ನಾಲ್ಕನೇ ಮಗುವಿನ ಹೆರಿಗೆಗಾಗಿ ಆರು ತಿಂಗಳ ಮಾತೃತ್ವ ರಜೆ ನೀಡುವಂತೆ ಕೋರಿ ಉತ್ತರ ಪ್ರದೇಶದ ಮಹಿಳಾ ಸರ್ಕಾರಿ ನೌಕರರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ಮಂಜು ರಾಣಿ ಚೌಹಾಣ್ ಅವರು ಆಗಸ್ಟ್ 7ರಂದು ಈ ಆದೇಶ ಹೊರಡಿಸಿದ್ದಾರೆ. ನಾಲ್ಕನೇ ಮಗುವಿನ ಹೆರಿಗೆಗೆ ಮಾತೃತ್ವ ರಜೆ ನೀಡುವಂತೆ ಮಾಡಿದ್ದ ಮನವಿಯನ್ನು ಜೂನ್ 19ರಂದು ಸರ್ಕಾರಿ ಅಧಿಕಾರಿಗಳು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ತಮ್ಮ ಮೊದಲ ಮೂರು ಮಕ್ಕಳ ಜನನದ ಸಂದರ್ಭದಲ್ಲಿ ತಾವು ಮಾತೃತ್ವ ರಜೆ ಪಡೆದಿರಲಿಲ್ಲ. ಹೀಗಾಗಿ ಇದೇ ಮೊದಲ ಬಾರಿಗೆ ಮಾತೃತ್ವ ರಜೆ ಪಡೆಯುತ್ತಿರುವುದರಿಂದ ನಾಲ್ಕನೇ ಮಗುವಿಗೆ ರಜೆ ನೀಡಬೇಕು ಎಂದು ಅರ್ಜಿದಾರರು ನ್ಯಾಯಾಲಯದಲ್ಲಿ ವಾದಿಸಿದ್ದರು.
ಆದರೆ, ಸರ್ಕಾರ ಇದನ್ನು ವಿರೋಧಿಸಿದ್ದು, ಹಣಕಾಸು ಕೈಪಿಡಿಯಲ್ಲಿರುವ ನಿಯಮಗಳನ್ನು ಉಲ್ಲೇಖಿಸಿದೆ. ಅದರಂತೆ, ಖಾಯಂ ಅಥವಾ ತಾತ್ಕಾಲಿಕ ಮಹಿಳಾ ಸರ್ಕಾರಿ ನೌಕರರಿಗೆ ಗರಿಷ್ಠ ಎರಡು ಸಂದರ್ಭಗಳಲ್ಲಿ ಮಾತ್ರ ಮಾತೃತ್ವ ರಜೆ ಪಡೆಯಲು ಅವಕಾಶವಿದೆ. ಅಲ್ಲದೆ, ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಜೀವಂತ ಮಕ್ಕಳನ್ನು ಹೊಂದಿರುವ ಮಹಿಳಾ ಸರ್ಕಾರಿ ನೌಕರರಿಗೆ ಮಾತೃತ್ವ ರಜೆ ನೀಡುವಂತಿಲ್ಲ ಎಂದು ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು.
ಈ ವಾದವನ್ನು ಪರಿಗಣಿಸಿದ ನ್ಯಾಯಾಲಯ, ಅರ್ಜಿದಾರರ ನಾಲ್ಕನೇ ಮಗುವಿಗೆ ಮಾತೃತ್ವ ರಜೆ ನಿರಾಕರಿಸಿರುವ ಸರ್ಕಾರಿ ಅಧಿಕಾರಿಗಳ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು.
ಇದೇ ವೇಳೆ, ಪ್ರಕರಣದ ದಾಖಲೆಗಳಿಗೆ ಸಂಬಂಧಿಸಿದ ಮತ್ತೊಂದು ವಿಚಾರದ ಬಗ್ಗೆಯೂ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಅರ್ಜಿಯೊಂದಿಗೆ ಮೂಲ ದಾಖಲೆಗಳ ಫೋಟೋಕಾಪಿಗಳನ್ನು ಸಲ್ಲಿಸುವ ಬದಲು ಕೇವಲ ಟೈಪ್ ಮಾಡಲಾದ ಪ್ರತಿಗಳನ್ನು ಲಗತ್ತಿಸಲಾಗಿತ್ತು.
ಇದನ್ನೂ ಓದಿ: ಮೀಸಲಾತಿಯ ಲಾಭ ಪಡೆದ ನ್ಯಾ ಸಂತೋಷ್ ಹೆಗ್ಡೆ ಮತ್ತು ಬಂಟರು
ಟೈಪ್ ಮಾಡಿದ ದಾಖಲೆಗಳಲ್ಲಿ ಮುದ್ರಣ ಅಥವಾ ಟೈಪಿಂಗ್ ದೋಷಗಳು ಇರುವ ಸಾಧ್ಯತೆಯಿದ್ದು, ಅವುಗಳನ್ನು ಮೂಲ ದಾಖಲೆಗಳೊಂದಿಗೆ ಪರಿಶೀಲಿಸಬೇಕಾಗುತ್ತದೆ. ಹೀಗಾಗಿ ಇಂತಹ ಪ್ರತಿಗಳ ಆಧಾರದ ಮೇಲೆ ಪ್ರಕರಣದ ವಿಚಾರಗಳನ್ನು ನಿರ್ಧರಿಸುವುದು ಕಷ್ಟ ಎಂದು ನ್ಯಾಯಾಲಯ ತಿಳಿಸಿದೆ. ಮುಂದೆ ಇಂತಹ ಪ್ರಕರಣಗಳಲ್ಲಿ ದಾಖಲೆಗಳ ಸೂಕ್ತ ಪ್ರತಿಗಳನ್ನು ಸಲ್ಲಿಸುವಂತೆ ನೋಡಿಕೊಳ್ಳಬೇಕು ಎಂದು ಹೈಕೋರ್ಟ್‌ನ ವರದಿ ವಿಭಾಗಕ್ಕೆ ಸೂಚಿಸಿದೆ. ಮೂಲ ದಾಖಲೆಗಳ ಸರಿಯಾದ ಫೋಟೋಕಾಪಿಗಳನ್ನು ಅರ್ಜಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ.
ಅರ್ಜಿದಾರರ ಪರ ವಕೀಲೆ ಅಂಚಲ್ ಓಜಾ ವಾದ ಮಂಡಿಸಿದರೆ, ಉತ್ತರ ಪ್ರದೇಶ ಸರ್ಕಾರದ ಪರ ಹೆಚ್ಚುವರಿ ಮುಖ್ಯ ಸ್ಥಾಯಿ ವಕೀಲೆ ಅನುರಾಧಾ ಸುಂದರಂ ಹಾಜರಾಗಿದ್ದರು. ಇತರೆ ಪ್ರತಿವಾದಿಗಳ ಪರ ವಕೀಲ ನಾಗೇಂದ್ರ ಕುಮಾರ್ ಪಾಂಡೆ ವಾದ ಮಂಡಿಸಿದರು.




