ಕಾರವಾರ: ವಿದೇಶಕ್ಕೆ ಸಾಂಬಾರು ಪದಾರ್ಥಗಳನ್ನು ರಫ್ತು ಮಾಡುವ ಉದ್ದೇಶದಿಂದ ಖರೀದಿದಾರರನ್ನು ಹುಡುಕುತ್ತಿದ್ದ ಉದ್ಯಮಿಯೊಬ್ಬರಿಗೆ ವಿದೇಶಿ ಕಂಪನಿಯ ಹೆಸರಿನಲ್ಲಿ ನಕಲಿ ಖರೀದಿ ವ್ಯವಹಾರದ ಆಮಿಷವೊಡ್ಡಿ ₹4.29 ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಕಾರವಾರದ ವನ್ನಳ್ಳಿಯ ನಂದಗೋಕುಲ ನಿವಾಸಿ ನಿತ್ಯಾನಂದ ಗೋಳಿ ನಾಯ್ಕ (53) ವಂಚನೆಗೆ ಒಳಗಾದವರು. ಇವರು ಸೆಪ್ಟೆಂಬರ್ 28ರಂದು ಸಾಂಬಾರು ಪದಾರ್ಥಗಳನ್ನು ವಿದೇಶಕ್ಕೆ ರಫ್ತು ಮಾಡುವ ಸಂಬಂಧ ಗೂಗಲ್‌ನಲ್ಲಿ ಖರೀದಿದಾರರನ್ನು ಹುಡುಕುತ್ತಿದ್ದಾಗ ‘Web Solutions Export’ ಎಂಬ ಕಂಪನಿಯ ವೆಬ್‌ಸೈಟ್ ಗಮನಕ್ಕೆ ಬಂದಿದೆ.
ಈ ಸುದ್ದಿ ಓದಿದ್ದೀರಾ ? ಶಿರಸಿ | ಸಂಚಾರ ಪೊಲೀಸ್ ಠಾಣೆಯ ಮೂವರು ಹೆಡ್ ಕಾನ್ಸ್‌ಟೇಬಲ್‌ಗಳು ಅಮಾನತು
ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿದಾಗ ಮಾತನಾಡಿದ ವ್ಯಕ್ತಿ ತನ್ನನ್ನು ಭುವನ ಚಂದ್ರ ಎಂದು ಪರಿಚಯಿಸಿಕೊಂಡು, ವಿದೇಶಿ ಖರೀದಿದಾರರನ್ನು ರಫ್ತುದಾರರಿಗೆ ಪರಿಚಯಿಸುವ ಕೆಲಸ ಮಾಡುವುದಾಗಿ ತಿಳಿಸಿದ್ದಾನೆ.
ನಂತರ ಗ್ರೀಸ್ ದೇಶದ ‘Agrola Trade, Trade LLC’ ಹೆಸರಿನ ಕಂಪನಿಯ ಮಾಲೀಕರಾದ ‘Grasimos Konstantinopoulos’ ಎಂಬ ವ್ಯಕ್ತಿಯನ್ನು ವಾಟ್ಸ್‌ಆ್ಯಪ್ ಮೂಲಕ ಪರಿಚಯಿಸಿದ್ದಾನೆ. ಈ ವ್ಯಕ್ತಿ ನಿತ್ಯಾನಂದ ಅವರಿಗೆ 25 ಮೆಟ್ರಿಕ್ ಟನ್ ಅರಿಶಿಣದ ಕೊಂಬನ್ನು ಅಂದಾಜು ₹98 ಲಕ್ಷಕ್ಕೆ ಖರೀದಿಸುವುದಾಗಿ ತಿಳಿಸಿದ್ದಾನೆ.
ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವು ಅಗತ್ಯ ಪ್ರಮಾಣಪತ್ರಗಳನ್ನು ಪಡೆಯಬೇಕೆಂದು ಹೇಳಿ, ಅವುಗಳಿಗಾಗಿ ಮುಂಗಡ ಹಣ ಪಾವತಿಸುವಂತೆ ಸೂಚಿಸಿದ್ದಾರೆ. ಇದನ್ನು ನಂಬಿದ ನಿತ್ಯಾನಂದ ಅವರು ಅಕ್ಟೋಬರ್ 6ರಿಂದ 21ರವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹4,29,000 ಜಮಾ ಮಾಡಿದ್ದಾರೆ. ಆದರೆ ಹಣ ಪಡೆದ ಬಳಿಕ ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 25/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 319(2), 318(4) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಕಲಂ 66(ಡಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.



