ಸೈಬರ್ ವಂಚಕರು ಜನರನ್ನು ವಂಚಿಸಲು ದಿನಕ್ಕೊಂದು ಹೊಸ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಜನರನ್ನು ಬೆದರಿಸಿ ವಂಚಕರು ಹಣ ದೋಚುತ್ತಿದ್ದರು. ಈಗ ಅವರು ಕೃತಕ ಬುದ್ಧಿಮತ್ತೆ (AI) ಆಧಾರಿತ ‘ವಾಯ್ಸ್ ಕ್ಲೋನಿಂಗ್’ ಎಂಬ ಅತ್ಯಂತ ಅಪಾಯಕಾರಿ ಅಸ್ತ್ರವನ್ನು ಪ್ರಯೋಗಿಸುತ್ತಿದ್ದಾರೆ. ನಿಮ್ಮ ಮಗ, ಮಗಳು ಅಥವಾ ಆಪ್ತ ಸ್ನೇಹಿತರ ಅಸಲಿ ಧ್ವನಿಯನ್ನೇ ನಕಲು ಮಾಡಿ, ಅವರು ಸಂಕಷ್ಟದಲ್ಲಿದ್ದಾರೆ ಎಂದು ನಂಬಿಸಿ ಕ್ಷಣಾರ್ಧದಲ್ಲಿ ಬ್ಯಾಂಕ್ ಖಾತೆ ಖಾಲಿ ಮಾಡುವ ಈ ಹೊಸ ಜಾಲದ ಬಗ್ಗೆ ಸೈಬರ್ ತಜ್ಞರು ಗಂಭೀರ ಎಚ್ಚರಿಕೆ ನೀಡಿದ್ದಾರೆ.
ನೀವು ಸಾಮಾಜಿಕ ಜಾಲತಾಣಗಳಲ್ಲಿ (Instagram, Facebook, YouTube) ಹಂಚಿಕೊಳ್ಳುವ ರೀಲ್ಸ್ ಅಥವಾ ವಿಡಿಯೋಗಳಿಂದ ವಂಚಕರು ಕೇವಲ 3 ರಿಂದ 5 ಸೆಕೆಂಡುಗಳ ಆಡಿಯೋವನ್ನು ಸಂಗ್ರಹಿಸುತ್ತಾರೆ. ಅಥವಾ ನಿಮಗೆ ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿ, ನೀವು ‘ಹಲೋ, ಯಾರು ಮಾತನಾಡುವುದು?’ ಎಂದು ಹೇಳುವ ಕೆಲವೇ ಸೆಕೆಂಡುಗಳ ಧ್ವನಿಯನ್ನು ರೆಕಾರ್ಡ್ ಮಾಡಿಕೊಳ್ಳುತ್ತಾರೆ. ಬಳಿಕ ಅತ್ಯಾಧುನಿಕ ಎಐ ಸಾಫ್ಟ್‌ವೇರ್‌ಗಳ ಮೂಲಕ ನಿಮ್ಮ ಧ್ವನಿಯ ಏರಿಳಿತ, ಉಚ್ಚಾರಣಾ ಶೈಲಿಯನ್ನು ಸಂಪೂರ್ಣವಾಗಿ ನಕಲು ಮಾಡುತ್ತಾರೆ. ನಂತರ ನಿಮ್ಮ ಪೋಷಕರಿಗೆ ಅಥವಾ ಆಪ್ತರಿಗೆ ಕರೆ ಮಾಡಿ, ‘ನನಗೆ ಅಪಘಾತವಾಗಿದೆ, ಆಸ್ಪತ್ರೆಯಲ್ಲಿದ್ದೇನೆ’ ಅಥವಾ ‘ಪೊಲೀಸರು ನನ್ನನ್ನು ಬಂಧಿಸಿದ್ದಾರೆ, ತಕ್ಷಣ ಹಣ ಕಳುಹಿಸಿ’ ಎಂದು ನಿಮ್ಮದೇ ಧ್ವನಿಯಲ್ಲಿ ಅಳುತ್ತಾ ಮಾತನಾಡುತ್ತಾರೆ.
ಆ ಕಡೆಯಿಂದ ಬರುತ್ತಿರುವುದು ತಮ್ಮವರದ್ದೇ ಅಸಲಿ ಧ್ವನಿ ಎಂದು ನಂಬುವ ಕುಟುಂಬಸ್ಥರು, ಯಾವುದೇ ಅನುಮಾನ ಪಡದೆ ತಕ್ಷಣವೇ ವಂಚಕರು ನೀಡುವ ಯುಪಿಐ ಅಥವಾ ಬ್ಯಾಂಕ್ ಖಾತೆಗೆ ಲಕ್ಷಾಂತರ ರೂಪಾಯಿ ವರ್ಗಾಯಿಸಿ ಮೋಸ ಹೋಗುತ್ತಿದ್ದಾರೆ.
ಇಂತಹ ಹೈಟೆಕ್ ವಂಚನೆಗಳಿಂದ ಪಾರಾಗಲು ಸೈಬರ್ ಪೊಲೀಸರು ಕೆಲವು ಸರಳ ಮತ್ತು ಪರಿಣಾಮಕಾರಿ ಸಲಹೆಗಳನ್ನು ನೀಡಿದ್ದಾರೆ. ಅಪರಿಚಿತ ಸಂಖ್ಯೆಗಳಿಂದ ನಿಮ್ಮ ಆತ್ಮೀಯರ ಧ್ವನಿಯಲ್ಲಿ ತುರ್ತು ಹಣದ ಬೇಡಿಕೆ ಬಂದಾಗ ತಕ್ಷಣವೇ ಆತಂಕಕ್ಕೆ ಒಳಗಾಗಬೇಡಿ. ಮೊದಲು ಆ ಕರೆಯನ್ನು ಕಟ್ ಮಾಡಿ, ನಿಮ್ಮ ಕುಟುಂಬಸ್ಥರ ಅಸಲಿ ಮೊಬೈಲ್ ಸಂಖ್ಯೆಗೆ ನೀವೇ ಕರೆ ಮಾಡಿ ಖಚಿತಪಡಿಸಿಕೊಳ್ಳಿ. ಒಂದು ವೇಳೆ, ಅವರ ಫೋನ್ ಸ್ವಿಚ್ ಆಫ್ ಆಗಿದ್ದರೆ ಅಥವಾ ಸಂಪರ್ಕಕ್ಕೆ ಸಿಗದಿದ್ದರೆ, ಅವರ ಜೊತೆಗಿರುವ ಸ್ನೇಹಿತರು ಅಥವಾ ಸಹೋದ್ಯೋಗಿಗಳಿಗೆ ಕರೆ ಮಾಡಿ ವಿಚಾರಿಸಿ ಎಂದು ಪೊಲೀಸರು ಸೂಚಿಸಿದ್ದಾರೆ.


