ಶಾಲಾ–ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ, ದಾವಣಗೆರೆ ನಗರ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಕೆಎಸ್ಆರ್‌ಟಿಸಿ ನೂತನ ಮಾರ್ಗಗಳ ಸಂಚಾರಕ್ಕೆ ಶಾಸಕ ಸಮರ್ಥ್ ಶಾಮನೂರು ಶುಕ್ರವಾರ ಚಾಲನೆ ನೀಡಿದರು. ನಗರದ ಬಾಡಾ ಕ್ರಾಸ್, ಉತ್ತಮ ಬಡಾವಣೆ, ಚಿಕ್ಕನಹಳ್ಳಿ, ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು.
ಅದೇ ರೀತಿ ಎಸ್.ಎಸ್. ಆಸ್ಪತ್ರೆ, ಭಗೀರಥ ಸರ್ಕಲ್, ನೂತನ ಕಾಲೇಜು, ಬಾಪೂಜಿ ಸಮುದಾಯ ಭವನ ಹಾಗೂ ರೈಲ್ವೆ ನಿಲ್ದಾಣ ಮಾರ್ಗದಲ್ಲಿಯೂ ನೂತನ ಬಸ್ ಸೇವೆ ಆರಂಭಿಸಲಾಯಿತು.ನಗರ ಪ್ರದೇಶದ ಜೊತೆಗೆ ಗ್ರಾಮೀಣ ಭಾಗದ ಸಾರಿಗೆ ಅಗತ್ಯಗಳಿಗೂ ಆದ್ಯತೆ ನೀಡಿದ್ದು, ದಾವಣಗೆರೆ–ಜಡಗನಹಳ್ಳಿ ಮಾರ್ಗದಲ್ಲಿ ಹದಡಿ, ಕನಗೊಂಡನಹಳ್ಳಿ, ನಾಗರಸನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕೆಎಸ್ಆರ್ಟಿಸಿ ಬಸ್ಗಳ ಸಂಚಾರಕ್ಕೂ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿ, ಶಾಲಾ–ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಮನವಿಗೆ ಸ್ಪಂದಿಸಿ ನೂತನ ಬಸ್ ಮಾರ್ಗಗಳಲ್ಲಿ ಸಂಚಾರ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಿಕ್ಷಣ ಸಂಸ್ಥೆಗಳಿಗೆ ತೆರಳಲು ಹಾಗೂ ಸಾರ್ವಜನಿಕರು ತಮ್ಮ ದೈನಂದಿನ ಕೆಲಸಗಳಿಗೆ ಸುಲಭವಾಗಿ ಪ್ರಯಾಣಿಸಲು ಈ ಸೇವೆಗಳು ಅನುಕೂಲವಾಗಲಿವೆ. ಕ್ಷೇತ್ರದ ಜನರ ಅಗತ್ಯಗಳಿಗೆ ಅನುಗುಣವಾಗಿ ಸಾರಿಗೆ ಸೌಲಭ್ಯಗಳನ್ನು ಮತ್ತಷ್ಟು ವಿಸ್ತರಿಸಲು ನಿರಂತರ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಶಾಲಾ ಮಕ್ಕಳೊಂದಿಗೆ ಶಾಸಕ ಸಮರ್ಥ್ ಆತ್ಮೀಯ ಮಾತುಕತೆ:
ಜಡಗನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್, ಸರ್ಕಾರಿ ಶಾಲಾ ಮಕ್ಕಳೊಂದಿಗೆ ಆತ್ಮೀಯವಾಗಿ ಬೆರೆತು ಮಾತುಕತೆ ನಡೆಸಿದರು. ನೂತನ ಬಸ್ ಸಂಚಾರ ಆರಂಭಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದರು.ನೂತನ ಬಸ್ ಸೇವೆಗಳಿಂದ ನಗರ ಮತ್ತು ಗ್ರಾಮೀಣ ಭಾಗಗಳ ನಡುವಿನ ಸಾರಿಗೆ ಸಂಪರ್ಕ ಸುಧಾರಿಸಲಿದ್ದು, ವಿಶೇಷವಾಗಿ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ದಿನನಿತ್ಯ ಪ್ರಯಾಣಿಸುವ ಸಾರ್ವಜನಿಕರಿಗೆ ಅನುಕೂಲವಾಗುವ ನಿರೀಕ್ಷೆಯಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಪ್ರೊ. ನಂಜನಾಯ್ಕ ಕಬ್ಬಳ, ಜಯಮ್ಮ ಗೋಪಿನಾಯ್ಕ ಸೇರಿದಂತೆ ಪಕ್ಷದ ಮುಖಂಡರು, ಗ್ರಾಮಸ್ಥರು, ಸಾರ್ವಜನಿಕರು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಹಾಗೂ ಕೆಎಸ್ಆರ್‌ಸಿಟಿ ಸಿಬ್ಬಂದಿಗಳು ಉಪಸ್ಥಿತರಿದ್ದರು.






