ಕೇಂದ್ರ ಸರ್ಕಾರದಿಂದ ಸಾಗರ ತಾಲೂಕಿನ ಬೇಸೂರಿನಲ್ಲಿ ಅಣು ಸ್ಥಾವರ ಘಟಕ ನಿರ್ಮಾಣಕ್ಕೆ ಪ್ರಸ್ತಾವನೆ ಬಂದಿದೆ. ಆದರೆ ಬೇಸೂರಿನಲ್ಲಿ ಅಣು ಸ್ಥಾವರ ಘಟಕ ನಿರ್ಮಾಣಕ್ಕೆ ಯಾವುದೇ ಶಾಸಕರು ಬೆಂಬಲಿಸುವುದಿಲ್ಲ ಎಂದು ಶಿವಮೊಗ್ಗ ಜಿಲ್ಲೆಯ ಶಾಸಕರು ಒಮ್ಮತದಿಂದ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ)ಯಲ್ಲಿ ನಿರ್ಧರಿಸಿ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರು.
ಅಲ್ಲದೆ ಬೇಸೂರು ಅಣು ಸ್ಥಾವರ ಯೋಜನೆಯ ನಿರ್ಮಾಣದ ಪ್ರಸ್ತಾವನೆಯಿಂದ ಸಾಗರ ಭಾಗದ ಜನರು ಭಯ ಭೀತರಾಗಿದ್ದು, ಈ ಭಯದಿಂದಲೇ ಬದುಕು ನಡೆಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
“ಈ ಭಾಗದ ಜನರು ತಮ್ಮ ಹಕ್ಕುಗಳಿಗಾಗಿ ಹಿಂದಿನಿಂದಲೂ ನಿರಂತರ ಹೋರಾಟ ನಡೆಸುತ್ತ ಬಂದಿದ್ದು, ಆ ಹೋರಾಟದ ಮನೋಭಾವ ಈಗಲೂ ಮುಂದುವರಿದರೆ ಸರ್ಕಾರ ಸಂಕಷ್ಟಕರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಇದೇ ಕಾರಣದಿಂದ ಸಭೆಯಲ್ಲಿ ಸರ್ವಾನುಮತದಿಂದ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.
“ಜನರು ಈಗಾಗಲೇ ಸರ್ಕಾರದ ವಿವಿಧ ಯೋಜನೆಗಳಿಗೆ ಭೂಮಿ ನೀಡುವ ಮೂಲಕ ತಮ್ಮ ಮನೆ-ಜಮೀನುಗಳನ್ನು ಕಳೆದುಕೊಂಡಿದ್ದಾರೆ. ಇದೀಗ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ವಿಚಾರ ಮತ್ತೊಮ್ಮೆ ಜನರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದು, ಅವರ ಆತಂಕ ಮತ್ತು ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಯೋಜನೆ ನಿಲ್ಲಿಸುವ ಪ್ರಯತ್ನ ಮಾಡೋಣ” ಎಂದು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ?ಶಿವಮೊಗ್ಗ | ಮಧ್ಯ ಕರ್ನಾಟಕಕ್ಕೆ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ವಕೀಲರ ಮನವಿ
ಶಾಸಕರುಗಳಾದ ಶಾರದಾ ಪೂರ್ಯನಾಯ್ಕ, ಆರಗ ಜ್ಞಾನೇಂದ್ರ, ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರುಗಳಾದ ಧನಂಜಯ ಸರ್ಜಿ, ಬಿಲ್ಕೀಶ್ ಬಾನು, ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡ ಹಾಜರಿದ್ದು, ಈ ನಿರ್ಣಯಕ್ಕೆ ಸರ್ವಾನುಮತದಿಂದ ಒಪ್ಪಿಗೆ ನೀಡಿದರು.





