ರಾಷ್ಟ್ರೀಯ ಭದ್ರತೆಯನ್ನು ಕೇವಲ ರಾಜಕೀಯ ಪ್ರಚಾರದ ಸರಕನ್ನಾಗಿ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರ, ಪಾರದರ್ಶಕತೆ ಕಾಯ್ದುಕೊಳ್ಳುವಲ್ಲಿ ಸಂಪೂರ್ಣವಾಗಿ ಎಡವಿದೆ. ಸೇನಾ ಬಲದ ಜೊತೆಗೆ ರಾಜತಾಂತ್ರಿಕ ಇಚ್ಛಾಶಕ್ತಿ ಹಾಗೂ ಪಾರದರ್ಶಕತೆ ಇದ್ದಾಗ ಮಾತ್ರ ದೇಶದ ಭದ್ರತೆ ಎತ್ತಿ ಹಿಡಿಯಲು ಸಾಧ್ಯ ಎಂಬುದನ್ನು ಕೇಂದ್ರ ಸರ್ಕಾರ ಇನ್ನಾದರೂ ಅರಿತುಕೊಳ್ಳಬೇಕಿದೆ
ಕೇಂದ್ರ ಸರ್ಕಾರದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಗೆ ಒಂದು ವರ್ಷ ತುಂಬಿದೆ. ಆದರೆ, ಈ ಸಂದರ್ಭದಲ್ಲಿ ಬೆನ್ನು ತಟ್ಟಿಕೊಳ್ಳುವ ಬದಲು, ಕೇಂದ್ರ ಸರ್ಕಾರವು ತೀವ್ರ ಟೀಕೆ ಹಾಗೂ ಪ್ರಶ್ನೆಗಳ ಸುಳಿಗೆ ಸಿಲುಕಿದೆ. ಸೇನಾ ಕಾರ್ಯಾಚರಣೆಯನ್ನು ಕೇವಲ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಸರ್ಕಾರವು, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿ ಮಾಡುವ ತನ್ನ ಜವಾಬ್ದಾರಿಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಮುಂಬೈನಲ್ಲಿ ನಡೆದ 26/11 ಉಗ್ರ ದಾಳಿಯ ನಂತರ ಅಂದಿನ ಯುಪಿಎ ಸರ್ಕಾರವು ಪಾಕಿಸ್ತಾನವನ್ನು ಜಾಗತಿಕವಾಗಿ ಅಕ್ಷರಶಃ ಏಕಾಂಗಿ ಮಾಡಿತ್ತು. ಆದರೆ, ಆಪರೇಷನ್ ಸಿಂಧೂರ್ ಬಳಿಕ ನೆರೆಯ ದೇಶದ ಮೇಲೆ ಒಂದು ಸಣ್ಣ ಮಟ್ಟದ ಜಾಗತಿಕ ಬಹಿಷ್ಕಾರ ಹೇರುವಲ್ಲೂ ಪ್ರಸ್ತುತ ಎನ್‌ಡಿಎ ಸರ್ಕಾರ ಸೋತಿದೆ. ಬದಲಾಗಿ, ಪಾಕಿಸ್ತಾನವು ಇತರ ರಾಷ್ಟ್ರಗಳೊಂದಿಗೆ ಮುಕ್ತವಾಗಿ ಉತ್ತಮ ಬಾಂಧವ್ಯ ಮುಂದುವರಿಸುತ್ತಿರುವುದು ಕೇಂದ್ರದ ವಿದೇಶಾಂಗ ನೀತಿ ಹಾಗೂ ನೈತಿಕ ದೌರ್ಬಲ್ಯವನ್ನು ಎತ್ತಿತೋರಿಸುತ್ತಿದೆ.
ನೈಜ ಸಂಗತಿಗಳನ್ನು ಗಮನಿಸಿದರೆ, ಏಪ್ರಿಲ್ 22, 2025 ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್ ಬಳಿ ಉಗ್ರರು ನಡೆಸಿದ ಹೇಯ ದಾಳಿಯಲ್ಲಿ 25 ಭಾರತೀಯರು ಹಾಗೂ ಓರ್ವ ನೇಪಾಳಿ ಪ್ರಜೆ ಸೇರಿ 26 ಅಮಾಯಕರು ಬಲಿಯಾಗಿದ್ದರು. ಸೇನೆಯು ಮೇ 6 ಮತ್ತು 7 ರ ರಾತ್ರಿ ‘ಆಪರೇಷನ್ ಸಿಂಧೂರ್’ ಮೂಲಕ ಗಡಿಯಾಚೆಗಿನ 9 ಉಗ್ರ ನೆಲೆಗಳನ್ನು ಧ್ವಂಸ ಮಾಡಿತು. ಆದರೆ, ಏಕಾಏಕಿ ದಾಳಿಯನ್ನು ನಿಲ್ಲಿಸಿ ತೀವ್ರ ಟೀಕೆಗೆ ಗುರಿಯಾಗಿತ್ತು. ಸೇನೆಯ ಈ ಯಶಸ್ಸಿಗೆ ತಕ್ಕಂತೆ ರಾಜತಾಂತ್ರಿಕ ಹೆಜ್ಜೆ ಇಡುವಲ್ಲಿ ಕೇಂದ್ರ ಸರ್ಕಾರ ತೀವ್ರ ನಿರ್ಲಕ್ಷ್ಯ ತೋರಿದೆ.
ಇದನ್ನು ಓದಿದ್ದೀರಾ? ರಾಜಭವನದಲ್ಲಿ ಕೇಂದ್ರದ ಕೀಲುಗೊಂಬೆಯಾಟ: ಮಹಾರಾಷ್ಟ್ರದ ‘ಮಧ್ಯರಾತ್ರಿ’ಯಿಂದ ತಮಿಳುನಾಡಿನ ‘ಷರತ್ತು’ಗಳವರೆಗೆ
ಇದಲ್ಲದೆ, ಕೇಂದ್ರದ ನಡೆಯ ಬಗ್ಗೆ ಅತ್ಯಂತ ಅನುಮಾನ ಮೂಡಿಸುವ ಪ್ರಮುಖ ಅಂಶವೆಂದರೆ, ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಹಾಗೂ ಕಾರ್ಯಾಚರಣೆಯಲ್ಲಿ ಹತರಾದರು ಎನ್ನಲಾದ ಮೂವರು ಉಗ್ರರ ಸಂಪೂರ್ಣ ಮಾಹಿತಿ ಈವರೆಗೂ ಲಭ್ಯವಾಗದಿರುವುದು. ಈ ಉಗ್ರರ ಹಿನ್ನೆಲೆ, ಅವರ ನಿಖರ ಗುರುತು ಹಾಗೂ ದಾಳಿಯ ರೂಪುರೇಷೆಗಳ ಬಗ್ಗೆ ಸರ್ಕಾರವು ದೇಶದ ಜನತೆಗೆ ಯಾವುದೇ ಸರಿಯಾದ ದಾಖಲೆಗಳನ್ನು ಒದಗಿಸುವಲ್ಲಿ ವಿಫಲವಾಗಿದೆ.
ಈ ಮೂವರು ಉಗ್ರರನ್ನು ಸೈನ್ಯ ಮತ್ತು ಪೊಲೀಸರು ‘ಆಪರೇಷನ್ ಮಹಾದೇವ್’ ಅಡಿ ಕೊಂದು ಹಾಕಿದ್ದೇವೆ ಎಂದು ಕೇಂದ್ರ ಗೃಹ ಸಚಿವರು ಸಂಸತ್ತಿನಲ್ಲಿ ಹೇಳಿದ್ದಾರೆಯೇ ಹೊರತು, ಅದಕ್ಕೆ ಪೂರಕವಾದ ಯಾವುದೇ ವಿಶ್ವಾಸಾರ್ಹ ದಾಖಲಾತಿಗಳನ್ನಾಗಲಿ, ಚಿತ್ರಗಳನ್ನಾಗಲಿ ಬಿಡುಗಡೆ ಮಾಡಿಲ್ಲ. ಸರ್ಕಾರವು ಇಂತಹ ಮಾಹಿತಿಯನ್ನು ಮುಚ್ಚಿಡುತ್ತಿದೆಯೇ ಎಂಬ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ.
ಅಂಕಿಅಂಶಗಳನ್ನು ಸ್ಪಷ್ಟವಾಗಿ ನೋಡುವುದಾದರೆ, ಪಹಲ್ಗಾಮ್ ದಾಳಿಯ 26 ಹತ್ಯೆ, 9 ಉಗ್ರ ನೆಲೆಗಳ ಧ್ವಂಸ ಹಾಗೂ 3 ಎ ಕೆಟಗರಿ ಉಗ್ರರ ಹತ್ಯೆಯ ಮಾಹಿತಿ ನಮ್ಮ ಮುಂದಿದೆ. ಆದರೆ, ಈ ಮಾಹಿತಿಯನ್ನು ಮುಂದಿಟ್ಟುಕೊಂಡು ದೇಶದೊಳಗೆ ಸಾಧನೆಯ ಪ್ರಚಾರ ಗಿಟ್ಟಿಸಿಕೊಳ್ಳುವ ಕೇಂದ್ರವು, ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನದ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳುವಲ್ಲಿ ಶೂನ್ಯ ಸಾಧನೆ ಮಾಡಿದೆ. ಸರ್ಕಾರದ ಬಳಿ ಸಮರ್ಪಕ ದಾಖಲೆಗಳಿಲ್ಲದ ಕಾರಣವೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದು ಮುಖಭಂಗ ಅನುಭವಿಸುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ.
ರಾಷ್ಟ್ರೀಯ ಭದ್ರತೆಯನ್ನು ಕೇವಲ ರಾಜಕೀಯ ಪ್ರಚಾರದ ಸರಕನ್ನಾಗಿ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರ, ಪಾರದರ್ಶಕತೆ ಕಾಯ್ದುಕೊಳ್ಳುವಲ್ಲಿ ಸಂಪೂರ್ಣವಾಗಿ ಎಡವಿದೆ. ಸೇನಾ ಬಲದ ಜೊತೆಗೆ ರಾಜತಾಂತ್ರಿಕ ಇಚ್ಛಾಶಕ್ತಿ ಹಾಗೂ ಪಾರದರ್ಶಕತೆ ಇದ್ದಾಗ ಮಾತ್ರ ದೇಶದ ಭದ್ರತೆ ಎತ್ತಿ ಹಿಡಿಯಲು ಸಾಧ್ಯ ಎಂಬುದನ್ನು ಕೇಂದ್ರ ಸರ್ಕಾರ ಇನ್ನಾದರೂ ಅರಿತುಕೊಳ್ಳಬೇಕಿದೆ.




