ಮಂಗಳೂರು ನಗರದ ಕೆ.ಎಸ್. ರಾವ್ ರಸ್ತೆಯ ಮಾಲ್‌ವೊಂದರಲ್ಲಿರುವ ಕೆಎಫ್‌ಸಿ ಮಳಿಗೆಯಲ್ಲಿ ಕಲುಷಿತ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂಬ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಶನಿವಾರ ದಿಢೀರ್ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಕೆಎಫ್‌ಸಿ ಮಳಿಗೆಯ ಸ್ಟೋರೇಜ್‌ನಲ್ಲಿ ಹಳೆಯ ಕೋಳಿ ಮಾಂಸ, ಅವಧಿ ಮೀರಿದ ಎಣ್ಣೆ ಹಾಗೂ ಅನೈರ್ಮಲ್ಯ ಕಂಡುಬಂದಿದೆ ಎನ್ನಲಾಗಿದೆ. ಅಧಿಕಾರಿಗಳು ಮೂರು ಮಾದರಿಯ ಕೋಳಿ ಮಾಂಸ ಮತ್ತು ಎಣ್ಣೆಯ ಮಾದರಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಗುಣಮಟ್ಟ ಪರಿಶೀಲನೆಗಾಗಿ ಮೈಸೂರಿನ ಆಹಾರ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲು ಕ್ರಮ ಕೈಗೊಂಡಿದ್ದಾರೆ.
ನಗರದ ವ್ಯಕ್ತಿಯೊಬ್ಬರು ಕೆಎಫ್‌ಸಿಯಿಂದ ಚಿಕನ್ ಫ್ರೈ ಆರ್ಡರ್ ಮಾಡಿದ್ದರು. ಆಹಾರ ತಲುಪಿದ ಬಳಿಕ ಬಾಕ್ಸ್ ತೆರೆದಾಗ ಮಾಂಸದಿಂದ ದುರ್ವಾಸನೆ ಬರುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರ ಗಮನಕ್ಕೆ ತಂದಿದ್ದರು. ಸಚಿವರ ಸೂಚನೆಯಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಹಾಗೂ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಪ್ರವೀಣ್ ನೇತೃತ್ವದಲ್ಲಿ ಅಧಿಕಾರಿಗಳು ಮಳಿಗೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಅಧಿಕಾರಿಗಳು ಸ್ಟೋರೇಜ್ ರೂಂ ಪ್ರವೇಶಿಸಿದಾಗ ಗಬ್ಬು ವಾಸನೆ ಬರುತ್ತಿತ್ತು ಎನ್ನಲಾಗಿದ್ದು, ಅಲ್ಲಿದ್ದ ಮಾಂಸದ ದಾಸ್ತಾನು ಹಾಗೂ ಆಹಾರ ತಯಾರಿಕಾ ಸ್ಥಳವನ್ನು ಪರಿಶೀಲಿಸಿದ್ದಾರೆ. ಈ ವೇಳೆ ಮೂರು ಮಾದರಿಯ ಕೋಳಿ ಮಾಂಸವನ್ನು ದಾಸ್ತಾನು ಮಾಡಿರುವುದು ಹಾಗೂ ಅವಧಿ ಮೀರಿದ ಎಣ್ಣೆ ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕೆಎಫ್‌ಸಿಗೆ ಕೋಳಿ ಮಾಂಸವನ್ನು ಬೆಂಗಳೂರಿನಿಂದ ರವಾನಿಸಲಾಗುತ್ತಿದೆ ಎನ್ನಲಾಗಿದ್ದು, ದಾಸ್ತಾನು ಮಾಡಲಾಗಿದ್ದ ಮಾಂಸದ ಅವಧಿ ಹಾಗೂ ಗುಣಮಟ್ಟದ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಪತ್ತೆಯಾದ ಮಾಂಸ ಮತ್ತು ಇತರ ಆಹಾರ ಪದಾರ್ಥಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದ್ದು, ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ.
ಮಳಿಗೆಯಲ್ಲಿ ಮೇಲ್ನೋಟಕ್ಕೆ ಅನೈರ್ಮಲ್ಯ, ಹಳಸಿದ ಮಾಂಸ ಹಾಗೂ ಅವಧಿ ಮೀರಿದ ಎಣ್ಣೆ ಬಳಕೆಯ ಅಂಶಗಳು ಕಂಡುಬಂದ ಹಿನ್ನೆಲೆಯಲ್ಲಿ ಮಳಿಗೆಯನ್ನು ಬಂದ್ ಮಾಡಿ, ದಾಸ್ತಾನು ತೆರವುಗೊಳಿಸಿ ಸಂಪೂರ್ಣ ಸ್ವಚ್ಛಗೊಳಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಈ ಕುರಿತು ಮಾತನಾಡಿದ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಪ್ರವೀಣ್, ಸಾರ್ವಜನಿಕರ ದೂರಿನ ಮೇರೆಗೆ ದಾಳಿ ನಡೆಸಲಾಗಿದ್ದು, ಮೂರು ಮಾದರಿಯ ಕೋಳಿ ಮಾಂಸ ಹಾಗೂ ಅವಧಿ ಮೀರಿದ ಎಣ್ಣೆಯನ್ನು ವಶಕ್ಕೆ ಪಡೆಯಲಾಗಿದೆ. ಮಾದರಿಗಳನ್ನು ಮೈಸೂರಿನ ಆಹಾರ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಪ್ರಯೋಗಾಲಯದ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ದೊಡ್ಡ ಸಂಸ್ಥೆಯಾದರೂ ರಿಯಾಯಿತಿ ಇಲ್ಲ, ಸಾರ್ವಜನಿಕರ ಆರೋಗ್ಯವೇ ಮೊದಲ ಆದ್ಯತೆ
ಈ ಕುರಿತು ಇಂದು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಸಾರ್ವಜನಿಕರಿಂದ ದೂರು ಬಂದ ತಕ್ಷಣ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ. ಪರಿಶೀಲನೆ ವೇಳೆ ಅನಾರೋಗ್ಯಕರ ವಾತಾವರಣದಲ್ಲಿ ಆಹಾರ ತಯಾರಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಲಾಗಿದೆ ಎಂದು ಹೇಳಿದರು.
ಆಹಾರ ತಯಾರಿಕಾ ಸ್ಥಳಗಳು, ಅಡುಗೆ ಕೋಣೆಗಳು ಹಾಗೂ ಆಹಾರ ಪದಾರ್ಥಗಳ ಸಂಗ್ರಹ ಕೊಠಡಿಗಳಲ್ಲಿ ಸ್ವಚ್ಛತೆ ಮತ್ತು ಗುಣಮಟ್ಟವನ್ನು ಕಡ್ಡಾಯವಾಗಿ ಕಾಪಾಡಬೇಕು. ಯಾವುದೇ ಸಂದರ್ಭದಲ್ಲಾದರೂ ದಿಢೀರ್ ದಾಳಿ ನಡೆಸಬಹುದು. ಎಷ್ಟೇ ದೊಡ್ಡ ಸಂಸ್ಥೆಯಾಗಿದ್ದರೂ ನಿಯಮ ಉಲ್ಲಂಘನೆಗೆ ರಿಯಾಯಿತಿ ನೀಡುವ ಪ್ರಶ್ನೆಯೇ ಇಲ್ಲ. ಸಾರ್ವಜನಿಕರ ಆರೋಗ್ಯವೇ ಸರ್ಕಾರದ ಮೊದಲ ಆದ್ಯತೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಮುಂದಿನ ದಿನಗಳಲ್ಲಿ ಕ್ಯಾಟರಿಂಗ್ ಉದ್ದಿಮೆಗಳ ಆಹಾರ ತಯಾರಿಕಾ ಸ್ಥಳಗಳು, ಪೇಯಿಂಗ್ ಗೆಸ್ಟ್ ಕೇಂದ್ರಗಳು ಹಾಗೂ ಹಾಸ್ಟೆಲ್‌ಗಳ ಮೇಲೂ ತಪಾಸಣೆ ನಡೆಸಲಾಗುವುದು. ಸಂಬಂಧಪಟ್ಟ ಇಲಾಖೆಗಳ ಸಹಯೋಗದಲ್ಲಿ ಜಂಟಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಆಹಾರ ಸುರಕ್ಷತಾ ಇಲಾಖೆ ಹಾಗೂ ಸಿಬ್ಬಂದಿಯ ಕೊರತೆ ಸರ್ಕಾರದ ಗಮನದಲ್ಲಿದ್ದು, ತಪಾಸಣೆಗಳನ್ನು ಹೆಚ್ಚಿಸುವ ಹಿನ್ನೆಲೆಯಲ್ಲಿ ಅಗತ್ಯ ಸಿಬ್ಬಂದಿ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು. ವೈಜ್ಞಾನಿಕ ಆಹಾರ ಪರೀಕ್ಷಾ ಪ್ರಯೋಗಾಲಯಗಳ ಅಗತ್ಯತೆಯ ಬಗ್ಗೆಯೂ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಸಚಿವರು ಹೇಳಿದರು. ಪ್ರಯೋಗಾಲಯದ ವರದಿ ಬಳಿಕ ಕೆಎಫ್‌ಸಿ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.





