ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೂ ಮುನ್ನ ನಡೆದ ಎಸ್‌ಐಆರ್‌ನಲ್ಲಿ ಬರೋಬ್ಬರಿ 91 ಲಕ್ಷ ಮತದಾರರನ್ನು ಮತಪಟ್ಟಿಯಿಂದ ಹೊರಹಾಕಲಾಗಿದೆ. ಈ ಪೈಕಿ, 27 ಲಕ್ಷ ಮತದಾರರು ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಗಳನ್ನು ವಿಚಾರಣೆ ನಡೆಸಿ, ವಿಲೇವಾರಿ ಮಾಡಲು 19 ಅಪೀಲು ನ್ಯಾಯಮಂಡಳಿಗಳನ್ನು ಸುಪ್ರೀಂ ಕೋರ್ಟ್ ಸ್ಥಾಪಿಸಿದೆ. ಮಾರ್ಚ್ 20ರಂದು ಸ್ಥಾಪನೆಯಾದ ಈ ನ್ಯಾಯಮಂಡಳಿಗಳಲ್ಲಿ 12 ಮಂಡಳಿಗಳು ಅಂದಿನಿಂದ ಮೇ 14ರವೆಗೆ ಕೇವಲ 6,581 (ಶೇ.0.26 ರಷ್ಟು) ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಿವೆ. ಅದರಲ್ಲಿ, 4,043 ಹೆಸರುಗಳನ್ನು ಮರಳಿ ಮತಪಟ್ಟಿಗೆ ಸೇರಿಸಲಾಗಿದ್ದು, ಉಳಿದ 1,267 ಮಂದಿಯ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ವರದಿಯಾಗಿದೆ.
ರಾಜ್ಯದ 23 ಜಿಲ್ಲೆಗಳ ಪೈಕಿ 17 ಜಿಲ್ಲೆಗಳನ್ನು ಒಳಗೊಂಡಿರುವ ಈ 12 ನ್ಯಾಯಮಂಡಳಿಗಳಿಂದ ಅಧಿಕೃತ ದತ್ತಾಂಶಗಳನ್ನು ಪಡೆದುಕೊಂಡಿರುವುದಾಗಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ಅದರಂತೆ; “ತಿರಸ್ಕರಿಸಲಾದ 1,271 ಮೇಲ್ಮನವಿಗಳ ಸ್ಥಿತಿಗತಿಯ ಬಗ್ಗೆ ದತ್ತಾಂಶದಲ್ಲಿ ಉಲ್ಲೇಖವಿಲ್ಲ. ಆದರೂ, ಕೋಲ್ಕತ್ತಾ ಮತ್ತು ದೆಹಲಿಯ ಚುನಾವಣಾ ಆಯೋಗದ ಮೂಲಗಳು ತಿಳಿಸಿರುವಂತೆ, ಇವುಗಳಲ್ಲಿ ಕೆಲವು ಮೇಲ್ಮನವಿಗಳನ್ನು ಚುನಾವಣೆಗೆ ಮೊದಲು ಪ್ರಕಟಿಸಲಾದ ಪೂರಕ ಪಟ್ಟಿಗಳ ಮೂಲಕ ಈಗಾಗಲೇ ಮತದಾರರ ಪಟ್ಟಿಗೆ ಸೇರ್ಪಡೆಗೊಂಡವರೇ ಸಲ್ಲಿಸಿದ್ದಾರೆ. ಹೀಗಾಗಿ, ಅವರ ಮೇಲ್ಮನವಿಗಳ ಮೇಲೆ ಯಾವುದೇ ಪ್ರತ್ಯೇಕ ಕ್ರಮದ ಅಗತ್ಯವಿರಲಿಲ್ಲ” ಎಂದು ತಿಳಿಸಿದೆ.
ವಿಲೇವಾರಿಯಾದ ಒಟ್ಟು ಪ್ರಕರಣಗಳ ಪೈಕಿ 27%ರಷ್ಟು (ಅಂದರೆ 1,777) ಮೇಲ್ಮನವಿಗಳು ಕೋಲ್ಕತ್ತಾ ಉತ್ತರ ಮತ್ತು ಕೋಲ್ಕತ್ತಾ ದಕ್ಷಿಣ ಜಿಲ್ಲೆಗಳಿಗೆ ಸಂಬಂಧಿಸಿದ್ದಾಗಿದ್ದವು. ಇವುಗಳನ್ನು ಕಲ್ಕತ್ತಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಟಿ. ಎಸ್. ಶಿವಜ್ಞಾನಂ ಅವರ ನೇತೃತ್ವದ ನ್ಯಾಯಮಂಡಳಿ ನಿರ್ವಹಿಸುತ್ತಿತ್ತು. ಅವರು ಮೇ 7 ರಂದು ವೈಯಕ್ತಿಕ ಕಾರಣಗಳನ್ನು ನೀಡಿ ರಾಜೀನಾಮೆ ನೀಡಿದ್ದರು. ಸದ್ಯ ಈ ಎರಡು ಜಿಲ್ಲೆಗಳಲ್ಲಿ ಒಟ್ಟು 51,234 ಮೇಲ್ಮನವಿಗಳು ಬಾಕಿ ಉಳಿದಿವೆ.
ಅತಿ ಹೆಚ್ಚು ಮೇಲ್ಮನವಿಗಳು ಸಲ್ಲಿಕೆಯಾಗಿದ್ದ ಮತ್ತು ಅತಿ ಹೆಚ್ಚು ಹೆಸರುಗಳನ್ನು ಕೈಬಿಡಲಾಗಿದ್ದ ಮುರ್ಷಿದಾಬಾದ್ ಮತ್ತು ಮಾಲ್ಡಾ ಜಿಲ್ಲೆಗಳಲ್ಲಿ ಮೇ 14ರ ವೇಳೆಗೆ, 6,29,392 ಮೇಲ್ಮನವಿಗಳಿದ್ದ ಮುರ್ಷಿದಾಬಾದ್‌ನಲ್ಲಿ 112 ಮತ್ತು 5,26,215 ಮೇಲ್ಮನವಿಗಳಿದ್ದ ಮಾಲ್ಡಾದಲ್ಲಿ 185 ಪ್ರಕರಣಗಳು ಮಾತ್ರವೇ ವಿಲೇವಾರಿಯಾಗಿವೆ.
ಈ 12 ನ್ಯಾಯಮಂಡಳಿಗಳ ಮುಂದೆ 98 ಮೇಲ್ಮನವಿದಾರರು ಆನ್‌ಲೈನ್ ಮೂಲಕ ಮತ್ತು 21 ಜನರು ಆಫ್‌ಲೈನ್ ಮೂಲಕ ಹಾಜರಾಗಿದ್ದರು.
ಭಾರತೀಯ ಚುನಾವಣಾ ಆಯೋಗ ಮತ್ತು ಹಿಂದಿನ ಟಿಎಂಸಿ ಸರ್ಕಾರದ ನಡುವಿನ ಪರಸ್ಪರ ಅಪನಂಬಿಕೆಯನ್ನು ಗಮನಿಸಿದ ಸುಪ್ರೀಂ ಕೋರ್ಟ್, ಫೆಬ್ರವರಿ 20 ರಂದು ಪಶ್ಚಿಮ ಬಂಗಾಳದಲ್ಲಿ ಮತದಾರರ ಅರ್ಹತೆಯನ್ನು ನಿರ್ಧರಿಸುವ ಜವಾಬ್ದಾರಿಯನ್ನು ನ್ಯಾಯಾಂಗ ಅಧಿಕಾರಿಗಳಿಗೆ ವಹಿಸಿತ್ತು. ನ್ಯಾಯಾಲಯದ ಆದೇಶದಂತೆ ಕೋಲ್ಕತ್ತಾ ಹೈಕೋರ್ಟ್ ಈ ಕಾರ್ಯಕ್ಕಾಗಿ ಸುಮಾರು 700 ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸಿತ್ತು. ಈ ಅಧಿಕಾರಿಗಳು ಎಸ್‌ಐಅರ್ ಪ್ರಕ್ರಿಯೆ ಸಂದರ್ಭದಲ್ಲಿ ಸಲ್ಲಿಕೆಯಾದ ಗುರುತಿನ ದಾಖಲೆಗಳಲ್ಲಿ ‘ತಾರ್ಕಿಕ ವ್ಯತ್ಯಾಸಗಳನ್ನು’ ಹೊಂದಿದ್ದ ಕಾರಣಕ್ಕೆ ಚುನಾವಣಾ ಆಯೋಗದ ಆಲ್ಗಾರಿದಮ್ ಮೂಲಕ ಗುರುತಿಸಲ್ಪಟ್ಟ 60.06 ಲಕ್ಷ ಮತದಾರರ ಅರ್ಹತೆಯನ್ನು ಪರಿಶೀಲಿಸಿದ್ದರು. ಏಪ್ರಿಲ್ 23 ಮತ್ತು 29 ರಂದು ನಡೆದ ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳ ಮೊದಲು, ಅವರು ಒಟ್ಟು 27.16 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಹೊರಗಿಟ್ಟಿದ್ದರು.
ಈ ಲೇಖನ ಓದಿದ್ದೀರಾ?: ಅಪ್ಪಳಿಸಲಿದೆ ಆರ್ಥಿಕ ದುರ್ದಿನಗಳ ಸುಂಟರಗಾಳಿ: ಈ ಹಿಂದಿನಂತೆ ಈ ಸಲವೂ ನಿಜವಾಗುತ್ತಾ ರಾಹುಲ್ ಭವಿಷ್ಯ?
ನ್ಯಾಯಾಂಗ ಅಧಿಕಾರಿಗಳ ಈ ನಿರ್ಧಾರದಿಂದ ಸಂತ್ರಸ್ತರಾದವರಿಗೆ ಮೇಲ್ಮನವಿ ಸಲ್ಲಿಸಲು ಒಂದು ವ್ಯವಸ್ಥೆಯನ್ನು ಕಲ್ಪಿಸುವಂತೆ ಮಾರ್ಚ್ 10 ರಂದು ಸುಪ್ರೀಂ ಕೋರ್ಟ್ ಆದೇಶಿಸಿತು. ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸುಜಯ್ ಪಾಲ್ ಅವರ ಶಿಫಾರಸಿನ ಮೇರೆಗೆ, ಚುನಾವಣಾ ಆಯೋಗವು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರನ್ನು ಒಳಗೊಂಡ 19 ಅಪೀಲು ನ್ಯಾಯಮಂಡಳಿಗಳನ್ನು ಮಾರ್ಚ್ 20 ರಂದು ಅಧಿಸೂಚಿಸಿತು.
ಚುನಾವಣೆ ಹತ್ತಿರವಾಗುತ್ತಿದ್ದರೂ ಈ ನ್ಯಾಯಮಂಡಳಿಗಳ ಕಾರ್ಯವೈಖರಿ ಮಂದಗತಿಯಲ್ಲಿತ್ತು. ಮತದಾನಕ್ಕೆ 48 ಗಂಟೆಗಳ ಮೊದಲು ನ್ಯಾಯಮಂಡಳಿಗಳಿಂದ ಅನುಮತಿ ಪಡೆದ ಎಲ್ಲರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದ ನಂತರ, ಕೇವಲ 1,607 ಹೆಸರುಗಳನ್ನು ಮಾತ್ರವೇ ಮತಪಟ್ಟಿಗೆ ಮರುಸೇರ್ಪಡೆ ಮಾಡಲಾಗಿತ್ತು. ಇದರ ಪರಿಣಾಮವಾಗಿ, ಪಟ್ಟಿಯಿಂದ ಕೈಬಿಡಲಾದ ಉಳಿದ 27.16 ಲಕ್ಷ ಮತದಾರರು ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಸಾಧ್ಯವಾಗಲೇ ಇಲ್ಲ.



