ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅಭಿನಯದ ಕೊನೆಯ ಹಾಗೂ ಬಹುನಿರೀಕ್ಷಿತ ಚಿತ್ರ ‘ಜನನಾಯಗನ್’ ಬಿಡುಗಡೆಗೆ ಎದುರಾಗಿರುವ ವಿಘ್ನ ಇನ್ನೂ ನಿವಾರಣೆಯಾಗಿಲ್ಲ. ಚಿತ್ರವನ್ನು ಕೇಂದ್ರ ಸೆನ್ಸಾರ್ ಮಂಡಳಿಯ (CBFC) ಪರಿಷ್ಕರಣಾ ಸಮಿತಿಗೆ ಕಳುಹಿಸಿ ಐದು ತಿಂಗಳು ಕಳೆದರೂ, ಇನ್ನೂ ಪ್ರಮಾಣಪತ್ರ ದೊರೆತಿಲ್ಲ ಎಂದು ಚಿತ್ರದ ನಿರ್ಮಾಪಕ ವೆಂಕಟ್ ಕೆ. ನಾರಾಯಣ್ ತಿಳಿಸಿದ್ದಾರೆ.
ಶುಕ್ರವಾರ ಸಂಜೆ ದೇವಾಲಯವೊಂದಕ್ಕೆ ಭೇಟಿ ನೀಡಿದ್ದ ಕೆವಿಎನ್ ಪ್ರೊಡಕ್ಷನ್ಸ್‌ನ ನಿರ್ಮಾಪಕ ವೆಂಕಟ್ ಕೆ. ನಾರಾಯಣ್, ಮಾಧ್ಯಮಗಳೊಂದಿಗೆ ಮಾತನಾಡಿದರು. “ನಾವು ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಕಾಯುತ್ತಿದ್ದೇವೆ. ಶೀಘ್ರದಲ್ಲೇ ಪ್ರಮಾಣಪತ್ರ ಸಿಗುವ ವಿಶ್ವಾಸವಿದೆ. ಅದು ಕೈಸೇರಿದ ತಕ್ಷಣ ಬಿಡುಗಡೆ ದಿನಾಂಕವನ್ನು ಮುಂಚಿತವಾಗಿ ಪ್ರಕಟಿಸಿ, ವಿಶ್ವಾದ್ಯಂತ ಅದ್ಧೂರಿಯಾಗಿ ಚಿತ್ರವನ್ನು ತೆರೆಗೆ ತರುತ್ತೇವೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಬಂಗಾಳದ ‘ಭದ್ರಲೋಕ’ ಮಮತಾ ಸರ್ಕಾರದಿಂದ ದೂರ ಸರಿದಿದ್ದೇಕೆ?
ಅಲ್ಲದೆ, ಚಿತ್ರದ ಶೀರ್ಷಿಕೆಯಂತೆಯೇ ವಿಜಯ್ ಅವರು ತಮಿಳುನಾಡಿನ ನೈಜ ‘ಜನನಾಯಕನ್’ (ಮುಖ್ಯಮಂತ್ರಿ) ಆಗಿರುವುದು ತಮಗೆ ತೀವ್ರ ಸಂತಸ ತಂದಿದೆ. ಅದೇ ಕಾರಣಕ್ಕಾಗಿ ತಾವು ದೇವರ ದರ್ಶನಕ್ಕೆ ಬಂದಿರುವುದಾಗಿ ಅವರು ಹರ್ಷ ವ್ಯಕ್ತಪಡಿಸಿದರು.
ಎಚ್. ವಿನೋತ್ ನಿರ್ದೇಶನದ ಈ ಚಿತ್ರವು ಈ ವರ್ಷದ ಜನವರಿ 9ರಂದು ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾಗಬೇಕಿತ್ತು. ಆದರೆ, ಸೆನ್ಸಾರ್ ಪರೀಕ್ಷಾ ಸಮಿತಿಯ ಸದಸ್ಯರೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ, ಬಿಡುಗಡೆಗೂ ಕೆಲವೇ ದಿನಗಳ ಮುನ್ನ ಚಿತ್ರವನ್ನು ಮಂಡಳಿಯ ‘ಪರಿಷ್ಕರಣಾ ಸಮಿತಿ’ಗೆ ಕಳುಹಿಸಲಾಯಿತು. ಇದರಿಂದಾಗಿ ಕಳೆದ ಡಿಸೆಂಬರ್‌ನಿಂದಲೂ ಚಿತ್ರ ಸೆನ್ಸಾರ್ ಮಂಡಳಿಯಲ್ಲೇ ಬಾಕಿ ಉಳಿದಿದೆ. ಈ ವಿಳಂಬವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದರೂ ಚಿತ್ರತಂಡಕ್ಕೆ ಯಾವುದೇ ತಕ್ಷಣದ ರಿಲೀಫ್ ಸಿಕ್ಕಿರಲಿಲ್ಲ. ಇದರ ನಡುವೆ, ಒಂದು ತಿಂಗಳ ಹಿಂದೆ ಚಿತ್ರದ ಎಚ್‌ಡಿ ಪ್ರಿಂಟ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು ಚಿತ್ರತಂಡಕ್ಕೆ ಮತ್ತೊಂದು ಆಘಾತ ನೀಡಿತ್ತು.




