ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ‘ತಬಾಹಿ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಮತ್ತು ಟ್ರೋಲಿಂಗ್‌ಗೆ ಒಳಗಾಗಿದೆ. ಹಾಡಿನ ದೃಶ್ಯಾವಳಿಗಳನ್ನು ಕೆಲವರು ‘ಕಾಂಡೋಮ್’ ಜಾಹೀರಾತಿಗೆ ಹೋಲಿಸಿ ಟ್ರೋಲ್ ಮಾಡಿದ್ದಾರೆ. ಇಂತಹ ಟ್ರೋಲ್‌ಗಳಿಗೆ ನಟ ಯಶ್ ಅವರು ಹಾಸ್ಯ ಮತ್ತು ಸ್ಪಷ್ಟ ಮಾತುಗಳಲ್ಲಿ ಖಡಕ್ ಉತ್ತರ ನೀಡಿದ್ದಾರೆ. “ನಾನು ಕಾಂಡೋಮ್ ಜಾಹೀರಾತಿನಲ್ಲಿ ನಟಿಸಬೇಕೆಂದರೆ ಹಣ ಪಡೆದುಕೊಂಡು ಮಾಡುತ್ತೇನೆ. ಹೀಗೆ ಉಚಿತವಾಗಿ ಮಾಡುವುದಿಲ್ಲ” ಎಂದಿದ್ದಾರೆ.
‘ಆಪ್ ಕಿ ಅದಾಲತ್’ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಯಶ್, “ಸಿನಿಮಾದಲ್ಲಿ ಬೋಲ್ಡ್ ದೃಶ್ಯಗಳು ಮತ್ತು ಅಶ್ಲೀಲತೆ ನಡುವೆ ದೊಡ್ಡ ವ್ಯತ್ಯಾಸವಿದೆ. ಅಶ್ಲೀಲತೆ ಎಂಬುದು ಸಂಪೂರ್ಣ ತಪ್ಪು. ನೀವು ಸರಿಯಾಗಿ ಗಮನಿಸಿದರೆ, ಆ ಹಾಡಿನಲ್ಲಿ ನಾನು ನಟಿಗೆ ಕಿಸ್ ಕೂಡ ಮಾಡಿಲ್ಲ” ಎಂದಿದ್ದಾರೆ.
“ಸಿನೆಮಾ ದೃಶ್ಯಗಳನ್ನು ಕಲಾತ್ಮಕವಾಗಿ ಮತ್ತು ದೃಶ್ಯಾವಳಿಗಳ ಗಾಂಭೀರ್ಯಕ್ಕೆ ತಕ್ಕಂತೆ ಚಿತ್ರೀಕರಿಸುವುದು ನಿರ್ದೇಶಕರ ಹಕ್ಕು ಮತ್ತು ಪ್ರತಿಭೆ. ಪ್ರತಿಯೊಂದಕ್ಕೂ ಒಂದು ಗಡಿ ಇರುತ್ತದೆ, ಅದನ್ನು ನಾವು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ” ಎಂದು ಸಮರ್ಥಿಸಿಕೊಂಡಿದ್ದಾರೆ.
ಸಿನಿಮಾದ ಆಶಯವನ್ನು ವಿವರಿಸಿದ ಯಶ್, “‘ಟಾಕ್ಸಿಕ್’ ಸಿನಿಮಾವು ಇಂದಿನ ಜನ್-ಝೀ ಪೀಳಿಗೆಯ ಆಲೋಚನೆಗಳು, ಅವರು ಎದುರಿಸುವ ಪ್ರಶ್ನೆಗಳು ಹಾಗೂ ಹಿರಿಯ ತಲೆಮಾರಿನ ನಡುವಿನ ಗೊಂದಲಗಳನ್ನು ಪ್ರತಿನಿಧಿಸುತ್ತದೆ. ಪ್ರೇಕ್ಷಕರು ಪೂರ್ಣ ಸಿನಿಮಾವನ್ನು ನೋಡಿದಾಗ ಇದರ ಹಿಂದಿನ ಕಲಾತ್ಮಕ ಉದ್ದೇಶ ಏನೆಂಬುದು ಸ್ಪಷ್ಟವಾಗುತ್ತದೆ” ಎಂದಿದ್ದಾರೆ.
ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ ಸೇರಿದಂತೆ ದೊಡ್ಡ ತಾರಾಗಣವಿದೆ.



