ನಗರದಲ್ಲಿ ಕೋಣ ದಾಳಿಯಿಂದ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹಾಗೂ ಆರ್‌ಡಿಎ ಆಯುಕ್ತ ಈರಣ್ಣ ಬಿರಾದಾರ ಗಾಯಗೊಂಡ ಘಟನೆ ನಡೆದಿದೆ.
ಐಬಿ ಎದುರುಗಡೆ ಇರುವ ಸರ್ಕಾರಿ ವಸತಿ ಗೃಹಗಳ ಬಳಿ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ನಿಂತಿದ್ದ ವೇಳೆ ಅಡ್ಡಿಸಿಕೊಂಡು ಬಂದ ಕೋಣು ಏಕಾಏಕಿ ದಾಳಿ ನಡೆಸಿ ಇರಿದ ಪರಿಣಾಮ ಅವರಿಗೆ ತೆರಚಿದ ಗಾಯಗಳಾಗಿವೆ. ದಾಳಿ ನಡೆಸಿದ ಬಳಿಕ ಕೋಣ ಸ್ಥಳದಿಂದ ತಪ್ಪಿಸಿಕೊಂಡಿದೆ ಎಂದು ತಿಳಿದುಬಂದಿದೆ.
ರಸ್ತೆಯಲ್ಲಿ ಸಂಚರಿಸುವ ಜನರು ಹಾಗೂ ಸಾರ್ವಜನಿಕರು ಕೋಣ ಓಡಿಬಂದಿದ್ದರಿಂದ ಓಡಿ ಹೋಗುವಂತಾಯಿತು. ಬಿಡಾಡಿ ದನಗಳ ಕುರಿತಂತೆ ಮಹಾನಗರ ಪಾಲಿಕೆ ಯಾವುದೇ ಕಠಿಣ ಕ್ರಮಗಳನ್ನು ಕೈಗೊಳ್ಳದೇ ಇರುವದು ಅವಘಡಗಳಿಗೆ ಕಾರಣವಾಗುತ್ತಿದೆ. ಕಳೆದ ಅನೇಕ ವರ್ಷಗಳಿಂದ ಬಿಡಾಡಿ ದನಗಳಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದು ಅನೇಕ ಬಾರಿ ದನಗಳನ್ನು ಗೋಶಾಲೆಗೆ ಕಳುಹಿಸುವ ಕೆಲಸವಾದರೂ ದನಗಳು ರಸ್ತೆಯಲ್ಲಿ ಮಲಗುವುದು, ಸಂಚರಿಸುವ ನಿಯಂತ್ರಣಕ್ಕೆ ಬಂದಿಲ್ಲ. ವಾಹನಗಳ ಸಂಚಾರ ದಟ್ಟಣೆಯಿಂದ ನಿತ್ಯವೂ ಒಂದಿಲ್ಲೊಂದು ಕಡೆ ಸಮಸ್ಯೆಯಾಗುತ್ತಲೇ ಇದೆ ಎಂದು ಸಾರ್ವಜನಿಕರು ಆರೋಪಿಸಿದರು.
ಜನಸಂಚಾರ ಇರುವ ಕಡೆ ಜಾನುವಾರಗಳು ಅಡ್ಡಾದಿಡ್ಡಿ ಬರುವುದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗುವಂತಾಗಿದೆ ಎಂಬ ಆರೋಪ ಕೇಳಿಬಂದರೂ ಯಾವುದೇ ಶಾಶ್ವತ ಕ್ರಮಕ್ಕೆ ಆಡಳಿತ ಮುಂದಾಗುತ್ತಿಲ್ಲ ಎಂಬದ ಟೀಕೆ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬಕ್ರೀದ್ ಹಬ್ಬವನ್ನು ಶಾಂತಿ–ಸೌಹಾರ್ದದಿಂದ ಆಚರಿಸಿ: ಎಸ್‌ಪಿ ಅರುಣಾಂಗ್ಷುಗಿರಿ
ಇಬ್ಬರು ಹಿರಿಯ ಅಧಿಕಾರಿಗಳು ಅಕಸ್ಮಿಕವಾಗಿ ಕೋಣ ಕೆಂಗೆಣ್ಣಿಗೆ ಗುರಿಯಾಗಿ ಅಪಾಯದಿಂದ ಪಾರಾಗಿದ್ದಾರೆ. ಆದರೆ ಅಪಾಯಕ್ಕೆ ಕಾರಣವಾಗಿರುವ ಕೋಣದಿಂದ ಮತ್ತಷ್ಟು ಅವಘಡಗಳು ನಡೆಯುವ ಮುನ್ನ ಎಚ್ಚರವಹಿಸಬೇಕೆನ್ನುವದು ಸಾರ್ವಜನಿಕರ ಒತ್ತಾಯವಾಗಿದೆ.




