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರತಿಭಟನೆ

ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್‌ನ ಎರಡು ವಿಮಾನಗಳು ಪದೇಪದೇ ವಿಳಂಬಗೊಂಡ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ...