ಕಮಲನಗರ ತಾಲ್ಲೂಕಿನ ಠಾಣಾಕುಶನೂರದ ಶ್ರೀ ಮಾಣಿಕರಾವ್ ಪಾಟೀಲ ರೂರಲ್ ಪಾಲಿಟೆಕ್ನಿಕ್‍ನಲ್ಲಿ ಈಚೆಗೆ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಕಾಲೇಜಿನ 77 ವಿದ್ಯಾರ್ಥಿಗಳಿಗೆ ಉದ್ಯೋಗ ಲಭಿಸಿದೆ.
ಪುಣೆಯ ನೆಕ್ಸ್‍ಟೀರ್ ಆಟೊಮೋಟಿವ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ವಿಭಾಗದ ಅಂತಿಮ ಸೆಮಿಸ್ಟರ್‍ನ 38, ಮೆಕ್ಯಾನಿಕಲ್ ವಿಭಾಗದ 18 ಹಾಗೂ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ವಿಭಾಗದ 21 ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಆಯ್ಕೆ ಮಾಡಿಕೊಂಡರು.
ಆಯ್ಕೆಯಾದ ಅಭ್ಯರ್ಥಿಗಳಿಗೆ ನಾಲ್ಕು ತಿಂಗಳು ಇಂಟರ್ನಶಿಪ್ ಇರಲಿದೆ. ಈ ಅವಧಿಯಲ್ಲಿ ಅವರಿಗೆ ಶಿಷ್ಯ ವೇತನ ದೊರೆಯಲಿದೆ. ಇಂಟರ್ನಶಿಪ್ ಪೂರ್ಣಗೊಳಿಸಿದ ನಂತರ ಆಕರ್ಷಕ ವೇತನ ಸಿಗಲಿದೆ ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು ತಿಳಿಸಿದರು.
ಪಾಲಿಟೆಕ್ನಿಕ್ ನಾಲ್ಕು ದಶಕಗಳಿಂದ ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ಕೊಡುತ್ತ ಬಂದಿದೆ. ಹೀಗಾಗಿ ವಿವಿಧ ಕಂಪನಿಗಳು ಪ್ರತಿ ವರ್ಷ ಪಾಲಿಟೆಕ್ನಿಕ್‍ನಲ್ಲಿ ಕ್ಯಾಂಪಸ್ ಸಂದರ್ಶನ ನಡೆಸುತ್ತಿವೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸುತ್ತಿವೆ ಎಂದು ಪಾಲಿಟೆಕ್ನಿಕ್ ಪ್ರಾಚಾರ್ಯ ರಾಜಶೇಖರ ಮುದ್ದಾ ಹೇಳಿದರು.
ಪಾಲಿಟೆಕ್ನಿಕ್‍ನ ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಸಂಜಯ್ ಭೋಸ್ಲೆ, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ರೇವಣಪ್ಪ ವಾಕಡೆ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಅಂತೇಶ್ವರ ವಾಡಲೆ, ಸಿವಿಲ್ ವಿಭಾಗದ ಮುಖ್ಯಸ್ಥ ಸೂರ್ಯಕಾಂತ ಮೇತ್ರೆ, ವಿಜ್ಞಾನ ವಿಭಾಗದ ಮುಖ್ಯಸ್ಥ ಸಂಗಮೇಶ ಆಣದೂರೆ ಮತ್ತಿತರರು ಇದ್ದರು.

ಕ್ಯಾಂಪಸ್ ಸಂದರ್ಶನದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಯಾಗಿರುವುದಕ್ಕೆ ಪಾಲಿಟೆಕ್ನಿಕ್ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಆಡಳಿತ ಮಂಡಳಿ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಭಾಲ್ಕಿ | ವಕೀಲರ ಹಿತರಕ್ಷಣಾ ಕಾಯ್ದೆ ತಕ್ಷಣ ಜಾರಿಗೆ ತರಲು ಆಗ್ರಹ




