ಆಧುನಿಕ ಯುಗದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಯುವಜನರ ಆಲೋಚನೆಗಳು, ಅಭಿಪ್ರಾಯಗಳು ಮತ್ತು ಕಾರ್ಯಚಟುವಟಿಕೆಗಳು ಅಗತ್ಯ ಎಂದು ಚಿಕ್ಕಮಗಳೂರು ವಿಧಾನ ಸಭಾಕ್ಷೇತ್ರದ ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಕಾನೂನು ಮತ್ತು ಮಾನವ ಹಕ್ಕುಗಳ ಇಲಾಖೆ ವತಿಯಿಂದ ಸೋಮವಾರ ಅತಂರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಗರದ ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಯುವ ಸಂಸತ್ ಸಭೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಜಾಪ್ರಭುತ್ವದ ಬಲವರ್ಧನೆಗೆ ಯುವಶಕ್ತಿಯ ಸಕ್ರಿಯ ಭಾಗವಹಿಸುವಿಕೆ ಅಗತ್ಯವಾಗಿದೆ.ಯುವಜನರು ಕೇವಲ ದೇಶದ ಭವಿಷ್ಯ ಮಾತ್ರವಲ್ಲ, ಇಂದಿನ ಸಮಾಜದ ಬದಲಾವಣೆಯಲ್ಲಿಯೂ ಪ್ರಮುಖ ಶಕ್ತಿಯಾಗಿದ್ದಾರೆ. ಇಂದಿನ ಯುವಜನರಲ್ಲಿ ರಾಜಕೀಯ ಅರಿವು, ಸಾಮಾಜಿಕ ಜವಾಬ್ದಾರಿ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಯುವ ಸಂಸತ್ ಕಾರ್ಯಕ್ರಮ ಮಹತ್ವದ ವೇದಿಕೆಯಾಗಿದೆ. ದೇಶದ ಭವಿಷ್ಯವಾಗಿರುವ ಯುವಜನರು ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನದ ಮೌಲ್ಯಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಯುವ ಸಂಸತ್ ಕಾರ್ಯಕ್ರಮವು ಯುವಜನರಿಗೆ ಸಂಸದೀಯ ವ್ಯವಸ್ಥೆಯ ಬಗ್ಗೆ ಪ್ರಾಯೋಗಿಕ ಅರಿವು ಮೂಡಿಸುತ್ತದೆ ಎಂದು ಶಾಸಕ ಹೆಚ್. ಡಿ ತಮ್ಮಯ್ಯ ತಿಳಿಸಿದರು.

ರಾಜಕೀಯವೆಂದರೆ ಕೇವಲ ಚುನಾವಣೆಗಳಲ್ಲಿ ಸ್ಪರ್ಧಿಸುವುದು ಅಥವಾ ಅಧಿಕಾರ ಪಡೆಯುವುದಷ್ಟೇ ಅಲ್ಲ. ಸಮಾಜದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು, ಜನರ ಅಗತ್ಯಗಳಿಗೆ ಸ್ಪಂದಿಸುವುದು, ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುವುದು ಮತ್ತು ಸಾರ್ವಜನಿಕ ಹಿತಾಸಕ್ತಿಗಾಗಿ ಧ್ವನಿ ಎತ್ತುವುದೂ ರಾಜಕೀಯದ ಭಾಗವಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಯುವಜನರು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ. ಇದರಲ್ಲಿ ಸಂಸತ್ ಮಾದರಿಯಲ್ಲಿ ಸಭಾಧ್ಯಕ್ಷರು, ಆಡಳಿತ ಪಕ್ಷದ ಸದಸ್ಯರು ಹಾಗೂ ವಿರೋಧ ಪಕ್ಷದ ಸದಸ್ಯರುಗಳು ಒಳಗೊಂಡಿರುತ್ತಾರೆ. ಯುವ ಸಂಸತ್ ಕಾರ್ಯಕ್ರಮದ ಮೂಲಕ ನಿರುದ್ಯೋಗ, ಶಿಕ್ಷಣ, ಆರೋಗ್ಯ, ಮಹಿಳಾ ಸುರಕ್ಷತೆ, ಪರಿಸರ ಸಂರಕ್ಷಣೆ, ರೈತರ ಸಮಸ್ಯೆಗಳು ಹಾಗೂ ಸಾಮಾಜಿಕ ಅಭಿವೃದ್ಧಿಯಂತಹ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಬಹುದು. ಇದರಿಂದ ಯುವಜನರಲ್ಲಿ ಸಮಾಜದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಮನೋಭಾವ ಬೆಳೆಯುತ್ತದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಲಕ್ಷಾಂತರ ಮೌಲ್ಯದ ಆಭರಣ, ನಗದು ಕಳ್ಳತನ
ಯುವಜನರು ಶಿಕ್ಷಣ, ತಂತ್ರಜ್ಞಾನ, ಉದ್ಯೋಗ, ಪರಿಸರ ಸಂರಕ್ಷಣೆ, ಮಹಿಳಾ ಸುರಕ್ಷತೆ, ಭ್ರಷ್ಟಾಚಾರ ನಿಯಂತ್ರಣ ಸೇರಿದಂತೆ ಹಲವು ವಿಷಯಗಳ ಬಗ್ಗೆ ಉತ್ತಮ ಅರಿವು ಹೊಂದಿದ್ದಾರೆ. ಇಂತಹ ವಿಷಯಗಳನ್ನು ರಾಜಕೀಯ ವೇದಿಕೆಗಳಲ್ಲಿ ಚರ್ಚಿಸುವ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯವಿದೆ ಎಂದು ಶಾಸನ ಹೆಚ್. ಡಿ ತಮ್ಮಯ್ಯ ಹೇಳಿದರು.




