ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ಪ್ರಯಾಣಿಕನೊಬ್ಬರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡು ಹೃದಯಾಘಾತದ ಲಕ್ಷಣಗಳು ಕಂಡುಬಂದಾಗ, ಬಸ್ ಚಾಲಕ ಹಾಗೂ ನಿರ್ವಾಹಕರು ತೋರಿದ ಸಮಯಪ್ರಜ್ಞೆಯಿಂದಾಗಿ ಅವರನ್ನು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿ ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ.
ಇಂದು ಬೆಳಿಗ್ಗೆ ರಿಪ್ಪನ್ ಪೇಟೆಯಿಂದ ಶಿವಮೊಗ್ಗದತ್ತ ತೆರಳುತ್ತಿದ್ದ ಗುರುಶಕ್ತಿ ಬಸ್‌ನಲ್ಲಿ ರಮೇಶ್ (45) ಎಂಬವರು ಬೆನವಳ್ಳಿಯಿಂದ ಪ್ರಯಾಣಿಸುತ್ತಿದ್ದರು. ಬಸ್ ಚಿನ್ನಮನೆ ಸಮೀಪ ಸಂಚರಿಸುತ್ತಿದ್ದ ವೇಳೆ ರಮೇಶ್ ಅವರಿಗೆ ಏಕಾಏಕಿ ತೀವ್ರ ಎದೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ.ಪ್ರಯಾಣಿಕನ ಆರೋಗ್ಯ ಸ್ಥಿತಿ ಗಂಭೀರವಾಗಿರುವುದನ್ನು ಗಮನಿಸಿದ ಬಸ್ ಚಾಲಕ ಮುಸ್ತಾಕ್ ಜಯನಗರ ಹಾಗೂ ನಿರ್ವಾಹಕ ಅಶ್ರಫ್ ಜಯನಗರ ಅವರು ತಕ್ಷಣ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡಿದ್ದಾರೆ.
ಸಮಯ ವ್ಯರ್ಥ ಮಾಡದೆ ಚಾಲಕ ಮುಸ್ತಾಕ್ ಅವರು ನಿಗದಿತ ಮಾರ್ಗದಲ್ಲಿನ ನಿಲ್ದಾಣಗಳಲ್ಲಿ ಬಸ್ ನಿಲ್ಲಿಸದೇ, ಗಾಡಿಕೊಪ್ಪದ ಸಮೀಪದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಗೆ ನೇರವಾಗಿ ಬಸ್ ಚಲಾಯಿಸಿದ್ದಾರೆ. ಆಸ್ಪತ್ರೆಯ ಮುಖ್ಯದ್ವಾರದ ಬಳಿಯೇ ಬಸ್ ನಿಲ್ಲಿಸಿ, ಸಹಪ್ರಯಾಣಿಕರ ನೆರವಿನೊಂದಿಗೆ ಅಸ್ವಸ್ಥಗೊಂಡಿದ್ದ ರಮೇಶ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗೋಲ್ಡನ್ ಅವರ್‌ನಲ್ಲಿ ದೊರೆತ ಚಿಕಿತ್ಸೆ :
This video cannot be played in your browser. Open the video directly
ಹೃದಯಾಘಾತದ ಸಂದರ್ಭದಲ್ಲಿ ಅತ್ಯಂತ ನಿರ್ಣಾಯಕವಾಗಿರುವ ಸಮಯದಲ್ಲಿ ರಮೇಶ್ ಅವರಿಗೆ ವೈದ್ಯಕೀಯ ನೆರವು ದೊರೆತಿದ್ದು, ವೈದ್ಯರು ತಕ್ಷಣ ಚಿಕಿತ್ಸೆ ಆರಂಭಿಸಿದ್ದಾರೆ. ಸಕಾಲಿಕ ಚಿಕಿತ್ಸೆ ದೊರೆತ ಪರಿಣಾಮ ಅವರ ಜೀವ ಉಳಿಸಲು ಸಾಧ್ಯವಾಗಿದೆ ಎಂದು ತಿಳಿದುಬಂದಿದೆ.
ಪ್ರಯಾಣಿಕನ ಆರೋಗ್ಯ ಸ್ಥಿತಿಯನ್ನು ಅರಿತು ಸಮಯ ವ್ಯರ್ಥ ಮಾಡದೆ ಆಸ್ಪತ್ರೆಗೆ ಕರೆದೊಯ್ದ ಗುರುಶಕ್ತಿ ಬಸ್ ಚಾಲಕ ಹಾಗೂ ನಿರ್ವಾಹಕರ ಕರ್ತವ್ಯಪ್ರಜ್ಞೆ ಮತ್ತು ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.





