ರೇವತಿಯಂತಹ ದೃಢ ಪೊಲೀಸರು ವ್ಯವಸ್ಥೆಯಲ್ಲಿದ್ದಾಗ ಮಾತ್ರ ಸಾಮಾನ್ಯ ಜನರಿಗೆ ಕಾನೂನಿನ ಮೇಲೆ ನಂಬಿಕೆ ಉಳಿಯಲು ಸಾಧ್ಯ. 'ಅನ್ಯಾಯದ ಮುಂದೆ ಮೌನವಾಗಿರುವುದು ಕೂಡ ಒಂದು ಅಪರಾಧ. ಆ ಮೌನವನ್ನು ಮುರಿದು ನ್ಯಾಯದ ಪರವಾಗಿ ನಿಂತ ರೇವತಿ ನೈಜ ಸ್ಪೂರ್ತಿ'
ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತಾಂಕುಲಂನಲ್ಲಿ ನಡೆದ ಜಯರಾಜ್ ಮತ್ತು ಬೆನಿಕ್ಸ್ ಅವರ ಕಸ್ಟಡಿ ಕೊಲೆ ಪ್ರಕರಣವು ದೇಶದ ಪೊಲೀಸ್ ಇತಿಹಾಸದಲ್ಲೇ ಒಂದು ಕಪ್ಪು ಚುಕ್ಕೆ. ಈ ಪ್ರಕರಣದಲ್ಲಿ ಇತ್ತೀಚೆಗೆ ಮಧುರೈ ಜಿಲ್ಲೆಯ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಒಂಬತ್ತು ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಈ ಸಂದರ್ಭದಲ್ಲಿ ನಾವು ನೆನೆಯಬೇಕಾಗಿದ್ದು, ಈ ಅನ್ಯಾಯದ ವಿರುದ್ಧ ದೃಢ ಸಾಕ್ಷಿಯಾಗಿ ನಿಂತ ಹೆಡ್ ಕಾನ್‌ಸ್ಟೆಬಲ್ ರೇವತಿ ಅವರನ್ನು.
ಕಸ್ಟಡಿ ಕೊಲೆ ಪ್ರಕರಣದಲ್ಲಿ ವ್ಯವಸ್ಥೆಯ ಒಳಗಿದ್ದುಕೊಂಡೇ ಧ್ವನಿ ಎತ್ತಿ, ಸಂತ್ರಸ್ತರಿಗೆ ನ್ಯಾಯ ಸಿಗುವಂತೆ ಮಾಡಿದ ದಿಟ್ಟ ಮಹಿಳೆ ಹೆಡ್ ಕಾನ್‌ಸ್ಟೆಬಲ್ ರೇವತಿ. ರೇವತಿ ಅವರ ದೃಢ ನಿಲುವು ಮತ್ತು ಸಾಹಸದಿಂದಾಗಿಯೇ ಇಂದು ಅನ್ಯಾಯಕ್ಕೆ ಒಳಗಾದವರ ಕುಟುಂಬಕ್ಕೆ ನ್ಯಾಯ ಸಿಕ್ಕಿದೆ. ಅಪರಾಧಿಗಳಿಗೆ ಶಿಕ್ಷೆ ಘೋಷಣೆಯಾಗಿದೆ.
ಇದನ್ನು ಓದಿದ್ದೀರಾ? ತಮಿಳುನಾಡು | ತಂದೆ-ಮಗನ ಕಸ್ಟಡಿ ಕೊಲೆ ಪ್ರಕರಣ: 9 ಪೊಲೀಸರಿಗೆ ಗಲ್ಲು ಶಿಕ್ಷೆ
ಸಾಮಾನ್ಯವಾಗಿ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೆಬಲ್‌ಗಳು ಮೇಲಧಿಕಾರಿಗಳ ಆಜ್ಞೆಯನ್ನು ಪಾಲಿಸುವುದೇ ಶಿಸ್ತು ಎನ್ನಲಾಗುತ್ತದೆ. ಆದರೆ ತಮ್ಮ ಸಹೋದ್ಯೋಗಿಗಳು ತಪ್ಪು ಮಾಡಿದಾಗ ಅದು ತಪ್ಪು ಎಂದು ಬಹಿರಂಗವಾಗಿ ಹೇಳಿದ್ದು ಈ ಮಹಿಳಾ ಕಾನ್‌ಸ್ಟೆಬಲ್. ಸಾತಾಂಕುಲಂ ಪೊಲೀಸ್ ಠಾಣೆಯಲ್ಲಿ ನಡೆದ ಅಮಾನವೀಯ ಕೃತ್ಯವನ್ನು ಕಂಡು ಮೌನಕ್ಕೆ ಶರಣಾಗದೆ, ಸತ್ಯದ ಪರವಾಗಿ ನಿಂತವರು ಕಾನ್‌ಸ್ಟೆಬಲ್ ರೇವತಿ.
ಯಾರು ಈ ರೇವತಿ?
ರೇವತಿ ಅವರು ಸಾತಾಂಕುಲಂ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 2020ರ ಜೂನ್ 19ರಂದು ತಂದೆ-ಮಗನಾದ ಜಯರಾಜ್ ಮತ್ತು ಬೆನಿಕ್ಸ್ ಅವರನ್ನು ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಪೊಲೀಸರು ಬಂಧಿಸಿದಾಗ ಆ ಠಾಣೆಯಲ್ಲಿ ರೇವತಿ ಕೂಡ ಕರ್ತವ್ಯದಲ್ಲಿದ್ದರು. ಪೊಲೀಸರು ಜಯರಾಜ್ ಮತ್ತು ಬೆನಿಕ್ಸ್ ಮೇಲೆ ನಡೆಸಿದ ಪೈಶಾಚಿಕ ದಾಳಿಗೆ ರೇವತಿ ಪ್ರತ್ಯಕ್ಷದರ್ಶಿಯಾಗಿದ್ದರು.
ಕೋವಿಡ್ ಲಾಕ್‌ಡೌನ್ ನಿಯಮ ಉಲ್ಲಂಘಿಸಿದರು ಎಂದು ಆರೋಪಿಸಿ ಪೊಲೀಸರು ಆ ಇಬ್ಬರ ಮೇಲೆ ಇಡೀ ರಾತ್ರಿ ಹಲ್ಲೆ ನಡೆಸಿದ್ದರು. ಮರುದಿನ ಇಬ್ಬರೂ ಸಾವನ್ನಪ್ಪಿದ್ದು ಇಡೀ ದೇಶದಲ್ಲೇ ತೀವ್ರ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿತ್ತು. ಪ್ರಕರಣದ ತನಿಖೆಗೆ ಮ್ಯಾಜಿಸ್ಟ್ರೇಟ್ ಬಂದಾಗ, ಇತರ ಪೊಲೀಸರು ಸಾಕ್ಷ್ಯಗಳನ್ನು ನಾಶಪಡಿಸಲು ಮತ್ತು ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸಿದ್ದರು. ಇಬ್ಬರೂ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆದಿತ್ತು.
ತನಿಖಾಧಿಕಾರಿಯಾದ ಮ್ಯಾಜಿಸ್ಟ್ರೇಟ್ ಎಂ.ಎಸ್. ಭಾರತಿ ಅವರು ಠಾಣೆಗೆ ಭೇಟಿ ನೀಡಿದಾಗ ಅಲ್ಲಿನ ವಾತಾವರಣ ಭಯಾನಕವಾಗಿತ್ತು. ಪೊಲೀಸರು ಮ್ಯಾಜಿಸ್ಟ್ರೇಟ್ ಅವರಿಗೇ ಬೆದರಿಕೆ ಹಾಕಿದ್ದರು. ಅಂತಹ ಉದ್ವಿಗ್ನ ಪರಿಸ್ಥಿತಿಯಲ್ಲೂ ರೇವತಿ ಅವರು ಮುಂದೆ ಬಂದು ಸತ್ಯವನ್ನು ಬಿಚ್ಚಿಟ್ಟಿದ್ದರು.
ಪೊಲೀಸರು ಜಯರಾಜ್ ಮತ್ತು ಬೆನಿಕ್ಸ್ ಮೇಲೆ ಲಾಠಿಗಳಿಂದ ಸತತವಾಗಿ ಹಲ್ಲೆ ನಡೆಸಿದ್ದರು ಎಂದು ರೇವತಿ ಸಾಕ್ಷಿ ನುಡಿದರು. ಅಲ್ಲದೆ, ಹಲ್ಲೆಗೆ ಬಳಸಿದ ಲಾಠಿಗಳ ಮೇಲೆ ಮತ್ತು ಠಾಣೆಯ ಗೋಡೆಗಳ ಮೇಲೆ ರಕ್ತದ ಕಲೆಗಳಿರುವುದನ್ನೂ ಮ್ಯಾಜಿಸ್ಟ್ರೇಟ್‌ಗೆ ತೋರಿಸಿದರು. ಹಾಗೆಯೇ ರಾತ್ರಿ ಇಡೀ ಆ ಇಬ್ಬರು ವ್ಯಕ್ತಿಗಳನ್ನು ಹೇಗೆ ಹಿಂಸಿಸಲಾಯಿತು ಎಂಬ ವಿವರವಾದ ಹೇಳಿಕೆಯನ್ನು ನೀಡಿದರು. ಇತರ ಪೊಲೀಸರ ತೀವ್ರ ವಿರೋಧ ಮತ್ತು ಬೆದರಿಕೆಯ ನಡುವೆಯೂ ರೇವತಿ ಮ್ಯಾಜಿಸ್ಟ್ರೇಟ್ ನೀಡಿದ ವರದಿಗೆ ಅಧಿಕೃತವಾಗಿ ಸಹಿ ಹಾಕಿದರು.
ರೇವತಿ ಹಾದಿ ಸುಲಭವಾಗಿರಲಿಲ್ಲ
ಅಷ್ಟಕ್ಕೂ ಸತ್ಯ ಹೇಳಲು ಮುಂದಾದ ಕಾನ್‌ಸ್ಟೆಬಲ್ ರೇವತಿ ಅವರ ಹಾದಿ ಸುಲಭವಾಗಿರಲಿಲ್ಲ. ಸ್ವಂತ ಇಲಾಖೆಯ ಸಹೋದ್ಯೋಗಿಗಳೇ ಅವರಿಗೆ ಬೆದರಿಕೆ ಹಾಕಿದ್ದರು. ಮ್ಯಾಜಿಸ್ಟ್ರೇಟ್ ವರದಿಯಲ್ಲೇ “ರೇವತಿ ಅವರು ಸತ್ಯ ಹೇಳಲು ಹೆದರುತ್ತಿದ್ದರು” ಎಂದು ಉಲ್ಲೇಖಿಸಲಾಗಿದೆ. ಜೀವ ಬೆದರಿಕೆ ಕೂಡಾ ಬಂದಿತ್ತು. ಹಾಗಾಗಿ ರೇವತಿ ಅವರಿಗೆ ವಿಶೇಷ ಪೊಲೀಸ್ ರಕ್ಷಣೆ ನೀಡಿ ಬೇರೆಡೆ ವರ್ಗಾವಣೆ ಮಾಡಲಾಗಿತ್ತು.
ಇದನ್ನು ಓದಿದ್ದೀರಾ? ಉತ್ತರಪ್ರದೇಶ | ಪೊಲೀಸ್ ಬಂಧನದಲ್ಲಿದ್ದ ಇಬ್ಬರು ದಲಿತರ ಸಾವು; ಕಸ್ಟಡಿ ಕೊಲೆ ಆರೋಪ
ಯಾವುದೇ ಕ್ಷೇತ್ರದಲ್ಲಾದರೂ ತಮ್ಮ ಮೇಲಧಿಕಾರಿಗಳ ವಿರುದ್ಧ ಸಾಕ್ಷಿ ಹೇಳುವುದು ಅಷ್ಟು ಸುಲಭವಲ್ಲ. ಕೆಲಸ ಕಳೆದುಕೊಳ್ಳುವ ಅಥವಾ ಕಿರುಕುಳ ಅನುಭವಿಸುವ ಆತಂಕ ಇದ್ದೇ ಇರುತ್ತದೆ. ಅವೆಲ್ಲವನ್ನೂ ಲೆಕ್ಕಿಸದೆ ಅಪರಾಧಿಗಳಿಗೆ ಶಿಕ್ಷೆ ಘೋಷಣೆಯಾಗುವವರೆಗೂ ಸಾಕ್ಷಿಯಾಗಿಯೇ ನಿಂತವರು ರೇವತಿ. ಅವರು ನೀಡಿದ ರಕ್ತದ ಕಲೆಗಳಿದ್ದ ಲಾಠಿ ಮೊದಲಾದ ಸಾಕ್ಷ್ಯವೇ ಈ ಪ್ರಕರಣದಲ್ಲಿ ‘ಟರ್ನಿಂಗ್ ಪಾಯಿಂಟ್’ ಆಯಿತು. ಹತ್ತು ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಾಯಿತು. ಸಿಬಿಐ ತನಿಖೆ ನಡೆದು ಅಪರಾಧಿಗಳಿಗೆ ಶಿಕ್ಷೆ ಘೋಷಣೆಯಾಗಿದೆ. ಈ ಪ್ರಕರಣವು ‘ಪೊಲೀಸ್ ವ್ಯವಸ್ಥೆಯಲ್ಲೂ ಮಾನವೀಯತೆ ಬದುಕಿದೆ’ ಎಂಬ ಸಂದೇಶ ನೀಡಿದೆ.
ಇಂದು ರೇವತಿ ಕೇವಲ ಒಬ್ಬ ಪೊಲೀಸ್ ಕಾನ್‌ಸ್ಟೆಬಲ್ ಆಗಿ ಉಳಿದಿಲ್ಲ. ಬದಲಾಗಿ ಅನ್ಯಾಯದ ವಿರುದ್ಧ ಹೋರಾಡುವ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದ್ದಾರೆ. ತನ್ನ ಪ್ರಾಣದ ಹಂಗು ತೊರೆದು ರೇವತಿ ಅವರು ತೋರಿದ ಪ್ರಾಮಾಣಿಕತೆ ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಮರೆಯಲಾಗದ ಅಧ್ಯಾಯ. ರೇವತಿಯಂತಹ ದೃಢ ಪೊಲೀಸರು ವ್ಯವಸ್ಥೆಯಲ್ಲಿದ್ದಾಗ ಮಾತ್ರ ಸಾಮಾನ್ಯ ಜನರಿಗೆ ಕಾನೂನಿನ ಮೇಲೆ ನಂಬಿಕೆ ಉಳಿಯಲು ಸಾಧ್ಯ. ‘ಅನ್ಯಾಯದ ಮುಂದೆ ಮೌನವಾಗಿರುವುದು ಕೂಡ ಒಂದು ಅಪರಾಧ. ಆ ಮೌನವನ್ನು ಮುರಿದು ನ್ಯಾಯದ ಪರವಾಗಿ ನಿಂತ ರೇವತಿ ನೈಜ ಸ್ಫೂರ್ತಿ’

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



