ಮತಗಟ್ಟೆ ಬಳಿ ಮತದಾರರ ಚೀಟಿ ವಿತರಣೆಗಾಗಿ ಕಾರ್ಯಕರ್ತರು ಕುಳಿತುಕೊಳ್ಳಲು ಹಾಕಿಕೊಂಡಿದ್ದ ಟೇಬಲ್ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಎಸ್ ಡಿಪಿಐ ಕಾರ್ಯಕರ್ತರ ನಡುವೆ ವಾಗ್ವಾದ, ಗಲಾಟೆ ನಡೆದ ಘಟನೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಿಲ್ಲತ್ ಸ್ಕೂಲ್ ಬಳಿ ಹಜರತ್ ಚೌಕದಲ್ಲಿ ನಡೆದಿದೆ.

ಮಿಲ್ಲತ್ ಶಾಲೆಯ ಆವರಣದಲ್ಲಿ 6 ಮತಗಟ್ಟೆಗಳಿದ್ದು
ಮೆಹಬೂಬ್ ನಗರದ ರಸ್ತೆಯ ಹಜರತ್ ಚೌಕದಲ್ಲಿ ಮತಗಟ್ಟೆ ಆವರಣದ ಹೊರಗೆ ರಸ್ತೆಯ ಅಕ್ಕಪಕ್ಕ ಕಾಂಗ್ರೆಸ್ ಹಾಗೂ ಎಸ್ ಡಿಪಿಐ ಕಾರ್ಯಕರ್ತರು ಟೇಬಲ್ ಹಾಕಿಕೊಂಡು, ಚೀಟಿ ವಿತರಣೆಗಾಗಿ ಕುಳಿತ್ತಿದ್ದರು. ಅಲ್ಲದೆ ಮತದಾರರ ಮನವೊಲಿಕೆಗೆ ಪ್ರಯತ್ನಿಸುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗುತ್ತಿತ್ತು.

ಮುಖ್ಯ ರಸ್ತೆಯಿಂದ ಇರುವ ಟೇಬಲ್ ಅನ್ನು ಹಿಂದಕ್ಕೆ ಹಾಕಿಕೊಳ್ಳಲು ಕಾಂಗ್ರೆಸ್ ಮುಖಂಡರುಗಳು ಎಸ್ಡಿಪಿಐ ಕಾರ್ಯಕರ್ತರಿಗೆ ತಾಕೀತು ಮಾಡಿದರು. ಇದಕ್ಕೆ ಜಗ್ಗದ ಸೋಷಿಯಲಿಸ್ಟ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಕುಳಿತಿದ್ದರು. ಟೇಬಲ್ ತೆರವುಗೊಳಿಸುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಹಾಗೂ ಇತರರು ಒತ್ತಾಯಿಸಿದಾಗ
ಒಪ್ಪದೇ ಇದ್ದಾಗ ವಾಗ್ವಾದ, ಗಲಾಟೆ ಹಾಗೂ ಮಾತಿನ ಚಕಮಕಿ ನಡೆಯಿತು. ಗೊಂದಲದ ವಾತಾವರಣ ನಿರ್ಮಾಣವಾಗಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಎಸ್ ಡಿಪಿಐ ಕಾರ್ಯಕರ್ತರ ಟೇಬಲ್ ತೆಗೆದು ಬಿಸಾಡಿದರು. ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಜಟಾಪಟಿ ನಡೆಯಿತು. ತಕ್ಷಣ ಪೊಲೀಸರು, ಅರೆಸೇನಾ ಪಡೆ ಸ್ಥಳಕ್ಕೆ ಆಗಮಿಸಿ ಕಾರ್ಯಕರ್ತರನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.
ಈ ಸುದ್ದಿ ಓದಿದ್ದೀರಾ? http://ದಾವಣಗೆರೆ ಚುನಾವಣಾ ಕಣದಲ್ಲಿ ಕಾಂಗ್ರೆಸಿನ ಪ್ರಮುಖ ವಾಲ್ಮೀಕಿ ನಾಯಕರ ಗೈರು? ನಿರ್ಲಕ್ಷ್ಯವೇ ಅಥವಾ ಬಣ ಬಡಿದಾಟವೇ?
ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣದಲ್ಲಿ 25 ಅಭ್ಯರ್ಥಿಗಳಿದ್ದು ಬಹುತೇಕ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ನೇರ ಹಣಾಹಣಿ ಇದ್ದು, ಎಸ್ ಡಿ ಪಿ ಐ ಕೂಡ ಮುಸ್ಲಿಂ ಬಾಹುಳ್ಯದ ಮತಗಟ್ಟೆಗಳಲ್ಲಿ ಕಠಿಣ ಸ್ಪರ್ಧೆ ಎದುರಿಸುತ್ತಿವೆ. ಮದ್ಯಾಹ್ನ ಮೂರು ಘಂಟೆ ವೇಳೆಗೆ ಶೇ.49.66 ರಷ್ಟು ಮತದಾನವಾಗಿದ್ದು, 1,14,752 ಮತದಾರರು ಹಕ್ಕು ಚಲಾಯಿಸಿದ್ದಾರೆ. ಸಂಜೆ ಆರರವರೆಗೆ ಮತದಾನ ನಡೆಯಲಿದ್ದು ಶೇ. 80 ದಾಟುವ ನಿರೀಕ್ಷೆ ಇದೆ.





