ರಾಜ್ಯ ರಾಜಕಾರಣ ಮತ್ತು ಆಡಳಿತದ ಹಲವು ಐತಿಹಾಸಿಕ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದ ಬೆಂಗಳೂರಿನ ಪಾರಂಪರಿಕ ‘ಕುಮಾರಕೃಪಾ’ ಅತಿಥಿಗೃಹ ಇದೀಗ ಇತಿಹಾಸದ ಪುಟ ಸೇರಲಿದೆ. ಕುಮಾರಕೃಪಾ ಅತಿಥಿಗೃಹಕ್ಕೆ ಹೊಸ ರೂಪ ನೀಡಲಾಗಿದ್ದು, ಅದರ ಹೆಸರನ್ನು ‘ಗಂಗಾ’ ಎಂದು ಹೊಸ ಹೆಸರು ಇಡಲಾಗಿದೆ. ಇನ್ಮುಂದೆ ಈ ಬಂಗಲೆಯು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಅಧಿಕೃತ ನಿವಾಸವಾಗಲಿದೆ.
ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಕೆ ಶೇಷಾದ್ರಿ ಅಯ್ಯರ್ ಅವರ ನಿವಾಸವಾಗಿದ್ದ ಮತ್ತು ದಶಕಗಳಿಂದ ಸರ್ಕಾರಿ ಅತಿಥಿಗೃಹವಾಗಿ ಗಣ್ಯರ ವಾಸ್ತವ್ಯಕ್ಕೆ ಬಳಕೆಯಾಗುತ್ತಿದ್ದ ಈ ಐತಿಹಾಸಿಕ ಬಂಗಲೆಯನ್ನು ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಮುಖ್ಯಮಂತ್ರಿಗಳ ನಿವಾಸ ‘ಕಾವೇರಿ’ ಮತ್ತು ಗೃಹ ಕಚೇರಿ ‘ಕೃಷ್ಣ’ ಮಾದರಿಯಲ್ಲೇ ಇದರ ಒಳಗಿನ ಕೊಠಡಿಗಳಿಗೂ ಹೇಮಾವತಿ, ಶಾಲ್ಮಲ ಹಾಗೂ ತುಂಗಭದ್ರಾ ಎಂಬ ನದಿಗಳ ಹೆಸರುಗಳನ್ನು ಇಡಲಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ಈ ಪಾರಂಪರಿಕ ಬಂಗಲೆಯ ನೆಲಹಾಸು, ವಿದ್ಯುತ್ ವ್ಯವಸ್ಥೆ ಹಾಗೂ ಬಣ್ಣ ಬಳಿಯುವ ಕಾಮಗಾರಿಗಳನ್ನು ನಡೆಸಿ ನವೀಕರಿಸಲಾಗಿದೆ. ಪೂರ್ವಾಭಿಮುಖವಾಗಿರುವ ಈ ಕಟ್ಟಡದಲ್ಲಿ ನವೆಂಬರ್ 15ರ ಭಾನುವಾರ ರಾತ್ರಿಯಿಂದಲೇ ನೊಣವಿನಕೆರೆ ಅಜ್ಜಯ್ಯನ ನೇತೃತ್ವದಲ್ಲಿ ವಿಶೇಷ ಧಾರ್ಮಿಕ ವಿಧಿವಿಧಾನಗಳು, ಪೂಜೆ ಹಾಗೂ ಹೋಮ-ಹವನಗಳು ನಡೆದಿವೆ. ಇಂದು (ನ.16) ಗೃಹಪ್ರವೇಶ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮತ್ತು ಮಾಧ್ಯಮ ಪ್ರತಿನಿಧಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ನವೆಂಬರ್ ಅಂತ್ಯದ ವೇಳೆಗೆ ಡಿ.ಕೆ ಶಿವಕುಮಾರ್ ಅವರ ಕುಟುಂಬ ಸಂಪೂರ್ಣವಾಗಿ ಈ ನಿವಾಸಕ್ಕೆ ಸ್ಥಳಾಂತರಗೊಳ್ಳಲಿದೆ.
ಸರ್ಕಾರಿ ಬಂಗಲೆಯನ್ನು ವಾಸ್ತುಗೆ ತಕ್ಕಂತೆ ಬದಲಾಯಿಸಿ, ಮೌಢ್ಯದೊಂದಿಗೆ ಹೋಮ-ಹವನ ನಡೆಸಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆ ಮತ್ತು ವಿಮರ್ಶೆಗೆ ಗುರಿಯಾಗಿದೆ. ಸರ್ಕಾರಿ ಕಟ್ಟಡಗಳ ನವೀಕರಣವನ್ನು ಸುರಕ್ಷತೆ, ಉಪಯುಕ್ತತೆ ಹಾಗೂ ತಾಂತ್ರಿಕ ಅವಶ್ಯಕತೆಯ ಆಧಾರದಲ್ಲಿ ಮಾಡುವ ಬದಲು, ವಾಸ್ತುಶಾಸ್ತ್ರದ ದಿಕ್ಕು ಮತ್ತು ಬಾಗಿಲುಗಳ ಸ್ಥಾನವನ್ನು ಆಧಾರವಾಗಿಟ್ಟುಕಂಡು ಕಟ್ಟಡದ ರಚನೆಯನ್ನು ಬದಲಾಯಿಸುವ ಕುರಿತು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಒಬಿಸಿ ಮೀಸಲಾತಿ ಮತ್ತು ಕೆನೆಪದರ: ಸುಪ್ರೀಂನ ಮಾರ್ಚ್ ತೀರ್ಪಿನ ಹಿನ್ನೆಲೆಯೇನು? ಪ್ರಸ್ತುತ ಮಹತ್ವವೇನು?
ವೈಜ್ಞಾನಿಕ ಮನೋಭಾವ ಬೆಳೆಸುವ ಬಗ್ಗೆ ಮಾತನಾಡುವ ಸರ್ಕಾರವೇ ಹೋಮ-ಹವನ, ಶುಭ ಮುಹೂರ್ತ ಹಾಗೂ ವಾಸ್ತು ಬದಲಾವಣೆಗಳಿಗೆ ಮಣೆ ಹಾಕುತ್ತಿರುವುದುದು ವೈರುಧ್ಯವೆಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.
ಬಸವಣ್ಣ, ಕುವೆಂಪು ಹಾಗೂ ವೈಚಾರಿಕ ಚಳವಳಿಗಳ ಪರಂಪರೆ ಹೊಂದಿರುವ ಕರ್ನಾಟಕದಲ್ಲಿ, ಪ್ರತಿ ಬಾರಿ ಸರ್ಕಾರಗಳು ಬದಲಾದಾಗ ವಾಸ್ತು ಹೆಸರಿನಲ್ಲಿ ವಿಧಾನಸೌಧದ ಕೊಠಡಿಗಳು ಮತ್ತು ಅಧಿಕೃತ ನಿವಾಸಗಳನ್ನು ಪದೇ-ಪದೇ ಮಾರ್ಪಡಿಸುವುದು ಕಟ್ಟಡಗಳನ್ನು ದುರ್ಬಲಗೊಳಿಸುತ್ತದೆ. ಮಾತ್ರವಲ್ಲ, ಸಾರ್ವಜನಿಕ ಹಣದ ದುರ್ಬಳಕೆಯೂ ಆಗಿದೆ ಎಂದು ನಾಗರಿಕರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೊತೆಗೆ, ಐತಿಹಾಸಿಕ ಅತಿಥಿಗೃಹವಾದ, ದಶಕಗಳ ಇತಿಹಾಸವಿರುವ ‘ಕುಮಾರಕೃಪಾ’ ಹೆಸರನ್ನೇ ಬದಲಾವಣೆ ಮಾಡಿರುವುದು ಕಟ್ಟಡದ ಮೂಲ ಗುರುತನ್ನೇ ಅಳಿಸಿಹಾಕಲಿದೆ ಎಂದು ಅಭಿಪ್ರಾಯವೂ ಕೇಳಿಬಂದಿದೆ.


