ಮುಂಬೈನ ಮೀರಾ ರೋಡ್ ಉಪನಗರದ ನಯಾ ನಗರದಲ್ಲಿ ಇತ್ತೀಚೆಗೆ ಇಬ್ಬರು ಭದ್ರತಾ ಸಿಬ್ಬಂದಿಯ ಮೇಲೆ ನಡೆದ ಚಾಕು ದಾಳಿ ನಡೆಸಿದ ಆರೋಪಿಯ ಬಗ್ಗೆ ಮಾಹಿತಿ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಆರೋಪಿಯು ಐಸಿಸ್‌ನಿಂದ ಪ್ರೇರಿತನಾಗಿದ್ದು, ‘ಜಿಹಾದ್’ ಹೆಸರಿನಲ್ಲಿ ಹಿಂದೂ ಸಮುದಾಯದ ಮೇಲೆ ದಾಳಿ ನಡೆಸುವ ಬಯಕೆ ಹೊಂದಿದ್ದ ಎಂದು ಹೇಳುವ ಮೂಲಕ ತಮ್ಮ ಕೋಮುವಾದಿ ಮನಸ್ಥಿತಿ ಬಯಲು ಮಾಡಿದ್ದಾರೆ. ಆರೋಪಿ ಮುಸ್ಲಿಂ ಸಮುದಾಯದವರಾಗಿದ್ದರೆ ಬಿಜೆಪಿ ಮುಖಂಡರು ಭಯೋತ್ಪಾದಕ ಸಂಘಟನೆಯ ಜೊತೆಗೆ ನಂಟು ಕಟ್ಟುವುದು ಸಾಮಾನ್ಯವಾಗಿದೆ. ಅದೇ ರೀತಿಯಲ್ಲಿ ಮಹಾ ಸಿಎಂ ಹೇಳಿಕೆ ನೀಡಿದ್ದಾರೆ.
ಠಾಣೆಯಲ್ಲಿ ನಡೆದಿರುವ ಈ ಕೃತ್ಯವು ‘ಸ್ವಯಂ-ಉಗ್ರೀಕರಣ’ (Self-radicalisation) ಪ್ರಕರಣವಾಗಿರುವ ಸಾಧ್ಯತೆ ಇದೆ ಎಂದು ಫಡ್ನವೀಸ್ ವಿವರಿಸಿದ್ದಾರೆ.
“ಶಂಕಿತನ ಮನೆಯಲ್ಲಿ ಕೆಲವು ಪುಸ್ತಕಗಳು ಮತ್ತು ಆಕ್ಷೇಪಾರ್ಹ ಸಾಮಗ್ರಿಗಳು ಪತ್ತೆಯಾಗಿವೆ. ಆತ ಅಮೆರಿಕದಲ್ಲಿ ವಾಸಿಸುತ್ತಿದ್ದ ಮತ್ತು ಇತ್ತೀಚೆಗಷ್ಟೇ ವಾಪಸ್ಸಾಗಿದ್ದ. ಪ್ರಾಥಮಿಕ ತನಿಖೆಯಲ್ಲಿ ಆತ ತೀವ್ರವಾದಿಯಾಗಿ ಬದಲಾಗಿದ್ದು, ಜಿಹಾದ್ ಹೆಸರಿನಲ್ಲಿ ಹಿಂದೂಗಳ ಮೇಲೆ ದಾಳಿ ಮಾಡುವ ಉದ್ದೇಶ ಹೊಂದಿದ್ದ ಎಂಬುದು ತಿಳಿದುಬಂದಿದೆ. ಇದೇ ಕಾರಣಕ್ಕಾಗಿ ಆತ ಈ ಕೃತ್ಯವೆಸಗಿದ್ದಾನೆ” ಎಂದು ಫಡ್ನವೀಸ್ ಯಾವುದೇ ತನಿಖೆಯ ಮಾಹಿತಿ ಇಲ್ಲದೇ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಕ್ಯಾಂಪಸ್ ರಾಜಕೀಯಕ್ಕೆ ಶಿಸ್ತಿನ ಕಡಿವಾಣ: ಲಿಂಗ್ಡೋ ಸಮಿತಿ ವರದಿಯ ಆಶಯ ಮತ್ತು ವಾಸ್ತವ
ಸೋಮವಾರ ಮುಂಜಾನೆ 31 ವರ್ಷದ ಶಂಕಿತ ಜುಬೇರ್ ಅನ್ಸಾರಿ ಎಂಬಾತ ಇಬ್ಬರು ಭದ್ರತಾ ಸಿಬ್ಬಂದಿಯ ಮೇಲೆ ಈ ದಾಳಿ ನಡೆಸಿದ್ದ. ದಾಳಿಗೊಳಗಾದ ರಾಜಕುಮಾರ್ ಮಿಶ್ರಾ ಮತ್ತು ಸುಬ್ರೋತೋ ರಮೇಶ್ ಸೇನ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಮಿಶ್ರಾ ಅವರ ಸ್ಥಿತಿ ಗಂಭೀರವಾಗಿದ್ದು, ಸೇನ್ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಘಟನೆ ನಡೆದ ಕೇವಲ 90 ನಿಮಿಷಗಳಲ್ಲಿ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಅನ್ಸಾರಿಯನ್ನು ಬಂಧಿಸಿದ್ದರು. ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.





