The New York Indian Film Festival ಇಂದು ಜಾಗತಿಕ ಮಟ್ಟದಲ್ಲಿ ಭಾರತದ ಚಿತ್ರಗಳ ಸ್ಥಾನಮಾನವನ್ನು ಗಟ್ಟಿಗೊಳಿಸಲು ಸಹಕಾರಿಯಾಗುವ ವೇದಿಕೆ. ಇನ್ನೊಂದು ರೀತಿಯಲ್ಲಿ ಭಾರತದ ಕಲೆ, ಅಸ್ತಿತ್ವ, ಸಾಂಸ್ಕೃತಿಕ ಕೊಡುಕೊಳ್ಳುವಿಕೆಯ ಮಾಧ್ಯಮವಾಗುವ ಸಾಧ್ಯತೆ ಇದೆ. ಈ ಎಲ್ಲ ಕಾರಣಗಳಿಂದಾಗಿ ಮೇ ೨೮ರಿಂದ ನಡೆಯಲಿರುವ The New York Indian Film Festival ಇಲ್ಲಿನ ಭಾರತೀಯ ಸಮುದಾಯಕ್ಕೆ ಒಂದು ಬಹುಮುಖ್ಯ ಸಾಂಸ್ಕೃತಿಕ ಹಬ್ಬವಾಗಿದೆ. ನ್ಯೂಯಾರ್ಕ್‌ನಿಂದ ವರದಿ- ಮುರಳೀಧರ ಖಜಾನೆ
ನ್ಯೂಯಾರ್ಕ್ ನಲ್ಲಿ ಸದ್ಯಕ್ಕೆ ಭಾರತೀಯ ವಾತಾವರಣವಿದೆ. ಇಲ್ಲಿನ ಐದನೇ ಅವೆನ್ಯೂ (303 Fifth Avenue, Suite 1007) ನಲ್ಲಿರುವ The Indo American Arts Council (IAAC) ನಲ್ಲಿ ಒಂದು ರೀತಿಯ ಹಬ್ಬದ ವಾತಾವರಣ. ಇಲ್ಲಿ ಮೇ ೨೮ರಿಂದ ನಡೆಯಲಿರುವ The New York Indian Film Festival ಗಾಗಿ ಇಲ್ಲಿ ಎಲ್ಲ ಸಿದ್ಧತೆಗಳು ನಡೆದಿವೆ. ನ್ಯೂಯಾರ್ಕ್ ಇಂಡಿಯನ್ ಚಿತ್ರೋತ್ಸವವನ್ನು The Indo American Arts Council (IAAC) ಹಮ್ಮಿಕೊಂಡಿದ್ದು, ಮೊದಲ The New York Indian Film Festival ನಡೆದದ್ದು ೨೦೦೧ರಲ್ಲಿ. ಈ ಚಿತ್ರೋತ್ಸವದಲ್ಲಿ ಭಾರತದ ಕಥಾಚಿತ್ರಗಳೊಂದಿಗೆ ಸಾಕ್ಷ್ಯಚಿತ್ರಗಳು ಹಾಗೂ ಕಿರುಚಿತ್ರಗಳ ಪ್ರದರ್ಶನ ಕೂಡ ನಡೆಯಲಿದೆ.
ನ್ಯೂಯಾರ್ಕ್ ಭಾರತೀಯ ಚಿತ್ರಗಳ ಅಂತಾರಾಷ್ಟ್ರೀಯ ಚಿತ್ರೋತ್ಸವದ ೨೬ನೇ ಆವೃತ್ತಿ ಇದು. ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ೪೫ ಚಿತ್ರಗಳು ಆಯ್ಕೆಯಾಗಿವೆ. ಈ ಪೈಕಿ ಹೆಸರಿಸಬಹುದಾದ ಚಿತ್ರಗಳೆಂದರೆ, ಎಪ್ಪತ್ತರ ದಶಕದ ಬ್ಲಾಕ್‌ಬಸ್ಟರ್ ಎಂದು ಭಾರತೀಯ ಚಿತ್ರರಂಗದಲ್ಲಿ ಹೊಸ ಅಧ್ಯಾಯವನ್ನು ಬರೆದ ʻಶೋಲೆʼ ಬಹುಮುಖ್ಯ. “ ಈ ಚಿತ್ರ ನೋಡಲು ಈಗಾಗಲೇ ಟಿಕೆಟ್ ಗಳು ಮಾರಾಟವಾಗಿ ಹೋಗಿವೆ. ಭಾರತೀಯರು ಐವತ್ತು ವರ್ಷದಷ್ಟು ಹಳೆಯದಾದ, ಆದರೆ ಈಗಲೂ ತನ್ನ ಪ್ರಭಾವವನ್ನು ಉಳಿಸಿಕೊಂಡಿರುವ ʻಹರೇ ಓ ಸಾಂಬಾʼ ಕೇಳಿಸಿಕೊಳ್ಳಲು ಕಾತುರರಾಗಿದ್ದಾರೆ ಎನ್ನಬಹುದು. ʼಶೋಲೆʼ ಮಾತ್ರವೇ ಅಲ್ಲದೆ, ಈಗಾಗಲೇ, ಕಲಾತ್ಮಕವಾಗಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ಹಿಂದಿ, ಅಸ್ಸಾಮಿ, ಪಂಜಾಬಿ, ಬಂಗಾಳಿ, ಮಲೆಯಾಳಂ ತಮಿಳು, ತೆಲುಗು, ಕನ್ನಡ, ಕಾಶ್ಮೀರಿ ಹಾಗೂ ಇತರ ಭಾಷೆಗಳ ಚಿತ್ರಗಳನ್ನು ಪ್ರದರ್ಶಿಸಲಾಗುವುದು. Boong Flowers of Acacia Tighee (Motherhood) Akuti (Longing) ChunņI ಮತ್ತು Adamya ಚಿತ್ರಗಳೂ ಕೂಡ ಪ್ರದರ್ಶನಗೊಳ್ಳಲಿದೆ “ ಎಂದು ಪ್ರಖ್ಯಾತ ಚಿತ್ರ ವಿಮರ್ಶಕ, ಬರಹಗಾರ ಹಾಗೂ ಪತ್ರಕರ್ತ ಅಸೀಮ್ ಛಾಬ್ರಾ ʼಈ ದಿನ.ಕಾಮ್ʼ ನೊಂದಿಗೆ ಹಂಚಿಕೊಂಡರು.
ಅಸೀಮ್ ಛಾಬ್ರಾ ಅವರು ಈ The New York Indian Film Festival ಗಾಗಿ ೨೦೧೧ ರಿಂದ ಚಿತ್ರಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಇವರ ಆಯ್ಕೆಗಳು ಪ್ರೇಕ್ಷಕರ ಮೆಚ್ಚಿಗೆಯನ್ನು ಗಳಿಸಿವೆ. “ಭಾರತದ ಸ್ವತಂತ್ರ ಸಿನಿಮಾ ಚಿತ್ರಕರ್ತರಿಗೆ ಅತ್ಯಂತ ಮುಖ್ಯ ಎಂದು ಪರಿಗಣಿಸಲಾಗಿರುವ ಈ ಅಂತಾರಾಷ್ಟ್ರೀಯ ಚಿತ್ರೋತ್ಸವ ಉತ್ತರ ಅಮೆರಿಕದ ಎಲ್ಲ ವರ್ಗದ ಸಿನಿಮಾ ಪ್ರಿಯರನ್ನು ಆಕರ್ಷಿಸುತ್ತಿದೆ. ಈ ಚಿತ್ರೋತ್ಸವದ ಮೂಲ ಉದ್ದೇಶ ಭಾರತೀಯ ಸಮಾಜದ ಸಂಕೀರ್ಣ ಸಮಾಜವನ್ನು ಎಲ್ಲ ಮುಖಗಳಿಂದ ನೋಡುವಂಥ ಚಿತ್ರಗಳನ್ನು ಜಗತ್ತಿಗೆ ಪರಿಚಯಿಸುವುದು. ಅದು ಕಥಾಚಿತ್ರವಾಗಿರಬಹುದು, ಸಾಕ್ಷ್ಯಚಿತ್ರವಾಗಿರಬಹುದು ಅಥವಾ ಕಿರುಚಿತ್ರವಾಗಿರಬಹುದು..ಅವು ಭಾರತೀಯ ಸಮಾಜದ ವೈವಿಧ್ಯಮಯ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವುದು ಅಷ್ಟೇ ಅಲ್ಲ, ಆ ನಿರ್ದೇಶಕರನ್ನು ಗುರುತಿಸುವುದು. ಅಷ್ಟೇ ಅಲ್ಲ. ಈ ಚಿತ್ರೋತ್ಸವ ಪ್ರಾಂತೀಯ ಚಿತ್ರಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಸ್ವತಂತ್ರವಾಗಿ ಸಿನಿಮಾ ನಿರ್ದೇಶಿಸುವವರನ್ನು ರಾಷ್ಟ್ರೀಯ ಮನ್ನಣೆ ಪಡೆದ ಭಾರತದ ಚಿತ್ರಕರ್ತರನ್ನು ರೂಪಿಸಿದ ಚಿತ್ರಕರ್ತರ ಬಗ್ಗೆ ಕೂಡ ಅರಿವು ಮೂಡಿಸುತ್ತದೆ” ಎನ್ನುತ್ತಾರೆ ಅಸೀಮ್.
ನಾನು ಈಗ ಸದ್ಯಕ್ಕೆ ಇರುವ ನ್ಯೂಯಾರ್ಕ್‌ನಲ್ಲಿ ಭೂಗೌಳಿಕ ಕಾರಣದಿಂದಾಗಿ ಹವಾಮಾನದ ವ್ಯತ್ಯಾಸವಿದ್ದರೂ, ಈಗ ಸದ್ಯಕ್ಕೆ ಬೇಸಿಗೆಯತ್ತ ತೆವಳುತ್ತಿದೆ. ಚುರುಕು ಬಿಸಿಲಿಗೆ ಜನ ಮೈಒಡ್ಡಿ ಬೆಳಗಿನ ಹವೆಗೆ ಸ್ಕೇಟಿಂಗ್, ಸೈಕ್ಲಿಂಗ್ ಮಾಡುತ್ತಾ ರಾಜಮಾರ್ಗದಲ್ಲಿಯೇ ಓಡಾಡುತ್ತಿದ್ದಾರೆ. ಇಲ್ಲಿನ ತಾಪಮಾನ ೧೫ ಡಿಗ್ರಿ ಸೇಲ್ಷಿಯಸ್‌ನಿಂದ ೨೫ ಡಿಗ್ರಿ ನಡುವೆ ತುಯ್ದಾಡುತ್ತಿದೆ. ಸಂಜೆ ಮಳೆ ಬರುತ್ತಿದೆ. ಇಂಥ ಹವಾಮಾನದ ಸಂದರ್ಭದಲ್ಲಿ ಈ ಚಿತ್ರೋತ್ಸವ ನಡೆಯುತ್ತಿದೆ. ಭಾರತದ ಪ್ರಮುಖ ಚಿತ್ರ ನಿರ್ದೇಶಕರು ನಿಧಾನವಾಗಿ ನ್ಯೂಯಾರ್ಕ್ ಗೆ ಆಗಮಿಸುತ್ತಿದ್ದಾರೆ. ತಮ್ಮ ಚಿತ್ರಗಳನ್ನು ಪ್ರದರ್ಶಿಸುವುದರ ಜೊತೆಗೆ, ಭಾರತದಲ್ಲಿ ಸ್ವತಂತ್ರ ಚಿತ್ರಕರ್ತರು (Independent Filmmakers) ಎದುರಿಸುತ್ತಿರುವ ಸವಾಲುಗಳ ಬಗ್ಗೆ ಕೂಡ ಅಮೆರಿಕೆಯ ಮಾಧ್ಯಮಗಳೊಂದಿಗೆ ಚರ್ಚಿಸಲಿದ್ದಾರೆ.


೨೦೦೧ರಲ್ಲಿ ಆರಂಭವಾದಾಗಿನಿಂದ The New York Indian Film Festival ಭಾರತ ಮತ್ತು ಅಮೆರಿಕೆಯಲ್ಲಿರುವ ಭಾರತೀಯ ಜನರ ನಡುವೆ ದೃಶ್ಯ ಸೇತುವೆಯಂತೆ ಕೆಲಸ ಮಾಡುತ್ತಿದೆ. ಕಳೆದ ೨೫ ವರ್ಷಗಳಿಂದ ಇದು ಭಾರತದ ಚಿತ್ರ ಸಂಸ್ಕೃತಿಯನ್ನು ದೃಶ್ಯ ಪರಂಪರೆಯನ್ನು ಬಹಳ ವರ್ಷಗಳಿಂದ ಅಮೆರಿಕೆಯಲ್ಲಿ ನೆಲೆಸಿರುವ ಭಾರತೀಯರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರೆ ತಪ್ಪೇನಿಲ್ಲ. ೧೯೯೮ರಲ್ಲಿ ಆರಂಭವಾದ ಲಾಭದ ದೃಷ್ಟಿ ಹೊಂದಿರದ ನ್ಯೂಯಾರ್ಕ್ ನೆಲೆಯ The Indo American Arts Council ಭಾರತದ ಕಲೆ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತುಸಂಸ್ಕೃತಿಯನ್ನು ಪ್ರೋತ್ಸಾಹಿಸಲು ತನ್ನೆಲ್ಲ ನೆರವು ನೀಡುತ್ತಿದೆ. ಈಗ ನಡೆಯುತ್ತಿರುವ The New York Indian Film Festival ಒಂದು ರೀತಿಯಲ್ಲಿ The Indo American Arts Council ನ ಅತ್ಯಂತ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದು. “ಏಕೆಂದರೆ, ಭಾಷೆಗೆ ಮೀರಿದ ದೃಶ್ಯ ಸಂಸ್ಕೃತಿ ಅತ್ಯಂತ ಶಕ್ತಿಯುತ ಮಾಧ್ಯಮವಾಗಿದ್ದು ಭಾರತದ ಬಹುತ್ವದ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸಲು ತನ್ನೆಲ್ಲ ಪ್ರಯತ್ನ ಮಾಡುತ್ತಲೇ ಬಂದಿದೆ. ಇದುವರೆಗೆ ಸತ್ಯಜಿತ್ ರೇ, ಮೀರಾ ನಾಯರ್, ಅಪರ್ಣಾ ಸೇನ್, ಶ್ಯಾಮ್ ಬೆನೆಗಲ್, ಅಡೂರ್ ಗೋಪಾಲಕೃಷ್ಣನ್, ಮಣಿಕೌಲ್, ರಿತುಪರ್ಣ ಘೋಷ್ ಜೊತೆಗೆ ಹೊಸದಾಗಿ ದೃಶ್ಯ ಸಂಸ್ಕೃತಿಗೆ ತಮ್ಮ ಕೊಡುಗೆಯನ್ನು ನೀಡುತ್ತಿರುವ ಇಂದಿನ ತಲೆಮಾರಿನ ನೂರಾರು ನಿರ್ದೇಶಕರನ್ನು ಜಗತ್ತಿಗೆ ಪರಿಚಯಿಸುತ್ತಿದೆ. ಈ ಚಿತ್ರೋತ್ಸವ ಭಾರತದ ಸಾಮಾಜಿಕ ವಿಷಯಗಳನ್ನು ಜಗತ್ತಿಗೆ ತಲುಪಿಸಲು ನೆರವಾಗುತ್ತಿದೆ. ಅದು ವಲಸೆ ಇರಬಹುದು, ಜಾತಿ ಮತ್ತು ಲಿಂಗ ಬೇಧ, ಕೋಮು ಸೌಹಾರ್ದಕ್ಕೆ ಬಂದಿರುವ ಸಂಕಷ್ಟ, ಭಾರತದ ದುರ್ಬಲ ವರ್ಗ ಎದುರಿಸುತ್ತಿರುವ ಅಸ್ತಿತ್ವದ ಪ್ರಶ್ನೆ, ಹಳ್ಳಿಗಳು ನಗರೀಕೃತವಾಗುತ್ತಿರುವುದರಿಂದ ಸಂಸ್ಕೃತಿಯ ಮೇಲಾಗುತ್ತಿರುವ ಪರಿಣಾಮ… ಇಂಥ ನೂರಾರು ಪ್ರಶ್ನೆಗಳನ್ನು ಮುಂದಿಡುವ ದೃಶ್ಯ ರೂಪಗಳನ್ನು ಜನರ ಮುಂದಿಡುತ್ತಿದೆ.
“ಅಮೆರಿಕೆಯ ಭಾರತೀಯ ಸಮುದಾಯ ಕೂಡ ಪ್ರತಿವರ್ಷ ಈ ಚಿತ್ರೋತ್ಸವಕ್ಕಾಗಿ ಕಾತುರದಿಂದ ಎದುರು ನೋಡುತ್ತಿರುತ್ತದೆ. ಆ ಕಾಲ ಅವರಿಗೆ ಮೇ ೨೮ರಿಂದ ನಾಲ್ಕು ದಿನಗಳ ಕಾಲ ದಕ್ಕಲಿದೆ. ಭಾರತೀಯ ಸಮುದಾಯಕ್ಕೆ ಈ ಚಿತ್ರೋತ್ಸವ ಕೇವಲ ಮನರಂಜನೆಯ ಮಾಧ್ಯಮವಾಗಿ ಮಾತ್ರ ಮುಖ್ಯವಾಗುತ್ತಿಲ್ಲ. ಇದೊಂದು ರೀತಿಯಲ್ಲಿ ಅಂದಿನ ಎಂದಿನ ಭಾರತವನ್ನು ಅರ್ಥ ಮಾಡಿಕೊಳ್ಳುವ ಭಾವುಕವಾದ ಕೊಂಡಿ. ಇದರ ಜೊತೆಯಲ್ಲಿ ದೇಶ-ವಿದೇಶಗಳಿಂದ ಇಲ್ಲಿ ಸೇರಿರುವ ಸಿನಿಮಾ ಸಂಸ್ಕೃತಿಯನ್ನು ಪ್ರೀತಿಸುವವರಿಗೆ ಅಂದರೆ ಭಾರತೀಯರಲ್ಲದವರಿಗೂ ಕೇವಲ ಮನರಂಜನೆಯ ಪ್ರತಿನಿಧಿಯಾಗಿರುವ ಬಾಲಿವುಡ್ ನ ಮುಖ್ಯವಾಹಿನಿಯ ಚಿತ್ರಗಳನ್ನು ಹೊರತು ಪಡಿಸಿ ಭಾರತೀಯ ಸಮಾಜವನ್ನು ನಿಜರೂಪದಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತದೆ” ಎನ್ನುತ್ತಾರೆ ಅಸೀಮ್.
ಅವರ ಮಾತುಗಳಲ್ಲೇ ಅರ್ಥ ಮಾಡಿಕೊಂಡರೆ, ಇಂದು The New York Indian Film Festival ಇಂದು ಜಾಗತಿಕ ಮಟ್ಟದಲ್ಲಿ ಭಾರತದ ಚಿತ್ರಗಳ ಸ್ಥಾನಮಾನವನ್ನು ಗಟ್ಟಿಗೊಳಿಸಲು ಸಹಕಾರಿಯಾಗುತ್ತದೆ. ಇನ್ನೊಂದು ರೀತಿಯಲ್ಲಿ ಭಾರತದ ಭಾರತದ ಕಲೆ, ಅಸ್ತಿತ್ವ, ಸಾಂಸ್ಕೃತಿಕ ಕೊಡುಕೊಳ್ಳುವಿಕೆಯ ಮಾಧ್ಯಮವಾಗುವ ಸಾಧ್ಯತೆ ಇದೆ. ಈ ಎಲ್ಲ ಕಾರಣಗಳಿಂದಾಗಿ ಮೇ ೨೮ರಿಂದ ಇಲ್ಲಿ ನಡೆಯಲಿರುವ The New York Indian Film Festival ಇಲ್ಲಿನ ಭಾರತೀಯ ಸಮುದಾಯಕ್ಕೆ ಒಂದು ಬಹುಮುಖ್ಯ ಸಾಂಸ್ಕೃತಿಕ ಹಬ್ಬವಾಗಿದೆ. ಎಲ್ಲ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಂತೆ, New York Indian Film Festival ವಿಶ್ವದ ಚಲನಚಿತ್ರ ಲೋಕದಲ್ಲಿ ನಡೆಯುತ್ತಿರುವ ಎಲ್ಲ ಆಗು-ಹೋಗುಗಳ ಬಗ್ಗೆ ಚರ್ಚೆ ನಡೆಯುತ್ತದೆ. ಚಿತ್ರ ನಿರ್ದೇಶಕರುಗಳು ತಮ್ಮ ಅನುಭವವನ್ನು ಎಳೆಎಳೆಯಾಗಿ ಚಿತ್ರಪ್ರೇಮಿಗಳಿಗಾಗಿ ಬಿಚ್ಚಿಡಲಿದ್ದಾರೆ. ಅಮೆರಿಕೆಯ ಚಿತ್ರೋದ್ಯಮ ಕೂಡ ಇದರಲ್ಲಿ ಪ್ರಮುಖ ಪಾತ್ರವಹಿಸಿ, ತನ್ನ ತಿಳಿವಳಿಕೆಯನ್ನು ಆಧುನಿಕ ತಂತ್ರಜ್ಞಾನದಿಂದ ಚಿತ್ರೋದ್ಯಮಕ್ಕೆ ಆಗುವ ಲಾಭದ ಬಗ್ಗೆ ತಿಳಿವಳಿಕೆ ಮೂಡಿಸಲಿದೆ. ಎಲ್ಲ ಚಿತ್ರೋತ್ಸವಗಳಂತೆ ಈ ಚಿತ್ರೋತ್ಸವದಲ್ಲಿ ತೀರ್ಪುಗಾರರ ಆಯ್ಕೆಯ ಉತ್ತಮ ಚಿತ್ರ, ಉತ್ತಮ ಕಿರುಚಿತ್ರ, ಕಥಾಚಿತ್ರ, ಸಾಕ್ಷ್ಯಚಿತ್ರ, ನಿರ್ದೇಶಕ, ನಟ, ನಟಿ, ಬಾಲ ಕಲಾವಿದ ಹಾಗು ಉತ್ತಮ ಚಿತ್ರಕಥೆಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಮುರಳೀಧರ ಖಜಾನೆ
ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.



