ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ. ಆರು ಮಂದಿ ಆರೋಪಿಗಳಿಗೆ ನ್ಯಾಯಾಧೀಶರು ಮರಣದಂಡನೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಗಂಗಾವತಿ ನಗರದ ಹೃದಯಭಾಗದಲ್ಲಿ ನಡುರಾತ್ರಿ ಬಿಜೆಪಿ ಮುಖಂಡ ವೆಂಕಟೇಶ ಕುರುಬರ ಕೊಲೆ ಮಾಡಿದ್ದ ಹಂತಕರಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದ್ದು, ಗಲ್ಲು ಶಿಕ್ಷೆಯ ತೀರ್ಪು ನೀಡಿ ಆದೇಶ ಹೊರಡಿಸಿದೆ.
ಹಳೆಯ ದ್ವೇಷದ ಹಿನ್ನೆಲೆಯಲ್ಲಿ 2025ರ ಅಕ್ಟೋಬರ್ 7ರಂದು ವೆಂಕಟೇಶ್‌ನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ ಅವರು ಆರು ಮಂದಿ ಪ್ರಮುಖ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಪ್ರಕರಣದ A1 ಆರೋಪಿ ರವಿ, ವಿಜಯ ಅಲಿಯಾಸ್ ಮೈಲಾರಿ, ಧನರಾಜ್, ಭೀಮ ಅಲಿಯಾಸ್ ಭರತ್, ಸಲಿಂ ಅಹ್ಮದ್ ರಫಿಕ್, ಗಂಗಾಧರ್ ಗೌಳಿ ಈ ಆರು ಜನರಿಗೆ ಮರಣದಂಡನೆ ಹಾಗೂ ತಲಾ ಮೂರು ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಇದನ್ನೂ ಓದಿ> ಕೊಪ್ಪಳ | ಕಿಮ್ಸ್ ಆಡಳಿತಾಧಿಕಾರಿ ಬಿ ಕಲ್ಲೇಶ ಮನೆ ಮೇಲೆ ಲೋಕಾಯುಕ್ತ ದಾಳಿ
2023ರ ಮಾರ್ಚ್‌ನಲ್ಲಿ ವೆಂಕಟೇಶ್ ಬೆಂಬಲಿಗ ಮಾರುತಿ ಅಲಿಯಾಸ್ ಸಲಗ ಎಂಬಾತನ ಮೇಲೆ ರವಿ ಮತ್ತವನ ಗುಂಪು ಕೊಲೆಗೆ ಯತ್ನಿಸಿತ್ತು. ಎರಡು ವರ್ಷಗಳ ಕಾಲ ಕೋಮಾದಲ್ಲಿದ್ದ ಮಾರುತಿ 2025ರಲ್ಲಿ ಸಾವನ್ನಪ್ಪಿದ್ದ. ಈ ಪ್ರಕರಣದಲ್ಲಿ ಮಾರುತಿ ಕುಟುಂಬದ ವೆಂಕಟೇಶ್ ಕುರುಬರ ಹೆಸರು ತಳುಕು ಹಾಕಿಕೊಂಡಿತ್ತು. ಇದೇ ಕಾರಣಕ್ಕೆ ವೆಂಕಟೇಶ್ ಮೇಲೆ ದ್ವೇಷ ಸಾಧಿಸಿದ್ದ ರವಿ ಮತ್ತು ಅವನ ಗುಂಪು, ಅಕ್ಟೋಬರ್ 7ರ ರಾತ್ರಿ ವೆಂಕಟೇಶ್‌ನ ಕೊಲೆ ಮಾಡಿ ಪರಾರಿಯಾಗಿದ್ದರು.
ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದ ಗಂಗಾವತಿ ನಗರ ಪೊಲೀಸರು, ಅಪರಾಧಿ ರವಿ ಸೇರಿ ಒಟ್ಟು 12 ಮಂದಿಯನ್ನು ಜೈಲಿಗಟ್ಟಿದ್ದರು. ಪೊಲೀಸರು ತನಿಖೆ ನಡೆಸಿ 927 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಗಂಗಾವತಿ ನ್ಯಾಯಾಲಯ ಆರು ಮಂದಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಮೂರು ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. ಉಳಿದ ಆರು ಮಂದಿ ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.




