ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮದ ಶಂಕರಪ್ಪ ಈರಪ್ಪ ಆದರಗಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಗ್ರಾಮದ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿ, ಶಾಲೆಗೆ ಬಾರದ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವಂತೆ ಜಾಗೃತಿ ಮೂಡಿಸಿದರು.

ರಾಜ್ಯದಲ್ಲಿ ಅಕ್ಟೋಬರ್ ತಿಂಗಳ ರಜೆಯ ನಂತರ ಶಾಲೆ ಆರಂಭವಾಗಿದ್ದರೂ ಕೆಲವು ವಿದ್ಯಾರ್ಥಿಗಳು ಎರಡು-ಮೂರು ದಿನ ತಡವಾಗಿ ಶಾಲೆಗೆ ಹಾಜರಾಗುತ್ತಿದ್ದಾರೆ. ಇದರಿಂದ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಯ ವತಿಯಿಂದ ಈ ಜಾಥಾ ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು. ಎಲ್ಲರೂ ಪ್ರತಿದಿನ ಶಾಲೆಗೆ ಬಂದು ಪಾಠ ಪ್ರವಚನಗಳಲ್ಲಿ ಭಾಗವಹಿಸಬೇಕು ಎಂಬ ಸಂದೇಶ ಸಾರಿದರು.

ಈ ಕುರಿತು ಶಾಲೆಯ ದೈಹಿಕ ಶಿಕ್ಷಕರು ಮಾತನಾಡಿ, ರಜೆಯ ನಂತರ ವಿದ್ಯಾರ್ಥಿಗಳು ಶಾಲೆಗೆ ತಡವಾಗಿ ಬರುವ ಪ್ರವೃತ್ತಿ ಕಂಡುಬರುತ್ತಿದೆ. ಆದ್ದರಿಂದ ಯಾವುದೇ ವಿದ್ಯಾರ್ಥಿ ತರಗತಿಗಳನ್ನು ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ‘ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಬನ್ನಿ’ ಎಂಬ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.




