ಗೊಳಸಂಗಿಯ ಶ್ರೀ ಚನ್ನಮಲ್ಲಪ್ಪ ಚನ್ನವೀರಪ್ಪ ಹೆಬ್ಬಾಳ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಯುವರ್ ರೆಡ್ ಕ್ರಾಸ್ ಘಟಕ, ರೆಡ್ ರಿಬ್ಬನ್ ಹಾಗೂ ಐಕ್ಯೂ ಏ ಸಿ ಇವರ ಸಂಯುಕ್ತ ಆಶ್ರಯದಲ್ಲಿ ‘ವಿಶ್ವ ಆರೋಗ್ಯ ದಿನ, ಪ್ರಾಥಮಿಕ ಚಿಕಿತ್ಸೆ, ಹಾಗೂ ಹೆಚ್‌ಐವಿ ಏಡ್ಸ್’ ಕುರಿತ ಕಾರ್ಯಗಾರ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಸವನ ಬಾಗೇವಾಡಿಯ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್. ಎಸ್. ಮೇಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತ “ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆಯಾದ ಸ್ಮರಣಾರ್ಥವಾಗಿ ಪ್ರತಿ ವರ್ಷ ವಿಶ್ವ ಆರೋಗ್ಯ ದಿನಾಚರಣೆಯನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಮಾನವನ ಆರೋಗ್ಯ ರಕ್ಷಣೆಯ ಕುರಿತ ಜಾಗೃತಿ ಮೂಡಿಸುವುದೇ ವಿಶ್ವ ಆರೋಗ್ಯ ದಿನದ ಉದ್ದೇಶ” ಎಂದರು.
ಹೆಚ್‌ಐವಿ ಹರಡುವ ವಿಧಾನಗಳು ಹಾಗೂ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಮಾತನಾಡಿದ ಇವರು, “ನಮ್ಮ ದೈನಂದಿನ ಜೀವನದಲ್ಲಿ ಆಕಸ್ಮಿಕವಾಗಿ ಅನೇಕ ಅವಘಡಗಳು ಉಂಟಾದಾಗ ಪ್ರಾಥಮಿಕ ಚಿಕಿತ್ಸೆಯಿಂದ ಮಾನವನ ಜೀವ ರಕ್ಷಣೆಯನ್ನು ಮಾಡಬಹುದು” ಎಂದು ತಿಳಿಸಿದರು.
ಗೊಳಸಂಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಜಗದೀಶ್ ಮುಚ್ಚಂಡಿ ಮಾತನಾಡಿ, ಮಹಿಳೆಯರ ಗರ್ಭಕೋಶದ ಕ್ಯಾನ್ಸರ್ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್.ಆರ್. ಕುಂಬಾರ “ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ಆರೋಗ್ಯದ ಕಡೆಗೂ ಕೂಡ ಗಮನ ಹರಿಸಬೇಕೆಂದು” ತಿಳಿಸಿದರು.
ಇದನ್ನೂ ಓದಿ: ವಿಜಯಪುರ | ಏ.10ರಿಂದ ರಾಜ್ಯಮಟ್ಟದ ಬೃಹತ್ ಪುಸ್ತಕ ಮೇಳ
ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಸಹ ಪ್ರಾಧ್ಯಾಪಕ ಹಾಗೂ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಚಂದ್ರಕಾಂತ ನಾಯಕ್, ಐ ಕ್ಯೂ ಎ ಸಿ ಘಟಕದ ಸಂಚಾಲಕರು ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಶ್ರೀಶೈಲ ಬಬಲಾದ, ಎನ್‌ಎಸ್‌ಎಸ್ ಘಟಕ ಹಾಗೂ ರೆಡ್ ಕ್ರಾಸ್ ವಿಭಾಗದ ಸಂಚಾಲಕ ಪ್ರೊ. ನಂಜುಂಡಸ್ವಾಮಿ.ಎಂ ಉಪಸ್ಥಿತರಿದ್ದರು.




