ಕೊಡಗಿನ ಆದಿವಾಸಿಗಳ ಒಡನಾಡಿ, ಹಿತಚಿಂತಕ ಹಾಗೂ ಕುಶಾಲನಗರದ ಕಾರ್ಡ್ ಸಂಸ್ಥೆಯ ಸಂಸ್ಥಾಪಕರಾದ ವಿ.ಎಸ್. ರಾಯ್ ಡೇವಿಡ್ ಅವರು ಇನ್ನಿಲ್ಲ. ಮೇ 15ರ ಸಂಜೆ ತೀವ್ರ ಹೃದಯಾಘಾತಕ್ಕೊಳಗಾಗಿ ಬೆಂಗಳೂರಿನಲ್ಲಿ ಅವರು ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶಮಂತಕ, ಇಬ್ಬರು ಪುತ್ರರು, ಸೊಸೆಯರು, ಮಗಳು, ಅಳಿಯ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಶಿಕ್ಷಕರಾಗಿ ಅಪಾರ ಹೆಸರು ಮಾಡಿದ್ದ ತಾಯಿಯ ಪ್ರೇರಣೆಯಲ್ಲಿ ಬೆಳೆದ ರಾಯ್ ಡೇವಿಡ್ ಅವರು ಕಾಲೇಜು ಶಿಕ್ಷಣದ ಅವಧಿಯಲ್ಲಿಯೇ ಎಡಪಂಥೀಯ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದರು. ಸಮುದಾಯ ಸಂಘಟನೆಯಲ್ಲಿ ತರಬೇತಿ ಪಡೆದ ಅವರು ದಕ್ಷಿಣ ಕನ್ನಡ ಜಿಲ್ಲೆಯ ಗೇಣಿದಾರರ ಭೂ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದರು. ಹೋರಾಟದ ವೇಳೆ ದೌರ್ಜನ್ಯಕ್ಕೆ ಒಳಗಾಗಿ ತಮ್ಮ ಎಡಗೈ ಕಳೆದುಕೊಂಡರೂ ಹೋರಾಟದ ಮನೋಭಾವವನ್ನು ಬಿಡದೆ ಸಾಮಾಜಿಕ ನ್ಯಾಯಕ್ಕಾಗಿ ನಿರಂತರವಾಗಿ ಶ್ರಮಿಸಿದರು.
ಕೊಡಗು ಹಾಗೂ ಪಿರಿಯಾಪಟ್ಟಣ ಭಾಗದ ರಾಣಿಗೆಟ್ ಆದಿವಾಸಿಗಳ ಭೂ ಹೋರಾಟದಲ್ಲಿ ಅವರು ಆದಿವಾಸಿಗಳೊಂದಿಗೆ ಹೆಜ್ಜೆ ಹಾಕಿ, ಒಂದೇ ಹೋರಾಟದಲ್ಲಿ ಸುಮಾರು 600 ಎಕರೆ ಭೂಮಿ ಪಡೆಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ನಾಗರಹೊಳೆ ತಾಜ್ ಹೋರಾಟ, ಅರಣ್ಯ ಹಕ್ಕು ಹೋರಾಟ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಡೆದ ಹೋರಾಟಗಳಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಿದ್ದರು.
ಆದಿವಾಸಿ ಸ್ವಯಂ ಆಡಳಿತ ಹಕ್ಕು, ಅರಣ್ಯ ಹಕ್ಕು ಹಾಗೂ ಸಂಘಟನಾ ಚಟುವಟಿಕೆಗಳಿಗೆ ಬುಡಕಟ್ಟು ಕೃಷಿಕರ ಸಂಘದೊಂದಿಗೆ ಬೆಂಬಲವಾಗಿ ನಿಂತಿದ್ದ ರಾಯ್ ಡೇವಿಡ್ ಅವರು ಕೊಡಗಿನ ವಿವಿಧ ಸಮುದಾಯಗಳ ನಡುವೆ ಸಾಮರಸ್ಯ ಬೆಳೆಸುವಲ್ಲಿ ಯಶಸ್ವಿಯಾಗಿದ್ದರು. ಅವರ ಪ್ರೇರಣೆಯಿಂದ ಅನೇಕ ಸ್ಥಳೀಯ ಆದಿವಾಸಿ ನಾಯಕರು ಬೆಳೆದು ಬಂದಿದ್ದಾರೆ ಎಂದು ಸಹೋದ್ಯೋಗಿಗಳು ಸ್ಮರಿಸಿದ್ದಾರೆ.
ಕಾಡಿನ ಕಿರು ಸಂಪನ್ಮೂಲಗಳ ಹಕ್ಕಿಗಾಗಿ ನಾಗರಹೊಳೆ ಹಕ್ಕು ಸ್ಥಾಪನಾ ಸಮಿತಿಯೊಂದಿಗೆ ಸೇರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದ ಅವರು, ಜೀವನದ ಕೊನೆಯವರೆಗೂ ಹೋರಾಟದ ದಾರಿಯಲ್ಲೇ ಸಾಗಿದರು.
ಈ ಸುದ್ದಿ ಓದಿದ್ದೀರಾ?ಹನೂರು ತಾಲೂಕಿನ ಗ್ರಾಮಗಳಿಗೆ ಸಚಿವ ಕೆ. ವೆಂಕಟೇಶ್ ಭೇಟಿ
‘ಹಿಡಿದ ಕೆಲಸ ಮಾಡಿಯೇ ತೀರಬೇಕು’ ಎಂಬ ದೃಢ ಸಂಕಲ್ಪ ಹೊಂದಿದ್ದ ರಾಯ್ ಡೇವಿಡ್ ಅವರ ನಿಧನ ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವಿವಿಧ ಸಂಘಟನೆಗಳ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ವಿಶೇಷ ಸುದ್ದಿ ಓದಿದ್ದೀರಾ?ಆಶಾ ಕಾರ್ಯಕರ್ತೆಯರಿಗೆ ₹264.14 ಕೋಟಿ ಬಾಕಿ ಪ್ರೋತ್ಸಾಹ ಧನ ಬಿಡುಗಡೆ: ಬಗೆಹರಿಯದ ʼಆಶಾ ಸಾಫ್ಟ್ʼ ತಾಂತ್ರಿಕ ದೋಷ
ಅವರ ಅಂತ್ಯಕ್ರಿಯೆ ಮೇ 18ರಂದು ಮಧ್ಯಾಹ್ನ ಕುಶಾಲನಗರದಲ್ಲಿ ಪ್ರೊಟೆಸ್ಟೆಂಟ್ ಕ್ರೈಸ್ತ ಸಂಪ್ರದಾಯದಂತೆ ನೆರವೇರಲಿದೆ.




