ರಾಜ್ಯದ ಕುತೂಹಲ ಕೆರಳಿಸಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಕಾರ್ಯ ನಗರದ ಡಿ ಆರ್ ಆರ್ ಕಾಲೇಜಿನಲ್ಲಿ ಪ್ರಾರಂಭವಾಗಿದ್ದು ಅಂಚೆ ಮತಗಳ ಎಣಿಕೆ ಕಾರ್ಯ ಆರಂಭವಾಗಿದ್ದು ಆರಂಭಿಕ ಮೊದಲನೇಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ 577 ಮತಗಳ ಮುನ್ನಡೆ ಸಾಧಿಸಿದ್ದಾರೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮತ ಎಣಿಕೆಯ ವೇಳೆ ಮತಪೆಟ್ಟಿಗೆಗಳನ್ನು ಇರಿಸಿದ ಸ್ಟ್ರಾಂಗ್ ರೂಮ್ ಗಳನ್ನು ತೆರೆಯುವ ವೇಳೆ ಬೀಗದ ಕೀಗಳಿಂದ ತೆರೆಯಲು ಅಸಾಧ್ಯವಾದ ಹಿನ್ನೆಲೆ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಎದುರಲ್ಲಿ ಬೀಗಗಳನ್ನು ಹೊಡೆದು ಸ್ಟ್ರಾಂಗ್ ರೂಮ್ ಗಳನ್ನು ತೆರೆಯಲಾಯಿತು.
ಏಪ್ರಿಲ್ ಒಂಬತ್ತರಂದು ನಡೆದಿದ್ದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಎಸ್ ಎಸ್ ಮಲ್ಲಿಕಾರ್ಜುನ ಪುತ್ರ ಸಮರ್ಥ ಶಾಮನೂರು, ಬಿಜೆಪಿಯಿಂದ ಶ್ರೀನಿವಾಸ ದಾಸಕರಿಯಪ್ಪ, ಎಸ್ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಒಂದನೇ ಸುತ್ತಿನ ಮತ ಎಣಿಕೆ ಪ್ರಕ್ರಿಯೆ ನಂತರ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು 3134ಮತ ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ 3711 ಮತ ಪಡೆದಿದ್ದಾರೆ. ಎಸ್ ಡಿ ಪಿ ಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ 638 ಮತ ಪಡೆದಿದ್ದಾರೆ. ಒಟ್ಟಾರೆ 21 ಸುತ್ತಿನ ಮತ ಎಣಿಕೆ ನಡೆಯಲಿದ್ದು, ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಅಂತಿಮವಾಗಿ ಫಲಿತಾಂಶ ಹೊರಬಿಳುವ ನಿರೀಕ್ಷೆ ಇದೆ.





