ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಡ್ಯ ಇವರ ಸಹಭಾಗಿತ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ, ‘ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದರು.
“ಕಾಂಗ್ರೇಸ್ ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ ಅನೇಕಾನೇಕ ಯೋಜನೆಗಳನ್ನು ರೂಪಿಸಿದ್ದು, ಗ್ಯಾರಂಟಿ ಯೋಜನೆಗಳ ಮೂಲಕ ಒಂದು ಲಕ್ಷದ ಮೂವತ್ತು ಸಾವಿರ ಕೋಟಿಗೂ ಹೆಚ್ಚು ಹಣವನ್ನು ವಿವಿಧ ಯೋಜನೆಗಳ ರೂಪದಲ್ಲಿ ನಾಡಿನ ಜನರಿಗೆ ನೀಡಲಾಗಿದೆ. ಕಷ್ಟದ ಪರಿಸ್ಥಿತಿ ಎಲ್ಲರಿಗೂ ಇರುತ್ತದೆ ಆದರೆ, ಅದನ್ನು ಮನಸಲ್ಲಿ ಇಟ್ಟುಕೊಳ್ಳದೆ ಸರ್ಕಾರದಿಂದ ಸಿಗುವ ಸೌಲಭ್ಯದಿಂದಲೇ ಮುಂದೆ ಬರುವ ಪ್ರಯತ್ನ ಮಾಡಬೇಕು. ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದಲ್ಲಿ ಮಹಿಳೆಯರಿಗೆ ವಿಶೇಷ ಪ್ರಾತಿನಿಧ್ಯ ಇದೆ, ಸರ್ಕಾರ ಮಹಿಳೆಯರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ನಾಣ್ಣುಡಿಯಂತೆ ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ” ಎಂದರು.
ಶಿಕ್ಷಕರ ನೇಮಕಾತಿಯಲ್ಲಿ ಶೇ.50%ರಷ್ಟು ಮೀಸಲಾತಿ ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೀಸಲಾತಿ ನೀಡಲಾಗಿದೆ. ಇಷ್ಟಾದರೂ ಮಹಿಳೆಯರು ಸಮಾಜದಲ್ಲಿ ಮುಂದೆ ಬಂದಿದ್ದಾರ? ಇಲ್ಲವಾ! ಎಂದು ಹೆಣ್ಣು ಮಕ್ಕಳು ತಮ್ಮನ್ನು ತಾವೇ ಅವಲೋಕಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದೇಶದ ಅಭಿವೃದ್ಧಿ ಮತ್ತು ಆರ್ಥಿಕ ಸಬಲೀಕರಣ ಆಗಬೇಕಾದರೆ ಮಹಿಳೆಯರು ಶೈಕ್ಷಣಿಕವಾಗಿ ಮುಂದೆ ಬರಬೇಕು. ಮಹಿಳೆಯರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಮಹಿಳೆಯರ ಪ್ರಾತಿನಿಧ್ಯ ಅತಿ ಮುಖ್ಯ. ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಎನ್ಆರ್ಎಂಎಲ್ ಯೋಜನೆಯಡಿ ಸೌಲಭ್ಯ ಪಡೆದು ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆಯನ್ನು ತೆರೆಯಲಾಗುವುದು, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಬರಲಿದೆ ಎಲ್ಲರೂ ಜವಾಬ್ದಾರಿಯಿಂದ ಅರ್ಹ ವ್ಯಕ್ತಿಯನ್ನು ಆರಿಸಿ ಎಂದು ಕರೆ ನೀಡಿದರು.
ಶಾಸಕ ಪಿ. ರವಿಕುಮಾರ್ ಮಾತನಾಡಿ, “ಮಹಿಳೆಯರು ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬ ಪರಿಕಲ್ಪನೆ ಮಹಾತ್ಮ ಗಾಂಧೀಜಿ ಅವರದ್ದು. ಮಹಿಳೆಯರ ಅಭಿವೃದ್ಧಿಗೆ ಸಣ್ಣ ಕೈಗಾರಿಕೆಗಳ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್ ಅವರು ಜಿಲ್ಲೆಯಲ್ಲಿ ಗಾರ್ಮೆಂಟ್ಸ್ (ಸಣ್ಣ ಕೈಗಾರಿಕೆ)ತರಲು ಸಿದ್ಧರಾಗಿದ್ದಾರೆ. ಅವರಿಗೆ ಬಸರಾಳಿನಲ್ಲಿ 100 ಎಕ್ಕರೆ ಜಾಗವನ್ನು ಈಗಾಗಲೇ ಗುರುತಿಸಲಾಗಿದೆ. ಶ್ರೀಘ್ರದಲ್ಲಿಯೆ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು” ಎಂದು ಹೇಳಿದರು.
ವಿಶೇಷ ವಿಡಿಯೋ ವೀಕ್ಷಿಸಿ:https://youtu.be/Os6D9jsYNcw?si=UIU7SJsdlDYXr8a6
ಸಿಇಓ ಕೆ.ಆರ್. ನಂದಿನಿ ಮಾತನಾಡಿ, “ಮಹಿಳಾ ದಿನಾಚರಣೆ ಕೇವಲ ಆಚರಣೆಗೆ ಮಾತ್ರ ಸೀಮಿತವಾಗಬಾರದು ಅವರ ಸಬಲೀಕರಣವಾಗಬೇಕು. ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಮಾರ್ಚ್.8 ರಿಂದ ಏಪ್ರಿಲ್.8ರವರೆಗೆ ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಮಹಿಳೆಯರ ಸಬಲೀಕರಣ ಆಗದೆ ದೇಶದ ಸಬಲೀಕರಣ ಸಾಧ್ಯವಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಯುವ ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು: ಸಚಿವ ಚಲುವರಾಯಸ್ವಾಮಿ

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರ, ಕೈಮಗ್ಗ ಹಾಗೂ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಆಶಾ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಡಾ. ಶಿವಲಿಂಗಯ್ಯ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಲಕ್ಷ್ಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.





