ಜಾತ್ಯತೀತ ಮೌಲ್ಯಗಳು, ಭ್ರಾತೃತ್ವ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಧ್ಯೇಯದೊಂದಿಗೆ ಸಮಾನ ನಮಸ್ಕರಿಂದ ಸ್ಥಾಪನೆಗೊಂಡಿದೆ ‘ನ್ಯಾಷನಲ್ ಸೆಕ್ಯುಲರ್ ಸಂಘ (National Secular Sangh)’. ಸಂಚಾಲಕರಾಗಿ ಸತ್ಯಪ್ರಕಾಶ್, ಸಹ ಸಂಚಾಲಕರಾಗಿ ವಕೀಲರಾದ ಶೈಲಜಾ ಅಮರನಾಥ್, ಸುಮತಿ ದೇವಗಿರಿಮಠ, ವೆಸ್ಲೆ ಬ್ರೌನ್, ಇಶಾಕ್ ಹುಸೇನ್ ಸೇರಿದಂತೆ ಹಲವರು ಸಂಘದ ಮುಂದಾಳತ್ವ ವಹಿಸಿದ್ದಾರೆ.
ಸಂಘದ ಸಂಚಾಲಕರಾದ ಸತ್ಯಪ್ರಕಾಶ್, ಸಂಘ ಸ್ಥಾಪನೆಯ ಉದ್ದೇಶದ ಬಗ್ಗೆ ಈ ದಿನ.ಕಾಮ್‌ಗೆ ಮಾಹಿತಿ ನೀಡಿದ್ದಾರೆ. ಹೇಗೆ ಆರೆಸ್ಸೆಸ್ ರಾಷ್ಟ್ರ ಮತ್ತು ರಾಷ್ಟ್ರೀಯತೆ ಎಂಬ ಎರಡು ವಿಷಯಗಳನ್ನು ಇಟ್ಟುಕೊಂಡು ದೇಶದ ಮೂಲೆ ಮೂಲೆಗಳಲ್ಲಿ ಶಾಖೆಗಳನ್ನು ತೆರೆದು ಹುಸಿ ರಾಷ್ಟ್ರೀಯತೆಯನ್ನು ಜನರ ಮನಸ್ಸಿಗೆ ತುಂಬುತ್ತಿದ್ದಾರೋ ಅದನ್ನು ಹೊಡೆದು ಹಾಕಿ ನೈಜ ರಾಷ್ಟ್ರೀಯತೆಯ ತತ್ವಗಳನ್ನು ಜನ ಮಾನಸಕ್ಕೆ ತಲುಪಿಸುವ ಉದ್ದೇಶದಿಂದ ಪ್ರತಿ ಜಿಲ್ಲೆ ತಾಲ್ಲೂಕು ಮಟ್ಟದಲ್ಲಿ ಕೇಡರ್ ಬೇಸ್ಡ್ ಸ್ವಯಂಸೇವಕರ ತಂಡ ಕಟ್ಟಲಿದ್ದೇವೆ. ನೆಹರೂ, ಗಾಂಧಿ, ಅಂಬೇಡ್ಕರ್ ಮತ್ತು ಇತರ ರಾಷ್ಟ್ರ ನಿರ್ಮಾಣಕಾರರಿಂದ ಪ್ರೇರಿತರಾಗಿ ಭ್ರಾತೃತ್ವ ಮತ್ತು ಸಾಂವಿಧಾನಿಕ ಜವಾಬ್ದಾರಿಯನ್ನು ಎತ್ತಿಹಿಡಿಯಲು ಪ್ರೇರೇಪಿಸುತ್ತೇವೆ. ರಾಷ್ಟ್ರೀಯ ಜಾತ್ಯತೀತ ಸಂಘವು ಭಾರತದ ಜಾತ್ಯತೀತ ಸ್ವರೂಪವನ್ನು ರಕ್ಷಿಸಲು ವಿದ್ಯಾರ್ಥಿಗಳು, ಕಾರ್ಮಿಕರು, ವೃತ್ತಿಪರರು ಮತ್ತು ಹಿರಿಯರನ್ನು ಒಟ್ಟುಗೂಡಿಸುವ ಪಕ್ಷಾತೀತ ನಾಗರಿಕರ ಚಳವಳಿಯಾಗಿದೆ ಎಂದು ಹೇಳಿದ್ದಾರೆ.

ಮಾನವವಾದ, ಜನವಾದ, ಲೋಕವಾದ – ಇದು ನಮ್ಮ ತತ್ವ ಮತ್ತು ಸಿದ್ಧಾಂತ. ನಾವು ಜಾತ್ಯತೀತತೆಯನ್ನು ಉಸಿರಾಡುತ್ತೇವೆ ಮತ್ತು ನಮ್ಮ ಸಂವಿಧಾನವನ್ನು ಪಾಲಿಸುತ್ತೇವೆ. ನಮ್ಮ ಸೈದ್ಧಾಂತಿಕ ಪ್ರತಿಮೆಗಳು ಮಹಾತ್ಮ ಗಾಂಧಿ, ನೆಹರು ಮತ್ತು ಅಂಬೇಡ್ಕರ್. ನಾವು ಬುದ್ಧ, ಬಸವಣ್ಣ, ಕುವೆಂಪು ಜೀವನ ವಿಧಾನಕ್ಕೆ ಪ್ರಸ್ತುತತೆಯನ್ನು ನೀಡುತ್ತೇವೆ. ಆರ್‌ಎಸ್‌ಎಸ್, ಬಜರಂಗದಳ, ವಿಎಚ್‌ಪಿಯಂತಹ ಜಾತಿವಾದಿ ಮತ್ತು ಕೋಮುವಾದಿ ಏಜೆಂಟರು ಸಮಾಜದಲ್ಲಿ ಕೋಮು ಬೆಂಕಿಯನ್ನು ಹೊತ್ತಿಸುತ್ತಾರೆ. ಆ ಮೂಲಕ ನಮ್ಮ ಸಾಮಾಜಿಕ ಸಂರಚನೆಯನ್ನು ನಾಶಮಾಡುತ್ತಾರೆ. ನಾವು (ಎನ್‌ಎಸ್‌ಎಸ್) ಕೋಮುವಾದಿ ಏಜೆಂಟರು ಹೊತ್ತಿಸುವ ಬೆಂಕಿಯನ್ನು ನಂದಿಸುತ್ತೇವೆ. ಎನ್‌ಎಸ್‌ಎಸ್ ಮುಂದಿನ 3 ವರ್ಷಗಳಲ್ಲಿ ಪ್ರತಿ ಜಿಲ್ಲೆ, ತಾಲ್ಲೂಕು, ಪ್ರತಿ ಹಳ್ಳಿ ಮತ್ತು ಕೊನೆಯದಾಗಿ ನಮ್ಮ ರಾಜ್ಯದ ಪ್ರತಿಯೊಂದು ಬೂತ್‌ನಲ್ಲಿ ಸಂಘಟನೆ ಕಟ್ಟುತ್ತೇವೆ. ಕರ್ನಾಟಕದ ನಂತರ ಭಾರತದಾದ್ಯಂತ ಇತರ ರಾಜ್ಯಗಳಿಗೆ ವಿಸ್ತರಿಸುತ್ತೇವೆ ಎಂದು ಸಂಘದ ಗುರಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಇಂಚು ಇಂಚಾಗಿ ನಮ್ಮನ್ನು ರಾಜಕೀಯ ಲಾಭಕ್ಕಾಗಿ ಒಡೆಯುತ್ತಿರುವ ಕೋಮುವಾದಿ ದ್ವೇಷ ಬಿತ್ತುವ ಸಂಘಟನೆಗಳ ಮೆಟ್ಟಿ NSS (ರಾಷ್ಟೀಯ ಸೆಕ್ಯುಲರ್ ಸಂಘ) ಕಟ್ಟಿ ನಮ್ಮ ದೇಶ, ದೇಶದ ಸಂವಿಧಾನ ಹಾಗೂ ಅದರ ಆಶಯದಂತೆ ಸಂವಿಧಾನ ಬದ್ಧ ರಾಷ್ಟ್ರ ನಿರ್ಮಿಸೋಣ. ಎಲ್ಲರೂ ಕೈ ಜೋಡಿಸಿ ಎಂದು ಶೈಲಜಾ ಅಮರನಾಥ್ ತಿಳಿಸಿದ್ದಾರೆ.
ಎನ್‌ಎಸ್‌ಎಸ್ ಗೆ ಜಾತ್ಯತೀತ ತತ್ವದಲ್ಲಿ ನಂಬಿಕೆ ಇರುವ ಎಲ್ಲರೂ ಸದಸ್ಯರಾಗಬಹುದು ಎಂದು ಅವರು ತಿಳಿಸಿದ್ದಾರೆ. ಸದಸ್ಯರಾಗಲು ಈ ವೆಬ್‌ಸೈಟಿಗೆ ಭೇಟಿ ನೀಡಬಹುದು.https://www.nssind.org/





