ಆಮ್ ಆದ್ಮಿ ಪಕ್ಷದ (AAP) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ನಾಯಕರು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರ ವಿರುದ್ಧ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ದಾಖಲಾಗಿರುವ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೆರವು ನೀಡಲು ಹಿರಿಯ ವಕೀಲೆ ರಾಜ್‌ದೀಪಾ ಬೆಹುರಾ ಅವರನ್ನು ಅಮಿಕಸ್ ಕ್ಯೂರಿ (ನ್ಯಾಯಾಲಯದ ಸ್ನೇಹಿತೆ)ಯಾಗಿ ದೆಹಲಿ ಹೈಕೋರ್ಟ್ ಶುಕ್ರವಾರ ನೇಮಕ ಮಾಡಿದೆ.
ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಮತ್ತು ರವೀಂದರ್ ದುಡೇಜಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.
ಹೈಕೋರ್ಟ್ ಸ್ವಯಂಪ್ರೇರಿತವಾಗಿ (Suo Motu) ದಾಖಲಿಸಿಕೊಂಡಿರುವ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ಮತ್ತು ಪತ್ರಕರ್ತ ಸೌರವ್ ದಾಸ್ ಹಾಗೂ ಆಪ್ ನಾಯಕರು ಜಂಟಿಯಾಗಿ ನ್ಯಾಯಮೂರ್ತಿಗಳನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತ ಅಭಿಯಾನ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಮತ್ತೊಂದು ಕ್ರಿಮಿನಲ್ ನಿಂದನೆ ಪ್ರಕರಣ ಇವೆರಡನ್ನೂ ಒಟ್ಟಿಗೆ ಸೇರಿಸಲಾಗಿದ್ದು, ವಿಭಾಗೀಯ ಪೀಠವು ಒಟ್ಟಿಗೇ ವಿಚಾರಣೆ ನಡೆಸುತ್ತಿದೆ.
ದೆಹಲಿ ಅಬಕಾರಿ ನೀತಿ ಹಗರಣದ ಪ್ರಕರಣದಲ್ಲಿ ಆರೋಪಿಗಳಾಗಿರುವ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಇತರರು, ತಮ್ಮ ಪ್ರಕರಣದ ವಿಚಾರಣೆಯಿಂದ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು ಹಿಂದೆ ಸರಿಯಬೇಕು ಎಂದು ಏ.20ರಂದು ಕೋರಿದ್ದರು. ಆದರೆ ನ್ಯಾಯಮೂರ್ತಿಗಳು ಈ ಮನವಿ ತಿರಸ್ಕರಿಸಿದ್ದರು.
ಈ ಬೆನ್ನಲ್ಲೇ, ಮೇ 14 ರಂದು ನ್ಯಾ. ಶರ್ಮಾ ಅವರು ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಮತ್ತು ದುರ್ಗೇಶ್ ಪಾಠಕ್ ಸೇರಿದಂತೆ ಆಪ್ ನಾಯಕರ ವಿರುದ್ಧ ಸ್ವಯಂಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಿದ್ದರು.
ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಿದ ಬಳಿಕ, ಅಬಕಾರಿ ನೀತಿ ಹಗರಣದ ಮುಖ್ಯ ಪ್ರಕರಣವನ್ನು ತಾವೇ ಮುಂದುವರಿಸಿದರೆ ಅದು ಪೂರ್ವಗ್ರಹ ಪೀಡಿತ ಎಂಬ ಭಾವನೆ ಮೂಡಿಸಬಹುದು ಎಂದು ಹೇಳಿದ ನ್ಯಾ.ಸ್ವರ್ಣಕಾಂತ ಶರ್ಮಾ, ಆ ಪ್ರಕರಣವನ್ನು ಮತ್ತೊಂದು ಪೀಠಕ್ಕೆ ವರ್ಗಾಯಿಸಿದ್ದರು. ಬಳಿಕ, ಮೇ.19ರಂದು ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠವು ಈ ನ್ಯಾಯಾಂಗ ನಿಂದನೆಗೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದ್ದು, ನಾಲ್ಕು ವಾರಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಆದೇಶಿಸಿದೆ.




