ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳಿಂದ ₹80 ಲಕ್ಷದವರೆಗೆ ಲಂಚ ಪಡೆದಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಲು ಮುಂದಾಗಿರುವ ಆಂತರಿಕ ತನಿಖೆಯನ್ನು ತಕ್ಷಣ ರದ್ದುಗೊಳಿಸಿ, ಪ್ರಕರಣವನ್ನು ಸಿಬಿಐ ಅಥವಾ ಕರ್ನಾಟಕ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಯವರ ನೇತೃತ್ವದ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ ಆಗ್ರಹಿಸಿದ್ದಾರೆ.
ಈ ಸಂಬಂಧ ಕೆಪಿಎಸ್‌ಸಿ ಅಧ್ಯಕ್ಷರಿಗೆ ಪತ್ರ ಸಲ್ಲಿಸಿರುವ ಅಶೋಕ, ಬಳಿಕ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಹಾಗೂ ಅಭ್ಯರ್ಥಿಗಳ ಪ್ರತಿನಿಧಿಗಳೊಂದಿಗೆ ಕೆಪಿಎಸ್‌ಸಿ ಕಚೇರಿಗೆ ಭೇಟಿ ನೀಡಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯೊಂದಿಗೆ ಚರ್ಚೆ ನಡೆಸಿದರು.
ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳಿಂದ ₹80 ಲಕ್ಷದವರೆಗೆ ಲಂಚ ಪಡೆದಿರುವ ಗಂಭೀರ ಆರೋಪಗಳು ಕೇಳಿಬಂದಿದ್ದು, ಈ ಪ್ರಕರಣದಲ್ಲಿ ನೂರಾರು ಅಭ್ಯರ್ಥಿಗಳಿಗೆ ನೋಟಿಸ್ ಜಾರಿಯಾಗಿರುವುದಾಗಿ ಮಾಧ್ಯಮ ವರದಿಗಳು ಸೂಚಿಸಿವೆ. ಅಧಿಕಾರಿಗಳು, ಮಧ್ಯವರ್ತಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಪಾತ್ರದ ಬಗ್ಗೆಯೂ ಅನುಮಾನ ವ್ಯಕ್ತವಾಗಿದ್ದು, ಈ ಬೆಳವಣಿಗೆಗಳು ಕೆಪಿಎಸ್‌ಸಿಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿವೆ ಎಂದು ಅಶೋಕ ಹೇಳಿದ್ದಾರೆ.
ಇಂತಹ ಸಂದರ್ಭದಲ್ಲಿ ಕೆಪಿಎಸ್‌ಸಿಯೇ ತನ್ನ ಅಧಿಕಾರಿಗಳ ಮೂಲಕ ಆಂತರಿಕ ತನಿಖೆ ನಡೆಸುವುದು ನೈಸರ್ಗಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ. ತನ್ನ ವಿರುದ್ಧದ ಆರೋಪಗಳನ್ನು ಅದೇ ಸಂಸ್ಥೆ ತನಿಖೆ ನಡೆಸಿದರೆ ಸಾರ್ವಜನಿಕರಿಗೆ ಹಾಗೂ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಅದರ ಮೇಲೆ ವಿಶ್ವಾಸ ಮೂಡುವುದಿಲ್ಲ. ಇದು ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರಕರಣ ಸಂಬಂಧ ಅಶೋಕ ಆರು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಕೆಪಿಎಸ್‌ಸಿ ಆದೇಶಿಸಿರುವ ಆಂತರಿಕ ತನಿಖೆಯನ್ನು ರದ್ದುಗೊಳಿಸಬೇಕು. ಪ್ರಕರಣವನ್ನು ಸಿಬಿಐ ಅಥವಾ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಯವರ ನೇತೃತ್ವದ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಧಿಕಾರಿಗಳು, ಮಧ್ಯವರ್ತಿಗಳು ಹಾಗೂ ಫಲಾನುಭವಿಗಳ ಪಾತ್ರದ ಸಮಗ್ರ ತನಿಖೆ ನಡೆಸಬೇಕು. ಇದೇ ರೀತಿಯ ಅಕ್ರಮಗಳು ಇತ್ತೀಚಿನ ಇತರೆ ಕೆಪಿಎಸ್‌ಸಿ ನೇಮಕಾತಿಗಳಲ್ಲೂ ನಡೆದಿವೆಯೇ ಎಂಬುದನ್ನು ಪರಿಶೀಲಿಸಬೇಕು. ತನಿಖಾ ವರದಿಯನ್ನು ಸಾರ್ವಜನಿಕಗೊಳಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅಭ್ಯರ್ಥಿಗಳ ಮನವಿಯಂತೆ ಅಗತ್ಯವಿದ್ದರೆ ಮರುಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ, ಅಭ್ಯರ್ಥಿಗಳನ್ನು ಬೆಂಗಳೂರಿನ ಹೊರವಲಯ ಹಾಗೂ ಹೊರರಾಜ್ಯಗಳಿಗೆ ಕರೆದೊಯ್ದು ಪ್ರಶ್ನೆಪತ್ರಿಕೆ ನೀಡಿ ಪರೀಕ್ಷೆಗೆ ಸಿದ್ಧಪಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ₹80 ಲಕ್ಷ ನೀಡಿದರೆ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿರುವ ಆಡಿಯೋ ಕೂಡ ಹೊರಬಂದಿದೆ ಎಂದು ಆರೋಪಿಸಿದ್ದಾರೆ.
ಒಬ್ಬ ಅಭ್ಯರ್ಥಿಯಿಂದ ₹80 ಲಕ್ಷ ಪಡೆದರೆ, 400 ಹುದ್ದೆಗಳ ನೇಮಕಾತಿಯಲ್ಲಿ ಒಟ್ಟು ₹800 ಕೋಟಿ ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ ಎಂದು ಆರೋಪಿಸಿರುವ ಅವರು, ಒಬ್ಬ ಐಎಎಸ್ ಅಧಿಕಾರಿ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆ ಅಧಿಕಾರಿ ಯಾರೆಂದು ಸರ್ಕಾರ ಸ್ಪಷ್ಟಪಡಿಸಬೇಕು. ಈಗಾಗಲೇ ಇಬ್ಬರಿಗೆ ಉದ್ಯೋಗ ನೀಡಲಾಗಿದೆ ಎಂಬ ಮಾಹಿತಿಯೂ ಇದೆ. ಇದರಲ್ಲಿ ಸರ್ಕಾರದ ಪಾತ್ರವೂ ಇರಬಹುದೆಂಬ ಅನುಮಾನವಿದೆ ಎಂದಿದ್ದಾರೆ.
ಕೆಪಿಎಸ್‌ಸಿಯಲ್ಲಿ ಹಣವಿಲ್ಲದೆ ಕೆಲಸವಾಗುವುದಿಲ್ಲ ಎಂಬ ಭಾವನೆ ಜನರಲ್ಲಿ ಮೂಡಿದೆ. ಮೆರಿಟ್ ಆಧಾರದಲ್ಲಿ ಮಾತ್ರ ನೇಮಕಾತಿ ನಡೆಯುತ್ತದೆ ಎಂಬ ವಿಶ್ವಾಸವನ್ನು ಸರ್ಕಾರ ಮರುಸ್ಥಾಪಿಸಬೇಕಿದೆ. ಈ ಪ್ರಕರಣದಲ್ಲಿ ಸಮರ್ಪಕ ತನಿಖೆ ನಡೆಯದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಕರೂರು ಕಾಲ್ತುಳಿತ ಸಂತ್ರಸ್ತರ ಕುಟುಂಬಗಳಿಗೆ ವಿಜಯ್ ಸರ್ಕಾರ ನೀಡಿದ್ದ ಉದ್ಯೋಗ ರದ್ದು: ಮದ್ರಾಸ್ ಹೈಕೋರ್ಟ್
ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದ್ದರೂ ಕಾಂಗ್ರೆಸ್ ಸರ್ಕಾರ ಪರಿಹಾರ ಕಾರ್ಯಗಳಲ್ಲಿ ವಿಫಲವಾಗಿದೆ ಎಂದು ಅಶೋಕ ಆರೋಪಿಸಿದರು. ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಪರಿಶೀಲಿಸಿದ್ದು, ಮುಂದಿನ ದಿನಗಳಲ್ಲಿ ಬಳ್ಳಾರಿ, ವಿಜಯನಗರ ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ಭೇಟಿ ನೀಡುವುದಾಗಿ ತಿಳಿಸಿದರು. ರಾಜ್ಯ ಸರ್ಕಾರ ಇದುವರೆಗೆ ಬರ ಘೋಷಣೆ ಮಾಡಿಲ್ಲ. ಕೇಂದ್ರ ಸರ್ಕಾರದ ನೆರವು ಬೇಕೆಂದು ಹೇಳುವ ಮೊದಲು ರಾಜ್ಯ ಸರ್ಕಾರ ಅಗತ್ಯ ವರದಿ ಸಲ್ಲಿಸಬೇಕು. ಒಂದು ತಾಲೂಕಿಗೆ ಕೇವಲ ₹1 ಕೋಟಿ ಬಿಡುಗಡೆ ಮಾಡಿದರೆ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಟೀಕಿಸಿದರು.
ಬಿಜೆಪಿ ಮುಖಂಡರ ವಿರುದ್ಧ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಆರೋಪಿಸಿದ ಅಶೋಕ, ನೀಟ್ ಪ್ರತಿಭಟನೆ ವೇಳೆ ಪೊಲೀಸರಿಗೆ ಸವಾಲು ಹಾಕಿದವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಆದರೆ ಬಿಜೆಪಿ ಶಾಸಕ ಸಿ.ಟಿ. ರವಿ ವಿರುದ್ಧ ಮಾತ್ರ ಎಫ್‌ಐಆರ್ ದಾಖಲಿಸಲಾಗಿದೆ. ಅವರ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರೋಪಿಸಿ, ಇದರ ವಿರುದ್ಧ ಚಿಕ್ಕಮಗಳೂರಿನಲ್ಲಿ ಹೋರಾಟ ನಡೆಸುವುದಾಗಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ವರ್ಷಗಳಿಂದ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡುತ್ತಿದ್ದು, ಚುನಾವಣೆ ಬಂದಾಗ ಮತ್ತೆ ಸ್ಪರ್ಧಿಸುತ್ತಾರೆ. ಹಿರಿಯ ನಾಯಕರಿಗೆ ಒತ್ತಡ ಹೇರುವ ಉದ್ದೇಶದಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯಾವುದೇ ನಾಯಕ ಶಾಶ್ವತನಲ್ಲ. ಒಬ್ಬ ನಾಯಕನ ನಂತರ ಮತ್ತೊಬ್ಬ ನಾಯಕ ಬೆಳೆಯುತ್ತಾನೆ ಎಂದಿದ್ದಾರೆ.




