ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಹೊಣೆ ಚುನಾವಣಾ ಆಯೋಗದ್ದು. ಆದರೆ ಕಳೆದ 10 ವರ್ಷಗಳಿಗೂ ಅಧಿಕ ಸಮಯದಿಂದ ನಡೆಯುತ್ತಿರುವುದು ತದ್ವಿರುದ್ಧ. ಆಯೋಗದ ವಿರುದ್ಧ ಎಷ್ಟು ಆರೋಪಗಳು ಕೇಳಿಬಂದರೂ ಒಂದೇ ವಾದದ ಸುತ್ತ ಆಯೋಗ ಪ್ರದಕ್ಷಿಣೆ ಹಾಕುತ್ತಿದೆ. 'ನಾವು ಎಲ್ಲ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುತ್ತೇವೆ' ಎಂದು ಹೇಳುತ್ತಲೇ ಇದೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣೆಗಳು ಎಂದಿಗೂ ರಾಜಕೀಯ ಜಿದ್ದಾಜಿದ್ದಿ ಮತ್ತು ವಿವಾದಗಳ ಕೇಂದ್ರಬಿಂದುವಾಗಿಯೇ ಉಳಿದಿದೆ. 2026ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೂ ವಿವಾದಗಳು ಮುಂದುವರಿದಿದೆ. ಈ ಬಾರಿ ಬಿಜೆಪಿಯ ಬಾಲಂಗೋಚಿಯಂತೆ ಬಿಂಬಿತಗೊಳ್ಳುತ್ತಿರುವ ಚುನಾವಣಾ ಆಯೋಗದ ಪಾತ್ರದ ಬಗ್ಗೆ ಹಲವು ಗಂಭೀರ ಆರೋಪಗಳು ಕೇಳಿಬಂದಿವೆ. ಚುನಾವಣೆಗೂ ಮುನ್ನ ತರಾತುರಿಯಲ್ಲಿ ನಡೆಸಲಾದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು ಚುನಾವಣೆಯ ಹಲವು ಹಂತಗಳಲ್ಲಿ ನಡೆದ ಅಕ್ರಮಗಳು ಜನಸಾಮಾನ್ಯರು, ವಿವಿಧ ಪಕ್ಷಗಳಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಆಯೋಗ ಮಾತ್ರ ಎಲ್ಲವೂ ಸರಿಯಾಗಿದೆ ಎಂಬ ತಮ್ಮ ಎಂದಿನ ವಾದ ನಡುವಿಟ್ಟು ಅಲ್ಲೇ ಪ್ರದಕ್ಷಿಣೆ ಹಾಕುತ್ತಿದೆ. ನಾವು ಎಲ್ಲ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುತ್ತೇವೆ ಎಂದು ಹೇಳುತ್ತಲೇ ಇದೆ.
ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಹೊಣೆ ಚುನಾವಣಾ ಆಯೋಗದ್ದು. ಆದರೆ ಕಳೆದ 10 ವರ್ಷಗಳಿಗೂ ಅಧಿಕ ಸಮಯದಿಂದ ನಡೆಯುತ್ತಿರುವುದು ತದ್ವಿರುದ್ಧ. ಆಯೋಗವು ವಿವಿಧ ರಾಜಕೀಯ ಪಕ್ಷಗಳಿಂದ ಟೀಕೆ ಮತ್ತು ಕಾನೂನು ಹೋರಾಟಗಳನ್ನು ಎದುರಿಸುತ್ತಿದೆ. ಮುಖ್ಯವಾಗಿ ಅಧಿಕಾರಿಗಳ ವರ್ಗಾವಣೆ, ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಇವಿಎಂ ಅಕ್ರಮಗಳ ವಿಚಾರದಲ್ಲಿ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಪಶ್ಚಿಮ ಬಂಗಾಳದಲ್ಲಂತೂ ಬಿಜೆಪಿಯ ಎಕ್ಸ್ ಖಾತೆ ಯಾವುದು? ಚುನಾವಣೆ ಆಯೋಗದ ಎಕ್ಸ್ ಖಾತೆ ಯಾವುದು? ಎಂದು ನಾವು ಗುರುತಿಸಲು ಸಾಧ್ಯವಾಗದಷ್ಟೂ ಪರಿಸ್ಥಿತಿ ಕೈ ಮೀರಿದೆ. ಟಿಎಂಸಿ ಪಕ್ಷಕ್ಕೆ ಬಹಿರಂಗವಾಗಿ ಬೆದರಿಕೆ ಹಾಕುವ ಹಂತಕ್ಕೆ ಚುನಾವಣಾ ಆಯೋಗ ತಲುಪಿದೆ.
ಇದನ್ನು ಓದಿದ್ದೀರಾ? ಬಂಗಾಳದಲ್ಲಿ ಚುನಾವಣಾ ಹೈಡ್ರಾಮಾ: ಸ್ಟ್ರಾಂಗ್ ರೂಮ್‌ನಲ್ಲಿ ನಡುರಾತ್ರಿ ನಡೆದಿದ್ದೇನು?
ಅಧಿಕಾರಿಗಳ ಏಕಪಕ್ಷೀಯ ವರ್ಗಾವಣೆ
ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಮತ್ತು ಹಲವಾರು ಜಿಲ್ಲಾಧಿಕಾರಿಗಳನ್ನು (DM) ಏಕಪಕ್ಷೀಯವಾಗಿ ವರ್ಗಾವಣೆ ಮಾಡಿತು. ಇದನ್ನು ಪ್ರಶ್ನಿಸಿದಾಗ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಡೆಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಯೋಗ ಹೇಳಿಕೊಂಡಿದೆ. “ರಾಜ್ಯ ಸರ್ಕಾರದ ಆಡಳಿತ ಯಂತ್ರವನ್ನು ದುರ್ಬಲಗೊಳಿಸಲು ಮತ್ತು ಕೇಂದ್ರದ ಆಡಳಿತಾರೂಢ ಪಕ್ಷಕ್ಕೆ ಅನುಕೂಲ ಮಾಡಿಕೊಡಲು ಆಯೋಗವು ಈ ಕ್ರಮ ಕೈಗೊಂಡಿದೆ” ಎಂದು ಆಡಳಿತಾರೂಢ ಟಿಎಂಸಿ ಆರೋಪಿಸಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯನ್ನೂ ಸಲ್ಲಿಸಲಾಗಿತ್ತು. ಆದರೆ ಚುನಾವಣೆ ಸಮಯದಲ್ಲಿ ವರ್ಗಾವಣೆಗಳು ಸಾಮಾನ್ಯ ಪ್ರಕ್ರಿಯೆ ಎಂಬ ಕಾರಣಕ್ಕೆ ಕೋರ್ಟ್ ಮಧ್ಯಪ್ರವೇಶಿಸಲು ನಿರಾಕರಿಸಿದೆ.
ಮತದಾರರ ಪಟ್ಟಿಯಲ್ಲಿ ಅಕ್ರಮ
ಬಿಹಾರದಲ್ಲಿ ಚುನಾವಣೆಗೂ ಮುನ್ನ ಚುನಾವಣಾ ಆಯೋಗ ತರಾತುರಿಯಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ನಡೆಸಿದರ ಪರಿಣಾಮ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವುದು. ಅದರ ಮುಂದುವರೆದ ಭಾಗವಾಗಿ, ಪಶ್ಚಿಮ ಬಂಗಾಳದಲ್ಲಿ ಈ ಅವಾಂತರ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ SIR ಬಳಿಕ ಮತದಾರರ ಪಟ್ಟಿಯಿಂದ ಲಕ್ಷಾಂತರ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ.
91 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ಅಳಿಸಿಹಾಕಲಾಗಿದೆ. ಈ ಪೈಕಿ ಸುಮಾರು 34 ಲಕ್ಷ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿದೆ ಎಂದು ಟಿಎಂಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಇದನ್ನು ‘ಮತ ಕಳ್ಳತನ’ ಎಂದು ವಿಪಕ್ಷಗಳು ಕರೆಯುತ್ತಿವೆ. ಪ್ರಮುಖವಾಗಿ ಮುಸ್ಲಿಮರು, ಮಹಿಳೆಯರು, ಈವರೆಗೆ ಟಿಎಂಸಿ, ಕಾಂಗ್ರೆಸ್‌ನ ಮತ ಬ್ಯಾಂಕ್ ಆಗಿದ್ದ ಹಿಂದುಳಿದ ವರ್ಗಕ್ಕೆ ಸೇರಿದ ಜನರ ಹೆಸರೇ ಹೆಚ್ಚಾಗಿ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಆಯೋಗವು ದತ್ತಾಂಶಗಳನ್ನು ತಿರುಚುತ್ತಿದೆ ಎಂಬ ಆರೋಪಗಳು ಕೇಳಿಬಂದಿದೆ.
ಅದರಲ್ಲೂ ಚುನಾವಣಾ ಕೆಲಸದಲ್ಲಿರುವ ಸಿಬ್ಬಂದಿಗೆ ಮತದಾನದ ಹಕ್ಕು ಇಲ್ಲದಿರುವುದು ವಿಪರ್ಯಾಸ. SIR ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಕನಿಷ್ಠ 65 ಅಧಿಕಾರಿಗಳ ಹೆಸರುಗಳನ್ನು ತೆಗೆದುಹಾಕಲಾಗಿತ್ತು. ಚುನಾವಣಾ ಕರ್ತವ್ಯದಲ್ಲಿದ್ದರೂ ಮತದಾನ ಮಾಡಲು ಹಕ್ಕಿಲ್ಲ! ಇದನ್ನು ಪ್ರಶ್ನಿಸಿ ಈ ಅಧಿಕಾರಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ನಡೆದಿದೆ. ಆದರೆ ಈ ಹಂತದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ಕೋರ್ಟ್, ಮೇಲ್ಮನವಿ ಪ್ರಾಧಿಕಾರವನ್ನು ಸಂಪರ್ಕಿಸುವಂತೆ ಸೂಚಿಸಿದೆ.
ಇನ್ನೊಂದೆಡೆ ಒಂದೇ ಹೆಸರಿನಲ್ಲಿ ಅಥವಾ ಒಂದೇ ಭಾವಚಿತ್ರ ಇರುವ ಹಲವಾರು ಮತದಾನದ ಗುರುತಿನ ಚೀಟಿಗಳು ಇರುವ ಬಗ್ಗೆ ದೂರುಗಳು ದಾಖಲಾಗಿವೆ. ಮೃತಪಟ್ಟವರ ಅಥವಾ ಆ ಪ್ರದೇಶದಿಂದ ದಶಕಗಳ ಹಿಂದೆಯೇ ವಲಸೆ ಹೋದವರ ಹೆಸರುಗಳು ಇನ್ನೂ ಪಟ್ಟಿಯಲ್ಲಿದೆ. ಆದರೆ ಅಲ್ಲೇ ದಶಕಗಳಿಂದ ಇರುವ ಮತದಾರರ ಹೆಸರು ಅಳಿಸಿ ಹಾಕಲಾಗಿದೆ! ರಾಜ್ಯದ ಒಟ್ಟು ಮತದಾರರ ಸಂಖ್ಯೆಯಲ್ಲಿ ಸುಮಾರು 12% ರಷ್ಟು ಇಳಿಕೆಯಾಗಿದೆ.
ಇದನ್ನು ಓದಿದ್ದೀರಾ? ಇವಿಎಂ ಅಕ್ರಮ ಆರೋಪ: ‘ನನ್ನ ಜೀವಮಾನವಿಡೀ ಹೋರಾಡುತ್ತೇನೆ’ – ಸ್ಟ್ರಾಂಗ್ ರೂಮ್ ಬಳಿ ಮಮತಾ ಬ್ಯಾನರ್ಜಿ
ಮುಸ್ಲಿಮರು ಹೆಚ್ಚಿರುವ ಮುರ್ಷಿದಾಬಾದ್ (4.55 ಲಕ್ಷಕ್ಕೂ ಹೆಚ್ಚು), ಮಾಲ್ಡಾ ಮತ್ತು ಉತ್ತರ 24 ಪರಗಣ ಜಿಲ್ಲೆಗಳಲ್ಲಿ ಅತಿ ಹೆಚ್ಚು ಹೆಸರುಗಳನ್ನು ತೆಗೆದುಹಾಕಲಾಗಿದೆ. ಒಟ್ಟು ಅಳಿಸಿಹಾಕಲಾದ 90 ಲಕ್ಷ ಹೆಸರುಗಳಲ್ಲಿ ಸುಮಾರು 34% ಮುಸ್ಲಿಮರದ್ದಾಗಿದೆ. ವಿಶೇಷವಾಗಿ ಹೈ-ವೋಲ್ಟೇಜ್ ಕಣಗಳಾದ ಭವಾನಿಪುರ ಮತ್ತು ನಂದಿಗ್ರಾಮದಲ್ಲಿ ಅಧಿಕವಾಗಿ ಮುಸ್ಲಿಮರ ಮತಗಳನ್ನು ಅಳಿಸಿಹಾಕಲಾಗಿದೆ. ನಂದಿಗ್ರಾಮದಲ್ಲಿ ಶೇ.90, ಭವಾನಿಪುರದಲ್ಲಿ ಶೇ.40 ಮುಸ್ಲಿಮರ ಹೆಸರು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇಷ್ಟು ಸಾಲದು ಎಂಬಂತೆ ಮೊದಲ ಹಂತದ ಮತದಾನಕ್ಕೆ ಕೇವಲ ನಾಲ್ಕು ದಿನಗಳಷ್ಟೇ ಬಾಕಿ ಇರುವಾಗ ಆಯೋಗವು ಸುಮಾರು 7 ಲಕ್ಷ ಹೊಸ ಮತದಾರರನ್ನು ಪಟ್ಟಿಗೆ ಸೇರಿಸಿದೆ.
ಬೊಂಗಾವ್ ಮತ್ತು ಬಾಗ್ದಾದಂತಹ ಗಡಿ ಭಾಗಗಳಲ್ಲಿ ಮತುವಾ (Matua) ಮತ್ತು ರಾಜಬಂಶಿ ಸಮುದಾಯದವರ ಹೆಸರುಗಳೂ ಕೂಡ ದೊಡ್ಡ ಮಟ್ಟದಲ್ಲಿ ಅಳಿಸಲಾಗಿದೆ. ಅಳಿಸಿಹಾಕಲಾದ ಒಟ್ಟು ಮತದಾರರಲ್ಲಿ ಸುಮಾರು 63% ರಷ್ಟು ಹಿಂದೂ ಸಮುದಾಯಕ್ಕೆ ಸೇರಿದವರಾಗಿದ್ದಾರೆ, ವಿಶೇಷವಾಗಿ ದಲಿತ ಮತ್ತು ಹಿಂದುಳಿದ ವರ್ಗಗಳ ಪ್ರಾತಿನಿಧ್ಯ ಹೆಚ್ಚಿರುವ ಪ್ರದೇಶಗಳಲ್ಲಿ ಈ ಸಂಖ್ಯೆ ದೊಡ್ಡದಿದೆ.
ಇವಿಎಂ ‘ಟ್ಯಾಂಪರಿಂಗ್’ ಮತ್ತು ಅಕ್ರಮಗಳು
2026ರ ಚುನಾವಣೆಯ ಎರಡನೇ ಹಂತದ ಮತದಾನದ ವೇಳೆ ಇವಿಎಂ ಯಂತ್ರಗಳ ‘ಟ್ಯಾಂಪರಿಂಗ್’ ಮಾಡಿರುವ, ಅಕ್ರಮ ನಡೆದಿರುವ ಬಗ್ಗೆ ಹತ್ತಾರು ದೂರುಗಳು ಬಂದಿವೆ. ಟಿಎಂಸಿ, ಕಾಂಗ್ರೆಸ್ ಮತ್ತು ಇತರೆ ವಿಪಕ್ಷಗಳು ಈ ಹಿಂದೆಯೂ ಬಿಜೆಪಿ ವಿರುದ್ಧ ಇವಿಎಂ ಹ್ಯಾಕಿಂಗ್ ಅಥವಾ ಟ್ಯಾಂಪರಿಂಗ್ ಆರೋಪಗಳನ್ನು ಹಲವು ಬಾರಿ ಮಾಡಿವೆ. ಕೆಲವು ಮತಗಟ್ಟೆಗಳಲ್ಲಿ ಯಾವುದೇ ಬಟನ್ ಒತ್ತಿದರೂ ಮತ ಬಿಜೆಪಿಗೆ ಹೋಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು. ಆದರೆ, ಚುನಾವಣಾ ಆಯೋಗವು ಇವುಗಳನ್ನು ತಾಂತ್ರಿಕ ದೋಷ ಅಥವಾ ‘ಮಾಕ್ ಪೋಲ್’ (Mock Poll) ಸಮಯದ ಪ್ರಕ್ರಿಯೆ ಎಂದು ಹೇಳಿಕೊಂಡಿತ್ತು.
ಇನ್ನು ವಿರೋಧ ಪಕ್ಷಗಳು ಇವಿಎಂ ಮತಗಳನ್ನು 100% ವಿವಿಪ್ಯಾಟ್ ಚೀಟಿಗಳೊಂದಿಗೆ ತಾಳೆ ಮಾಡಬೇಕೆಂದು ಒತ್ತಾಯಿಸಿದ್ದವು. ಆದರೆ ಬಿಜೆಪಿ ಮಾತ್ರ ಚುನಾವಣಾ ಆಯೋಗದ ಬೆಂಬಲಕ್ಕೆ ನಿಂತು ವಿಪಕ್ಷಗಳ ಒತ್ತಾಯವನ್ನು ವಿರೋಧಿಸಿತು. ಇವಿಎಂ ಮತಗಳನ್ನು 100% ವಿವಿಪ್ಯಾಟ್ ಚೀಟಿಗಳೊಂದಿಗೆ ತಾಳೆ ಮಾಡಿದರೆ ಬಿಜೆಪಿ ಬಣ್ಣ ಬಯಲಾಗುತ್ತದೆ ಎಂಬ ಆತಂಕವೇ ಎಂದು ವಿಪಕ್ಷಗಳು ಪ್ರಶ್ನಿಸಲು ಶುರು ಮಾಡಿತು.
ಈ ಚುನಾವಣೆಯ ಬಳಿಕ ಮತಯಂತ್ರಗಳನ್ನು ಇರಿಸುವ ‘ಸ್ಟ್ರಾಂಗ್ ರೂಮ್’ಗಳ ಸುರಕ್ಷತೆಯ ಬಗ್ಗೆಯೂ ಗಂಭೀರ ಆರೋಪಗಳು ಕೇಳಿಬಂದಿವೆ. ಕೆಲವು ಜಿಲ್ಲೆಗಳಲ್ಲಿ ಸ್ಟ್ರಾಂಗ್ ರೂಮ್‌ಗಳ ಸುತ್ತಮುತ್ತ ಬಿಜೆಪಿ ಕಾರ್ಯಕರ್ತರು ಅಥವಾ ಅಪರಿಚಿತ ವ್ಯಕ್ತಿಗಳು ಓಡಾಡುತ್ತಿದ್ದಾರೆ, ಸೀಲ್ ಮಾಡಲಾದ ರೂಮ್‌ಗಳನ್ನು ತೆರೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಟಿಎಂಸಿ ನಾಯಕರು ಆರೋಪಿಸಿದ್ದಾರೆ. ಈ ಸಂಬಂಧ ವಿಡಿಯೋಗಳು ಹರಿದಾಡಿದೆ. ಸೀಲ್ ಮಾಡಿದ ಸ್ಟ್ರಾಂಗ್ ರೂಮ್‌ನ ಬಾಗಿಲು ತೆರೆದಿರುವ ವಿಡಿಯೋ ಕಂಡುಬಂದಿದೆ. ಆದರೆ ಚುನಾವಣಾ ಆಯೋಗ ಅದೇ ವಾದದ ಸುತ್ತ ಗಿರಕಿ ಹೊಡೆಯುವುದನ್ನು ಮುಂದುವರೆಸಿದೆ. ಅಕ್ರಮಗಳು ನಡೆದಿಲ್ಲ, ಸ್ಟ್ರಾಂಗ್ ರೂಮ್ ಹೊರಗೆ ಕಾವಲು ಇದೆ ಎಂದು ಹೇಳಿಕೊಂಡಿದೆ.
ಇವೆಲ್ಲವುದರ ನಡುವೆ ಕೇಂದ್ರ ಪಡೆಗಳು ಮತದಾರರಿಗೆ ಬೆದರಿಕೆ ಹಾಕುತ್ತಿವೆ ಮತ್ತು ಬಿಜೆಪಿಗೆ ಮತ ಹಾಕುವಂತೆ ಒತ್ತಡ ಹೇರುತ್ತಿವೆ ಎಂಬ ಆರೋಪಗಳೂ ಕೇಳಿಬಂದಿದೆ. ಆದರೆ ಚುನಾವಣಾ ಆಯೋಗ ಮಾಡುತ್ತಿರುವುದೇನು? ಆಯೋಗವು ಇದನ್ನು ಕಾನೂನು ಸುವ್ಯವಸ್ಥೆ ಕಾಪಾಡುವ ಕ್ರಮ ಎಂದು ಸಮರ್ಥಿಸಿಕೊಂಡಿದೆ!

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



