ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಬೇಸೂರು ಭಾಗದಲ್ಲಿ ಪ್ರಸ್ತಾವಿತ ಅಣುವಿದ್ಯುತ್ ಸ್ಥಾವರ ಯೋಜನೆಯನ್ನು ಕೈಬಿಡಬೇಕೆಂದು ಒತ್ತಾಯಿಸಿ ಬುಧವಾರ ಮಲೆನಾಡು ಅಣುಸ್ಥಾವರ ವಿರೋಧಿ ಹೋರಾಟ ವೇದಿಕೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿವೆ.
“ಯೋಜನೆ ಜಾರಿಯಾದರೆ ಸುತ್ತಮುತ್ತಲಿನ ಗ್ರಾಮಗಳ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀಳಲಿದೆ. ಅಣುಸ್ಥಾವರದಿಂದ ಉಂಟಾಗುವ ವಿಕಿರಣಗಳು ಮಾನವ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಕ್ಯಾನ್ಸರ್ ಸೇರಿದಂತೆ ಹಲವು ಮಾರಕ ಕಾಯಿಲೆಗಳ ಭೀತಿ ಎದುರಾಗಬಹುದು. ಅಲ್ಲದೆ ಕುಡಿಯುವ ನೀರು ಮತ್ತು ಪರಿಸರ ಮಾಲಿನ್ಯಗೊಳ್ಳುವ ಸಾಧ್ಯತೆಯೂ ಇದೆ” ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
“ಯೋಜನೆ ಕುರಿತು ಸಾರ್ವಜನಿಕರಿಗೆ ಸಮಗ್ರ ಮಾಹಿತಿ ನೀಡದೇ ಸರ್ಕಾರ ಮುಂದುವರಿಯುತ್ತಿರುವುದು ಖಂಡನೀಯ. ಜೀವಸಂಕುಲಕ್ಕೆ ಹಾನಿಯಾಗುವ ಅಪಾಯಕಾರಿ ಯೋಜನೆಗಳನ್ನು ಒಪ್ಪಲು ಸಾಧ್ಯವಿಲ್ಲ. ಮಲೆನಾಡಿನ ಪರಿಸರ ಸಂರಕ್ಷಣೆ ಅತ್ಯಂತ ಮುಖ್ಯವಾಗಿದ್ದು, ಪಶ್ಚಿಮಘಟ್ಟದ ಅಸ್ತಿತ್ವಕ್ಕೆ ಧಕ್ಕೆ ತರುವ ಯಾವುದೇ ಯೋಜನೆಯನ್ನು ಒಪ್ಪಲಾಗುವುದಿಲ್ಲ. ಇದು ಮಲೆನಾಡಿನ ಜನರ ಪಾಲಿಗೆ ಮರಣ ಶಾಸನ” ಎಂದು ಆಕ್ಷೇಪ ವ್ಯಕ್ತಪಡಿಸಿದರು.
“ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಬೇಸೂರು ಅಣುವಿದ್ಯುತ್ ಸ್ಥಾವರ ಯೋಜನೆಯನ್ನು ಕೈಬಿಡಬೇಕು. ಮಲೆನಾಡು ಮಾರಾಟಕ್ಕಿಲ್ಲ ಎನ್ನುವುದನ್ನು ಸರ್ಕಾರಗಳು ತಿಳಿಯಬೇಕು. ಒಂದು ವೇಳೆ ಯೋಜನೆಯನ್ನು ಮುಂದುವರಿಸಲು ಪ್ರಯತ್ನಿಸಿದರೆ ಪಕ್ಷಾತೀತವಾಗಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ತೀರ್ಥಹಳ್ಳಿಯ ಸಮೃದ್ಧಿ, ಸಹ್ಯಾದ್ರಿ, ಶರಾವತಿ ಸಹಕಾರ ಸಂಘಗಳಲ್ಲಿ ಅವ್ಯವಹಾರ ಆರೋಪ
ಪ್ರತಿಭಟನೆ ಹಾಗೂ ಮನವಿ ಸಲ್ಲಿಸುವ ವೇಳೆ ವಿವಿಧ ಸಂಘಟನೆಗಳ ಮುಖಂಡರುಗಳಾದ ಅರವಿಂದ ಪಾಟೀಲ್, ಡಾ.ಸತೀಶ್‌ಕುಮಾರ್‌ಶೆಟ್ಟಿ, ಕೆ.ವಿ.ವಂಸತ್‌ಕುಮಾರ್, ಗೋಪಿನಾಥ್, ಡಾ.ಶ್ರೀಪತಿ, ಡಾ.ಚಂದ್ರಶೇಖರ್, ತೀ.ನ.ಶ್ರೀನಿವಾಸ್, ಜನಮೇಜಿರಾವ್, ಶೇಖರ್‌ಗೌಳೇರ್, ಎಸ್.ಬಿ.ಅಶೋಕ್‌ಕುಮಾರ್‌ಗಾಂಧಿ, ಜಿ.ವಿಜಯಕುಮಾರ್, ಪ್ರೊ.ಚಂದ್ರಶೇಖರ್, ತ್ಯಾಗರಾಜ್ ಮಿತ್ಯಾಂತ, ಸುಶೀಲಾ ಷಣ್ಮುಗಂ, ಬಾಲುನಾಯ್ಡು, ಹೆಚ್.ಎಂ.ಸಂಗಯ್ಯ, ಕಲ್ಲೂರು ಮೇಘರಾಜ್ ಸೇರಿದಂತೆ ಮಲೆನಾಡು ಅಣುಸ್ಥಾವರ ವಿರೋಧಿ ಹೋರಾಟ ವೇದಿಕೆ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ನಾಗರಿಕ ಹಿತರಕ್ಷಣಾ ವೇದಿಕೆ, ರಾಷ್ಟ್ರಭಕ್ತರ ಬಳಗ, ಅಣ್ಣಾ ಹಜಾರೆ ಹೋರಾಟ ಸಮಿತಿ ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು..





