ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ-NRLM ಯೋಜನೆ(ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ) ಅಡಿ ಬರುವ ‘ಸಂಜೀವಿನಿ ಒಕ್ಕೂಟ’ದ ಅನುದಾನವನ್ನು ಲೂಟಿ ಮಾಡಲು, ಸತ್ತವರ ಹೆಸರನ್ನೂ ಬಿಡದೆ ಭಾರೀ ಅಕ್ರಮ ಎಸಗಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಒಕ್ಕೂಟದ ಜಂಟಿ ಖಾತೆಗೆ ಸಹಿ ಮಾಡುವ ಅಧಿಕಾರ ಹೊಂದಿದ್ದ ಕಾರ್ಯದರ್ಶಿ ಮೀನಾಕ್ಷಿ ಮೃತಪಟ್ಟಿದ್ದರೂ, ಆಕೆಯ ಸಾವಿನ ವಿಚಾರವನ್ನು ಬ್ಯಾಂಕ್‌ಗೆ ತಿಳಿಸದೆ, ಮೃತಪಡುವ ಮುನ್ನ ಆಕೆ ಮಾಡಿದ್ದ ಸಹಿಯಿರುವ ಖಾಲಿ ಚೆಕ್‌ಗಳನ್ನು ದುರ್ಬಳಕೆ ಮಾಡಿಕೊಂಡು ಬ್ಯಾಂಕ್‌ನಿಂದ ಲಕ್ಷಾಂತರ ರೂಪಾಯಿಗಳನ್ನು ಅಕ್ರಮವಾಗಿ ವಿತ್‌ಡ್ರಾ ಮಾಡಲಾಗುತ್ತಿದೆ ಎಂಬುದು ದಾಖಲೆ ಸಹಿತ ಸಾಬೀತಾಗಿದೆ.
ಲಭ್ಯವಾಗಿರುವ ಮರಣ ಪ್ರಮಾಣಪತ್ರದ ದಾಖಲೆಯ ಪ್ರಕಾರ, ವಳಗೆರೆಹಳ್ಳಿ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಕಾರ್ಯದರ್ಶಿಯಾಗಿದ್ದ ಮೀನಾಕ್ಷಿ(ಪತಿ: ಮನುಬ್ರಹ್ಮಾಚಾರಿ) 2024ರ ಫೆಬ್ರವರಿ 13 ರಂದೇ ಮೃತಪಟ್ಟಿದ್ದಾರೆ. ಆದರೆ, ಬೆಸಗರಹಳ್ಳಿ ಶಾಖೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿರುವ ಒಕ್ಕೂಟದ ಖಾತೆ ಸಂಖ್ಯೆ: 12326100014539ರಿಂದ ಹಣ ವರ್ಗಾವಣೆ ಮಾಡಲು 2025ರ ಏಪ್ರಿಲ್ 02ರಂದು ಬ್ಯಾಂಕ್‌ಗೆ ಚೆಕ್‌ಗಳನ್ನು ನೀಡಲಾಗಿದೆ.
ಒಕ್ಕೂಟದ ಅಧ್ಯಕ್ಷೆ ಸವಿತಾ ಹಾಗೂ ಖಜಾಂಚಿ ವಿಜಯ ಅವರೊಂದಿಗೆ, 2024ರಲ್ಲೇ ಮೃತಪಟ್ಟಿರುವ ಕಾರ್ಯದರ್ಶಿ ಮೀನಾಕ್ಷಿ ಅವರ ಸಹಿಯೂ ಈ ಚೆಕ್‌ಗಳಲ್ಲಿದೆ. ಮೃತ ಮಹಿಳೆಯ ಸಹಿ ಬಳಸಿ, ಏಪ್ರಿಲ್ 2ರಂದು ಒಟ್ಟು ಎರಡು ಚೆಕ್‌ಗಳ ಮೂಲಕ ಕ್ರಮವಾಗಿ ₹1,11,100 ಹಾಗೂ ₹7,000 ‘NEFT’ ಮುಖಾಂತರ ವರ್ಗಾವಣೆ ಮಾಡಲಾಗಿದೆ. ಲಭ್ಯವಾಗಿರುವ ಈ ಎರಡು ಚೆಕ್‌ಗಳು ಕೇವಲ ಉದಾಹರಣೆಯಷ್ಟೇ ಆಗಿದ್ದು, ಇದೇ ರೀತಿ ಮಾದರಿ ಪಂಚಾಯಿತಿ ಜಿಪಿಎಲ್ಎಫ್‌ಗಳಲ್ಲಿ ಹಲವು ಚೆಕ್‌ಗಳನ್ನು ಬಳಸಿ ನಿರಂತರವಾಗಿ ಹಣವನ್ನು ವಿತ್‌ಡ್ರಾ ಮಾಡಲಾಗಿದೆ. ಹೀಗೆ ಜಿಪಿಎಲ್ಎಫ್‌ಗಳಲ್ಲಿ ಅನೇಕ ಅನುದಾನಗಳನ್ನು ನಿರಂತರವಾಗಿ ಲೂಟಿ ಮಾಡಲಾಗಿದೆ ಎನ್ನಲಾಗುತ್ತಿದೆ.
This video cannot be played in your browser. Open the video directly

ಈ ಪ್ರಕರಣದಲ್ಲಿ ಒಕ್ಕೂಟದ ಅಧ್ಯಕ್ಷೆ ಮತ್ತು ಖಜಾಂಚಿ ಅಮಾಯಕರಾಗಿದ್ದು, ಅವರ ಅಜ್ಞಾನವನ್ನು ಬಳಸಿಕೊಂಡು ಅಧಿಕಾರಿಗಳೇ ಈ ಬೃಹತ್ ಲೂಟಿಗೆ ಸ್ಕೆಚ್ ಹಾಕಿದ್ದಾರೆ ಎಂಬ ಸತ್ಯ ಬಯಲಾಗಿದೆ. ಈ ಅಕ್ರಮದ ಬಗ್ಗೆ ಸ್ವತಃ ಆ ಮಹಿಳೆಯರೇ ಜಿಲ್ಲಾ ಪಂಚಾಯತಿ ಸಿಇಒ ಅವರಿಗೆ ದೂರು ನೀಡಿದ್ದಾರೆ. ಈ ವಂಚನೆಯ ಅಸಲಿ ರೂವಾರಿಗಳೆಂದರೆ, ಆ ಸಮಯದಲ್ಲಿ ವಲಯ ಮೇಲ್ವಿಚಾರಕನಾಗಿದ್ದ(Cluster Supervisor) ಅಮೃತ್‌ರಾಜ್, ಜಿಪಿಎಲ್‌ಎಫ್ ಅಸಿಸ್ಟೆಂಟ್ ನವ್ಯಶ್ರೀ ಹಾಗೂ ಇಡೀ ಯೋಜನೆಯ ಜವಾಬ್ದಾರಿ ಹೊತ್ತಿರುವ ಟಿಪಿಎಂ ರವೀಂದ್ರೇಗೌಡ ಎನ್ನಲಾಗುತ್ತಿದೆ.

ಈ ಮೂವರು ಅಧಿಕಾರಿಗಳು ತಮ್ಮ ಹೊಣೆಗಾರಿಕೆಯನ್ನು ಮರೆತು, ಮೃತಪಟ್ಟವರ ಮಾಹಿತಿಯನ್ನು ಮೇಲಧಿಕಾರಿಗಳಿಂದ ಮುಚ್ಚಿಟ್ಟು, ಅಮಾಯಕ ಮಹಿಳೆಯರನ್ನು ಬಳಸಿಕೊಂಡು ನಕಲಿ ಬಿಲ್‌ಗಳ ಮೂಲಕ ಹಣ ಲೂಟಿ ಮಾಡಿದ್ದಾರೆ. ಈ ಬೃಹತ್ ವಂಚನೆಯಲ್ಲಿ ಬೆಸಗರಹಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಮ್ಯಾನೇಜರ್ ಪಾತ್ರವೂ ಅನುಮಾನಾಸ್ಪದವಾಗಿದೆ. ನಿಯಮಾನುಸಾರ ಮರಣ ಪ್ರಮಾಣಪತ್ರವನ್ನು ಪಡೆದು ಮೃತರ ಹೆಸರನ್ನು ಖಾತೆಯಿಂದ ತೆಗೆದುಹಾಕಬೇಕಿತ್ತು. ಆದರೆ, ಒಂದು ವರ್ಷದ ಹಿಂದೆಯೇ ಮೃತಪಟ್ಟಿರುವ ವ್ಯಕ್ತಿಯ ಸಹಿ ಇರುವ ಚೆಕ್ ಕುರಿತು ಯಾವುದೇ ರೀತಿಯ ಪರಿಶೀಲನೆ ನಡೆಸದೆ ಪಾಸ್ ಮಾಡಿರುವ ಬ್ಯಾಂಕ್ ಅಧಿಕಾರಿಗಳ ಅಸಡ್ಡೆ ಗಂಭೀರ ಸ್ವರೂಪದ್ದಾಗಿದೆ.
ಇದನ್ನೂ ಓದಿದ್ದೀರಾ? ರಾಮನಗರ ಪಿಡಬ್ಲ್ಯೂಡಿ ಇಲಾಖೆಯಲ್ಲಿ ʼಜಿಎಸ್‌ಟಿ ಹಗರಣʼ: 12 ಕೋಟಿ ರೂ. ಗೋಲ್‌ಮಾಲ್ ಶಂಕೆ, ಆರ್‌ಟಿಐನಲ್ಲಿ ಬಯಲು
ಇದು ಗಂಭೀರ ಕ್ರಿಮಿನಲ್ ಅಪರಾಧ(Ignorance of law is no excuse). ತಾಲೂಕು ಪಂಚಾಯಿತಿ ಇಒ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರು ಈಗ ಅಕ್ರಮ ಬಯಲಾಗಿರುವುದರಿಂದ, ಮೇಲಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ಹಣ ನುಂಗಿರುವ ಮೇಲ್ವಿಚಾರಕ ಅಮೃತ್‌ರಾಜ್, ನವ್ಯಶ್ರೀ, ಟಿಪಿಎಂ ರವೀಂದ್ರೇಗೌಡ ಹಾಗೂ ಶಾಮೀಲಾಗಿರುವ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಮಂಡ್ಯ ಸಿಇಒ ಹಾಗೂ ಮದ್ದೂರು ಇಒ ಅವರುಗಳು ತಕ್ಷಣವೇ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ(ಫೋರ್ಜರಿ ಮತ್ತು ವಂಚನೆ) ದಾಖಲಿಸಬೇಕು ಎಂದು ಒಕ್ಕೂಟದ ಮಹಿಳೆಯರು ಆಗ್ರಹಿಸಿದ್ದಾರೆ. ಬಡ ಮಹಿಳೆಯರ ಸಬಲೀಕರಣಕ್ಕಾಗಿ ಮೀಸಲಿಟ್ಟ ಸರ್ಕಾರಿ ಹಣವನ್ನು ಲೂಟಿ ಹೊಡೆಯುತ್ತಿರುವ ಈ ಜಾಲದ ವಿರುದ್ಧ ಮೇಲಧಿಕಾರಿಗಳು ಯಾವ ರೀತಿಯ ಕಾನೂನು ಕ್ರಮ ಜರುಗಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.







