ಈ ದಿನ ಸಂಪಾದಕೀಯ | ಮಡಿಲ ಮಾಧ್ಯಮಗಳಿಂದ ಮೋಶಾ ರಕ್ಷಣೆ ಸಾಧ್ಯವೇ?

Date:

ಮಡಿಲ ಮಾಧ್ಯಮಗಳಿಂದಲೂ ರಕ್ಷಣೆ ಇಲ್ಲ, ಅಕ್ಷೋಹಿಣಿ ಸೈನ್ಯವೂ ನೆರವಿಗೆ ಧಾವಿಸುತ್ತಿಲ್ಲ. ಕೊನೆಪಕ್ಷ ಸ್ವಂತ ಶಕ್ತಿಯಿಂದಲಾದರೂ ಎದ್ದು ನಿಂತು ದೇಶದ ಜನರ ಸಮಸ್ಯೆಗಳನ್ನು ಆಲಿಸುತ್ತಾರ; ಸಂಸತ್ತಿಗೆ ಹಾಜರಾಗಿ, ಕಲಾಪಗಳಲ್ಲಿ ಭಾಗಿಯಾಗಿ, ಪ್ರಶ್ನೆಗಳಿಗೆ ಉತ್ತರಿಸುತ್ತಾರ ಎಂದರೆ ಅದೂ ಇಲ್ಲ. ಇವರನ್ನು ನಾಯಕರು ಎನ್ನಲಾದೀತೆ?

ಮುಂಗಾರು ಅಧಿವೇಶನ ಮುಗಿದರೂ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸಂಸತ್ತಿನ ಕಲಾಪಗಳಲ್ಲಿ ಭಾಗಿಯಾಗದೆ, ದೇಶದ ಹೃದಯದಂತಿರುವ ಸಂಸತ್ತಿಗೆ, ಸಂಸತ್ತನ್ನು ಸಂರಕ್ಷಿಸುತ್ತಿರುವ ಪ್ರಜಾಪ್ರಭುತ್ವಕ್ಕೆ ಕಳಂಕ ತಂದುಬಿಟ್ಟರು.

- Advertisement -

ಏತನ್ಮಧ್ಯೆ ‘ನಾವು ಉತ್ತರಿಸಲು ಸಿದ್ಧರಿದ್ದೇವೆ, ವಿರೋಧ ಪಕ್ಷಗಳ ನಾಯಕರೇ ಸಂಸತ್ತಿನ ಕಲಾಪಗಳಿಗೆ ಹಾಜರಾಗುತ್ತಿಲ್ಲ’ ಎಂದು ಸುದ್ದಿ ಹಬ್ಬಿಸಿದರು. ಆ ಸುದ್ದಿ ಹಬ್ಬಿಸಲು ಪ್ರಭುತ್ವದ ಪದತಲದಲ್ಲಿ ಪವಡಿಸಿರುವ ಮಡಿಲ ಮಾಧ್ಯಮಗಳನ್ನು ಬಳಸಿಕೊಂಡರು. ಕುತೂಹಲಕರ ಸಂಗತಿ ಎಂದರೆ, ಪಿಟಿಐ ಮತ್ತು ಎಎನ್ಐ ಎಂಬ ಎರಡು ಸುದ್ದಿ ಸಂಸ್ಥೆಗಳನ್ನು ಮಾತ್ರ ಗೃಹ ಸಚಿವ ಅಮಿತ್‌ ಶಾ ಸಂಸತ್ತಿನ ಅಂಗಳಕ್ಕೇ ಕರೆದು ಮಾತನಾಡಿದರು. ಆದರೆ, ಆ ಸುದ್ದಿ ಸಂಸ್ಥೆಯ ಪತ್ರಕರ್ತರು ಗೃಹ ಸಚಿವರಿಗೆ, ‘ಸದನಕ್ಕೆ ಏಕೆ ಹಾಜರಾಗುತ್ತಿಲ್ಲ’ ಎಂದು ಪ್ರಶ್ನಿಸಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಸೋಜಿಗದ ಸಂಗತಿ ಎಂದರೆ, ಬುಧವಾರ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿಯವರು ಸಂಸತ್ ಪ್ರವೇಶಿಸುತ್ತಿದ್ದಂತೆ ಮುಗಿಬಿದ್ದ ಪತ್ರಕರ್ತರು(ರಣಹದ್ದುಗಳು) ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು. ಪತ್ರಕರ್ತರ ಪ್ರಶ್ನೆಗಳಿಗೆ ಸಾಮಾನ್ಯವಾಗಿ ನಗುನಗುತ್ತಲೇ ಉತ್ತರಿಸುವ; ಎಂಥದೇ ಸಂದರ್ಭವಾದರೂ ಸಂಯಮ ಕಾಪಾಡಿಕೊಳ್ಳುವ ಪ್ರಿಯಾಂಕಾ ಗಾಂಧಿ, ‘ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡುವಾಗ, ಅವರ ಮೇಲೆ ಪೆಲೆಟ್ ಗನ್‌ಗಳನ್ನು ಹಾಗೂ AK-47ಗಳನ್ನು ಬಳಸುವಾಗ, ನೀವು ಸಾರ್ವಜನಿಕರಿಗೆ ಉತ್ತರದಾಯಿಗಳಲ್ಲವೇ? ನಿಮ್ಮ ಪ್ರಕಾರ, ಇದಕ್ಕೆ ಯಾರು ಹೊಣೆಗಾರರು? ನಿಮ್ಮಂತೆ ನಾವೂ ಸುಮ್ಮನೆ ಕುಳಿತುಕೊಳ್ಳಬೇಕೇ?’ ಎಂದು ಕೊಂಚ ಖಾರವಾಗಿಯೇ ಪ್ರಶ್ನಿಸಿದರು.  

ಮಾಧ್ಯಮದವರಿಗೆ ಕಿಂಚಿತ್ತಾದರೂ ಅಳುಕು-ಅಂಜಿಕೆ ಅನ್ನುವುದು ಇದ್ದಿದ್ದರೆ, ಮತ್ತೆ ಪ್ರಿಯಾಂಕಾ ಮುಂದೆ ಮೈಕ್ ಹಿಡಿದು ನಿಲ್ಲುತ್ತಿರಲಿಲ್ಲ. ಆದರೆ ಮಾರಿಕೊಂಡವರು, ಮೂರೂ ಬಿಟ್ಟವರು ಮತ್ತೆ ಮತ್ತೆ ಪ್ರಶ್ನೆ ಮಾಡುವುದನ್ನು ಬಿಡಲಿಲ್ಲ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಿಡದಿ ಭೂಸ್ವಾಧೀನಕ್ಕೆ ‘ರೈತರು ಒಪ್ಪಿದ್ದಾರೆ’ ಎಂಬುದು ನಿಜವಲ್ಲ, ಸರ್ಕಾರಕ್ಕೆ ಶೋಭೆ ತರುವುದಿಲ್ಲ

ಅಷ್ಟೇ ಅಲ್ಲ, ಮುಂಗಾರು ಅಧಿವೇಶನ ಮುಗಿದರೂ ಸದನಕ್ಕೆ ಹಾಜರಾಗದ, ವಿರೋಧ ಪಕ್ಷಗಳ ಪ್ರಶ್ನೆಗೆ ಉತ್ತರಿಸದ ಗೃಹ ಸಚಿವ ಅಮಿತ್ ಶಾ ಅವರನ್ನು ಪ್ರಶ್ನಿಸುವ ಧೈರ್ಯ ತೋರಲಿಲ್ಲ. ಬದಲಿಗೆ, ಅಧಿವೇಶನ ಮುಗಿಯಲು ಇನ್ನು ಒಂದೂವರೆ ದಿನಗಳು ಬಾಕಿ ಇರುವಾಗ, ಸ್ಪೀಕರ್‍‌ಗೆ ಪತ್ರ ಬರೆದು, ‘ನೀಟ್ ಚರ್ಚೆಗಾಗಿ ವಿರೋಧ ಪಕ್ಷದವರನ್ನು ಸಮಾಲೋಚಿಸಿ’ ಎಂದು ವಿನಂತಿಸಿಕೊಳ್ಳುವ ಗೃಹ ಸಚಿವರ ನಾಟಕಕ್ಕೆ ಸುದ್ದಿ ಸಂಸ್ಥೆಗಳಿಂದಲೇ ವ್ಯವಸ್ಥಿತ ವೇದಿಕೆ ಕಲ್ಪಿಸಿಕೊಡಲಾಯಿತು.

ಅದೇ ಸಂದರ್ಭದಲ್ಲಿ ಸಂಸತ್‌ ಭವನದ ಹೊರಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಕಾಣಿಸಿಕೊಂಡರು. ತಕ್ಷಣ ಅವರ ಮೇಲೆ ಮುಗಿಬಿದ್ದ ಪತ್ರಕರ್ತರು(ರಣಹದ್ದುಗಳು), ಜಾರ್ಖಂಡ್‌ ರಾಜ್ಯದ ರಾಂಚಿಯಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ, ಪೊಲೀಸರ ದೌರ್ಜನ್ಯ, ಸಿಎಂ ರಾಜೀನಾಮೆ ಕುರಿತು ಪ್ರಶ್ನೆಗಳ ಮಳೆಗರೆದರು.

ಅದಕ್ಕೆ ಕೊಂಚವೂ ವಿಚಲಿತರಾಗದ ರಾಹುಲ್‌ ಗಾಂಧಿ, ‘ಕಳೆದ ಹದಿನೆಂಟು ದಿನಗಳಿಂದ ನಾವು ಕೇಳುತ್ತಿರುವುದು ಎರಡೇ ಪ್ರಶ್ನೆ, ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಆದೇಶಿಸಿದ್ದು ಯಾರು ಮತ್ತು ರಾಮಮಂದಿರ ಹುಂಡಿ ಲೂಟಿಗೆ ಏನು ಕ್ರಮ ಕೈಗೊಂಡಿದ್ದೀರಿ. ಪ್ರತಿದಿನ ಗೃಹ ಸಚಿವರು ಸಂಸತ್ತಿಗೆ ಬರುತ್ತಾರೆ. ಅವರ ಹಿಂದೆ ಮುಂದೆ ಹತ್ತಾರು ಕಾರುಗಳು, ನೂರಾರು ಅಧಿಕಾರಿಗಳು, ಸಿಬ್ಬಂದಿಗಳ ಸರಬರ ಓಡಾಟ ಎಲ್ಲವೂ ನಡೆಯುತ್ತದೆ. ಆದರೆ ಅಧಿವೇಶನಕ್ಕೆ ಬರಲು ಅವರಿಗೆ ಧೈರ್ಯವಿಲ್ಲ. ಈ ನಾಟಕವನ್ನು ನೀವೂ ನೋಡುತ್ತಿದ್ದೀರಿ. ಅಮಿತ್‌ ಶಾ ಕಲಾಪಕ್ಕೆ ಏಕೆ ಹಾಜರಾಗುತ್ತಿಲ್ಲ, ನೀವೇಕೆ ಅವರನ್ನು ಪ್ರಶ್ನಿಸುತ್ತಿಲ್ಲ. ನನಗೆ ಇಷ್ಟೊಂದು ಪ್ರಶ್ನೆ ಮಾಡುವ ನೀವು ಅವರೆದುರು ಏಕೆ ಇಲಿಗಳಂತೆ ಸುಮ್ಮನೆ ನಿಲ್ಲುತ್ತೀರಿ’ ಎಂದು ಪತ್ರಕರ್ತರ ಪಡಪೋಸಿತನವನ್ನು ಬಯಲು ಮಾಡಿದರು.    

ಕಣ್ಣೆದುರೇ ಅನ್ಯಾಯ, ದೌರ್ಜನ್ಯ, ಜೀವವಿರೋಧಿ ಕೃತ್ಯಗಳು ನಡೆಯುತ್ತಿದ್ದರೂ, ಪತ್ರಕರ್ತರು ಕಂಡೂ ಕಾಣದಂತಿದ್ದಾರೆ. ಅಧಿಕಾರಸ್ಥರ ಸಗಣಿ ತಿಂದು, ಗಂಜಲ ಕುಡಿದು ತೇಲಾಡುತ್ತಿದ್ದಾರೆ. ಅಷ್ಟೇ ಅಲ್ಲ, ಟಿವಿ ಪರದೆಯ ಮೇಲೆ ಗೌರವಾನ್ವಿತ ಪತ್ರಕರ್ತರಂತೆ ಪೋಸು ಕೊಡುವ, ಸಮಾಜಕ್ಕೆ ಬೋಧನೆ ಮಾಡುವ ವ್ಯಕ್ತಿಗಳು, ತೆರೆಯ ಹಿಂದೆ ಮಾಡಬಾರದ ಅಡ್ನಾಡಿ ವ್ಯವಹಾರಗಳನ್ನೆಲ್ಲ ಮಾಡುತ್ತಿದ್ದಾರೆ. ಇದು ಈ ದೇಶ ಇತ್ತೀಚಿನ ವರ್ಷಗಳಲ್ಲಿ ಕಂಡ ಪತ್ರಿಕೋದ್ಯಮ. ಇಂತಹ ಪತ್ರಿಕೋದ್ಯಮವನ್ನು ಪೊರೆಯುತ್ತಿರುವವರು ಕೆಲವೇ ಕೆಲವು ಉದ್ಯಮಪತಿಗಳು.

ಇಂದು ದೇಶದ ಪ್ರಮುಖ ಸುದ್ದಿ ಸಂಸ್ಥೆಗಳ ಮಾಲೀಕತ್ವ ಅಂಬಾನಿ(ನ್ಯೂಸ್ 18), ಅದಾನಿ(ಎನ್‌ಡಿಟಿವಿ), ಜೈನ್(ಟೈಮ್ಸ್), ಸುಭಾಷ್ ಚಂದ್ರ(ಜೀ), ಶೋಭನಾ ಭಾರ್ತಿಯಾ(ಹಿಂದೂಸ್ಥಾನ್ ಟೈಮ್ಸ್), ಸರ್ಕಾರ್(ಎಬಿಪಿ), ಪುರಿ(ಇಂಡಿಯಾ ಟುಡೇ), ಅಗರ್ವಾಲ್(ದೈನಿಕ್ ಭಾಸ್ಕರ್), ಗುಪ್ತ(ಜಾಗರಣ್) ಕುಟುಂಬಗಳ ಕೈಯಲ್ಲಿದೆ. ಇವರೆಲ್ಲರೂ ಸಂಘದ ಸಂಪರ್ಕದಲ್ಲಿರುವ ಸರ್ಕಾರದ ಫಲಾನುಭವಿಗಳು. ಬಿಜೆಪಿಗೆ ಕೋಟಿಗಟ್ಟಲೆ ದೇಣಿಗೆ ನೀಡಿದವರು.  

ಇಂಥವರ ಹಿಡಿತದಲ್ಲಿರುವ ಸುದ್ದಿ ಮಾಧ್ಯಮಗಳಿಂದ ಪ್ರಭುತ್ವವನ್ನು ಪ್ರಶ್ನಿಸುವುದು, ವಸ್ತುನಿಷ್ಠ ವರದಿ ಮಾಡುವುದು, ಶೋಷಿತರ ಪರ ನಿಲ್ಲುವುದು, ಅಸಹಾಯಕರಿಗೆ ಆಸರೆಯಾಗುವುದು, ದಮನಿತರ ದನಿಯಾಗುವುದು ಸಾಧ್ಯವೇ?

ಇದನ್ನು ಓದಿದ್ದೀರಾ?:  ಈ ದಿನ ಸಂಪಾದಕೀಯ | ಮಹಿಳೆಯರಿಲ್ಲದ ಸಚಿವ ಸಂಪುಟ: 33% ಮೀಸಲಾತಿ ಮಾತು ಎಲ್ಲೋಯ್ತು?

ಇತ್ತೀಚಿನ ವಿದ್ಯಾರ್ಥಿ ಹೋರಾಟವನ್ನೇ ನೋಡಿದರೂ, ಭಾರತೀಯ ಮಾಧ್ಯಮ ಪ್ರಭುತ್ವದೊಂದಿಗೆ ರಾಜಿಯಾಗಿ, ಹೋರಾಟವನ್ನು ಹತ್ತಿಕ್ಕಲು ಹವಣಿಸಿತು. ಅಧಿಕಾರಸ್ಥರು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದರೆ, ಮಾಧ್ಯಮ ಹೋರಾಟವನ್ನು ನಿರ್ಲಕ್ಷಿಸಿತು, ದಾರಿ ತಪ್ಪಿಸಲು ನೋಡಿತು. ಇಷ್ಟಾದರೂ ಪ್ರಧಾನಿ ಮೋದಿಯವರ ಐವತ್ತಾರು ಇಂಚಿನ ಇಮೇಜನ್ನು ವಿದ್ಯಾರ್ಥಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಾಜು ಹಾಕುವುದನ್ನು ತಡೆಯಲಾಗಲಿಲ್ಲ. ಚಾಣಕ್ಯ, ತಂತ್ರಗಾರ ಎಂಬ ಬಿರುದಾಂಕಿತ ಅಮಿತ್ ಶಾರಂತಹ ‘ಧೈರ್ಯಸ್ಥ’ರು ಬಿಲ ಬಿಟ್ಟು ಹೊರಬರಲಿಲ್ಲ. ಅಂದಮೇಲೆ ಮಡಿಲ ಮಾಧ್ಯಮಗಳನ್ನು ಬಿಜೆಪಿ ಸಾಕಿಕೊಂಡಿರುವುದೇಕೆ, ಇವುಗಳಿಂದ ರಕ್ಷಣೆ ಸಾಧ್ಯವೇ?

ಜೊತೆಗೆ ಐಟಿ, ಇಡಿ, ಸಿಬಿಐ, ಎನ್‌ಎಸ್‌ಎ ಸಂಸ್ಥೆಗಳು, ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್, ರಾಷ್ಟ್ರಪತಿ ಭವನ, ಸ್ಪೀಕರ್-ಚೇರ್ಮನ್, ರಾಜ್ಯಪಾಲರು, ಸಂಘಪರಿವಾರದ ಬೆಂಬಲಿತ ಐಎಎಸ್-ಐಪಿಎಸ್ ಅಧಿಕಾರಿಗಳು, ಅದರ ಜೊತೆಗೆ ನರೇಟಿವ್ ಬಿಲ್ಡ್ ಮಾಡುವ ಸಂಘಜೀವಿಗಳು, ಪಠ್ಯ ಕ್ರಮ ಬದಲಿಸುವ ಸಂಘಿತಜ್ಞರು, ಬಾಡಿಗೆ ಭಾಷಣಕಾರರು ಮತ್ತು ಎರಡು ರೂಪಾಯಿ ಭಕ್ತರು- ಅಕ್ಷೋಹಿಣಿ ಸೈನ್ಯದ ಬೆಂಬಲವೇ ಬಿಜೆಪಿಗಿದೆ. ಅದರ ನಾಯಕರಾದ ಮೋದಿ ಮತ್ತು ಅಮಿತ್ ಶಾ ಅವರನ್ನು ರಕ್ಷಿಸಲು ಹಗಲಿರುಳು ಶ್ರಮಿಸುತ್ತಿದೆ.

ದುರಂತವೆಂದರೆ, ಸಾಕಿಕೊಂಡ ಮಡಿಲ ಮಾಧ್ಯಮಗಳಿಂದಲೂ ರಕ್ಷಣೆ ಇಲ್ಲ, ಅಕ್ಷೋಹಿಣಿ ಸೈನ್ಯವೂ ನೆರವಿಗೆ ಧಾವಿಸುತ್ತಿಲ್ಲ. ಕೊನೆಪಕ್ಷ ಸ್ವಂತ ಶಕ್ತಿಯಿಂದಲಾದರೂ ಎದ್ದು ನಿಂತು ದೇಶದ ಜನರ ಸಮಸ್ಯೆಗಳನ್ನು ಆಲಿಸುತ್ತಾರ, ಸಂಸತ್ತಿಗೆ ಹಾಜರಾಗಿ, ಕಲಾಪಗಳಲ್ಲಿ ಭಾಗಿಯಾಗಿ, ಪ್ರಶ್ನೆಗಳಿಗೆ ಉತ್ತರಿಸುತ್ತಾರ ಎಂದರೆ ಅದೂ ಇಲ್ಲ. ಇವರನ್ನು ನಾಯಕರು ಎನ್ನಲಾದೀತೆ? ಇವರ ಮುಖವಾಡ ಕಳಚುತ್ತಿರುವ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ನಿಜನಾಯಕರಲ್ಲವೇ? ಇವರೊಂದಿಗೆ ದೇಶದ ಜನ ನಿಲ್ಲಬೇಕಾದ್ದು ನ್ಯಾಯವಲ್ಲವೇ?

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುದ್ದೇಬಿಹಾಳ | ದಾಸೋಹಿ ರೈತ ಉತ್ಪಾದಕ ಸಹಕಾರಿ ಸಂಘದ ಆರ್ಥಿಕ ಚಟುವಟಿಕೆ: ಗವಿಸಿದ್ದೇಶ್ವರ ಶ್ರೀಗಳಿಂದ ಚಾಲನೆ

ರೈತರೇ ಮಾಲೀಕರಾಗಿ, ರೈತರ ಆರ್ಥಿಕ ಸಬಲೀಕರಣವನ್ನೇ ಕೇಂದ್ರವಾಗಿಟ್ಟುಕೊಂಡು ಅಸ್ತಿತ್ವಕ್ಕೆ ಬಂದಿರುವ ದಾಸೋಹಿ...

ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ: ವೈರಲ್ ಆಯ್ತು ರಾಹುಲ್ ಗಾಂಧಿ ‘X’ ಪೋಸ್ಟ್

ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ ಎಂದು ಕಾಂಗ್ರೆಸ್ ನಾಯಕ ಹಾಗೂ...

ಗವಿಸಿದ್ದೇಶ್ವರ ಸ್ವಾಮೀಜಿ ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿದ್ದಾರೆಂಬ ಸುಳ್ಳುಸುದ್ದಿ: ತಪ್ಪಿತಸ್ಥನ ವಿರುದ್ಧ FIR

ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಆಹ್ವಾನವನ್ನು...