ಸಂಕೇಶ್ವರ–ನರಗುಂದ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದು ಒಂದೇ ಕುಟುಂಬದ ಸಂಭ್ರಮದ ಪ್ರಯಾಣವನ್ನು ದುರಂತದಲ್ಲಿ ಅಂತ್ಯಗೊಳಿಸಿದೆ.
ಹತ್ತಿಕಾಳು ಸಾಗಿಸುತ್ತಿದ್ದ ಲಾರಿ ಹಾಗೂ ಕಾರಿನ ನಡುವೆ ಭಾನುವಾರ ನಡೆದ ಅಪಘಾತದಲ್ಲಿ ನಾಲ್ಕು ವರ್ಷದ ಬಾಲಕ ಸೇರಿದಂತೆ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಮೂವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದಲ್ಲಿ ಮಹಾರಾಷ್ಟ್ರದ ಪುಣೆ ಮೂಲದ ಓಂಕಾರ ಮಾಂಡ್ರಿ (26), ರೇಷ್ಮಾ ಶ್ರೀಕಾಂತ ಮಾಂಡ್ರಿ (32) ಹಾಗೂ ನಾಲ್ಕು ವರ್ಷದ ದೇವಾಂಶ ಶ್ರೀಕಾಂತ ಮಾಂಡ್ರಿ ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ಶ್ರೀಕಾಂತ ಮಾಂಡ್ರಿ (36), ವಂದನಾ ಮಾಂಡ್ರಿ (53) ಮತ್ತು ಹರ್ಷ ಮಾಂಡ್ರಿ (25) ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಅಪಘಾತದ ತೀವ್ರತೆಗೆ ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಮೃತದೇಹಗಳನ್ನು ಗೋಕಾಕ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.ಘಟನೆಗೆ ಸಂಬಂಧಿಸಿದಂತೆ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



