ಮಾಜಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಸೋಲಿನಿಂದ ನಾನು ವಿಚಲಿತನಾಗಿದ್ದೆ. ನಟ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ಸುದ್ದಿ ಕೇಳಿದಾಗ ‘ತೀವ್ರ ಆಘಾತವಾಗಿತ್ತು’. ಆದರೂ, ಅವರ ಕುರಿತು ನನಗೆ ಅಸೂಯೆ ಇಲ್ಲ. ವಿಜಯ್ ಅವರು ತಮಿಳುನಾಡಿನ ಎರಡು ಪ್ರಮುಖ ದ್ರಾವಿಡ ರಾಜಕೀಯ ಪಕ್ಷಗಳ ವಿರುದ್ಧ ನಿಂತು ಸಂಪೂರ್ಣ ಸ್ವತಂತ್ರವಾಗಿ ತಮ್ಮದೇ ಆದ ಸ್ವಂತ ಗುರುತು ಮತ್ತು ರಾಜಕೀಯ ಮಾನ್ಯತೆಯನ್ನು ಗಳಿಸಿದ್ದಾರೆ ಎಂದು ಹಿರಿಯ ನಟ ರಜನಿಕಾಂತ್ ಹೇಳಿದ್ದಾರೆ.
ಇತ್ತೀಚೆಗೆ, ಸ್ಟಾಲಿನ್ ಅವರನ್ನು ರಜನಿಕಾಂತ್ ಭೇಟಿಯಾಗಿದ್ದರು. ಆ ಬಳಿಕ, ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಕೇಳಿಬಂದಿದ್ದವು. ಈ ಬೆನ್ನಲ್ಲೇ, ಚೆನ್ನೈನಲ್ಲಿ ರಜನಿಕಾಂತ್ ಸುದ್ದಿಗೋಷ್ಠಿ ನಡೆಸಿದ್ದಾರೆ. “ನನ್ನ ರಾಜಕೀಯ ನಡೆ ಮತ್ತು ಇತ್ತೀಚೆಗೆ ಸ್ಟಾಲಿನ್ ಜೊತೆಗಿನ ಭೇಟಿಯ ಬಗ್ಗೆ ಕೇಳಿಬರುತ್ತಿರುವ ಅಪಪ್ರಚಾರಗಳಿಗೆ ತಕ್ಷಣವೇ ಸೂಕ್ತ ಉತ್ತರ ನೀಡಬೇಕು. ಇಲ್ಲದಿದ್ದರೆ, ಮುಂಬರುವ ದಿನಗಳಲ್ಲಿ ಜನರು ಆ ಸುಳ್ಳುಗಳನ್ನೇ ನಿಜವೆಂದು ನಂಬುವ ಅಪಾಯವಿರುತ್ತದೆ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
“ನಾನು ಈಗ ರಾಜಕೀಯದಲ್ಲಿ ಸಕ್ರಿಯವಾಗಿಲ್ಲ. ರಾಜಕೀಯ ರಂಗದಿಂದ ದೂರ ಸರಿದು ಈಗಾಗಲೇ ಹಲವು ವರ್ಷಗಳೇ ಕಳೆದಿವೆ. ಪ್ರಸ್ತುತ ನಡೆದಿರುವ ಚುನಾವಣೆಗಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಅನೇಕ ಅನಗತ್ಯ ಟೀಕೆಗಳನ್ನು ಮಾಡಲಾಗುತ್ತಿದೆ. ಒಂದು ವೇಳೆ ತಾವು ಈಗ ಇವುಗಳಿಗೆ ಸರಿಯಾಗಿ ಪ್ರತಿಕ್ರಿಯಿಸದಿದ್ದರೆ, ಸಮಾಜದಲ್ಲಿ ಆ ಸುಳ್ಳು ಆರೋಪಗಳನ್ನೇ ಸತ್ಯವೆಂದು ಭಾವಿಸಲಾಗುತ್ತದೆ. ಆದ್ದರಿಂದಲೇ ನಾನು ಈ ಮಾಧ್ಯಮಗೋಷ್ಠಿಯನ್ನು ಕರೆಯಬೇಕಾಯಿತು” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಎಚ್ಚರ: ಎಸ್‌ಐಆರ್ – ಮತಪಟ್ಟಿ ಪರಿಶೀಲನೆಯಲ್ಲ, ಪೌರತ್ವ ಪರೀಕ್ಷೆ!
This video cannot be played in your browser. Open the video directly
“ನನಗೂ ಸ್ಟಾಲಿನ್‌ಗೂ ಇರುವ ವೈಯಕ್ತಿಕ ಬಾಂಧವ್ಯವು ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತವಾದುದಲ್ಲ. ಅದು ರಾಜಕೀಯವನ್ನು ಮೀರಿದ ಅತ್ಯಂತ ಪವಿತ್ರವಾದ ಸ್ನೇಹ. ಕೊಳತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಎಂ.ಕೆ. ಸ್ಟಾಲಿನ್ ಅವರು ಚುನಾವಣೆಯಲ್ಲಿ ಪರಾಭವಗೊಂಡ ಸುದ್ದಿ ಕೇಳಿ ನನಗೆ ತೀವ್ರ ಬೇಸರವನ್ನು ಉಂಟುಮಾಡಿತು. ಬೇರೆ ಯಾವುದೇ ವಿಷಯಗಳ ಬಗ್ಗೆ ಅನಗತ್ಯವಾಗಿ ಮಾತನಾಡುವಷ್ಟು ಕೆಳಮಟ್ಟದ ವ್ಯಕ್ತಿತ್ವ ರಜನಿಕಾಂತ್ ಅವರದ್ದಲ್ಲ” ಎಂದು ತಮ್ಮ ಟೀಕಾಕಾರರಿಗೆ ಉತ್ತರಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ತಾವು ಮುಖ್ಯಮಂತ್ರಿ ವಿಜಯ್ ಅವರಿಗೆ ವೈಯಕ್ತಿಕವಾಗಿ ಶುಭ ಕೋರಲಿಲ್ಲ ಎಂಬ ಅಪಪ್ರಚಾರದ ವಿರುದ್ಧ ಕಿಡಿಕಾರಿದ ಅವರು, “ವಿಜಯ್ ಚುನಾವಣೆಯಲ್ಲಿ ಗೆದ್ದ ತಕ್ಷಣವೇ ನಾನು ‘ಎಕ್ಸ್’ ಖಾತೆಯಲ್ಲಿ ಅತ್ಯಂತ ಸೌಜನ್ಯದಿಂದ ಶುಭಾಶಯ ಕೋರಿದ್ದೇನೆ. ನಾನು ಈಗಾಗಲೇ ರಾಜಕೀಯದಿಂದ ಸಂಪೂರ್ಣವಾಗಿ ದೂರ ಸರಿದಿರುವುದರಿಂದ, ವಿಜಯ್ ಅವರ ಈ ಐತಿಹಾಸಿಕ ಸಾಧನೆಯನ್ನು ಕಂಡು ಅಸೂಯೆ ಪಡಲು ನನಗೆ ಯಾವುದೇ ಕಾರಣವಿಲ್ಲ” ಎಂದಿದ್ದಾರೆ.
“ಯಾರಿಗೆ ಯಾವುದು ಸಿಗಬೇಕೆಂದು ವಿಧಿ ಬರೆದಿರುತ್ತದೆಯೋ ಅದು ಖಂಡಿತವಾಗಿಯೂ ಸಂಭವಿಸುತ್ತದೆ. ಯಾರಿಗೆ ಸಿಗಬಾರದೆಂದಿರುತ್ತದೆಯೋ ಅದು ಎಂದಿಗೂ ಸಿಗುವುದಿಲ್ಲ” ಎಂದು ರಜನಿಕಾಂತ್ ಹೇಳಿದ್ದಾರೆ.




